ತಿಳಿರುತೋರಣ
ಅವಧಾನದಲ್ಲಿ ಪೃಚ್ಛಕರ ನಾನಾ ವಿಧ-ವಿಭಾಗಗಳಲ್ಲಿ ಘಂಟಾವಾದನವೂ ಒಂದು. ಘಂಟಾವಾದನದ ಪೃಚ್ಛಕರು ಆಗಾಗ ಘಂಟೆಯನ್ನು ಒಮ್ಮೆ ‘ಢಣ್’ ಎಂದು ಬಡಿದು ಅವರ ಪಾಡಿಗೆ ಸುಮ್ಮನಿರುತ್ತಾರೆ. ಉಳಿದ ಪೃಚ್ಛಕರಂತೆ ಅವಧಾನಿಯೊಡನೆ ಅವರದು ಮಾತು ಕತೆ, ಪ್ರಶ್ನೋತ್ತರಗಳೇನೂ ಇರುವುದಿಲ್ಲ.
ಅವಧಾನಿಯ ಕಡೆಗೆ ಅವರು ಕಣ್ಣೆತ್ತಿ ನೋಡಬೇಕಂತನೂ ಇಲ್ಲ. ಆಗಾಗ ಘಂಟೆ ಬಾರಿಸು ವುದೊಂದೇ ಅವರ ಕೆಲಸ. ಅವಧಾನದ ಎಲ್ಲ ಸುತ್ತುಗಳೂ ಮುಗಿದ ಮೇಲೆ, ಘಂಟಾ ವಾದನ ಪೃಚ್ಛಕರು ಒಟ್ಟು ಎಷ್ಟು ಸರ್ತಿ ಘಂಟೆ ಬಡಿದರೆಂಬುದನ್ನು ಅವಧಾನಿಯು ಲೆಕ್ಕ ಒಪ್ಪಿಸಬೇಕು.
ಆ ಲೆಕ್ಕ ಸರಿ ಇದೆಯೇ ಇಲ್ಲವೇ ಎಂದು (ಸರಿಯೇ ಇರುತ್ತದೆನ್ನಿ, ಆದ್ದರಿಂದಲೇ ತಾನೆ ಅವಧಾನಿ ಎನ್ನುವುದು?) ತಿಳಿಸಬೇಕಾಗುವುದರಿಂದ ಘಂಟಾವಾದನ ಪೃಚ್ಛಕರೂ ಸರಿಯಾಗಿ ಲೆಕ್ಕ ಇಟ್ಟಿರಬೇಕು!
ಇಲ್ಲವಾದರೆ ಅಕ್ಬರ್-ಬೀರಬಲ್ಲರ ಕಾಗೆ ಲೆಕ್ಕಾಚಾರದಂತೆ ಆಗಬಾರದಷ್ಟೆ. ಇರಲಿ, ಅವಧಾನದ ಘಂಟಾವಾದನ ವಿಚಾರ ಇಲ್ಲೇಕೆ ಪ್ರಸ್ತಾವಿಸಿದೆನೆಂದರೆ ಇಂದಿನ ಅಂಕಣ ಬರಹ ಘಂಟೆ, ಗಂಟೆ, ಜಾಗಟೆಗಳ ಬಗೆಗೊಂದು ಲಘು ಹರಟೆ.
ಇದನ್ನು ಓದಿ ಮುಗಿಸಿದ ಮೇಲೆ ಒಟ್ಟು ಎಷ್ಟು ಸರ್ತಿ ಘಂಟೆ/ಗಂಟೆ/ಜಾಗಟೆ/ಬೆಲ್ ಶಬ್ದ (ಕಿವಿಗೆ ಕೇಳಿಸುವ ಶಬ್ದ ಅಲ್ಲ, ಕಣ್ಣಿಗೆ ಕಾಣುವ ಅಕ್ಷರಶಬ್ದ) ಇದರಲ್ಲಿ ಬಂದಿದೆಯೆಂದು ನೀವು ಲೆಕ್ಕ ಒಪ್ಪಿಸಬೇಕು. ಅಷ್ಟರಮಟ್ಟಿಗೆ ನೀವೊಬ್ಬ ಅಷ್ಟಾಂಶ ಅಷ್ಟಾವಧಾನಿ ಆಗುವ ಅವಕಾಶ!
ಇದನ್ನೂ ಓದಿ: Srivathsa Joshi Column: ಟ್ರಾಜಿಡಿ ಅಂದ್ರೆ ಅಜಗೀತೆ, ಲಾಸ್ಟ್ ಮೆಲೊಡಿ ಹಂಸಗೀತೆ
ಮೊದಲಿಗೆ ಘಂಟೆ-ಗಂಟೆ ಯಾವುದು ಸರಿ, ಎರಡೂ ಸರಿಯಾದರೆ ಏನು ವ್ಯತ್ಯಾಸ ಅನ್ನೋ ದನ್ನು ಬಗೆಹರಿಸಿಕೊಳ್ಳೋಣ. ‘ಘಂಟಾ’ ಎನ್ನುವುದು ಮೂಲ ಸಂಸ್ಕೃತ ಶಬ್ದ. ನಿಜವಾಗಿ ಯಾದರೆ ‘ಘಣ್ಟಾ’ ಎಂದು ಬರೆದರೇನೇ ಅತಿನಿಖರ. ಆದರೆ ಓದುವ/ಬರೆಯುವ ಅನುಕೂಲ ಕ್ಕಾಗಿ ಘಂಟಾ ಎನ್ನೋಣ.
