Kiran Upadhyay Column: ಆಧುನಿಕ ಯುಗದ ಭಗೀರಥರಿಗೆ ಶರಣು...
ಮನುಷ್ಯನಿಗೆ ಅತ್ಯವಶ್ಯವಾದ ನೀರಿನ ಕುರಿತು ಇಂದು ಸಾಕಷ್ಟು ಚರ್ಚೆಗಳಾಗುತ್ತಿವೆ. ಇಂಟರ್ನೆಟ್ ನಲ್ಲಿ ನೀರಿನ ಕುರಿತು ನಮಗೆ ಬೇಕಾದುದಕ್ಕಿಂತಲೂ ಹೆಚ್ಚಿನ ಮಾಹಿತಿ ಲಭ್ಯವಿದೆ. ಪರಿಸರ, ವಾಯು, ಜಲ ಮಾಲಿನ್ಯ ಇತ್ಯಾದಿ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗುವ ಬಿಸಿಬಿಸಿ ವಿಷಯಗಳು. ಪ್ರತಿನಿತ್ಯ ನಾವು ಕಾಣುತ್ತಿರುವ ಮಾಲಿನ್ಯ ಯಾರನ್ನಾದರೂ ಹೌಹಾರಿಸು ವಂಥದ್ದೇ.
-
ವಿದೇಶವಾಸಿ
ಈ ಪೃಥ್ವಿಯು ಶೇಕಡಾ ಎಪ್ಪತ್ತೊಂದರಷ್ಟು ನೀರಿನಿಂದ ತುಂಬಿಕೊಂಡಿದ್ದರೂ ಮನುಷ್ಯನ ಬಳಕೆಗೆ ಯೋಗ್ಯವಾದದ್ದು ಶೇಕಡಾ ಒಂದರಷ್ಟು ಮಾತ್ರ. ಅದರಲ್ಲೂ ಕುಡಿಯಲು ಯೋಗ್ಯವಾದ ಶುದ್ಧ ನೀರು ಸಿಗುವುದು ಇನ್ನೂ ಕಮ್ಮಿ. ತಂತ್ರಜ್ಞಾನ ಇಷ್ಟು ಮುಂದುವರಿ ದರೂ ಇಂದಿಗೂ ಕೋಟ್ಯಂತರ ಜನರು ಕುಡಿಯುವ ಶುದ್ಧ ನೀರಿನಿಂದ ವಂಚಿತರು.
ಒಂದು ಅಂಕಿ-ಅಂಶದ ಪ್ರಕಾರ ಸುಮಾರು ಎಂಬತ್ತು ಕೋಟಿ ಜನರಿಗೆ ಇಂದಿಗೂ ಶುದ್ಧ ನೀರು ಸಿಗುತ್ತಿಲ್ಲ. ಪ್ರತಿ ವರ್ಷ ಮೂವತ್ತೈದು ಲಕ್ಷ ಜನರು ಕುಡಿಯಲು ಶುದ್ಧ ನೀರಿಲ್ಲದೇ ಸಾಯುತ್ತಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಭೀಕರ ಎಂದು ಊಹಿಸಬಹುದು.
ಮನುಷ್ಯನಿಗೆ ಅತ್ಯವಶ್ಯವಾದ ನೀರಿನ ಕುರಿತು ಇಂದು ಸಾಕಷ್ಟು ಚರ್ಚೆಗಳಾಗುತ್ತಿವೆ. ಇಂಟರ್ನೆಟ್ ನಲ್ಲಿ ನೀರಿನ ಕುರಿತು ನಮಗೆ ಬೇಕಾದುದಕ್ಕಿಂತಲೂ ಹೆಚ್ಚಿನ ಮಾಹಿತಿ ಲಭ್ಯವಿದೆ. ಪರಿಸರ, ವಾಯು, ಜಲ ಮಾಲಿನ್ಯ ಇತ್ಯಾದಿ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗುವ ಬಿಸಿಬಿಸಿ ವಿಷಯಗಳು. ಪ್ರತಿನಿತ್ಯ ನಾವು ಕಾಣುತ್ತಿರುವ ಮಾಲಿನ್ಯ ಯಾರನ್ನಾದರೂ ಹೌಹಾರಿಸುವಂಥದ್ದೇ.
