ತುಂಟರಗಾಳಿ
ಸಿನಿಗನ್ನಡ
ಕೆಲವು ಡೈಲಾಗ್ ರೈಟರ್‌ಗಳು ಇರ್ತಾರೆ. ‘ಮಾತು ಬೆಳ್ಳಿ ಮೌನ ಬಂಗಾರ’ ಎನ್ನುವ ಜಾತಿ ಅವರದ್ದಲ್ಲ. ಅವರಿಗೆ ಮಾತೇ ಬಂಗಾರ. ಇಂಥ ಒಬ್ಬ ಬರಹಗಾರ ನಂತರ ನಿರ್ದೇಶಕ ಆದವರೊಬ್ಬರು ಇತ್ತೀಚೆಗೆ ತಮ್ಮ ಸಿನಿಮಾ ಮೂಲಕ ಒಂದು ಮಾತಾಡಿದ್ದಾರೆ.
ಅವರ ಸಿನಿಮಾ ಹೇಗೇ ಇದ್ದರೂ ಚಿತ್ರದಲ್ಲೂ ಕೂಡಾ ಅವರ ಈ ಸಂಪ್ರದಾಯವನ್ನು ಅವರು ಯಾವಾಗಲೂ ಮುಂದುವರೆಸುತ್ತಾರೆ. ಒಮ್ಮೊಮ್ಮೆ ಇಂಥಾ ಒಳ್ಳೆಯ ಡೈಲಾಗ್ ಯಾವುದಾದ್ರೂ ಒಳ್ಳೆಯ ಸಿನಿಮಾದಲ್ಲಿ ಇರಬಾರದಿತ್ತೇ ಎನಿಸುವಷ್ಟು ಚೆನ್ನಾಗಿ. ಆದರೆ, ಅಂಥ ಡೈಲಾಗ್ ಬರೆಯುವ ಭರದಲ್ಲಿ, ಈ ಬರಹಗಾರರು ತಮ್ಮ ಚಿತ್ರದ ದೃಶ್ಯವೊಂದರಲ್ಲಿ ಪತ್ರಕರ್ತರನ್ನು ಉದ್ದೇಶಿಸಿ, ‘ಈಗ ಏನೂ ಪ್ರಶ್ನೆ ಕೇಳ್ಬೇಡಿ, ಮತ್ತೊಂದ್ ದಿನ ಕರೀತೀವಿ.. ಅವತ್ತು ಬನ್ನಿ, ಅವತ್ತು ಕವರು, ಗಿಫ್ಟ್ ಎಲ್ಲ ಇತ್ತದೆ’ ಎಂಬ ಸಂಭಾಷಣೆ ಹೇಳಿಸಿ, ಸಾರಾಸಗಟಾಗಿ ಎಲ್ಲ ಪತ್ರಕರ್ತರೂ ಹೀಗೇ ಎಂದು ಹೇಳಿಸಿದ್ದಾರೆ.
ಈ ರೀತಿ ಹೇಳುವ ಹಕ್ಕನ್ನು ಅವರಿಗೆ ಯಾರು ಕೊಟ್ಟರು ಎಂಬ ಖಾರವಾದ ಪ್ರಶ್ನೆ ಕೇಳುವು ದಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ. ಅವರು ಹೇಳಿದ್ದು ಸಂಪೂರ್ಣ ಸುಳ್ಳಲ್ಲದಿರಬಹುದು. ಆದರೆ, ಸಂಪೂರ್ಣ ಸತ್ಯವೂ ಅಲ್ಲ. ಪತ್ರಕರ್ತರಲ್ಲಿ ಯಾರೋ ಕೆಲವರು ಅಥವಾ ಹಲವರೇ ಹಾಗಿರಬಹುದು, ಆದರೆ ಎಲ್ಲರೂ ಅಲ್ಲವಲ್ಲ. ಎಲ್ಲ ಪತ್ರಕರ್ತರೂ ‘ಕವರ್ ಸ್ಟಾರ್’ಗಳಲ್ಲ ಮತ್ತು ‘ಗಿಫೈಡ್’ ಟ್ಯಾಲೆಂಟ್‌ಗಳಲ್ಲ ಎಂಬುದು ಅವರ ಗಮನಕ್ಕೆ ಬಂದಿದ್ದರೆ ಸ್ವಲ್ಪ ಒಳ್ಳೆಯದಿತ್ತು ಎನ್ನುತ್ತಿದೆ ಕ.ರಾ.ಅ.ಪ್ರಾ.ಪ. ಸಂಘ!