ಇದು ಸಂಸ್ಕೃತ ಭಾಷೆಯಲ್ಲಿ ಸ್ತ್ರೀಲಿಂಗ ಶಬ್ದ. “ಕಂಚಿನಿಂದ ನಿರ್ಮಿತವಾದ ಒಂದು ವಾದ್ಯ. ಅದರ ನಾದವು ಧ್ಯಾನಕ್ಕೆ ಸಹಾಯ ಮಾಡುವ ಶ್ರುತಿಯುಳ್ಳದ್ದು, ಆದರೆ ಪ್ರಮಾಣಬದ್ಧ ವಾಗಿ ಕಂಚಿನಿಂದಲೇ ಮಾಡಿದ್ದಿರಬೇಕು"- ಇದು ಘಂಟಾ ಶಬ್ದಕ್ಕೆ ಸಂಸ್ಕೃತ-ಕನ್ನಡ ಶಬ್ದ ಕೋಶದಲ್ಲಿ ಕೊಟ್ಟಿರುವ ಅರ್ಥ.
ಘಂಟಾ ಶಬ್ದವನ್ನು ಅಂಟಿಸಿಕೊಂಡ ಇನ್ನೂ ಕೆಲವು ಪದಗಳು ಸಂಸ್ಕೃತದಲ್ಲಿವೆ: ಘಂಟಾ ನಾದ, ಘಂಟಾರವ, ಘಂಟಾಶಬ್ದ... ಇವೆಲ್ಲ ಸುಲಭದಲ್ಲಿ ಅರ್ಥ ಆಗುವಂಥವು. ಘಂಟಾ ತಾಡ ಅಂದರೆ ಘಂಟಾ ವಾದ್ಯವನ್ನು ಬಾರಿಸುವವನು. ಘಂಟಾಗಾರ ಅಂದರೆ ಘಂಟಾ ವಾದ್ಯಗಳನ್ನು ತೂಗಿಸಿಟ್ಟ ಜಾಗ, ಇಂಗ್ಲಿಷ್‌ನಲ್ಲಿ ಇದನ್ನು Belfry ಎನ್ನುತ್ತಾರೆ.
ಘಂಟಾಪಥ ಅಂದರೆ ರಾಜಮಾರ್ಗ; ಕೊರಳಿಗೆ ಘಂಟಾ ವಾದ್ಯವನ್ನು ಕಟ್ಟಿರುವ ಆನೆಗಳು ಸಂಚರಿಸುವ ಮಾರ್ಗ. ಘಂಟಾಪಾಟಲೀ ಅಂದರೆ ಘಂಟಾ ವಾದ್ಯದಂತಿರುವ ಒಂದು ಹೂವು. ಘಂಟಾಲೀ ಅಂದರೆ ಘಂಟಾ ವಾದ್ಯಗಳ ಸಾಲು. ಘಂಟಿಕಾ ಅಂದರೆ ಚಿಕ್ಕದಾದ ಘಂಟಾ ವಾದ್ಯ. ಘಂಟಾಪಾತ್ರೆ ಅಂದರೆ ಕೆಮಿಸ್ಟ್ರಿ ಲ್ಯಾಬೊರೇಟರಿಯಲ್ಲಿ ಬಳಕೆಯಾಗುವ ಪರಿಕರ.
ಸಂಸ್ಕೃತದ ‘ಆ’ಕಾರಾಂತ ಸ್ತ್ರೀಲಿಂಗ ಪದಗಳನ್ನು ಕನ್ನಡದಲ್ಲಿ ‘ಎ’ಕಾರಾಂತ ಪದಗಳಾಗಿ ಬರೆಯುವುದು ವಾಡಿಕೆ. ಸೀತಾ-ಸೀತೆ; ರಾಧಾ-ರಾಧೆ; ಪ್ರತಿಭಾ-ಪ್ರತಿಭೆ; ಮಹಿಮಾ-ಮಹಿಮೆ; ಯಾತ್ರಾ-ಯಾತ್ರೆ ಇತ್ಯಾದಿ. ಇವು ತದ್ಭವ ಪದಗಳಲ್ಲ, ಕನ್ನಡದಲ್ಲಿ ಬಳಕೆಗೆ ಅನುಕೂಲ ವಾಗುವಂತೆ ಬರೆದ ಸಂಸ್ಕೃತ ಪದಗಳು. ಈ ರೀತಿಯಲ್ಲಿ ಘಂಟಾ ಎಂಬ ‘ಆ’ಕಾರಾಂತ ಸ್ತ್ರೀಲಿಂಗ ಪದವು ಕನ್ನಡ ಬರಹದಲ್ಲಿ/ಮಾತಿನಲ್ಲಿ ‘ಎ’ಕಾರಾಂತ ಘಂಟೆ ಆಗುತ್ತದೆ.
ಉಪಾಸನೆ (ಮೂಲ ಸಂಸ್ಕೃತ ಪದ: ಉಪಾಸನಾ) ಚಿತ್ರಕ್ಕಾಗಿ ಬಿ.ಕೆ.ಸುಮಿತ್ರಾ ಹಾಡಿದ ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು...’ ಎವರ್‌ಗ್ರೀನ್ ಹಾಡಿನ ಒಂದು ಚರಣದಲ್ಲಿ “ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು... ಟಣ್ ಢಣ್ ಟಣ್ ಢಣ್ ಎನ್ನುತ ಸೇವೆಗೆ ಎಲ್ಲರ ಕರೆದಿತ್ತು..." ಎಂದು ಬರುತ್ತದಷ್ಟೆ? ಇದರಲ್ಲಿ ಸಂಸ್ಕೃತ ಮೂಲರೂಪದ ‘ಘಂಟಾ’ ಎಂದು ಬಳಸುವುದು ಕಷ್ಟ.