ನಾವಿರುವ ಪರಿಸರದ ಕಾಳಜಿ ನಮಗಲ್ಲದೆ ಇನ್ಯಾರಿಗೆ ಇರಬೇಕು ಹೇಳಿ? ಹಾಗಾದರೆ ಪರಿಸರದ ಕುರಿತು ಗಂಟೆಗಟ್ಟಲೆ ಕೇವಲ ಮಾತಾಡಿ ತೆಗೆದರೆ ಏನೂ ಪ್ರಯೋಜನವಿಲ್ಲ. ಈ ಭೂಮಿಯಲ್ಲಿ ಮಾನವನಿಗೆ ಅವಶ್ಯವಾದ ಜೀವಧಾತುವಿಗೆ ಯಾವ ಕೊರತೆಯೂ ಇಲ್ಲ, ನೀರಿನ ವಿಷಯದಲ್ಲೂ ಅಷ್ಟೇ. ಸರಿಯಾಗಿ ಬಳಸಿಕೊಂಡರೆ, ಉಳಿಸಿಕೊಂಡರೆ ನೀರಿಗೆ ಯಾವ ಬರವೂ ಇಲ್ಲ. ಹಾಂ, ಈ ಮಾಲಿನ್ಯದ ದಿನಗಳಲ್ಲಿ ಶುದ್ಧ ನೀರು ಸಿಗುವುದು ಕಷ್ಟ.
ಇದನ್ನೂ ಓದಿ: Kiran Upadhyay Column: ಇದು ಪಾಸ್ ಪೋರ್ಟ್ ಸ್ಥಾನ ಪುರಾಣ..
ಇದರ ನಡುವೆ ಮನುಕುಲದ ಅನುಕೂಲಕ್ಕೆ ಬೇಕಾದ ಶುದ್ಧ ನೀರು ದೊರಕಿಸಿ ಕೊಡಲು ಶ್ರಮಿಸುತ್ತಿರುವವರನ್ನು ಆಧುನಿಕ ಯುಗದ ಭಗೀರಥರೆಂದೇ ಹೇಳಬಹುದು. ಜೀವಜಲದ ಶುದ್ಧತೆ ಕಾಪಾಡಿಕೊಳ್ಳಲು ನಾವು ಶ್ರಮಿಸುವುದರೊಂದಿಗೆ, ಕರಾಳ ರಾತ್ರಿಯಲ್ಲಿ ಚಿಕ್ಕದೊಂದು ಬೆಳ್ಳಿಯ ಗೆರೆ ಮೂಡಿಸಿದ ಕೆಲವರಿಗೆ ನಾವು ಧನ್ಯವಾದ ಹೇಳಲೇಬೇಕು.
ನೀರಿನ ಶುದ್ಧೀಕರಣ ನಿನ್ನೆ ಮೊನ್ನೆಯದಲ್ಲ, ನಾಗರಿಕತೆಯ ಆರಂಭದ ದಿನಗಳಿಂದಲೂ ಇತ್ತು ಎಂಬುದಕ್ಕೆ ದಾಖಲೆಗಳಿವೆ. ಕುಡಿಯುವುದಕ್ಕೆ, ಸ್ನಾನಕ್ಕೆ, ಅಡುಗೆಗೆ ಬೇಕಾದ ಶುದ್ಧ ಜಲ ಪಡೆಯುವುದಕ್ಕೆ ನೀರನ್ನು ಹೇಗೆ ಫಿಲ್ಟರ್ ಮಾಡುತ್ತಿದ್ದರು ಎಂಬುದು ಇತಿಹಾಸ ದುದ್ದಕ್ಕೂ ದಾಖಲಾಗಿದೆ.
