ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌Prakash Shesharaghavachar Column: ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು

ಮಹಿಳಾ ಮೀಸಲಾತಿಗೆ ಮೂವತ್ತು ವರ್ಷದ ಇತಿಹಾಸವಿದೆ. ಮೊಟ್ಟ ಮೊದಲ ಬಾರಿಗೆ 1996ರಲ್ಲಿ ಪ್ರಧಾನ ಮಂತ್ರಿ ದೇವೆಗೌಡರು ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನೀಡುವ ಮಸೂದೆಯನ್ನು ಮಂಡಿಸಿದ್ದರು. ಯುನೈಟೆಡ್ ಫ್ರಂಟ್ ನೇತೃತ್ವದ ಸರಕಾರದಲ್ಲಿ ಬಹುತೇಕರು ಈ ಮಸೂದೆಯ ಕಡು ವಿರೋಧಿಗಳಾಗಿದ್ದರು. ವಿಶೇಷವಾಗಿ ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಯಾದವ್‌ರವರ ತೀವ್ರ ವಿರೋಧದಿಂದ ಮಸೂದೆಯನ್ನು ಜಂಟಿ ಸಂಸದೀಯ ಮಂಡಳಿಗೆ ಕಳುಹಿಸಲಾಯಿತು.

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಪುರುಷ ಪ್ರಧಾನ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ತಮ್ಮ ಸಮನಾಗಿ ಕಾಣಲು, ತಮ್ಮ ಸ್ಥಾನವನ್ನು ಕಸಿದು ಬಿಡುತ್ತಾರೆ ಎಂಬ ಭೀತಿಯಿಂದ ಪುರುಷ ರಾಜಕಾರಣಿಗಳು ಕಳೆದ ಮೂವತ್ತು ವರ್ಷದಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗದಂತೆ ತಡೆಯಲು ಯಶಸ್ವಿಯಾಗಿದ್ದಾರೆ. ತಮಗೆ ಎದುರಾಗುವ ಸವಾಲುಗಳನ್ನು ನಿವಾರಿಸುವ ಜಾಣ್ಮೆ ಬಲಿತ ರಾಜಕಾರಣಿಗಳಿಗೆ ಅತ್ಯಂತ ಸುಲಭ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆಯ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಎರಡನೇ ಮೂರರಷ್ಟು ಮತ ಪಡೆಯದೆ ಸೋಲಾಯಿತು. ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಮಾಜವಾದಿ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಕ್ಷೇತ್ರ ಪುನರ್‌ವಿಂಗಡಣೆಯನ್ನು ವಿರೋಧಿಸುವ ನೆಪದಲ್ಲಿ ವ್ಯವಸ್ಥಿತವಾದ ಪಿತೂರಿಯ ಮೂಲಕ ಮಹಿಳಾ ಮೀಸಲಾತಿ 2029ರಿಂದ ಜಾರಿಯಾಗದ ಹಾಗೆ ಮಾಡಲು ಸಫಲರಾಗಿದ್ದಾರೆ.

ಮಹಿಳಾ ಮೀಸಲಾತಿಗೆ ಮೂವತ್ತು ವರ್ಷದ ಇತಿಹಾಸವಿದೆ. ಮೊಟ್ಟ ಮೊದಲ ಬಾರಿಗೆ 1996ರಲ್ಲಿ ಪ್ರಧಾನ ಮಂತ್ರಿ ದೇವೆಗೌಡರು ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನೀಡುವ ಮಸೂದೆಯನ್ನು ಮಂಡಿಸಿದ್ದರು. ಯುನೈಟೆಡ್ ಫ್ರಂಟ್ ನೇತೃತ್ವದ ಸರಕಾರದಲ್ಲಿ ಬಹುತೇಕರು ಈ ಮಸೂದೆಯ ಕಡು ವಿರೋಧಿಗಳಾಗಿದ್ದರು. ವಿಶೇಷವಾಗಿ ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಯಾದವ್‌ರವರ ತೀವ್ರ ವಿರೋಧದಿಂದ ಮಸೂದೆಯನ್ನು ಜಂಟಿ ಸಂಸದೀಯ ಮಂಡಳಿಗೆ ಕಳುಹಿಸಲಾಯಿತು.