ಘಂಟೆ ಎಂಬ ರೂಪ ಕನ್ನಡದ್ದೇ ಎನ್ನುವಷ್ಟು ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತದೆ. ಇನ್ನು, ಸಂಸ್ಕೃತ ಪದಗಳ ತದ್ಭವ ರೂಪಗಳು ಕನ್ನಡ ಪದಗಳಾಗುವ ಒಂದು ಪ್ರಕ್ರಿಯೆ ಬೇರೆಯೇ ಇದೆ. ಮಹಾಪ್ರಾಣಾಕ್ಷರ ಇದ್ದದ್ದು ಅಲ್ಪಪ್ರಾಣಾಕ್ಷರ ಆಗುವುದು ತತ್ಸಮ-ತದ್ಭವ ಮಾರ್ಪಾಡಿನ ಹಲವು ನಿಯಮಗಳ ಪೈಕಿ ಒಂದು. ಈ ರೀತಿಯಲ್ಲಿ ಘಂಟಾ ಪದದ ತದ್ಭವ ರೂಪ ‘ಗಂಟೆ’ ಅಥವಾ ಗಣ್ಟೆ. ಕಿಟ್ಟೆಲ್ ಕೋಶದಲ್ಲಿ ಗಣ್ಟೆ ಎಂದೇ ಬರೆದಿದ್ದಾರೆ.
A gong or a bell ಎಂಬ ಅರ್ಥ ಕೊಟ್ಟಿದ್ದಾರೆ. “Also, an English hour" ಎಂಬ ಅರ್ಥ ವನ್ನೂ ಕೊಟ್ಟಿದ್ದಾರೆ. ಅಂದರೆ, ಕಾಲಮಾಪನದಲ್ಲಿ 60 ನಿಮಿಷಗಳ ಅವಧಿ ಅರ್ಥಾತ್ 11 ಗಂಟೆ. ದಿನಕರ ದೇಸಾಯಿಯವರು “ಗಂಟೆಯ ನೆಂಟನೆ ಓ ಗಡಿಯಾರ ಬೆಳ್ಳಿಯ ಬಣ್ಣದ ಗೋಲಾಕಾರ..." ಎಂದು ಗಂಟೆಯನ್ನೇ ಬಳಸಿದ್ದಾರೆ, ಘಂಟೆಯನ್ನಲ್ಲ.
ಕನ್ನಡದಲ್ಲಿ ಬರೆಯುವಾಗ, ಮಾತನಾಡುವಾಗ ಕೆಲವರು Bell ಅಥವಾ Gong ಎಂಬ ಅರ್ಥದಲ್ಲಾದರೆ ‘ಘಂಟೆ’ ಅಂತಲೂ, Hour ಅಥವಾ ಗಡಿಯಾರವು ತೋರಿಸುವ O' clock ಸಮಯ ಹೇಳುವುದಕ್ಕಾದರೆ ‘ಗಂಟೆ’ ಅಂತಲೂ ಬಳಸುವ ಕ್ರಮ ಇಟ್ಟುಕೊಳ್ಳುತ್ತಾರೆ.
ಅದು ಅವರವರ ವೈಯುಕ್ತಿಕ ಸ್ಟೈಲ್‌ಶೀಟ್. ಹಾಗೆಯೇ ಮಾಡಬೇಕೆಂದು ನಿಯಮಗಳೇನೂ ಇಲ್ಲ. ಕೆಲವರು Bell ಗೆ ಗಂಟೆ ಅಂತಲೂ, Hour ಗೆ ಘಂಟೆ ಅಂತಲೂ ಬರೆಯಬಹುದು. ಇನ್ನು ಕೆಲವರು ಎರಡಕ್ಕೂ ಗಂಟೆ ಎಂದೇ, ಮತ್ತೆ ಕೆಲವರು ಎರಡಕ್ಕೂ ಘಂಟೆ ಎಂದೇ ಬೇಕಿದ್ದರೂ ಬರೆಯಬಹುದು. ಯಾವುದೂ ತಪ್ಪಲ್ಲ.
“ಚಪಾತಿಗೆ ಹಿಟ್ಟು ಕಲಸಿದ ಮೇಲೆ ಒಂದು ಗಂಟೆ ಇಡಿ" ಎಂದು ರೆಸಿಪಿ ಓದಿಕೊಂಡ ಮುಗ್ಧ ಗೃಹಿಣಿ ಏನು ಮಾಡಬಹುದು? ಕಲಸಿದ ಹಿಟ್ಟಿನ ಮುದ್ದೆಯ ಮೇಲೆ, ದೇವರಕೋಣೆಯಿಂದ ತಂದ ಘಂಟೆಯನ್ನು ಇಡಬಹುದು! ಅಂದಹಾಗೆ ಇನ್ನೊಂದು ಸ್ವಾರಸ್ಯವನ್ನೂ ನೀವು ಗಮನಿಸಿರಬಹುದು.
“ಈಗ ಟೈಮ್ ಎಷ್ಟು?" ಎಂದು ಕೇಳಲಿಕ್ಕೆ ನಾವು ಸಾಮಾನ್ಯವಾಗಿ “ಗಂಟೆ ಎಷ್ಟಾಯ್ತು?" ಎಂದು ಕೇಳುತ್ತೇವೆ. ಉತ್ತರರೂಪದಲ್ಲಿ ಗಂಟೆಗಳನ್ನಷ್ಟೇ ಅಲ್ಲ ನಿಮಿಷಗಳನ್ನೂ ಪಡೆಯುತ್ತೇವೆ, ನಾವಾಗಿ ಕೇಳಿರದಿದ್ದರೂ. ಆಕಾಶವಾಣಿಯವರಾದರೆ ಗಂಟೆ, ನಿಮಿಷ ಮತ್ತು ಸೆಕೆಂಡ್‌ಗಳನ್ನೂ ಕೊಟ್ಟುಬಿಡುತ್ತಾರೆ!
