ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಇನ್ನು ನೀರು ಬಳಸದೇ ಇದನ್ನು ಮಾಡಬಹುದು...

ನೀರನ್ನು ಬಳಸದ ಮೂತ್ರದ ಬಟ್ಟಲಿನ (Waterless Urinal Bowl) ಬಗ್ಗೆ ನೀವು ಕೇಳಿರಬಹುದು. ಇದನ್ನು ನೀರು ಬಳಸದೇ ಮೂತ್ರ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನ ಹೊಂದಿರುವ ಕಮೋಡ್ ಎನ್ನಬಹುದು. ಇದರಲ್ಲಿ ನೀರು ಉಳಿತಾಯವಾಗುವುದಷ್ಟೇ ಅಲ್ಲ, ವಾಸನೆಯೂ ಬರುವುದಿಲ್ಲ. ಯುರೋಪ್‌ನ ಬಹುತೇಕ ಕಡೆಗಳಲ್ಲಿ ಈ ತಂತ್ರಜ್ಞಾನ ಬಳಸಿದ್ದಾರೆ ಎಂದು ಹೇಳಿದೆನಲ್ಲ, ಕೆಲವು ಕಡೆ ಈ ತಂತ್ರಜ್ಞಾನದಿಂದಾಗಿ ಎಷ್ಟು ನೀರು ಉಳಿಯುತ್ತಿದೆ ಎಂದು ಫಲಕಗಳನ್ನೂ ಹಾಕಿದ್ದಾರೆ.

ವಿದೇಶವಾಸಿ

ಕಳೆದ ಹತ್ತು ದಿನದಿಂದ ಯುರೋಪ್ ತಿರುಗಾಟದಲ್ಲಿದ್ದೇನೆ. ಜರ್ಮನಿ, ಸ್ವಿಜರ್ಲೆಂಡ್, ಇಟಲಿ ಯಂಥ ದೊಡ್ಡ ದೇಶದಲ್ಲೂ, ಸಾನ್ಮಾರಿನೋ, ಲೀಚೆನ್‌ಸ್ಟೇನ್‌ನಂಥ ಸಣ್ಣ ದೇಶದಲ್ಲೂ ನಾನು ಕಂಡ ಒಂದು ವಿಷಯ ನಿಮಗೆ ಹೇಳಬೇಕು. ಇತ್ತೀಚೆಗೆ ಈ ದೇಶಗಳಲ್ಲಿ ಬಹುತೇಕ ಸಾರ್ವಜನಿಕ ಮೂತ್ರಖಾನೆಗಳಲ್ಲಿ ಸ್ವಚ್ಛ ಮಾಡಲು ನೀರು ಬಳಸುತ್ತಿಲ್ಲ. ಅಂದರೆ, ಮೂತ್ರ ವಿಸರ್ಜನೆಯ ನಂತರ ಫ್ಲಶ್ ಆಗುವುದಿಲ್ಲ.

‘ಅಯ್ಯೋ ಮೂತ್ರಖಾನೆಯಲ್ಲಿ ನೀರು ಬಳಸದಿದ್ದರೆ ಸ್ವಚ್ಛವಾಗಿರುವುದಾದರೂ ಹೇಗೆ? ಕೆಟ್ಟ ವಾಸನೆ ಬರುವುದಿಲ್ಲವೇ?’ ಇತ್ಯಾದಿ ಪ್ರಶ್ನೆಗಳು ಬರುವುದು ಸಹಜ. ಭಾರತದ ಬಹುತೇಕ ಸಾರ್ವಜನಿಕ ಪಾಯಖಾನೆ, ಮೂತ್ರಖಾನೆಯ ಒಳಗೆ ಹೊಕ್ಕು, ಹೊರಗೆ ಬರುವವರೆಗೂ ಒಂದು ಕೈ ಮೂಗು ಮುಚ್ಚಿಕೊಳ್ಳುವುದರ ವ್ಯಸ್ಥವಾಗಿರುತ್ತದೆ.

ಏಕೆಂದರೆ ಆ ಸ್ಥಳ ವಾಕರಿಕೆ ಬರುವಷ್ಟು ಗಬ್ಬೆದ್ದು ನಾರುತ್ತಿರುತ್ತದೆ. ಅಲ್ಲಿಯ ಕೆಟ್ಟ ವಾಸನೆಗೆ ಹೆದರಿ, ಮಲ-ಮೂತ್ರ ವಿಸರ್ಜನೆಗೆ ಹೋಗದೇ, ಕಟ್ಟಿಕೊಂಡು ಕುಳಿತುಕೊಳ್ಳುವವರೂ ಇದ್ದಾರೆ. ಆದರೆ ನೀರು ಬಳಸದೇ ಇರುವ ಮೂತ್ರಖಾನೆಯಲ್ಲಿ ಸ್ವಲ್ಪವೂ ವಾಸನೆ ಬರುವುದಿಲ್ಲ ಎಂದರೆ ಆಶ್ಚರ್ಯಪಡಬೇಕಾಗಿಲ್ಲ.

