ಸಂಪಾದಕರ ಸದ್ಯಶೋಧನೆ
ಜಾಗತಿಕ ಬ್ರ್ಯಾಂಡ್‌ಗಳು ಅಮೆರಿಕ, ಚೀನಾ, ಜರ್ಮನಿ, ಫ್ರಾನ್ಸ್ ಗಳಲ್ಲಿಯೇ ಹುಟ್ಟಬೇಕೆಂದೇನೂ ಇಲ್ಲ. ಅದು ಯಾವ ಸಣ್ಣ-ಪುಟ್ಟ ದೇಶಗಳಲ್ಲೂ ಅವತರಿಸಬಹುದು. ಅದಕ್ಕೆ ವೈ ವೈ ನೂಡಲ್ಸ್ ಒಂದು ಉತ್ತಮ ನಿದರ್ಶನ. ನೂಡಲ್ಸ ಅಂದ್ರೆ ಇಂದು ಕೇವಲ ಮಕ್ಕಳ ತಿಂಡಿಯಲ್ಲ, ಅದು ಬ್ಯಾಚು ಲರ್‌ಗಳ ಸಂಜೀವಿನಿ, ಪ್ರವಾಸಿಗರ ನೆಚ್ಚಿನ ಆಹಾರ ಮತ್ತು ಆಧುನಿಕ ಬದುಕಿನ ಅತಿ ವೇಗದ ಆಹಾರವಾಗಿ ಬದಲಾಗಿದೆ.
ಮ್ಯಾಗಿ, ಯಿಪ್ಪಿ ಮುಂತಾದ ಬ್ರ್ಯಾಂಡ್‌ಗಳ ನಡುವೆ ತನ್ನದೇ ಆದ ವಿಶಿಷ್ಟ ರುಚಿ ಮತ್ತು ‘ರೆಡಿ ಟು ಈಟ್’ ವೈಶಿಷ್ಟ್ಯದಿಂದ ಜನಪ್ರಿಯವಾಗಿರುವುದು ‘ವೈ ವೈ’ (Wai Wai) ನೂಡಲ್ಸ್. ಅಷ್ಟಕ್ಕೂ ಈ ನೂಡಲ್ಸ ಮೂಲತಃ ನೇಪಾಳದ್ದು. ಇದರ ಹಿಂದೆ ಇರುವುದು ನೇಪಾಳದ ಸಿರಿವಂತ ಉದ್ಯಮಿ ಬಿನೋದ್ ಚೌಧರಿ.
1980ರ ದಶಕದ ಆರಂಭದಲ್ಲಿ ನೇಪಾಳದ ‘ಚೌಧರಿ ಗ್ರೂಪ್’ (CG Corp Global) ಥೈಲ್ಯಾಂಡ್‌ನ ಕಂಪನಿಯೊಂದರ ಸಹಯೋಗದೊಂದಿಗೆ ಈ ನೂಡಲ್ಸ್ ಉತ್ಪಾದನೆಯನ್ನು ಪ್ರಾರಂಭಿಸಿತು. ಕುತೂಹಲದ ಸಂಗತಿಯೆಂದರೆ, ಬಿನೋದ್ ಚೌಧರಿ ಅವರು ಥೈಲ್ಯಾಂಡ್‌ನಿಂದ ನೇಪಾಳಕ್ಕೆ ಬರುವ ವಿಮಾನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ನೂಡಲ್ಸ್ ಪ್ಯಾಕೆಟ್ಗಳನ್ನು ತರುತ್ತಿರುವುದನ್ನು ಗಮನಿಸಿದರು.