ವಾಜಪೇಯಿಯವರು ಮಹಿಳೆಯರಿಗೆ ಮೀಸಲು ನೀಡಲು 1999, 2002 ಮತ್ತು 2003ರಲ್ಲಿ ಪ್ರಯತ್ನಿಸಿ ವಿಫಲರಾದರು. 1998ರಲ್ಲಿ ಆರ್‌ಜೆಡಿ ಸಂಸದ ಸುಚೇಂದ್ರ ಪ್ರಸಾದ್ ಯಾದವ್ ಮಸೂದೆಯ ಪ್ರತಿಯನ್ನು ಲೋಕಸಭೆಯಲ್ಲಿ ಹರಿದು ಬಿಸಾಕಿದರು. 2010ರಲ್ಲಿ ಮನಮೋಹನ್ ಸಿಂಗ್ ಸರಕಾರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಆಡಳಿತ ಮೈತ್ರಿಕೂಟದ ಸದಸ್ಯ ರಿಂದಲೇ ಪ್ರತಿಭಟನೆಯ ನಡುವೆಯೇ ಬಿಜೆಪಿಯ ಬೆಂಬಲದಿಂದ ಮಸೂದೆಗೆ ಅಂಗೀಕಾರ ಪಡೆಯುತ್ತಾರೆ.

ಇದನ್ನೂ ಓದಿ: Prakash Shesharaghavachar Column: ಭಯೋತ್ಪಾದನೆಯ ಮತ್ತೊಂದು ಕರಾಳ ಮುಖ

ಯುಪಿಎ ಸರಕಾರ ಆರ್‌ಜೆಡಿ ಸಮಾಜವಾದಿ ಪಕ್ಷಗಳ ಸಂಖ್ಯಾಬಲದ ಮೇಲೆ ಅವಲಂಬಿತವಾಗಿದ್ದ ಕಾರಣ ಮನಮೋಹನ್ ಸಿಂಗ್ ರವರು ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಪಡೆಯಲು ಮಂಡಿಸುವ ಗೋಜಿಗೆ ಹೋಗದ ಕಾರಣ 2015ರಲ್ಲಿ ಮಸೂದೆ ಅಧಿಕೃತವಾಗಿ ರದ್ದಾ ಯಿತು. ಆರು ಬಾರಿಯ ಪ್ರಯತ್ನವು ಮಹಿಳಾ ಮೀಸಲಾತಿ ಜಾರಿಗೆ ತರಲು ವಿಫಲವಾಗುತ್ತದೆ.

ಮಹಿಳಾ ಮಸೂದೆಯನ್ನು ಜಾರಿಗೆ ತರುವ ಪ್ರಯತ್ನವನ್ನು ನಾನಾ ಕುಂಟು ನೆಪಗಳನ್ನು ಒಡ್ಡಿ ಬಹುತೇಕ ಪ್ರಾದೇಶಿಕ ಪಕ್ಷಗಳು ಅಡ್ಡಿಪಡಿಸುತ್ತಿದ್ದವು. ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳ ಮೀಸಲು ನೀಡಬೇಕು ಎಂದು ಒತ್ತಾಯ ಮಾಡುತ್ತಾರೆ.

ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಇತರರಿಗೆ ಮೀಸಲು ನೀಡಲು ಅವಕಾಶವಿಲ್ಲ. ಇದು ತಿಳಿದಿದ್ದರೂ ಸಹಾ ಮಸೂದೆಗೆ ಅಡ್ಡಿಪಡಿಸಲು ಇದನ್ನು ಅಸವನ್ನಾಗಿ ಬಳಸಲಾಗುತ್ತಿತ್ತು. ಏಳನೇಯ ಬಾರಿ ಮೋದಿ ಸರಕಾರವು 2023ರಲ್ಲಿ ನೂತನ ಸಂಸದ್ ಭವನದಲ್ಲಿ ಮೊದಲ ಮಸೂದೆಯಾಗಿ ನಾರಿ ವಂದನ್ ಅಧಿನಿಯಮದಡಿ ಸಂಸತ್ತಿನ ಉಭಯ ಸದನದಲ್ಲಿ ಅಂಗೀಕಾರ ಪಡೆಯುವುದಕ್ಕೆ ಯಶಸ್ವಿಯಾಗುತ್ತದೆ.