ಇದನ್ನೂ ಓದಿ: Kiran Upadhyay Column: ಆಧುನಿಕ ಯುಗದ ಭಗೀರಥರಿಗೆ ಶರಣು...

ನೀರನ್ನು ಬಳಸದ ಮೂತ್ರದ ಬಟ್ಟಲಿನ (Waterless Urinal Bowl) ಬಗ್ಗೆ ನೀವು ಕೇಳಿರಬಹುದು. ಇದನ್ನು ನೀರು ಬಳಸದೇ ಮೂತ್ರ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನ ಹೊಂದಿ ರುವ ಕಮೋಡ್ ಎನ್ನಬಹುದು. ಇದರಲ್ಲಿ ನೀರು ಉಳಿತಾಯವಾಗುವುದಷ್ಟೇ ಅಲ್ಲ, ವಾಸನೆಯೂ ಬರುವುದಿಲ್ಲ. ಯುರೋಪ್‌ನ ಬಹುತೇಕ ಕಡೆಗಳಲ್ಲಿ ಈ ತಂತ್ರಜ್ಞಾನ ಬಳಸಿದ್ದಾರೆ ಎಂದು ಹೇಳಿದೆ ನಲ್ಲ, ಕೆಲವು ಕಡೆ ಈ ತಂತ್ರಜ್ಞಾನದಿಂದಾಗಿ ಎಷ್ಟು ನೀರು ಉಳಿಯುತ್ತಿದೆ ಎಂದು ಫಲಕಗಳನ್ನೂ ಹಾಕಿದ್ದಾರೆ. ಅದರ ಪ್ರಕಾರ, ಒಬ್ಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ನಂತರ ಅದನ್ನು ಸ್ವಚ್ಛ ಮಾಡುವುದಕ್ಕೆ ಬೇಕಾದ ೩ ಲೀಟರ್ ನೀರು ಉಳಿತಾಯವಾಗುತ್ತಿದೆಯಂತೆ.

ಭಾರತದಲ್ಲಿ ಈ ತಂತ್ರಜ್ಞಾನ ಇಲ್ಲವೆಂದೇನೂ ಅಲ್ಲ. ಕೆಲವು ವಿಮಾನ ನಿಲ್ದಾಣಗಳಲ್ಲಿ ನಾನು ಇದನ್ನು ಕಂಡಿದ್ದೇನೆ. ಇನ್ನೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ‘ವಾಟರ್‌ಲೆಸ್ ಯೂರಿನಲ್ ಬೌಲ್’ ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಭಾರತದಲ್ಲೂ ಹೆಚ್ಚು ನೀರು ಉಳಿಸಬಹುದು. ಹಾಗಾದರೆ ಇದು ಹೊಸ ಆವಿಷ್ಕಾರವೇ? ಖಂಡಿತ ಅಲ್ಲ. ಇದೇನು ನಿನ್ನೆ ಮೊನ್ನೆ ಬಂದದ್ದಲ್ಲ. ಸುಮಾರು ೨ ದಶಕದ ಹಿಂದೆಯೇ ‘ವಾಟರ್‌ಲೆಸ್’ ಹೆಸರಿನ ಸಂಸ್ಥೆ ಈ ಬದಲಾವಣೆ ತರಲು ಪ್ರಯತ್ನಿ ಸಿತು.

ಇಂದು ಸ್ಯಾನಿಟರಿ ವೇರ್ ತಯಾರಿಸುವ ಬಹಳಷ್ಟು ಕಂಪನಿಗಳು ಇದನ್ನು ತಯಾರಿಸುತ್ತಿವೆ. ಯುರೋಪ್‌ನ ಬಹುತೇಕ ರಾಷ್ಟ್ರಗಳು, ಅಮೆರಿಕ, ರಷ್ಯಾದಂಥ ಅಭಿವೃದ್ಧಿ ಹೊಂದಿದ ದೇಶದ ಹೆಚ್ಚಿನ ಭಾಗದಲ್ಲಿ ಈಗಾಗಲೇ ಇದು ಚಾಲ್ತಿಯಲ್ಲಿದ್ದು, ಈಗ ಕೊಲ್ಲಿ ರಾಷ್ಟ್ರಗಳಿಗೂ ಲಗ್ಗೆ ಇಡುತ್ತಿದೆ.