ಆಧುನಿಕ ಯುಗದಲ್ಲಿ ಅನೇಕ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧ ಮಾಡಲಾಗುತ್ತಿದೆ. ಅದಕ್ಕೊಂದು ವ್ಯಾಪಾರದ ಸ್ಪರ್ಶವನ್ನೂ ನೀಡಿ, ದೊಡ್ಡ ಉದ್ಯಮವಾಗಿಯೂ ಮಾರ್ಪಡಿಸಲಾಗಿದೆ ಎನ್ನುವುದು ಬೇರೆ ವಿಷಯ. ಆದರೆ, ನಮ್ಮ ಸುಶ್ರುತ ಸಂಹಿತೆಯಲ್ಲಿ ಜೆಲ್ಲಿ ಕಲ್ಲು ಮತ್ತು ಮರಳಿನ ಮುಖೇನ ನೀರು ಹಾಯಿಸಿ ಶುದ್ಧ ಮಾಡುವ ವಿಧಾನ, ಸೂರ್ಯನ ಶಾಖದಲ್ಲಿ ನೀರನ್ನು ಕಾಯಿಸಿ ಬಳಸುವ ವಿವರಗಳಿವೆ.
ಕ್ರಿಸ್ತ ಪೂರ್ವ ಹದಿನೈದರಿಂದ ಹದಿಮೂರನೇ ಶತಮಾನದ ಈಜಿಪ್ಟ್ ನ ಕೆಲವು ಗೋರಿಗಳ ಮೇಲಿರುವ ಚಿತ್ರಗಳು ನೀರನ್ನು ಸಂಸ್ಕರಿಸುವ ಸಾಧನಗಳನ್ನು ಚಿತ್ರಿಸಿವೆ. ನಂತರದ ದಿನಗಳಲ್ಲಿ ನೀರನ್ನು ಕಾಸಿ, ಬಟ್ಟೆಯಲ್ಲಿ ಸೋಸಿ ಶುದ್ಧಗೊಳಿಸಲು ಆರಂಭಿಸಿದರು ಎನ್ನುವುದಕ್ಕೆ ಪುರಾವೆಗಳಿವೆ.
ಹದಿನೇಳನೇ ಶತಮಾನದ ಆರಂಭದಲ್ಲಿ, ನೀರಿನ ವೈಜ್ಞಾನಿಕ ಸಂಸ್ಕರಣೆಗೆ ಅಡಿಗಲ್ಲು ಹಾಕಿದವರು ಇಂಗ್ಲೆಂಡಿನ ತತ್ವಜ್ಞಾನಿ ಸರ್ ಫ್ರಾನ್ಸಿಸ್ ಬೇಕನ್. ಸಮುದ್ರದ ನೀರನ್ನು ಮರಳಿನ ಸಹಾಯದಿಂದ ಶುದ್ಧಗೊಳಿಸಬಹುದು ಎಂದು ಮೊದಲ ಸುಳಿವು ನೀಡಿದವರು ಬೇಕನ್. ನಂತರದ ದಿನಗಳಲ್ಲಿ ಇಟಲಿಯ ವೈದ್ಯ ಲುಕಾಸ್ ಪೋರ್ಟಿಯಸ್ ಇದನ್ನು ಪ್ರಯೋಗಗಳ ಮುಖೇನ ತೋರಿಸಿಕೊಟ್ಟರು.
ಸೂಕ್ಷ್ಮದರ್ಶಕ ಕಂಡುಹಿಡಿದ ನಂತರ ನೀರಿನಲ್ಲಿರುವ ಸಣ್ಣ ಕಣಗಳು, ಬ್ಯಾಕ್ಟೀರಿಯಾಗಳ ಬಗ್ಗೆ ಅರಿವು ಮೂಡಿ ಅದನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಕಾರ್ಯ ಆರಂಭವಾಯಿತು. ಹಾಗೆಯೇ ಜನರ ಬಳಕೆಗೆ ಬೇಕಾದಷ್ಟು ನೀರು ಸಿಗದಿದ್ದಾಗ ಸಮುದ್ರವನ್ನೇ ಸೋಸುವ ಕಾಯಕಕ್ಕೆ ಇಳಿಯಲಾಯಿತು.