ಇದನ್ನೂ ಓದಿ: Vishweshwar Bhat Column: ಎತ್ತರದಲ್ಲಿ ಹಾರುವ ಅದ್ಭುತ
ನೇಪಾಳದಲ್ಲಿ ಇದಕ್ಕೆ ದೊಡ್ಡ ಮಾರುಕಟ್ಟೆ ಇದೆ ಎಂದು ಅರಿತ ಅವರು ‘ವೈ ವೈ’ ಬ್ರ್ಯಾಂಡ್ ಅನ್ನು ಆರಂಭಿಸಿದರು. ವೈ ವೈ ನೂಡಲ್ಸ್‌ನ ವೈಶಿಷ್ಟ್ಯ ಏನು? ಇತರ ನೂಡಲ್ಸ್‌ಗಿಂತ ವೈ ವೈ ಹೇಗೆ ಭಿನ್ನ? ಇತರೆ ನೂಡಲ್ಸ್ ಅನ್ನು ತಿನ್ನಲು ಬೇಯಿಸಲೇಬೇಕು. ಆದರೆ ವೈ ವೈ ನೂಡಲ್ಸ್ ಅನ್ನು ಎಣ್ಣೆಯಲ್ಲಿ ಮೊದಲೇ - ಮಾಡಿರುವುದರಿಂದ, ಇದನ್ನು ಪ್ಯಾಕೆಟ್ ಬಿಡಿಸಿ ಹಾಗೆಯೇ ಕುರುಕುಲಾಗಿ ತಿನ್ನಬ ಹುದು.
ಇದು ಇದರ ಅತಿದೊಡ್ಡ ಪ್ಲಸ್ ಪಾಯಿಂಟ್. ವೈ ವೈ ಪ್ಯಾಕೆಟ್ ಒಳಗೆ ಕೇವಲ ಮಸಾಲೆ ಪುಡಿ ಮಾತ್ರವಲ್ಲದೇ, ಒಂದು ಪ್ಯಾಕೆಟ್ ಸುವಾಸನೆಯುಳ್ಳ ಈರುಳ್ಳಿ ಎಣ್ಣೆ ಮತ್ತು ಖಾರದ ಪುಡಿ ಕೂಡ ಇರುತ್ತದೆ. ಇದು ನೂಡಲ್ಸ್‌ಗೆ ವಿಶಿಷ್ಟ ನೇಪಾಳಿ ಅಥವಾ ಹಿಮಾಲಯದ ರುಚಿಯನ್ನು ನೀಡುತ್ತದೆ. ಇತರೆ ನೂಡಲ್ಸ್ ಬಿಳಿ ಅಥವಾ ಹಳದಿ ಬಣ್ಣದಲ್ಲಿದ್ದರೆ, ವೈ ವೈ ನೂಡಲ್ಸ ಕಂದು ಬಣ್ಣದಲ್ಲಿ ಇರುತ್ತದೆ. ನೇಪಾಳದ ನಂತರ ವೈ ವೈ ಅತಿ ದೊಡ್ಡ ಮಾರುಕಟ್ಟೆಯನ್ನು ಕಂಡುಕೊಂಡಿದ್ದು ಭಾರತದಲ್ಲಿ.
ಅದರಲ್ಲೂ ವಿಶೇಷವಾಗಿ ಭಾರತದ ಈಶಾನ್ಯ ರಾಜ್ಯಗಳಾದ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಗುಡ್ಡಗಾಡು ಪ್ರದೇಶಗಳಲ್ಲಿ. ವೈ ವೈ ಕೇವಲ ಆಹಾರವಲ್ಲ, ಅದೊಂದು ಭಾವನೆ. ಇಂದು ಭಾರತ ದಾದ್ಯಂತ ಮೆಟ್ರೋ ನಗರಗಳಿಂದ ಹಿಡಿದು ಹಳ್ಳಿಗಳ ತನಕ ವೈ ವೈ ಸಿಗುತ್ತಿದೆ. ಭಾರತದಲ್ಲಿ ಸಿಜಿ ಕಾರ್ಪ್ ಗ್ಲೋಬಲ್ ಕಂಪನಿಯು ಸಿಕ್ಕಿಂ, ಅಸ್ಸಾಂ ಮತ್ತು ಉತ್ತರ ಪ್ರದೇಶದಂಥ ಕಡೆಗಳಲ್ಲಿ ಬೃಹತ್ ಉತ್ಪಾದನಾ ಘಟಕಗಳನ್ನು ಹೊಂದಿದೆ.