ಲೂಸ್ ಟಾಕ್-ಸಿದ್ದರಾಮಯ್ಯ
ಏನ್ ಸಾರ್ ಮಾಜಿ ಮುಖ್ಯಮಂತ್ರಿ ಆಗ್ಬಿಟ್ರಲ್ಲ?
- ಏನ್ ಮಾಡೋಕಾಗುತ್ತೆ. ಜನ ಇದ್ದು ಹೋಗಿ ಇದ್ದು ಹೋಗಿ ಸಿದ್ದರಾಮಯ್ಯ ಅಂದ್ರೆ, ಹೈಕಮ್ಯಾಂಡ್‌ನವರು ಎದ್ದು ಹೋಗಿ ಎದ್ದು ಹೋಗಿ ಸಿದ್ದರಾಮಯ್ಯ ಅಂದ್ರಲ್ಲ.
ಅದ್ಸರಿ, ನಿಮಗೆ ವಯಸ್ಸಾಯ್ತು ಅಂತ ನಿಮ್ಮನ್ನ ಕೆಳಗೆ ಇಳಿಸಿದ್ದಾ?
- ನಂಗಾ?, ನಂಗೇನ್ರೀ ವಯಸ್ಸಾಗಿದೆ?. ಇನ್ನೂ ‘ಬಂಡೆ’ ಥರ ಇದ್ದೀನಿ.
ಇದನ್ನೂ ಓದಿ: Hari Paraak Column: ಪ್ಲಂಬರ್‌ಗೆ ಇಷ್ಟ ಆಗೋ ಡಿಷ್ - ನಲ್ಲಿ ಮೂಳೆ
ಹಿಂಗೇ ಇರಿ ಸರ್, ಹೋಗ್ಲಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟು ಕೊಟ್ರಲ್ಲ ಅದು ಹೆಂಗೆ?
- ಮತ್ತೆ, ಬಂಡೆ ಥರ ಇದ್ದೀನಿ ಅಂತ ಕೊಟ್ಟ ಮಾತಿನ ವಿಷಯದಲ್ಲಿ ಭಂಡತನ ಮಾಡೋಕಾಗುತ್ತಾ?
ಕರೆಕ್ಟು, ನಿಮ್ಮನ್ನ ಸಿದ್ರಾಮುಲ್ಲಾ ಖಾನ್ ಅಂತ ಆಡಿಕೊಳ್ಳೋ ಬಿಜೆಪಿಯವರು ಏನಂತಿದ್ದಾರೆ?
- ಅಯ್ಯೋ, ಅವ್ರ ಇಡೀ ಖಾನ್ ದಾನ್ ವಿಷಯ ಎಲ್ಲ ನಮಗೆ ಗೊತ್ತು ಬಿಡ್ರೀ. ನನ್ನನ್ನ ಆಡಿಕೊಳ್ಳದೇ ಇದ್ರೆ ಅವರಿಗೆ ಖಾನಾ ಗಂಟಲಿಗೆ ಇಳಿಯಲ್ಲ.
ಬರೀ ಮುಖ್ಯಮಂತ್ರಿ ಆಗಿ ಅಲ್ಲ ಹಣಕಾಸು ಸಚಿವ, ಅದು ಇದೂ ಅಂತ ಆಲ್ ರೌಂಡರ್ ಆಗಿದ್ರಿ ನೀವು ಅಲ್ವಾ?