ಸರಿ. ಘಂಟೆ-ಗಂಟೆ ಎಲ್ಲ ಒಂದೇ ಎಂದುಕೊಂಡು ಮುಂದುವರಿಯೋಣ. ಹಾಗೆ ನೋಡಿದರೆ (ಬಡಿದರೆ?) ಜಾಗಟೆಯೂ ಗಂಟೆಯೇ. ಹೇಗೆಂದು ಆಮೇಲೆ ತಿಳಿಸುತ್ತೇನೆ. ಮೊದಲಿಗೆ, ಗಂಟೆ ಅಥವಾ ಘಂಟೆ ಎಂದೊಡನೆ ನಿಮಗೆ ಏನೇನು ನೆನಪಾಗುತ್ತದೆ? ಯಾವ್ಯಾವ ಚಿತ್ರಣಗಳು ಚಿತ್ತಭಿತ್ತಿಯಲ್ಲಿ ಮೂಡುತ್ತವೆ? ಒಮ್ಮೆ ಕಲ್ಪಿಸಿಕೊಳ್ಳಿ.
ಶಾಲೆಯಲ್ಲಿ ಪ್ರತಿ ಅವಧಿಯ ಮುಕ್ತಾಯದ ಗಂಟೆ. ‘ಢಣಢಣ ಗಂಟೆ ಬಾರಿಸಿತು. ಈಗ ಆಟದ ಸಮಯ...’ ಎಂದು ರಾಗವಾಗಿ ಪಾಠವನ್ನೋದಿದ್ದು. ಆಟದ ಪೀರಿಯಡ್‌ನ ಗಂಟೆ ಮೊಳಗಿ ದಾಗ ಮೈದಾನಕ್ಕೆ ಓಡಿದ್ದು. ದಿನದ ಕೊನೆಯಲ್ಲಿ ಲಾಂಗ್ ಬೆಲ್ ಮೊಳಗಿದಾಗ ಆವತ್ತಿನ ಶಾಲೆ ಮುಗಿಯಿತೆಂಬ ಖುಷಿಯಲ್ಲಿ ಮನೆಗೆ ಓಡಿದ್ದು.
‘ಬಂಗಾರದ ಮನುಷ್ಯ’ ಚಿತ್ರದ ‘ನಗುನಗುತಾ ನಲಿ ನಲೀ’ ಹಾಡಿನ ‘ಗೆಳೆಯರ ಜತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವದು...’ ಚರಣಕ್ಕೆ ಮೊದಲಿನ ಇಂಟರ್ಲ್ಯೂಡ್ ಮ್ಯೂಸಿಕ್ ಇರುವುದೇ ಶಾಲೆಯ ಲಾಂಗ್‌ಬೆಲ್ ಮೊಳಗು. ಇಲ್ಲಿ ನನ್ನದೊಂದು ಪ್ರತ್ಯೇಕ ನೆನಪನ್ನೂ ಹಂಚಿಕೊಳ್ಳುತ್ತೇನೆ.
ನಾನು ಒಂದರಿಂದ ಐದನೆಯವರೆಗೆ ಕಲಿತ ಏಕೋಪಾಧ್ಯಾಯ ಏಕಕೊಠಡಿ ಸ.ಕಿ.ಪ್ರಾ. ಶಾಲೆಯಲ್ಲಿ ಗಂಟೆ ಇರಲಿಲ್ಲ, ಗಡಿಯಾರವೂ ಇರಲಿಲ್ಲ! ಉಪಾಧ್ಯಾಯರು ವಾಚ್ ನೋಡಿ ಕೊಂಡು ತರಗತಿಗಳ ಅವಽಯನ್ನು ಗುರುತಿಸುತ್ತಿದ್ದರು. ದಿನದ ಆರಂಭದಲ್ಲಿ ಪ್ರಾರ್ಥನೆಗೆ, ಮಧ್ಯಾಹ್ನ ಊಟದ ವಿರಾಮಕ್ಕೆ, ಸಂಜೆ ಆಟದ ಪೀರಿಯಡ್‌ಗೆ ಮತ್ತು ದಿನದ ಕೊನೆಯಲ್ಲಿ ಲಾಂಗ್ ಬೆಲ್- ಇದಿಷ್ಟಕ್ಕೆ ಒಂದು ಜಾಗಟೆಯ ಬಳಕೆಯಾಗುತ್ತಿತ್ತು.
ಅದನ್ನು ಬಡಿಯಲಿಕ್ಕೊಂದು ಹಸ್ತಿದಂತವೇ ಇತ್ತೆಂದು ನೆನಪು. ಜಾಗಟೆ ಬಡಿಯುವುದು ಶಾಲಾ ಮುಖ್ಯಮಂತ್ರಿಯ ಕೆಲಸವಾಗಿತ್ತು. ನಾನು ಆರನೇ-ಏಳನೇ ಓದಿದ ನಮ್ಮೂರಿನ ಗುರುಕುಲ ಹಿ.ಪ್ರಾ. ಶಾಲೆಯಲ್ಲಿ ಗಡಿಯಾರವೇನೋ ಇತ್ತು, ಆದರೆ ಅಲ್ಲಿಯೂ ಗಂಟೆಯಾ ಕೃತಿಯ ಗಂಟೆ ಇರಲಿಲ್ಲ. ಜಾಗಟೆಯೂ ಇರಲಿಲ್ಲ.