ಸಮುದ್ರದ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಿರುವುದರಿಂದ ಅದನ್ನು ಹಾಗೆಯೇ ಕುಡಿಯು ವುದು ಅಸಾಧ್ಯ. ಮೊದಲನೆಯದಾಗಿ ರುಚಿ, ಎರಡನೆಯದಾಗಿ, ನಮ್ಮ ಮೂತ್ರಕೋಶಗಳು ಆ ಪ್ರಮಾಣದ ಲವಣ, ಸೋಡಿಯಂಗಳನ್ನು ಶುದ್ಧಮಾಡುವಷ್ಟು ಸಕ್ಷಮವಾಗಿಲ್ಲದಿರು ವುದು. ಎಲ್ಲಕ್ಕಿಂತ ಮಿಗಿಲಾಗಿ ಉಪ್ಪು ನೀರು ಕುಡಿದರೆ ದಾಹ ನೀಗುವ ಬದಲು ಹೆಚ್ಚುತ್ತದೆ.
ಬಾಯಾರಿದಾಗ ಉಪ್ಪು ನೀರು ಕುಡಿದರೆ ಕಥೆ ಮುಗೀತ, ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದ ಹಾಗೆ. ಅದಕ್ಕಾಗಿಯೇ ಸಮುದ್ರದಲ್ಲಿ ಎಷ್ಟು ನೀರಿದ್ದರೂ ಏನೂ ಪ್ರಯೋಜನಕ್ಕೆ ಬಾರದಿರುವುದು; ಅದನ್ನು ಸಂಸ್ಕರಿಸಿ ಉಪಯೋಗಿಸಲು ಯೋಗ್ಯವಾಗಿಸಬೇಕಾಗುತ್ತದೆ.
ಈಗ ನೀರಿನ ಸಂಸ್ಕರಣೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಡಿಸಲೈನೇಷನ್ ಪ್ಲಾಂಟ್. ಅದರ ಅಗಾಧತೆಯೇ ಹಾಗೆ. ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ಅನೇಕ ರಾಷ್ಟ್ರ ಗಳಿಗೆ ಇವೇ ಜೀವಾಳ. ಇದರಲ್ಲಿ ಎರಡು ವಿಧಗಳಿವೆ. ಒಂದು, ಸಮುದ್ರದ ಅಥವಾ ಇನ್ಯಾ ವುದೋ ಗಡಸು ನೀರನ್ನು ಕಾಯಿಸಿ, ಆವಿಯಾಗಿಸುವುದು; ಮೇಲೆ ಸಂಗ್ರಹವಾದ ಆವಿ ಯನ್ನು ತಂಪು ಮಾಡಿ ಶುದ್ಧ ನೀರಾಗಿಸುವುದು. ಈ ಕ್ರಿಯೆಯಲ್ಲಿ ಉಪ್ಪು ಮತ್ತು ಹರಳಿನ ಅಂಶಗಳು ಬುಡದಲ್ಲಿಯೇ ಇರುತ್ತವೆ. ಇದೇ ಕ್ರಿಯೆಯನ್ನು ಅನೇಕ ಬಾರಿ ಮಾಡು ವುದರಿಂದ ಇದಕ್ಕೆ ಮಲ್ಟಿ ಸ್ಟೇಜ್ ಫ್ಲಾಶ್ ಎಂದು ಹೆಸರು.
ಇನ್ನೊಂದು, ನೀರನ್ನು ಮೆಂಬ್ರೇನ್ ಅಥವಾ ನೀರು ಮಾತ್ರ ಹಾದು ಹೋಗುವಂಥ ಪದರ ದಲ್ಲಿ ಹೆಚ್ಚಿನ ಒತ್ತಡದಲ್ಲಿ ನೀರು ಹಾಯಿಸುವುದು. ಎರಡು ಮೂರು ಬಾರಿ ಇಂಥ ಪದರ ಗಳಲ್ಲಿ ನೀರು ಹಾದು ಬಂದ ನಂತರ ಉಪ್ಪು ಮತ್ತು ಇತರ ಅಂಶಗಳು ಪದರದ ಇನ್ನೊಂದು ಭಾಗದಲ್ಲಿಯೇ ಉಳಿದು, ಶುದ್ಧ ನೀರು ದೊರಕುತ್ತದೆ.