Screenshot_4

ಇದನ್ನು ಜಾರಿಗೆ ತರುವ ಮುನ್ನ ಕ್ಷೇತ್ರ ಮರುವಿಂಗಡಣೆ 334A ವಿಧಿಯಡಿಯಲ್ಲಿ ಕಡ್ಡಾಯ ಗೊಳಿಸಲಾಗುತ್ತದೆ. ಜನಗಣತಿ 2026ರ ದತ್ತಾಂಶ ದೊರೆತ ತರುವಾಯ ಕ್ಷೇತ್ರ ಮರು ವಿಂಗಡಣೆ ಹಾಗೂ ಮಹಿಳಾ ಮೀಸಲು ಕ್ಷೇತ್ರವನ್ನು ಗುರುತಿಸುವ ನಿಯಮ 334A ನಲ್ಲಿ ಸೇರಿಸಲಾಗುತ್ತದೆ. ಈ 334A ವಿಧಿಯನ್ನು ಸೇರ್ಪಡೆ ಮಾಡದೆ ಮಸೂದೆ ಜಾರಿಗೆ ತರಬೇಕಿತ್ತು ಎಂದು ಕೆಲವರು ವಾದ ಮಾಡುತ್ತಾರೆ.

ಆದರೆ, ಅಧಿಕೃತ ದತ್ತಾಂಶವಿಲ್ಲದೆ ಮಹಿಳೆಯರ ಮೀಸಲು ಕ್ಷೇತ್ರವನ್ನು ನಿಗದಿ ಮಾಡಿದರೆ ಆ ಕ್ಷೇತ್ರದ ಪುರುಷ ಆಕಾಂಕ್ಷಿಗಳು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪ್ರಕ್ರಿಯೆ ಯನ್ನು ಸ್ಥಗಿತಗೊಳಿಸುತ್ತಾರೆ. ಹೀಗಾಗಿ ಕಾನೂನಾತ್ಮಕವಾಗಿ ಯಾವುದೇ ಅಡ್ಡಿಯಾಗದ ಹಾಗೆ ಮಸೂದೆಯನ್ನು ರಚಿಸಲಾಗಿತ್ತು.

ಮಹಿಳೆಯರು ಸಮಾಜದಲ್ಲಿ ಶೇ.50ರಷ್ಟು ಇದ್ದರೂ ಅಧಿಕಾರ ಹಂಚಿಕೆಯಲ್ಲಿ ಅವರ ಪಾಲು ನಗಣ್ಯವಾಗಿದೆ. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು 1952ರಲ್ಲಿ ಶೇ.4.4ರಿಂದ 2024ರ ವೇಳೆಗೆ ಲೋಕಸಭೆಯಲ್ಲಿ ಶೇ.13.6ಕ್ಕೆ ಹೆಚ್ಚಳವಾಗಿದೆ ಮತ್ತು ರಾಜ್ಯಸಭೆಯಲ್ಲಿ 2025ರಲ್ಲಿ ಶೇ.16.8ರಷ್ಟಿದೆ.

ವಾಸ್ತವವಾಗಿ ಗಮನಿಸಿದರೆ ರಾಜ್ಯಸಭೆಯು ನೇಮಕಾತಿ ಹಾಗೂ ಸಂಸದರ ಮತದಿಂದ ಆಯ್ಕೆ ಯಾಗುವುದು ಆದರೂ ಸಹ ಮಹಿಳಾ ಪ್ರಾತಿನಿಧ್ಯ ಶೇ.20ರಷ್ಟು ಹೆಚ್ಚಾಗದಿರುವುದು ಮಹಿಳಾ ಮೀಸಲಾತಿ ಕಾಯಿದೆಯ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತದೆ.

ರಾಜಕೀಯದಲ್ಲಿ ಪುರುಷರ ಪ್ರಾಬಲ್ಯವು ಯಾವ ಪ್ರಮಾಣದಲ್ಲಿ ಇರುವುದೆಂದರೆ ದೇಶಾದ್ಯಂತದ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಪಂಚಾಯಿತಿಯ ಸ್ತರದಲ್ಲಿ 14 ಲಕ್ಷ ಮಹಿಳಾ ಜನಪ್ರತಿನಿಧಿಗಳು ಇದ್ದಾರೆ ಆದರೆ ಇವರಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಶಾಸನ ಸಭೆಗೆ ಬಡ್ತಿ ಪಡೆದಿರು ವುದು. ರಾಜಕೀಯ ಪಕ್ಷಗಳ ಬಲಾಢ್ಯ ನಾಯಕರು ಮಹಿಳೆಯರ ರಾಜಕೀಯ ಭವಿಷ್ಯಕ್ಕೆ ತಡೆಗೋಡೆ ನಿರ್ಮಿಸಿ ಕೇವಲ ಸ್ಥಳೀಯ ಮಟ್ಟಕ್ಕೆ ಕಟ್ಟಿ ಹಾಕಿರುವುದು ಕಟು ಸತ್ಯದ ಸಂಗತಿಯಾಗಿದೆ.