ಒಂದು ಹನಿ ನೀರನ್ನೂ ಬಳಸದೇ ಕಾರ್ಯ ನಿರ್ವಹಿಸುವ ಈ ಬಟ್ಟಲಿನಲ್ಲಿರುವುದು ಎರಡು ಪ್ರಮುಖ ವಸ್ತುಗಳು. ಒಂದು, ಇಕೋ ಟ್ರಾಪ್. ಮತ್ತೊಂದು, ಜೆಲ್. ತಂತ್ರಜ್ಞಾನ ಬಹಳ ಸರಳ. ಗುರುತ್ವಾಕರ್ಷಣೆಯಿಂದ ಮೂತ್ರ ಇಕೋ ಟ್ರಾಪ್ ಮತ್ತು ಅದರ ಒಳಪದರದಲ್ಲಿರುವ ಜೆಲ್‌ನಲ್ಲಿ ಇಳಿದು, ಡ್ರೈನ್ ಪೈಪ್ ಮುಖಾಂತರ ಹರಿದು‌ ಹೋಗುತ್ತದೆ.

Toilet

ಮೂತ್ರಕ್ಕಿಂತ ಹಗುರವಾಗಿರುವ ಜೆಲ್ ಮೇಲೆ ತೇಲುತ್ತಿದ್ದು, ವಾಸನೆ ಬರದಂತೆ ತಡೆಗಟ್ಟುತ್ತದೆ. ಮೇಲಿನ ಬೌಲ್ ಸ್ವಚ್ಛ ಮಾಡಲು ಬೇಕಾಗುವುದು ತಿಂಗಳಿಗೆ ಒಂದು ಬಕೆಟ್ ನೀರು. ಅದೂ ಇಲ್ಲ ವೆಂದರೆ, ಇದಕ್ಕಾಗಿಯೇ ತಯಾರಿಸಿದ ರಾಸಾಯನಿಕ ದ್ರವ್ಯಗಳನ್ನು ಬಳಸಬಹುದು.

ವರ್ಷಕ್ಕೆ ಎರಡು ಬಾರಿ, ಇಕೋ ಟ್ರಾಪ್ ನಲ್ಲಿರುವ ಕ್ಯಾಟ್ರಿಜ್ ಬದಲಾಯಿಸುವುದು, ತಿಂಗಳಿಗೆ ಒಂದೋ ಎರಡೋ ಸಲ (ಬಳಕೆಗೆ ತಕ್ಕಂತೆ) ಜೆಲ್ ಸೇರಿಸುವುದಷ್ಟೇ ಕೆಲಸ. ಇದೆಲ್ಲ 3-4 ನಿಮಿಷ ದಲ್ಲಿ ಮುಗಿದು ಹೋಗುತ್ತದೆ. ಇಪ್ಪತ್ತು ಸಾವಿರ ರುಪಾಯಿಗಿಂತಲೂ ಕಡಿಮೆ ಬೆಲೆಗೆ ದೊರಕುವ ಒಂದು ಬೌಲ್, ಪ್ರತಿ ನಿತ್ಯ ನಾಲ್ಕು ನೂರರಂತೆ, ವರ್ಷಕ್ಕೆ ಒಂದೂವರೆ ಲಕ್ಷ ಲೀಟರ್ ನೀರನ್ನು ಉಳಿಸುತ್ತದೆ.

ವಾಸನೆ ರಹಿತವೂ, ಸೂಕ್ಷ್ಮಾಣುಮುಕ್ತವೂ ಆಗಿರುವ ಇದರ ನಿರ್ವಹಣೆಯ ವೆಚ್ಚ ಒಂದು ಬಳಕೆಗೆ ಏಳು ಪೈಸೆಗಿಂತಲೂ ಕಡಿಮೆ ಎಂದರೆ ಇನ್ನೇನು ಬೇಕು? ಇದರೊಂದಿಗೆ ಈಗ ನೀರನ್ನು ಬಳಸದ ಶೌಚಗಳೂ ಜನಪ್ರಿಯವಾಗುತ್ತಿವೆ. ಎರಡು ಬಗೆಯ ನೀರನ್ನೇ ಬಳಸದ ಶೌಚಾಲಯಗಳು ಮಾರು ಕಟ್ಟೆಗೆ ಬಂದಿವೆ. ಮೊದಲು ಬಯಲು ಶೌಚದ ಕಾಲದಲ್ಲಿ ಒಂದು ಬಿಂದಿಗೆ ನೀರಿನಲ್ಲಿ ಎಲ್ಲಾ ಕಾರ್ಯ ಮುಗಿಯುತ್ತಿತ್ತು.

ಆ ಪದ್ಧತಿ ಒಳ್ಳೆಯದಲ್ಲ ಎನ್ನುವುದನ್ನು ಒಪ್ಪುವಂಥದ್ದೇ. ಆದರೆ ಸೆಪ್ಟಿಕ್ ಶೌಚಾಲಯಗಳು ಬಂದ ನಂತರ ನೀರಿನ ಬಳಕೆಯೂ ಹೆಚ್ಚಾಯಿತು, ಜತೆಗೆ ನಿರ್ವಹಣೆ ಸರಿಯಾಗದಿದ್ದಾಗ ಅಂತರ್ಜಲ ಮಲಿನ ವಾಗತೊಡಗಿತು. ಆರಂಭದ ದಿನಗಳಲ್ಲಿ ಒಮ್ಮೆ ಫ್ಲಶ್ ಮಾಡಿದರೆ ಕಮ್ಮಿ ಎಂದರೂ ಹದಿನೈದರಿಂದ ಇಪ್ಪತ್ತು ಲೀಟರ್ ನೀರು ಹರಿದು ಹೋಗುತ್ತಿತ್ತು.