ಇದು ಬಹುತೇಕ ಎಲ್ಲರಿಗೂ ತಿಳಿದ ವಿಚಾರವೇ. ಇಂದು ವಿಶ್ವದಾದ್ಯಂತ ನೂರಾ ಐವತ್ತು ದೇಶಗಳಲ್ಲಿ ಸುಮಾರು ಇಪ್ಪತ್ತು ಸಾವಿರದಷ್ಟು ಡಿಸಲೈನೇಷನ್ ಪ್ಲಾಂಟ್‌ಗಳಿವೆ. ದಿನ ವೊಂದಕ್ಕೆ ಮೂರು ಸಾವಿರ ಕೋಟಿ ಲೀಟರ್ ನೀರು ಉತ್ಪಾದನೆಯಾಗುತ್ತಿದ್ದು, ಮೂವತ್ತು ಕೋಟಿ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಇದಕ್ಕೆ ಹೊರತಾಗಿ ನೀರನ್ನು ಶುಚಿಗೊಳಿಸುವಲ್ಲಿ ಇನ್ನೂ ಅನೇಕ ಅನ್ವೇಷಣೆಗಳು ನಡೆದಿವೆ, ನಡೆಯುತ್ತಿವೆ. ಪ್ರಮಾಣ ಸಣ್ಣದೇ ಆದರೂ ಅಂಥವೂ ಬೇಕು. ಏಕೆಂದರೆ ಎಲ್ಲಾ ಕಡೆ ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ನೀವೆಲ್ಲ ಮಹಾನಗರ ಗಳಲ್ಲಿ, ಪಟ್ಟಣ ಪ್ರದೇಶದಲ್ಲಿ ಜಾಹೀರಾತಿಗಾಗಿ ನಿರ್ಮಿಸಿದ ಜಾಹೀರಾತು ಫಲಕ ಅಥವಾ ಬಿಲ್‌ಬೋರ್ಡ್ ನೋಡಿರುತ್ತೀರಿ.
ಕೆಲವು ವರ್ಷಗಳ ಹಿಂದೆ ಪೆರು ದೇಶದ ರಾಜಧಾನಿ ಲಿಮಾ ಪ್ರದೇಶದಲ್ಲಿ ನಿಲ್ಲಿಸಲಾದ ಜಾಹೀರಾತು ಫಲಕಗಳು ಸುದ್ದಿ ಮಾಡಿದ್ದವು. ಒಂದು ಕೋಟಿಯ ಹತ್ತಿರ ಜನಸಂಖ್ಯೆ ಯುಳ್ಳ, ಜಗತ್ತಿನ ಮೂವತ್ತು ಜನಸಾಂದ್ರತೆಯ ಪ್ರದೇಶಗಳ ಪಟ್ಟಿಯಲ್ಲಿರುವ ಲಿಮಾ ನಗರ ಕಡಲ ತೀರದಲ್ಲಿದೆ. ಮರುಭೂಮಿಯಂಥ ಪ್ರದೇಶವೇ ಹೆಚ್ಚಾಗಿರುವ ಈ ನಗರದ ಹವಾ ಮಾನ, ವರ್ಷದ ಹನ್ನೆರಡು ತಿಂಗಳೂ ಒಣ ಒಣ, ಭಣಭಣ.