ಪಂಚರಾಜ್ಯಗಳ ಚುನಾವಣೆಯ ನಡುವೆಯೇ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 2011ರ ಜನಗಣತಿಯ ದತ್ತಾಂಶವನ್ನು ಆಧಾರವಾಗಿಸಿಕೊಂಡು ಮಹಿಳಾ ಮೀಸಲಾತಿ ಕ್ಷೇತ್ರಗಳನ್ನು ಗುರುತಿಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಕೈಗೊಳ್ಳಲು ಎರಡು ದಿನದ ವಿಶೇಷ ಅಧಿವೇಶನ ಕರೆಯಲಾಯಿತು. ಮಹಿಳಾ ಮೀಸಲಾತಿಯನ್ನು 2034ರ ವರೆಗೆ ಜಾರಿಗೆ ತರಲು ಸಾಧ್ಯವಾಗದ ಕಾರಣ, ತಿದ್ದುಪಡಿಯ ಮೂಲಕ 2029ರಲ್ಲಿಯೇ ಅನುಷ್ಠಾನ ಮಾಡುವ ಮಹತ್ವದ ತೀರ್ಮಾನ ವಾಗಿತ್ತು.

2023ರಲ್ಲಿ ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತವಿದ್ದ ಕಾರಣ ಮೀಸಲಾತಿ ವಿರೋಧಿಗಳ ಆಟ ನಡೆಯಲಿಲ್ಲ ಮತ್ತು 2024ರ ಲೋಕಸಭಾ ಚುನಾವಣೆಯ ಭಯದಿಂದ ಮಹಿಳಾ ಮೀಸಲಾತಿ ವಿಧೇಯಕ ಸುಲಭವಾಗಿ ಅಂಗೀಕಾರವಾಯಿತು. ಆದರೆ 2026ರಲ್ಲಿ ಎನ್‌ಡಿಎಗೆ ಸಂವಿಧಾನ ತಿದ್ದುಪಡಿ ಮಾಡಲು ಮೂರನೇಯ ಎರಡರಷ್ಟು ಬಹುಮತ ಇಲ್ಲ. ಇದರ ದುರ್ಲಾಭ ಪಡೆದು ಕೊಂಡು ಮೀಸಲಾತಿ ವಿರೋಧಿಗಳು ಕ್ಷೇತ್ರ ಪುನರ್‌ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಆದ್ದರಿಂದ ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಪುನರ್‌ವಿಂಗಡನೆ ಮಸೂದೆಯನ್ನು ಜೋಡಿಸಬೇಡಿ ಎಂದು ತಕರಾರು ಆರಂಭಿಸಿದರು.

ಕೇಂದ್ರ ಸರಕಾರ ಕ್ಷೇತ್ರಗಳ ಮರುವಿಂಗಡಣೆಯು ಸಾಂವಿಧಾನಿಕ ಅನಿವಾರ್ಯತೆಯಾಗಿತ್ತು. ಆದ ಕಾರಣ ಯಾವ ರಾಜ್ಯಕ್ಕೂ ಅನ್ಯಾಯವಾಗದು ಎಂದು ಭರವಸೆ ನೀಡಿ, ಎಲ್ಲ ರಾಜ್ಯಗಳ ಒಟ್ಟು ಸೀಟಿನ ಶೇ.50ರಷ್ಟು ಹೆಚ್ಚಿಸುವ ತೀರ್ಮಾನ ಕೈಗೊಂಡಿತು. ಆದರೆ ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಯ ಕಾರಣ ಇದಕ್ಕೆ ಉತ್ತರ ಮತ್ತು ದಕ್ಷಿಣದ ತಿರುವು ಕೊಟ್ಟು ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಹೊಸ ವರಸೆಯನ್ನು ಆರಂಭಿಸಿದರು.