- ಮತ್ತೆ, ನಾನು ಕುರುಬ ಕಣ್ರೀ. ಆಡು ಮುಟ್ಟದ ಸೊಪ್ಪಿಲ್ಲ ಅಂತ ಮಾತು ಕೇಳಿಲ್ವಾ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ನಾಲ್ಕು ಜನ ಸ್ನೇಹಿತರು ಬೆಳಗಿನ ವಾಕಿಂಗ್‌ಗೆ ಅಂತ ಹೊರಟಿದ್ದರು. ವಾಕಿಂಗ್ ಮಾಡ್ತಾ ಮಾಡ್ತಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳಿಕೊಳ್ಳಲು ಪ್ರಾರಂಭಿಸಿದರು. ಮೊದಲನೇ ತಂದೆ ಹೇಳಿಕೊಂಡ ‘ನನ್ನ ಮಗ ಬೆಂಗಳೂರಲ್ಲಿ ದೊಡ್ಡ ಅಕೌಂಟೆಂಟ್ ಕೆಲಸದಲ್ಲಿದಾನೆ.
ಮನೆಗೆ ತುಂಬಾ ದುಡ್ ಕಳಿಸ್ತಾನೆ. ತುಂಬಾ ದುಡ್ ದುಡೀತಾನೆ ಅನ್ಸತ್ತೆ. ಇಲ್ಲಾಂದ್ರೆ, ಅವನ ಕೈಲಿ ಮೂರು ತಿಂಗಳ ಮುಂಚೆ ಅವನ ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಅಂತ ಒಂದು ಡೈಮಂಡ್ ನೆಕ್ಲೇಸ್ ಕೊಡೋಕಾಗಿತ್ತೆ?’ ಅದರ ನಂತರ ಎರಡನೇ ತಂದೆ ಹೇಳಿದ ‘ನನ್ ಮಗನೂ ಬೆಂಗಳೂರಲ್ಲಿ ದೊಡ್ಡ ಸಾಫ್ಟ್ʼವೇರ್ ಎಂಜಿನಿಯರ್ ಆಗಿದಾನೆ, ತುಂಬಾ ದುಡೀತಾನೆ, ನಮಗೂ ಕಳಿಸ್ತಾನೆ, ತುಂಬಾ ದುಡೀತಾನೆ ಅನ್ಸತ್ತೆ, ಇಲ್ಲಾಂದ್ರೆ ಅವನ ಗರ್ಲ್ ಫ್ರೆಂಡ್‌ಗೆ ಎರಡು ತಿಂಗಳು ಮುಂಚೆ ಗಿಫ್ಟ್ ಅಂತ ಒಂದು ಕಾರು ಕೊಡಿಸೋಕಾಗ್ತಿತ್ತೇ?’ ಈಗ ಮೂರನೇ ಯವನ ಸರತಿ ಬಂತು ‘ನನ್ನ ಮಗ ಬೆಂಗಳೂರಲ್ಲಿ ಬ್ಯುಸಿನೆಸ್ಮನ್. ನಮಗೂ ದುಡ್ಡು ಕಳಿಸ್ತಾನೆ. ತುಂಬಾ ದುಡೀತಾನೆ ಅನ್ಸತ್ತೆ, ಇಲ್ಲಾಂದ್ರೆ ಹೋದ್ ತಿಂಗಳು, ಅವನ ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಅಂತ ಒಂದು ಫ್ಲ್ಯಾಟ್ ಕೊಡಿಸೋಕಾಗ್ತಿತ್ತೇ’ ಈಗ ಕಡೆ ತಂದೆಯ ಸರತಿ. ಅವನು ಮೆಲ್ಲಗೆ ಹೇಳಿದ, ‘ನನ್ ಮಗಳೂ ಬೆಂಗಳೂರಲ್ಲಿದಾಳೆ, ನಮಗೆ ದುಡ್ಡನ್ನೂ ಕಳಿಸ್ತಾಳೆ, ಆದ್ರೆ, ಎಷ್ಟು ದುಡೀತಾಳೆ ಅಂತ ಗೊತ್ತಿಲ್ಲ, ಏನ್ ಕೆಲಸ ಮಾಡ್ತಾಳೆ ಅಂತನೂ ಸರಿಯಾಗಿ ಗೊತ್ತಿಲ್ಲ. ಆದ್ರೂ ತುಂಬಾ ಬುದ್ಧಿವಂತೆ ಆಗಿದಾಳೆ ಅನ್ಸತ್ತೆ. ಇಲ್ಲಾಂದ್ರೆ ಕಳೆದ ಮೂರು ತಿಂಗಳಲ್ಲಿ ಅವಳಿಗೆ ಗಿಫ್ಟ್ ಅಂತ ಒಂದು ಡೈಮಂಡ್ ನೆಕ್ಲೇಸ್, ಒಂದು ಕಾರು, ಒಂದು ಫ್ಲ್ಯಾಟ್ ಸಿಕ್ತಾ ಇತ್ತೆ!’