ಈ ಭಾಗದಲ್ಲಿ ವಾರ್ಷಿಕವಾಗಿ ಮಳೆಯಾಗುವುದು ಸರಾಸರಿ ಅರ್ಧ ಇಂಚು ಮಾತ್ರ ಎಂದರೆ ನೀರಿನ ಅಭಾವ ಎಷ್ಟಿರಬಹುದು ಎಂದು ಊಹಿಸಲು ಕಷ್ಟವೇನಲ್ಲ. ಕೆಲ ವರ್ಷಗಳ ಹಿಂದೆ ಈ ನಗರದ ಕೆಲವು ಪ್ರದೇಶಗಳಲ್ಲಿ ನೂರು ಲೀಟರ್ ಸಾಮಾನ್ಯ ನೀರಿಗೆ (ಕುಡಿಯುವ ನೀರಲ್ಲ) ಒಂದು ಡಾಲರ್ ಕೊಡಬೇಕಾದ ಪರಿಸ್ಥಿತಿ ಇತ್ತು.
ಸ್ವಾಭಾವಿಕವಾಗಿ ಕಡಲ ತೀರದಲ್ಲಿ ಬೀಸುವ ಗಾಳಿ ತೇವಾಂಶದಿಂದ ಕೂಡಿರುತ್ತದೆ. ಉಳಿದ ಕಡಲ ತೀರಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ತೇವಾಂಶ ಸ್ವಲ್ಪ ಹೆಚ್ಚು (ಶೇ.83ರಷ್ಟು, ಮುಂಜಾನೆ ಸರಾಸರಿ ಶೇ.98ರಷ್ಟು ಇರುತ್ತದೆ). ಈ ದಿಸೆಯಲ್ಲಿ ಯೋಚಿಸಿ, ಗಾಳಿಯಲ್ಲಿರುವ ತೇವಾಂಶದ ಶೇಕಡಾ 98 ಪ್ರತಿಶತವನ್ನು ರಿವರ್ಸ್ ಆಸ್ಮೋಸಿಸ್ ಪ್ರಕ್ರಿಯೆಯ ಮೂಲಕ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಜಾಹೀರಾತು ಫಲಕವನ್ನು ತಯಾರಿಸಲಾಯಿತು.
ಅವಶ್ಯಕತೆ ಇದ್ದಲ್ಲಿ ಅವಿಷ್ಕಾರ ಹುಟ್ಟಿಕೊಳ್ಳುತ್ತದೆ ಎಂಬ ಮಾತು ಸುಳ್ಳಲ್ಲ. ಲಿಮಾ ನಗರದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವಿನ್ಯಾಸಗೊಳಿಸಿದ ಒಂದೊಂದು ಫಲಕವೂ ಪ್ರತಿನಿತ್ಯ ನೂರು ಲೀಟರ್ ಕುಡಿಯುವ ನೀರನ್ನು ಉತ್ಪಾದಿಸುತ್ತದೆ.
ಒಂದೊಂದು ಫಲಕವೂ ಇಪ್ಪತ್ತು ಲೀಟರ್ ಸಾಮರ್ಥ್ಯದ ಐದು ಚಿಕ್ಕ ನೀರಿನ ಟ್ಯಾಂಕ್ ಹೊಂದಿರುತ್ತದೆ. ಮೇಲಿನ ಫಲಕದಿಂದ ಸಂಸ್ಕರಿಸಿದ ನೀರನ್ನು ಕೊಳವೆಯ ಮುಖಾಂತರ ಕೆಳಗೆ ತರಲಾಗುತ್ತದೆ. ಇದು ಆ ಭಾಗದ ನೂರಾರು ಕುಟುಂಬಗಳಿಗೆ ಕುಡಿಯುವ ನೀರಿನ ಪ್ರಮುಖ ಸಾಧನವಾಗಿದೆ.