ವಿರೋಧ ಪಕ್ಷಗಳು ಎರಡು ಕಾರಣಕ್ಕೆ ಮಹಿಳಾ ಮೀಸಲಾತಿಗೆ ಅಡ್ಡಿಪಡಿಸುತ್ತಿರುವುದು. ಮೊದಲನೆ ಯದು ಮಹಿಳಾ ಪ್ರಾತಿನಿಧ್ಯ ಸಾಧ್ಯವಾದಷ್ಟು ದಿನ ತಳ್ಳುವುದು. ಎರಡನೆಯದು ಬಿಜೆಪಿ ಸರಕಾರ ದಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದರೆ ಬಿಜೆಪಿಗೆ ಅನುಕೂಲವಾಗಿ ತಮಗೆ ಅನನುಕೂಲ ವಾಗಬಹುದು ಎಂಬ ಕಪೋಲಕಲ್ಪಿತ ಆತಂಕದಿಂದ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್ ಪ್ರಸಕ್ತ 543 ಸ್ಥಾನಗಳಿಗೆ ಮಹಿಳಾ ಮೀಸಲಾತಿ ಜಾರಿಗೊಳಿಸಿ ಎಂದು ಒತ್ತಾಯಿಸಿದ್ದಾರೆ. 2023ರಲ್ಲಿ ಅನುಮೋದಿಸಿರುವ ಮಸೂದೆಯು ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ ವಿಂಗಡಣೆಯೊಂದಿಗೆ ಜೋಡಿಸಿರುವುದರಿಂದ 543 ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡುವ ಮುನ್ನ ಕ್ಷೇತ್ರಗಳ ಪುನರ್‌ವಿಂಗಡಣೆ ಕಡ್ಡಾಯವಾಗಿ ಮಾಡಬೇಕಾಗುತ್ತದೆ ಆಗ ದಕ್ಷಿಣದ ರಾಜ್ಯಗಳ ಸ್ಥಾನ ಕಡಿಮೆಯಾಗುತ್ತದೆ.

ಕೇಂದ್ರ ಸರಕಾರ ಇವರ ಬೇಡಿಕೆಯನ್ನು ಒಪ್ಪಿಕೊಂಡು 543 ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಲು ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಮುಂದಾದರೆ ಇದೇ ಕಾಂಗ್ರೆಸ್ಸಿಗರು ಮತ್ತೇ ಉತ್ತರ ದಕ್ಷಿಣ ಎಂದು ದೇಶ ಒಡೆಯುವ ಪ್ರಚಾರವನ್ನು ಆರಂಭಿಸುವುದು ಖಚಿತ. ಇವರ ಮೂಲ ಉದ್ದೇಶ ಮಹಿಳಾ ಮೀಸಲಾತಿ ಜಾರಿಯಾಗಬಾರದು ಎಂಬುದು ಸ್ಪಷ್ಟ.

ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಎಂಪಿ ಸೀಟುಗಳನ್ನು ಶೇ.50ರಷ್ಟು ಹೆಚ್ಚಳ ಮಾಡುವ ತೀರ್ಮಾನ ಸೂಕ್ತವಾಗಿತ್ತು. ಕೇವಲ ದುರುದ್ದೇಶದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಗುಬ್ಬಿಸಿ ದೇಶವನ್ನೇ ಒಡೆಯುವ ಹುನ್ನಾರ ನಡೆಸಿದರು. ಇವರ ತರ್ಕದ ಪ್ರಕಾರ ರಾಜ್ಯದ 28 ಸೀಟು 42ಕ್ಕೆ ಹೆಚ್ಚಾದರೆ ರಾಜ್ಯದ ಹಿತಕ್ಕೆ ಧಕ್ಕೆಯಾಗುತ್ತದೆಯಂತೆ!