ವೈ ವೈ ಅನ್ನು ಜನರು ಮೂರು ಪ್ರಮುಖ ರೀತಿಗಳಲ್ಲಿ ಆನಂದಿಸುತ್ತಾರೆ. ಮೊದಲನೆಯದು ಡ್ರೈ ನೂಡಲ್ಸ. ಚಿಪ್ಸ್ ತಿಂದಂತೆ ಪ್ಯಾಕೆಟ್‌ನ ಪುಡಿ ಮಾಡಿ, ಮಸಾಲೆ ಬೆರೆಸಿ ತಿನ್ನುವುದು. ಇದು ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ವಿಧಾನ. ಎರಡನೆಯದು, ಸೂಪಿ ನೂಡಲ್ಸ್. ಬಿಸಿ ನೀರಿಗೆ ಮಸಾಲೆ ಹಾಕಿ ಎರಡು ನಿಮಿಷ ಬೇಯಿಸಿ ತಿನ್ನುವುದು.
ಚಳಿಗಾಲದಲ್ಲಿ ಅಥವಾ ಮಳೆಯ ಸಮಯದಲ್ಲಿ ಇದು ಅದ್ಭುತ ರುಚಿ ನೀಡುತ್ತದೆ. ಮೂರನೆಯದು, ವೈ ವೈ ಚಾಟ್. ನೂಡಲ್ಸ ಅನ್ನು ಪುಡಿ ಮಾಡಿ ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಲಿಂಬೆ ರಸ ಬೆರೆಸಿ ಮಾಡುವ ಚಾಟ್ ತುಂಬಾ ಪ್ರಸಿದ್ಧ. ಯಾವುದೇ ಇನ್‌ಸ್ಟಂಟ್ ನೂಡಲ್ಸ್‌ನಂತೆ ವೈ ವೈ ಕೂಡ ಮೈದಾ ಹಿಟ್ಟಿನಿಂದ ತಯಾರಾಗುತ್ತದೆ.
ಇದರಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಹೀಗಾಗಿ, ಇದನ್ನು ಮಿತವಾಗಿ ಬಳಸುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಕಂಪನಿಯು ‘ಮಲ್ಟಿಗ್ರೇನ್’ ಮತ್ತು ಹೆಚ್ಚು ಪೌಷ್ಟಿಕಾಂಶವಿರುವ ನೂಡಲ್ಸ್ ಅನ್ನು ಮಾರುಕಟ್ಟೆಗೆ ತರುತ್ತಿದೆ. ಆದರೂ, ಮಕ್ಕಳಿಗೆ ಪ್ರತಿದಿನ ಇದನ್ನು ನೀಡುವ ಬದಲು ಸಾಪ್ತಾ ಹಿಕ ತಿಂಡಿಯಾಗಿ ಬಳಸುವುದು ಉತ್ತಮ. ಇಂದು ವೈ ವೈ ಸುಮಾರು 30ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.
ಜಪಾನ್ ಮತ್ತು ಕೊರಿಯಾದ ನೂಡಲ್ಸ್ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಿರುವ ದಕ್ಷಿಣ ಏಷ್ಯಾದ ಏಕೈಕ ಬ್ರ್ಯಾಂಡ್ ಎಂದರೆ ಅದು ವೈ ವೈ. ಬಿನೋದ್ ಚೌಧರಿ ಅವರ ವೈ ವೈ ನೂಡಲ್ಸ್ ಇಂದು ವಿಶ್ವ ದಾದ್ಯಂತ ಬಿಲಿಯನ್ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ನೂಡಲ್ಸ್ ಕೇವಲ ಹಸಿವನ್ನು ನೀಗಿಸುವ ಪದಾರ್ಥವಲ್ಲ, ಅದು ಸಮಯದ ಉಳಿತಾಯ ಮತ್ತು ರುಚಿಯ ಸಂಗಮ.
ಪ್ರಯಾಣ, ಪರ್ವತಾರೋಹಣದ ವೇಳೆ ಅಥವಾ ಅಡುಗೆ ಮಾಡಲು ಸೋಮಾರಿತನ ಬಂದಾಗ ನೆನಪಾಗುವ ಮೊದಲ ಹೆಸರು ‘ವೈ ವೈ’. ಅತಿ ಕಡಿಮೆ ಬೆಲೆಯಲ್ಲಿ (ಕೇವಲ 10-15 ರು) ರಾಜಾತಿಥ್ಯದ ರುಚಿ ನೀಡುವ ಈ ನೂಡಲ್ಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಗಳೊಂದಿಗೆ ಮಾರುಕಟ್ಟೆ ಆಳುವುದರಲ್ಲಿ ಸಂಶಯವಿಲ್ಲ.