ಬದಲಿಗೆ, ರೈಲಿನ ಗಾಲಿಯಂಥ ಲೋಹದ ಚಕ್ರ ನೇತಾಡಿಸಿಟ್ಟದ್ದು, ಕಬ್ಬಿಣದ ಕೋಲಿನಿಂದ ಅದಕ್ಕೆ ಬಡಿಯುವುದೇ ಶಾಲೆಯ ಗಂಟೆ. ಅಂದರೆ ಗಂಟೆ ಅಲ್ಲದ ಗಂಟೆ! ಮುಂದೆ ಕಾರ್ಕಳ ದಲ್ಲಿ ಭುವನೇಂದ್ರ ಹೈಸ್ಕೂಲಲ್ಲಿ ಓದುವಾಗ, ಪಿಯುಸಿ ಶಿಕ್ಷಣಕ್ಕೆ ಉಜಿರೆಯ ಸಿದ್ಧವನ ದಲ್ಲಿದ್ದಾಗ ಅಲ್ಲಿ ಪಕ್ಕಾ ಕಂಚಿನ ಗಂಟೆಗಳು, ತುಂಬ ದೂರದವರೆಗೂ ಶಬ್ದ ಕೇಳಿಸು ವಂಥವು ಇದ್ದುವು.
ಶಾಲಾದಿನಗಳ ನೆನಪಿನ ಓ(ದೋ)ಣಿಯಲ್ಲಿ ಸಾಗಿದರೆ ನಿಮ್ಮಲ್ಲಿ ಕೆಲವರಿಗೆ ಎರಡನೆಯ ತರಗತಿಯಲ್ಲಿ ಕನ್ನಡ ಪಾಠಪುಸ್ತಕದಲ್ಲಿದ್ದ ‘ನ್ಯಾಯದ ಗಂಟೆ’ ಕಥೆಯೂ ನೆನಪಾದೀತು. ಶಿವಮೊಗ್ಗದ ಇಕ್ಕೇರಿ ಪಟ್ಟಣದ ದೊರೆಯು ತನ್ನ ಪ್ರಜೆಗಳಿಗೆ ನ್ಯಾಯ ಸಿಗುವುದು ತಡವಾಗ ಬಾರದೆಂದು ಯೋಚಿಸಿದ್ದು, ಅದಕ್ಕಾಗಿ ದೊಡ್ಡ ಗಂಟೆಯೊಂದನ್ನು ಎತ್ತರದ ಸ್ಥಳದಲ್ಲಿ ಕಟ್ಟಿ ಅದರಿಂದ ಉದ್ದದ ಹಗ್ಗವೊಂದನ್ನು ಇಳಿಬಿಟ್ಟು ನ್ಯಾಯ ಬೇಕಾದವರು ಹಗ್ಗ ಎಳೆದು ಗಂಟೆ ಮೊಳಗಿಸಿದರೆ ನ್ಯಾಯಾಧೀಶರು ಬಂದು ನ್ಯಾಯ ಒದಗಿಸುವಂಥ ವ್ಯವಸ್ಥೆ ಮಾಡಿದ್ದು, ಅದು ಚೆನ್ನಾಗಿ ಕಾರ್ಯಾಚರಣೆಯಾಗಿ ಪ್ರಜೆಗಳ ಬಾಳು ಸುಗಮವಾದದ್ದು, ಕ್ರಮೇಣ ಆ ಗಂಟೆಗೆ ಕಟ್ಟಿದ ಹಗ್ಗ ಹಳೆಯದಾಗಿ ತುಂಡಾದದ್ದು, ಯಾರೋ ಒಬ್ಬನು ದ್ರಾಕ್ಷಿಬಳ್ಳಿ ಕಟ್ಟಿ ಅದನ್ನೇ ಹಗ್ಗವನ್ನಾಗಿಸಿದ್ದು, ಒಂದು ಮಧ್ಯಾಹ್ನ ಒಂದೇಸಮನೆ ಗಂಟೆ ಬಡಿತ ಕೇಳಿಸಿದ್ದು, ಹೋಗಿ ನೋಡಿದರೆ ಅಲ್ಲೊಂದು ಮುದಿ ಕುದುರೆ ದ್ರಾಕ್ಷಿಬಳ್ಳಿಯನ್ನು ಮೇಯುತ್ತ ಎಳೆದಿದ್ದರಿಂದ ಗಂಟೆ ಮೊಳಗುತ್ತಿದ್ದದ್ದು, ನ್ಯಾಯಾಧೀಶನು ಬಂದು ಕುದುರೆ ಯ ಯಜಮಾನನನ್ನು ಕರೆಸಿ ಕುದುರೆಯನ್ನು ಹಾಗೆಲ್ಲ ಮನೆಯಿಂದ ಓಡಿಸಿಬಿಡಬಾರ ದೆಂದೂ ಹೊಟ್ಟೆತುಂಬ ಹುಲ್ಲು-ಹುರುಳಿ ಕೊಟ್ಟು ಚೆನ್ನಾಗಿ ಸಾಕಬೇಕೆಂದೂ, ತಪ್ಪಿದರೆ ಶಿಕ್ಷೆ ಅನುಭವಿಸಬೇಕೆಂದೂ ಅಪ್ಪಣೆ ಹೊರಡಿಸಿದ್ದು, ತನ್ನ ರಾಜ್ಯದಲ್ಲಿ ನ್ಯಾಯದ ಗಂಟೆಯಿಂದಾಗಿ ಪ್ರಜೆಗಳಿಗಷ್ಟೇ ಅಲ್ಲ ಪ್ರಾಣಿಗಳಿಗೂ ನ್ಯಾಯ ಸಿಗುತ್ತದೆಂದು ರಾಜ ಬೀಗಿದ್ದು... ಇತ್ಯಾದಿ. ಬಹುಶಃ ಈ ಕಥೆಯ ಪ್ರೇರಣೆಯಿಂದಲೇ ಇರಬಹುದು, ಉದಯವಾಣಿ ಪತ್ರಿಕೆಯಲ್ಲಿ ಓದುಗರು ಸಾರ್ವಜನಿಕ ಹಿತಾಸಕ್ತಿಯಿಂದ ಬರೆಯುವ ಅಹವಾಲಿನ ಓಲೆಗಳನ್ನು ಪ್ರಕಟಿಸಲು ‘ದೂರುಗಂಟೆ’ ಎಂಬ ಸ್ಥಿರಶೀರ್ಷಿಕೆ, ಮತ್ತು ಅಲ್ಲೊಂದು ದ್ರಾಕ್ಷಿಬಳ್ಳಿ ಕಟ್ಟಿದ ಪುಟ್ಟದೊಂದು ಗಂಟೆಯ ಚಿತ್ರವೂ ಇರುತ್ತಿತ್ತು.