ಇತ್ತೀಚೆಗೆ ಬರುವ ಫ್ಲಶ್ ಟ್ಯಾಂಕ್ ಗಳು ೬ ಲೀಟರ್ ಸಾಮರ್ಥ್ಯವುಳ್ಳದ್ದು. ಅದೂ ಹೆಚ್ಚು ಎಂದೆನಿಸಿ ದಾಗ ಬದಲಿ ವ್ಯವಸ್ಥೆಗೆ ಹುಡುಕಾಟ ಆರಂಭವಾಯಿತು. ಇದರ ಪರಿಣಾಮವೇ ಕಾಂಪೋ ಶೌಚಾ ಲಯ. ಈ ಶೌಚಾಲಯದಲ್ಲಿ ತ್ಯಾಜ್ಯ ಸಂಗ್ರಹಿಸಲು ಕೆಳಗಡೆ ಕಪ್ಪು ಬಣ್ಣದ ಒಂದು ತೊಟ್ಟಿ ಇರುತ್ತದೆ. ತೊಟ್ಟಿಯೊಳಕ್ಕೆ ಗಾಳಿ ಬರಲು ಒಂದು, ಆವಿ ಹೊರಗೆ ಹೋಗಲು ಒಂದು, ಹೀಗೆ ಎರಡು ಕೊಳವೆಗಳಿರುತ್ತವೆ.

ಕಪ್ಪು ಬಣ್ಣದ ತೊಟ್ಟಿ ಸೂರ್ಯನ ಶಾಖ ಎಳೆದುಕೊಂಡು ತೊಟ್ಟಿಯೊಳಗಿನ ಗಾಳಿಯ ಉಷ್ಣತೆ ಹೆಚ್ಚಿಸುತ್ತದೆ. ಇದರಿಂದ ಶೇ.90ರಷ್ಟು ತ್ಯಾಜ್ಯ ಆವಿಯಾಗಿ ಹೋಗುತ್ತದೆ. ಈ ಕ್ರಿಯೆಯಲ್ಲಿ ವಾಸನೆ, ರೋಗಕಾರಕ ಬ್ಯಾಕ್ಟೀರಿಯಾಗಳೆಲ್ಲ ನಶಿಸಿಹೋಗುತ್ತವೆ. ಉಳಿದ ತ್ಯಾಜ್ಯ ಗೊಬ್ಬರಕ್ಕೆ!

ಇಶ್ಶೀ, ಇದೇನು ಅನ್ನಬೇಡಿ. ಇದಕ್ಕೆ ಇಶ್ಶೀ ಅನ್ನುವುದಾದರೆ ವಿಮಾನ ಪ್ರಯಾಣ ಮಾಡುವಂತಿಲ್ಲ. ಏಕೆಂದರೆ ವಿಮಾನದಲ್ಲಿರುವ ಶೌಚಾಲಯ ಹೆಚ್ಚು ಕಮ್ಮಿ ಇದೇ ಮಾದರಿಯದ್ದು, ಸ್ವಲ್ಪ ವ್ಯತ್ಯಾಸ ಅಷ್ಟೆ. ರೈಲಿನಲ್ಲಿರುವ ಶೌಚಾಲಯಕ್ಕಿಂತ ಇದು ಒಳ್ಳೆಯದಲ್ಲವೇ? ಇನ್ನೊಂದು ಮಾದರಿಯ ಶೌಚಾಲಯ ತ್ಯಾಜ್ಯವನ್ನು ಸುಡುವಂಥದ್ದು.

ಇದು ವಿದ್ಯುತ್ ಚಾಲಿತ. ಕಮೋಡಿಗೆ ಒಂದು ಸ್ವಿಚ್ ಇರುತ್ತದೆ. ಶೌಚ ಮುಗಿಸಿ ಫ್ಲಶ್ ಮಾಡುವ ಬದಲು ಸ್ವಿಚ್ ಅಮುಕಿದರೆ ಆಯಿತು. ಕೆಳಗಿನ ತೊಟ್ಟಿಯಲ್ಲಿ ಶೇಖರಗೊಂಡ ತ್ಯಾಜ್ಯ 10-15 ನಿಮಿಷದಲ್ಲಿ ಸುಟ್ಟು ಬೂದಿಯಾಗುತ್ತದೆ. ಹೊಗೆ ಹೋಗಲು ಹೊರಗಡೆ ಕೊಳವೆ ಅಳವಡಿಸಿರುವು ದರಿಂದ ಮನೆಯ ಒಳಗೆ ವಾಸನೆಯಾಗಲೀ ಹೊಗೆಯಾಗಲೀ ಬರುವುದಿಲ್ಲ.