2023ರಲ್ಲಿ ನಾರಿ ವಂದನ್ ಅಧಿನಿಯಮ ಅಂಗೀಕರಿಸಿದಾಗ ಕ್ಷೇತ್ರ ವಿಂಗಡನೆಯನ್ನು ಕಡ್ಡಾಯ ಗೊಳಿಸಿತು. ವಿರೋಧ ಪಕ್ಷಗಳು ಅಂದು ಇದರ ಬಗ್ಗೆ ಯಾವುದೇ ಆಕ್ಷೇಪ ಮಾಡದೆ ಮಸೂದೆ ಯನ್ನು ಅನುಮೋದನೆ ಮಾಡಿದ್ದರು. ಆದರೆ 2026ರಲ್ಲಿ ಇವರಿಗೆ ಕ್ಷೇತ್ರ ಪುನರ್‌ವಿಂಗಡಣೆಗೆ ಆಕ್ಷೇಪ ವ್ಯಕ್ತವಾಗಿರುವುದು ಕೇವಲ ರಾಜಕೀಯ ದುರುದ್ದೇಶದಿಂದ ಮಾತ್ರ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಯು ಜನಗಣತಿಯು ಮುಗಿದ ತರುವಾಯ ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಆಗ ಜನಸಂಖ್ಯೆಯ ಆಧಾರದ ಮೇಲೆ ಕೈಗೊಂಡರೆ ನಮ್ಮ ರಾಜ್ಯ ಈಗಿರುವ 28 ಕ್ಷೇತ್ರಗಳು ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಬರುವುದನ್ನು ತಳ್ಳಿ ಹಾಕಲಾಗದು.

ಪುರುಷ ಪ್ರಧಾನ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ತಮ್ಮ ಸಮನಾಗಿ ಕಾಣಲು ಅಥವಾ ತಮ್ಮ ಸ್ಥಾನವನ್ನು ಕಸಿದು ಬಿಡುತ್ತಾರೆ ಎಂಬ ಭೀತಿಯಿಂದ ಪುರುಷ ರಾಜಕಾರಣಿಗಳು ಕಳೆದ ಮೂವತ್ತು ವರ್ಷದಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗದಂತೆ ತಡೆಯಲು ಯಶಸ್ವಿ ಯಾಗಿದ್ದಾರೆ. ತಮಗೆ ಎದುರಾಗುವ ಸವಾಲುಗಳನ್ನು ನಿವಾರಿಸುವ ಜಾಣ್ಮೆ ಬಲಿತ ರಾಜಕಾರಣಿಗಳಿಗೆ ಅತ್ಯಂತ ಸುಲಭ.

ರಾಜಕೀಯದಲ್ಲಿ ಹೇಗೆ ಚೆನ್ನಾಗಿ ಕೆಲಸ ಮಾಡುವವರನ್ನು ಮತ್ತು ತಮಗೆ ಸವಾಲಾಗುವವರನ್ನು ಹೇಗೆ ಪಕ್ಕಕ್ಕೆ ಸರಿಸುತ್ತಾರೆ ಎಂಬುದಕ್ಕೆ ಪಿಎಚ್‌ಡಿ ಪ್ರಬಂಧ ಬರೆಯುವಷ್ಟು ಅನುಭವವಿದೆ. ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿಯವರು ಬರೆಯುತ್ತಾರೆ ಗಾಂಧಿ ಪರಿವಾರ ಜನ್ ಧನ್, ಡಿಜಿಟಲ್ ಇಂಡಿಯಾ, ತ್ರಿವಳಿ ತಲಾಖ್, 370ನೇ ವಿಧಿ, ಸಿಎಎ(CAA), ಯುಸಿಸಿ (UCC), ಒಂದು ದೇಶ ಒಂದು ಚುನಾವಣೆ, ವಕ್ಫ್ ಸುಧಾರಣೆ, ನಕ್ಸಲ್-ಮಾವೋವಾದಿ‌ ಹಿಂಸಾಚಾರದ ವಿರುದ್ಧ ಕ್ರಮ ಎಲ್ಲವನ್ನು ವಿರೋಧಿಸಿದ್ದಾರೆ.

ನರೇಂದ್ರ ಮೋದಿಯವರನ್ನು ಬಲಪಡಿಸುವ ಮತ್ತು ರಾಜಕೀಯವಾಗಿ ಬಿಜೆಪಿಗೆ ಲಾಭ ತರುವ ಯಾವ ಸುಧಾರಣೆಗೂ ಬೆಂಬಲ ನೀಡುವುದಿಲ್ಲ. ಮಹಿಳಾ ಮೀಸಲಾತಿ ಮಸೂದೆಗೂ ಇವರ ವಿರೋಧ ಇವರ ನಕಾರಾತ್ಮಕ ವರ್ತನೆಗೆ ತಾಜಾ ಉದಾಹರಣೆಯಾಗಿದೆ.