ನ್ಯಾಯದ ಗಂಟೆಯಂತೆಯೇ ಜಾವದ ಗಂಟೆ ಅಂತೊಂದಿದೆ. ಪಾ.ವೆಂ. ಆಚಾರ್ಯರು ‘ಪದಾರ್ಥ ಚಿಂತಾಮಣಿ’ಯಲ್ಲಿ ವಿವರಿಸಿರುವಂತೆ- ಗಡಿಯಾರಗಳಿಲ್ಲದಿದ್ದ ಹಿಂದಿನ ಕಾಲದಲ್ಲಿ ಘಟಿಕಾ (ಗಡಿಗೆ) ತುಂಬ ನೀರು ತುಂಬಿಸಿ ಕೆಳಗೆ ಮಾಡಿಟ್ಟ ನಿರ್ದಿಷ್ಟ ಆಕಾರದ ತೂತಿನ ಮೂಲಕ ನೀರೆಲ್ಲ ಹರಿದುಹೋಗಲು ತಗಲುವ ಸಮಯವೇ ‘ಘಟೀ’ ಅಥವಾ ‘ಗಳಿಗೆ’.
ಆಮೇಲೆ ಗಳಿಗೆ ಬಟ್ಟಲು ಎಂಬ ಇನ್ನೊಂದು ಸಲಕರಣೆಯೂ ಕಾಲಮಾಪನಕ್ಕೆ ಬಳಕೆ ಯಾಗುತ್ತಿತ್ತು. ಊರೂರಿಗೆ ಅಗ್ರಹಾರದಲ್ಲಿ ಹೀಗೆ ಗಳಿಗೆ ಲೆಕ್ಕ ಮಾಡುವ ಸಾಧನವೊಂದು ಇರುತ್ತಿತ್ತು. ಅದೇ ಘಟಿಕಾಲಯ. ಊರಿಗೆಲ್ಲ ಜಾವಕ್ಕೊಮ್ಮೆ (ಜಾವ ಅಂದರೆ ಯಾಮ. 180 ನಿಮಿಷಗಳ ಅವಧಿ) ಕಾಲವನ್ನು ಸೂಚಿಸಲು ಗಂಟೆ ಬಾರಿಸಲಾಗುತ್ತಿತ್ತು.
ಅದೇ ಜಾವಗಂಟೆ. ಅದೇ ಆಮೇಲೆ ಜಾಗಂಟೆ ಆಗಿ, ಜೇಗಂಟೆ, ಜೈಘಂಟೆ, ಜಾಂಗಟೆ, ಝಾಂಗಟೆಯೇ ಮೊದಲಾದ ವಿವಿಧ ನಾಮಾವಳಿಯೊಂದಿಗೆ ಜಾಗಟೆ ಆದದ್ದು. ಸಂಸ್ಕೃತ ದಲ್ಲಿ ಯಾಮಘೋಷಾ ಅಂದರೆ ರಾತ್ರಿ ವೇಳೆಯಲ್ಲಿ ಪ್ರತಿ ಯಾಮದಲ್ಲೂ ಬಾರಿಸಲ್ಪಡುವ ಜಾವದ ಗಂಟೆ ಅಥವಾ ಜಾಗಟೆಯೇ. ರಾತ್ರಿಯಿಡೀ ಆಡುವ ಯಕ್ಷಗಾನದಲ್ಲಿ ತೆಂಕು ತಿಟ್ಟಿನ ಭಾಗವತರು ತಾಳಕ್ಕೆ ಬಳಸುವುದು ಜಾಗಟೆಯನ್ನೇ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ‘ಗಂಟೆಕಾಯಕ’ ಎಂಬೊಂದು ಶಬ್ದದ ವಿವರಣೆಯಿದೆ: ಬೆಳಗಿನ ಜಾವದಲ್ಲಿ ಜನರನ್ನು ಎಬ್ಬಿಸಲು ಜಾಗಟೆ ಬಾರಿಸುತ್ತ ಮನೆಮನೆಗೆ ಹೋಗುವ ಜಂಗಮನ ಕಾಯಕ. ಹಾಗೆಯೇ ಜಾಗಟೆ ಎಂದೊಡನೆ ನಮಗೆ ದಾಸಯ್ಯನ ಚಿತ್ರಣವೂ ಕಣ್ಮುಂದೆ ಬರುತ್ತದೆ.
ಮತ್ತೆ ನಮ್ಮ ಪೂಜಾವಿಧಿವಿಧಾನಗಳಲ್ಲಂತೂ ಗಂಟೆಯ ಪ್ರಮುಖ ಪಾತ್ರ ಗೊತ್ತಿರು ವಂಥದ್ದೇ. “ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್| ಕುರು ಘಂಟಾ ರವಂ ತತ್ರ ದೇವತಾಹ್ವಾನ ಲಾಂಛನಮ್||" ಎಂಬ ಶ್ಲೋಕದ ಅರ್ಥವೇ ದೇವತೆಗಳ ಆಗಮನಕ್ಕಾಗಿ ಮತ್ತು ರಾಕ್ಷಸಶಕ್ತಿಗಳ ನಿರ್ಗಮನಕ್ಕಾಗಿ (ಟು-ಇನ್-ಒನ್ ಉದ್ದೇಶ) ಘಂಟಾ ನಾದಗೈಯಬೇಕು ಎಂದು.