ಇದು ಒಂದು ರೀತಿಯಲ್ಲಿ ವಿದ್ಯುತ್ ಚಿತಾಗಾರದಲ್ಲಿ ಶವವನ್ನು ಸುಟ್ಟಂತೆಯೇ. ಈ ಎರಡೂ ಮಾದರಿ ನಮ್ಮ ಮನಸ್ಥಿತಿಗೆ ಒಗ್ಗಲಿಕ್ಕಿಲ್ಲ. ಪಶ್ಚಿಮದ ಮತ್ತು ದೂರದ ಪೂರ್ವ ದೇಶಗಳಲ್ಲಿ ಮೊದಲಿ ನಿಂದಲೂ ಶೌಚಾಲಯದಲ್ಲಿ ನೀರನ್ನು ಬಳಸುವ ಪರಿಪಾಠ ಬಹುತೇಕ ಇಲ್ಲವಾದ್ದರಿಂದ, ಅಲ್ಲಿ ಹೆಚ್ಚೇನೂ ಫರಕ್ ಬೀಳುವುದಿಲ್ಲ. ಎಷ್ಟೋ ಕಡೆ ನಲ್ಲಿ ನೀರಿಗೆ ತೆರಿಗೆ ಕಟ್ಟುವಂತೆ ಒಳ ಚರಂಡಿಯ ನೀರಿಗೂ ತೆರಿಗೆ ಕಟ್ಟಬೇಕಾಗುತ್ತದೆ.

ಒಳಚರಂಡಿಯ ನೀರನ್ನು ಸಂಸ್ಕರಿಸಿ, ಶುದ್ಧಗೊಳಿಸುವುದಕ್ಕೂ ಅಷ್ಟೇ ಖರ್ಚಿದೆ. ಆದ್ದರಿಂದ ಇದನ್ನು ಭವಿಷ್ಯದ ಶೌಚಾಲಯ ಎಂದು ಹೇಳುವುದಿದೆ. ಜಲರಹಿತ ಶೌಚಾಲಯ ತಯಾರಿಸಿ, ನೀರಿಲ್ಲದ ಪ್ರದೇಶಗಳಲ್ಲಿ ವಿತರಿಸುವುದಕ್ಕೆ ಬಿಲ್ ಗೇಟ್ಸ್‌ ಫೌಂಡೇಷನ್ ಕಳೆದ 3-4 ವರ್ಷಗಳಿಂದ ಪ್ರತಿ ವರ್ಷ ಸುಮಾರು ಐದರಿಂದ ಆರು ಲಕ್ಷ ಡಾಲರ್ ದೇಣಿಗೆಯಾಗಿ ನೀಡುತ್ತಿದೆ.

ಬಹಳಷ್ಟು ಜನರಿಗೆ ವಾಹನ ತೊಳೆಯುವುದೆಂದರೆ ಸಂಭ್ರಮದ ಕೆಲಸ. ಬೇಕಾದದ್ದೇ. ನಮ್ಮ ವಾಹನಗಳನ್ನು ಶುಚಿಯಾಗಿಟ್ಟುಕೊಳ್ಳಲೇಬೇಕು. ಆದರೆ ಅದಕ್ಕೆ ವ್ಯಯವಾಗುವ ನೀರು? ನೀರಿಲ್ಲದೆ ಕಾರು, ಸ್ಕೂಟರ್‌ನಂಥ ವಾಹನಗಳನ್ನು ಶುಚಿಗೊಳಿಸಬಹುದಾ? ಈಗ ಅದೂ ಸಾಧ್ಯವಿದೆ. ವಾಹನದ ಕೆಳಭಾಗದಲ್ಲಿ ಅಥವಾ ಒಳಭಾಗದಲ್ಲಿರುವ ಕೊಳಕು ತೆಗೆಯಲು ಹೆಚ್ಚು ಒತ್ತಡದಿಂದ ನೀರು ಹರಿಸಬೇಕಾಗಬಹುದು. ಮೇಲ್ಮೈ ಸ್ವಚ್ಛಗೊಳಿಸಲು ನೀರೇ ಬೇಕೆಂದಿಲ್ಲ.