ಲೈನ್ ಮ್ಯಾನ್
ಸ್ಕೂಲ್‌ಗಳಲ್ಲಿನ ಜನರಲ್ ನಾಲೆಡ್ಜ್ ಸಿಲಬಸ್‌ನಲ್ಲಿ ಇನ್ಮೇಲೆ ‘ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು?’ ಎಂಬ ಪ್ರಶ್ನೆ ಬದಲಾಗಲಿದೆ. ಹೊಸ ಪ್ರಶ್ನೆ ಹೀಗಿರಲಿದೆ
- ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?
ಪೆಟ್ರೋಲ್ ಬೆಲೆ ಜಾಸ್ತಿ ಆದಮೇಲೆ ಅವನತ್ರ ಕಾರಿದೆ ನನ್ನತ್ರ ಇಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದವರ ಹೊಸ ಡೈಲಾಗ್
- ಪಾಪ, ಅವನತ್ರ ಕಾರಿದೆ!
ಕೊಳಕು ಪಬ್ಲಿಕ್ ಟಾಯ್ಲೆಟ್ʼಗಳಿಂದ ಏನು ಪ್ರಯೋಜನ?
- ಅದನ್ನು ಬಳಸಲು ಮನಸ್ಸು ಬಾರದೆ, ಅದರಿಂದ ಮನುಷ್ಯನ ‘ಸಹಿಷ್ಣುತೆಯ’ ಶಕ್ತಿ ಹೆಚ್ಚುತ್ತದೆ!
ಕೆಲವು ಪೊಲಿಟಿಕಲ್ ಗಾದೆಗಳು
- ರಾತ್ರಿ ಎಲ್ಲ ಸುವರ್ಣ ನ್ಯೂಸ್ ನೋಡಿ ಬೆಳಗ್ಗೆ ಎದ್ದು ಸಿದ್ರಾಮಯ್ಯ ರಾಜೀನಾಮೆಗೂ, ಡಿಕೆಶಿಗೂ ಏನ್ ಸಂಬಂಧ ಅಂತ ಕೇಳಿದ್ರಂತೆ..
- ಎಲೆಕ್ಷನ್‌ಗೆ ಮುಂಚೆನೇ ರಿಸಲ್ಟ್ ಏನಾಯ್ತು ಅಂತ ಕೇಳಿದ್ರಂತೆ...
- ರಿಸಲ್ಟ್ ಬಂದ್ಮೇಲೆ ನಾಮಪತ್ರ ಸಲ್ಲಿಸಿದಂಗಾಯ್ತು..
- ರಿಸಲ್ಟ್ ಏನಾಯ್ತು ಗುಂಡಾ ಅಂದ್ರೆ, ವೋಟ್ ಹಾಕಿದವರು ಎಷ್ಟು ಮಂದಿ ಅಂತ ಕೇಳಿದ್ದಂತೆ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದ ಬೋಲರ್ ಒಬ್ಬ ತನ್ನ ಹೆಂಡತಿ ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿದಾಗ ಹೇಳಿದ್ದು
- ‘ವಾವ್, ವಾಟ್ ಎ ಡೆಲಿವರಿ!’
ಒಂದು ಡೌಟು
- ‘ಏಳಿ ಎದ್ದೇಳಿ’ ಎಂದು ಕರೆ ನೀಡಿದ, ವಿವೇಕಾನಂದರು ಲೈಫಲ್ಲಿ ಯಾರಿಗೂ ಗುಡ್ ನೈಟ್ ಹೇಳಿರಲೇ ಇಲ್ಲವಾ?
ಯಾವಾಗಲೂ ಫೇಸ್‌ಬುಕ್‌ನಲ್ಲಿ ಮುಳುಗಿ ಹೋಗಿರೋರನ್ನ ಏನೆನ್ನಬಹುದು?
- ಫೇಸ್ ‘ಬುಕ್‌ವರ್ಮ್