ದೇವಸ್ಥಾನದಲ್ಲಿ ಮಂಗಳಾರತಿಯ ವೇಳೆಯಂತೂ ಗಂಟೆ ಮೊಳಗುವುದಾಯ್ತೇ, ದೇವಸ್ಥಾನ ವನ್ನು ನಾವು ಪ್ರವೇಶಿಸಿದ ಕೂಡಲೇ ಒಮ್ಮೆ ಗಂಟೆ ಬಾರಿಸುತ್ತೇವಲ್ಲ, ಅದು ಬಹುಶಃ ದೇವರಿಗೆ ನಮ್ಮ ಹಾಜರಿ ಗೊತ್ತಾಗಲೆಂದು ಇರಬಹುದು. ಅಂದರೆ, ಘಂಟಾರವವು ಭಕ್ತರ ಮಟ್ಟಿಗೆ ದೇವತಾಗಮನ ಲಾಂಛನವಷ್ಟೇ ಅಲ್ಲ, ದೇವರ ಮಟ್ಟಿಗೆ ಭಕ್ತಾಗಮನ ಸಂಕೇತವೂ ಹೌದಂತಾಯ್ತು!
ಘಂಟಾನಾದ ಹಿಂದೂಧರ್ಮಕ್ಕಷ್ಟೇ ಸೀಮಿತವಲ್ಲ, ಕ್ರಿಸ್ಮಸ್ ಹಬ್ಬವನ್ನು ‘ಜಿಂಗಲ್ ಬೆಲ್ಸ್ ಆಲ್ ದ ವೇ’ ಎನ್ನುತ್ತ ಆಚರಿಸುವ ಕ್ರಿಶ್ಚಿಯನ್ ಮತದವರಿಗೆ ಚರ್ಚ್‌ಗಳಲ್ಲಿ ಬೆಲ್ ರಿಂಗಿಂಗ್ ಇದೆ. ಯುರೋಪ್‌ನ ಹಳೆಯ ಚರ್ಚ್‌ಗಳಲ್ಲಿ changing bells ಎಂಬ ಸಾಮೂ ಹಿಕ ಘಂಟಾನಾದದ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆಯಂತೆ. ಚರ್ಚ್‌ನ ಬೆಲ್ ಟವರ್‌ನಲ್ಲಿ ಆರು ಅಥವಾ ಎಂಟು, ಕೆಲವು ಕಡೆ ಹದಿನಾರು ಗಂಟೆಗಳನ್ನು ತೂಗು ಹಾಕಿದ್ದಿರುತ್ತದೆ. ಅವುಗಳಿಂದ ಇಳಿಬಿಟ್ಟಿರುವ ಹಗ್ಗಗಳಿರುತ್ತವೆ.
ಗಂಟೆಗಳನ್ನು ಬಾರಿಸಲಿಕ್ಕೆಂದೇ ನಿಯೋಜಿತರಾದವರು ಇರುತ್ತಾರೆ. ಪ್ರಮುಖ ಸಂದರ್ಭ ಗಳಲ್ಲಿ (ನಗರಕ್ಕೆ ಧರ್ಮಗುರುಗಳ ಆಗಮನ, ರಾಜ/ರಾಣಿಯರ ಜನ್ಮದಿನ, ಊರ ಗಣ್ಯರ ನಿಧನ... ಇತ್ಯಾದಿ) ಸುಮಾರು ಅರ್ಧ ತಾಸಿನವರೆಗೆ ಲಯಬದ್ಧವಾಗಿ ಘಂಟಾವಾದನ ಜರುಗುತ್ತದೆ. ಅದೊಂದು ಮ್ಯೂಸಿಕಲ್ ಆರ್ಕೆಸ್ಟ್ರಾ ಇದ್ದಹಾಗೆ ಕರ್ಣಾನಂದಕರ.
ಗಂಟೆ ಬಾರಿಸುತ್ತ ಹೇಗೂ ಯುರೋಪ್‌ವರೆಗೆ ಬಂದ ಮೇಲೆ ಅಮೆರಿಕವನ್ನೇಕೆ ಬಿಡಬೇಕು! ಅಮೆರಿಕದ ಹಳೆಯ ರಾಜಧಾನಿ ಫಿಲಡೆಲ್ಫಿಯಾದಲ್ಲಿ ಒಂದು ಸ್ಮಾರಕವಾಗಿರುವ ಲಿಬರ್ಟಿ ಬೆಲ್ ಈ ದೇಶದ ಸ್ವಾತಂತ್ರ್ಯಸಮರದ ವಿಜಯೋತ್ಸವ ಸಂಕೇತ. ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದು.
ಸುಮಾರು 2080 ಪೌಂಡ್ ತೂಕದ ಈ ಗಂಟೆಯನ್ನು ಲಂಡನ್‌ನಲ್ಲಿ ತಯಾರಿಸಿ ಕ್ರಿ.ಶ 1753ರಲ್ಲಿ ಹಡಗಿನ ಮೂಲಕ ಫಿಲಡೆಲ್ಫಿಯಾಕ್ಕೆ ತರಲಾಯಿತು. ಆದರೆ ಪ್ರಥಮ ಚುಂಬನೇ ದಂತ ಭಗ್ನಂ ಅಂತಾರಲ್ಲಾ ಹಾಗೆ ದುರದೃಷ್ಟವಶಾತ್ ‘ಪ್ರಥಮವಾದನೇ ಬೆಲ್ ಭಗ್ನಂ’ ಎಂದಾಗಿ ಈ ಗಂಟೆಗೆ ದೊಡ್ಡದೊಂದು ಬಿರುಕು ಬಂತು. ಈವತ್ತಿಗೂ ಬಿರುಕು ಹಾಗೆಯೇ ಇದೆ. ಅಮೆರಿಕದ ಒಂದು ಪ್ರಮುಖ ಫಾಸ್ಟ್ ಫುಡ್ ಕಂಪನಿ ‘ಟ್ಯಾಕೊ ಬೆಲ್’ (ಗಂಟೆ ಅದರ ಲಾಂಛನ) ಸಹ ಇಲ್ಲಿ ಉಲ್ಲೇಖಾರ್ಹ.