‘ಸ್ಪ್ರೇ ಆನ್ ಕಾರ್ ವಾಶ’ ಅಥವಾ ‘ನೋ ವಾಟರ್ ಕಾರ್ ವಾಶ್’ನಲ್ಲಿ ನೀರಿನ ಬದಲು ಶುಚಿಗೊಳಿ ಸುವ ದ್ರವದಿಂದ (ಕಾರ್ ಕ್ಲೀನರ್ ಲಿಕ್ವಿಡ್) ವಾಹನವನ್ನು ಸ್ವಚ್ಛಗೊಳಿಸಬಹುದು. ಕ್ಲೀನರ್ ದ್ರವ ವನ್ನು ಸಿಂಪಡಿಸಿ, ಮೈಕ್ರೋಫೈಬರ್ ಟವೆಲ್‌ನಿಂದ ಒರೆಸುವುದಷ್ಟೇ ಕೆಲಸ. ಸೋಪು ಕರಡ ಬೇಕೆಂದಿಲ್ಲ, ಉಜ್ಜಬೇಕೆಂದಿಲ್ಲ.

ಸಾಮಾನ್ಯವಾಗಿ ಮನೆಯಲ್ಲಿ ಒಂದು ಕಾರ್ ತೊಳೆಯಲು 400-500 ಲೀಟರ್ ನೀರು ಬೇಕಾಗುತ್ತದೆ. ಸರ್ವಿಸ್ ಸ್ಟೇಷನ್ ಗಳಲ್ಲಿ ಸ್ವಲ್ಪ ಕಮ್ಮಿ, 150-200 ಲೀಟರ್ ನೀರು ಬೇಕಾಗುತ್ತದೆ. ಕಾರ್ ಕ್ಲೀನರ್ ಬಳಸಿದರೆ ಬೇಕಾಗುವುದು ಒರೆಸಿದ ಟವೆಲ್ ತೊಳೆಯಲು ಒಂದು ಬಕೆಟ್ ನೀರು. ಇನ್ನೊಂದು ಹೊಸ ಶೋಧ ಕುತೂಹಲಕಾರಿಯಾಗಿದೆ. ತೀರಾ ಒಣಹವೆ ಇರುವ ಪ್ರದೇಶಗಳಲ್ಲಿ ಬಾಯಾರುವುದು, ಗಂಟಲು ಒಣಗುವುದು, ತುಟಿ ಒಡೆಯುವುದು, ಚರ್ಮ ಶುಷ್ಕವಾಗುವುದು ಇತ್ಯಾದಿ ಸಮಸ್ಯೆ ಗಳಿರುತ್ತವೆ.

ವಾತಾವರಣದಲ್ಲಿ ಆರ್ದ್ರತೆ ಕಡಿಮೆ ಇರುವುದು ಇದಕ್ಕೆ ಕಾರಣ. ವಿಮಾನ ಪ್ರಯಾಣ ಮಾಡುವಾಗ ಕೆಲವರಿಗೆ ಈ ಅನುಭವ ಆಗುವುದಿದೆ. ಇಷ್ಟೇ ಆದರೆ ಪರವಾಗಿಲ್ಲ ಎನ್ನಬಹುದು, ಇದು ಕೆಲವರಿಗೆ ಅಲರ್ಜಿಯಾದರೆ, ಕೆಲವರಿಗೆ ಉಸಿರಾಡಲೂ ಕಷ್ಟವಾಗುತ್ತದೆ. ಈ ಸಮಸ್ಯೆಗೆ ಪರಿಹಾರ- ಹ್ಯೂಮಿಡಿ-ಯರ್ ಅಥವಾ ಆರ್ದ್ರಕಗಳ ಸಹಾಯದಿಂದ ನಮ್ಮ ಮನೆಯೊಳಗಿನ ಆರ್ದ್ರತೆ ಹೆಚ್ಚಿಸುವುದು.

ನೀರು ಕಾಯಿಸಿ, ತೇವಾಂಶ ಹೆಚ್ಚಿಸುವುದು ಇದಕ್ಕಿರುವ ಅತ್ಯಂತ ಸುಲಭ ವಿಧಾನ. ಮನೆಯಲ್ಲಿ, ಕಚೇರಿಗಳಲ್ಲಿ ಇಲೆಕ್ಟ್ರಿಕ್ ಹ್ಯೂಮಿಡಿಫೈಯರ್ ಬಳಸುವುದು ರೂಢಿ. ಇತ್ತೀಚೆಗೆ ನೀರನ್ನು ಬಳಸದೇ ಈ ಕೆಲಸ ಮಾಡುವ ಪುಟ್ಟ ಯಂತ್ರವನ್ನು ಕಂಡುಹಿಡಿಯಲಾಗಿದೆ. ನಾವು ಬಿಟ್ಟ ಉಸಿರಿನ ಶಾಖ ಮತ್ತು ಅದರಲ್ಲಿರುವ ತೇವಾಂಶವನ್ನೇ ಬಳಸಿಕೊಂಡು ಈ ಪುಟ್ಟ ಹ್ಯೂಮಿಡಿಫೈಯರ್ ಕಾರ್ಯ ನಿರ್ವಹಿಸುತ್ತದೆ.

ಇತ್ತೀಚೆಗೆ ಇದನ್ನು ವೈದ್ಯಕೀಯ ಲೋಕದಲ್ಲೂ ಬಳಸಿಕೊಳ್ಳುತ್ತಿದ್ದಾರೆ. ಇಂದು ವಿಕ್ಸ್‌ನಂಥ ಕಂಪನಿ ಗಳು ಇದೇ ಸಿದ್ಧಾಂತವನ್ನಿಟ್ಟುಕೊಂಡು ವಾಟರ್‌ಲೆಸ್ ಡಿಫ್ಯೂಸರ್ ತಯಾರಿಸುತ್ತಿವೆ. ಕಚೇರಿಗಳಲ್ಲಿ ಸುಗಂಧ ದ್ರವ್ಯಗಳನ್ನು ಸೂಸುವ ಪುಟ್ಟ ಯಂತ್ರಗಳೂ ಇದೇ ಸಿದ್ಧಾಂತದಲ್ಲಿ ತಯಾರಾಗಿವೆ.

ನಿಮಗೆ ತಿಳಿದಿರಬಹುದು, ಸೌದಿ ಅರೇಬಿಯಾದ ವಿಸ್ತೀರ್ಣ ಸುಮಾರು ಎಂಟು ಲಕ್ಷ ಮೂವತ್ತು ಸಾವಿರ ಚದರ ಮೈಲಿ. ಅಂದರೆ, ಹೆಚ್ಚು ಕಮ್ಮಿ ಭಾರತದ ಎರಡು ಮೂರಾಂಶ. ಅಷ್ಟು ದೊಡ್ಡ ದೇಶದಲ್ಲಿ ಒಂದೇ ಒಂದು ನದಿ ಇಲ್ಲವೆಂದರೆ ನೀವು ನಂಬಲೇಬೇಕು. ದೇಶದ 95ರಷ್ಟು ಭಾಗ ಮರುಭೂಮಿ. ಬೇಸಗೆಯಲ್ಲಿ ತಾಪಮಾನ ಕೆಲವೊಮ್ಮೆ ೫೦ ಡಿಗ್ರಿವರೆಗೂ ತಲುಪುತ್ತದೆ.

ದೇಶದ ಮೂರೂವರೆ ಕೋಟಿ ಜನಸಂಖ್ಯೆಗೆ ಅಂತರ್ಜಲದಿಂದ ಕುಡಿಯುವ ನೀರು ದೊರಕುವುದು ಶೇ.೪೦ರಷ್ಟು ಮಾತ್ರ. ಉಳಿದಂತೆ ಶೇ. ೫೦ರಷ್ಟು ಸಮುದ್ರದ ನೀರನ್ನು ಶುದ್ಧೀಕರಿಸಿ, ೧೦ರಷ್ಟು ಆಗೊಮ್ಮೆ ಈಗೊಮ್ಮೆ ಗುಡ್ಡಗಾಡು ಪ್ರದೇಶದಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಒದಗಿಸಿಕೊಡಲಾಗುತ್ತದೆ.

ಕುವೈತ್, ಬಹ್ರೈನ್, ಕತಾರ್, ಒಮಾನ್, ಯೆಮನ್ ದೇಶಗಳೂ ಸೇರಿದಂತೆ ಈ ಭಾಗದ ಯಾವ ರಾಷ್ಟ್ರಗಳಲ್ಲೂ, ಉದಾಹರಣೆಗೆ ತೋರಿಸಬೇಕೆಂದರೂ, ಒಂದೇ ಒಂದು ನದಿ ಇಲ್ಲ. ಅಸಲಿಗೆ, ಅರ್ಧ ಚದರ ಕಿಲೋಮೀಟರ್‌ಗಿಂತಲೂ ಕಮ್ಮಿ ವಿಸ್ತೀರ್ಣವಿರುವ, ಪುಟ್ಟದೇಶವಾದ ವ್ಯಾಟಿಕನ್ ಸಿಟಿಯೂ ಸೇರಿದಂತೆ ಒಟ್ಟು ೧೭ ರಾಷ್ಟ್ರಗಳಲ್ಲಿ ಒಂದೇ ಒಂದು ನದಿ ಇಲ್ಲ.