ಒಮ್ಮೆ ಅದು ಏಪ್ರಿಲ್ 1ರಂದು ಪತ್ರಿಕೆಗಳಲ್ಲಿ ತುಂಬುಪುಟದ ಜಾಹೀರಾತು ಪ್ರಕಟಿಸಿ ‘ದೇಶದ ಬಡತನ ನಿವಾರಣೆಗಾಗಿ ಟ್ಯಾಕೊ ಬೆಲ್ ಕಂಪನಿಯು ಐತಿಹಾಸಿಕ ಸ್ಮಾರಕವಾದ ಲಿಬರ್ಟಿ ಬೆಲ್ ಅನ್ನು ಖರೀದಿಸಿದೆ. ಇನ್ನು ಮುಂದೆ ಅದನ್ನು ಟ್ಯಾಕೊ ಲಿಬರ್ಟಿ ಬೆಲ್ ಎಂದು ಕರೆಯಲಾಗುವುದು...’ ಎಂದಿತ್ತು.
ಕೆಲ ದೇಶಪ್ರೇಮಿಗಳು ರೊಚ್ಚಿಗೆದ್ದ ಮೇಲೆ ಅದೊಂದು ಏಪ್ರಿಲ್ ಫುಲ್ ಜೋಕು ಎಂಬ ಹೇಳಿಕೆ ಕೊಟ್ಟಿತ್ತು. ಅಮೆರಿಕದ್ದೇ ಮತ್ತೊಂದು ಮಾಹಿತಿ, ಬೆಲ್ ರಿಂಗಿಂಗ್‌ಗೆ ಸಂಬಂಧಿಸಿ ದಂತೆ: ನ್ಯೂಯಾರ್ಕ್‌ನ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪ್ರತಿದಿನದ ಷೇರುವ್ಯ ವಹಾರ ಆರಂಭವಾಗುವಾಗ ಬೆಳಗ್ಗೆ 9.30ಕ್ಕೆ ಮತ್ತು ಅಂತ್ಯಗೊಳ್ಳುವಾಗ ಸಂಜೆ 4ಕ್ಕೆ ಗಂಟೆ ಮೊಳಗಿಸುವ ಕ್ರಮ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈಗ ಎಲೆಕ್ಟ್ರಿಕ್ ಸ್ವಿಚ್ ಅದುಮಿ ಬೆಲ್ ರಿಂಗಿಸುವುದಾದರೂ ಈ ಸಂಪ್ರದಾಯಕ್ಕೆ ತುಂಬ ಮಹತ್ತ್ವವಿದೆ.
ಯಾವುದೇ ಕಂಪನಿಯು ಮೊತ್ತಮೊದಲ ಬಾರಿಗೆ ಇಲ್ಲಿಯ ಷೇರು ಮಾರುಕಟ್ಟೆಗೆ ಪ್ರವೇಶ ಪಡೆಯುವುದಿದ್ದರೆ ಆವತ್ತು ಆ ಕಂಪನಿಯ ಮಾಲೀಕರಿಂದ ಬೆಲ್ ರಿಂಗಿಸುವ ಕ್ರಮ. 2006ರ ಜುಲೈ 31ರಂದು ಈ ರೀತಿ ಬೆಲ್ ರಿಂಗಿಸಿದ ಕಂಪನಿ ನಮ್ಮೆಲ್ಲರ ಹೆಮ್ಮೆಯ ಇನ್ಫೋಸಿಸ್! ಅದೂ ಮೈಸೂರಿನಿಂದ ರಿಮೋಟ್ ಸ್ವಿಚ್ ಅದುಮಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಇಂಡಿಯನ್ ಕಾರ್ಪೊರೇಟ್ ಶಕ್ತಿಯ ಗಂಟೆ ಮೊಳಗಿಸಿದ್ದು!
ಕೊನೆಯಲ್ಲೊಂದು ಭಾಷಾಕೌತುಕ. ಇಂಗ್ಲಿಷ್‌ನ Bell ಶಬ್ದದ (ಕಿವಿಗೆ ಕೇಳಿಸುವ ಶಬ್ದ ಅಲ್ಲ, ಕಣ್ಣಿಗೆ ಕಾಣುವ ಅಕ್ಷರಶಬ್ದ) ವ್ಯುತ್ಪತ್ತಿ ಪ್ರೋಟೊ-ಇಂಡೋ-ಯುರೋಪಿಯನ್ ಮೂಲ ದಿಂದಾಯ್ತು ಮತ್ತು ಅದರಲ್ಲಿ ಸಂಸ್ಕೃತದ ‘ವೇಲಾ’ (ವೇಳೆ, ಸಮಯ, ಒಂದು ಗಂಟೆಯ ಕಾಲ) ಶಬ್ದದ ಪಾತ್ರವೂ ಇದೆಯೆನ್ನುತ್ತಾರೆ ಭಾಷಾತಜ್ಞರು. ಎಂಬಲ್ಲಿಗೆ ಈ ಲೇಖನ ಮುಗಿಯಿತು. ನಿಮ್ಮ ಗಂಟೆ ಲೆಕ್ಕ?