ಈಜಿ ದೇಶದ ಅವಶ್ಯಕತೆಯ ಶೇ.೯೭ರಷ್ಟನ್ನು ಪೂರೈಸುವುದು ಭೂಮಿ ಮೇಲಿನ ಅತಿ ಉದ್ದದ ನದಿಯೆಂದು ಕರೆಸಿಕೊಳ್ಳುವ ನೈಲ್ ನದಿ. ಇನ್ನು ೫೦ ವರ್ಷದಲ್ಲಿ ಜನಸಂಖ್ಯೆ ಎರಡು ಪಟ್ಟು ಹೆಚ್ಚಾಗಲಿದ್ದು, ರಾಜಧಾನಿ ಕೈರೊ ಮತ್ತು ಇತರ ನಗರಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಸಂಸ್ಥೆ ವರದಿಯ ಪ್ರಕಾರ, ವಿಶ್ವದಲ್ಲಿ ಈಗಾಗಲೇ ಹತ್ತರಲ್ಲಿ ನಾಲ್ಕು ಜನ ನೀರಿನ ಕೊರತೆ ಯಿಂದ ಬಳಲುತ್ತಿದ್ದಾರೆ. ಮೆಕ್ಸಿಕೋ ನಗರದಲ್ಲಿ ಶೇ.೪೦ರಷ್ಟು ನೀರು ಸೋರಿ ಹೋಗುತ್ತಿದೆಯಂತೆ. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ನೂರಕ್ಕೆ ಇಪ್ಪತ್ತರಿಂದ ಮೂವತ್ತೈದ ರಷ್ಟು ನೀರು ಸೋರಿಕೆಯಿಂದ ಪೋಲಾಗುತ್ತಿದೆ.

ರಾಜಧಾನಿ ದಿಲ್ಲಿಯಲ್ಲಿ ಮಹಾನಗರಪಾಲಿಕೆ ಪ್ರತಿನಿತ್ಯ ಪೂರೈಸುವ 300 ಕೋಟಿ ಲೀಟರ್ ನೀರಿನಲ್ಲಿ ಕೇವಲ ೧೭ ಕೋಟಿ ಲೀಟರ್ ಮಾತ್ರ ಮನೆಗಳಿಗೆ ತಲುಪುತ್ತಿದ್ದು, ಉಳಿದದ್ದು ಸೋರಿಹೋಗುತ್ತಿದೆ. ಈಗಾಗಲೇ ದಿಲ್ಲಿಯ ಶೇ.೩೦ರಷ್ಟು ಮನೆಗಳಿಗೆ ದಿನದಲ್ಲಿ ಕೇವಲ ೩ ತಾಸು ಮಾತ್ರ ನಲ್ಲಿ ನೀರು ಸಿಗುತ್ತಿದೆ ಎಂದರೆ ಪರಿಸ್ಥಿತಿ ಎಷ್ಟು ಕರುಣಾಜನಕವಾಗಿದೆ ನೋಡಿ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್, ಜಪಾನಿನ ಟೋಕಿಯೊ, ಇಂಡೋನೇಷ್ಯಾದ ಜಕಾರ್ತಾ, ಆಸ್ಟ್ರೇಲಿಯಾದ ಮೆಲ್ಬರ್ನ್, ಚೀನಾದ ಬೀಜಿಂಗ್ ಸೇರಿದಂತೆ ೧೫ ಮಹಾನಗರಗಳಲ್ಲಿ ಇನ್ನು ೫ ವರ್ಷಕ್ಕೆ ನೀರಿಗೆ ಬರಗಾಲ ಬರಲಿದೆ ಎಂದು ಸಂಸ್ಥೆಯ ವರದಿ ಹೇಳುತ್ತಿದೆ. ಈ ಪಟ್ಟಿಯಲ್ಲಿ ಭಾರತದ ೨ ಮಹಾನಗರಗಳಾದ ಬೆಂಗಳೂರು ಮತ್ತು ಚೆನ್ನೈ ಕೂಡ ಸೇರಿವೆ. ಹಾಗೇನಾದರೂ ಆದರೆ, ಕೃಷಿಗೆ ಬಿಡಿ, ಮುಂದಿನ ದಿನಗಳಲ್ಲಿ ಕುಡಿಯುವುದಕ್ಕಾಗಿ ಕಾವೇರಿ ನದಿಯ ನೀರಿಗಾಗಿ ಬಡಿದಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಎಲ್ಲಾ ಗೊತ್ತಿದ್ದೂ, ವಿಶ್ವದಾದ್ಯಂತ ಸಮುದ್ರ ಸೇರುತ್ತಿರುವ ಶೇ.೮೦ರಷ್ಟು ನದಿಯ ನೀರನ್ನು ಹಿಡಿಟ್ಟುಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ. ಹೀಗೇ ಮುಂದುವರಿದರೆ, ‘ಕಮ್ಮಿ ನೀರು ಬಳಸಿ’ ಎಂಬ ಕಾಲಘಟ್ಟವೂ ಮುಗಿದು, ‘ನೀರಿಲ್ಲದೇ ಬದುಕುವ’ ಯುಗವನ್ನು ಪ್ರವೇಶಿಸಲು ಸಿದ್ಧವಾಗಬೇಕಿದೆ. ಈ ಎಲ್ಲಾ ‘ವಾಟರ್‌ಲೆಸ್’ಗಳೂ ಅದಕ್ಕೆ ಮುನ್ನುಡಿಯಂತೆ ಕಾಣುತ್ತಿವೆ.

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author