ಮಳೆ ಬೀಳದ ಬರ ಪ್ರದೇಶಗಳಿಗೆ ಮುಂದೊಂದು ದಿನ ಇದು ಜಲದ ಸೆಲೆಯಾದರೆ ಆಶ್ಚರ್ಯಪಡಬೇಕಾಗಿಲ್ಲ. ಮತ್ತೊಂದು ವಿಷಯ, ಇದೇ ವಿಶ್ವವಿದ್ಯಾಲಯ ಪ್ರತಿನಿತ್ಯ ಒಂದು ಲಕ್ಷ ಘನ ಮೀಟರ್ ಗಾಳಿಯನ್ನು ಶುದ್ಧೀಕರಿಸುವ ಫಲಕವನ್ನೂ ತಯಾರಿಸಿದೆ. ಇದು ಸುಮಾರು ಒಂದು ಸಾವಿರ ಮರಗಳು ಮಾಡುವ ಕೆಲಸ!
‘ದಿ ಡ್ರಿಂಕಬಲ್ ಬುಕ್’ (The Drinkable Book) ಪುಸ್ತಕದ ವಿಷಯ ಎಷ್ಟು ಜನರಿಗೆ ತಿಳಿದಿದೆ ಯೋ ಗೊತ್ತಿಲ್ಲ. ಇದು ಐವತ್ತು ಪುಟದ ಪುಸ್ತಕ. ಪುಸ್ತಕದ ಪ್ರತಿ ಪುಟದಲ್ಲೂ ನೀರಿನ ಸಂರಕ್ಷಣೆ ಮತ್ತು ಸಂಸ್ಕರಣೆಯ ಕುರಿತ ಒಂದೊಂದು ಪುಟ್ಟ ಮಾಹಿತಿ ಇರುತ್ತದೆ. ಶುದ್ಧ ನೀರು ನಮ್ಮ ಬದುಕಿನಲ್ಲಿ ಹೇಗೆ, ಏಕೆ ಪ್ರಮುಖ ಪಾತ್ರವಹಿಸುತ್ತದೆ ಎಂಬ ವಿಚಾರ ಇರುತ್ತದೆ.
ಇದೊಂದು ಸಣ್ಣ ಸೂಚನಾ ಕೈಪಿಡಿ. ಈ ಪುಸ್ತಕದ ಪುಟಗಳು ನೋಡಲು ಕಾಗದದ ಪುಟ ಗಳಂತಿದ್ದರೂ, ಅಸಲಿಗೆ ಇವು ನೀರನ್ನು ಸೋಸುವ ಶೋಧಕ ಅಥವಾ ಫಿಲ್ಟರ್‌ಗಳು. ಒಂದೊಂದು ಪುಟವೂ ನೂರು ಲೀಟರ್‌ನಷ್ಟು ನೀರನ್ನು ಶುದ್ಧೀಕರಿಸುತ್ತದೆ. ಅಂದರೆ, ಒಂದು ಪುಸ್ತಕ ಒಟ್ಟೂ ಐದು ಸಾವಿರ ಲೀಟರ್ ನೀರನ್ನು ಸಂಸ್ಕರಿಸುತ್ತದೆ.
ಪುಸ್ತಕ ಹರಿಯುವ ಮನಸ್ಸಿದ್ದವರಿಗೆ ಇದಕ್ಕಿಂತ ಒಳ್ಳೆಯ ಪುಸ್ತಕ ಮತ್ತೆಲ್ಲೂ ದೊರಕ ಲಿಕ್ಕಿಲ್ಲ! ಒಂದು ಪುಟ ಹರಿದು ಫಿಲ್ಟರ್ ಹೋಲ್ಡರ್‌ನಲ್ಲಿಟ್ಟು ಎಷ್ಟೇ ಕಲುಷಿತವಾದ ನೀರನ್ನು ಸುರಿದರೂ ಇದು ಶುದ್ಧ ಮಾಡುತ್ತದೆ. ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಬೆಳ್ಳಿ ಮತ್ತು ತಾಮ್ರದ ಸೂಕ್ಷ್ಮಾತಿಸೂಕ್ಷ್ಮ ಕಣಗಳಿಂದ ತಯಾರಿಸಲ್ಪಟ್ಟ ಈ ಫಿಲ್ಟರ್ ಪುಟಗಳು ಸಿರಾಮಿಕ್ ಫಿಲ್ಟರ್, ಅಲ್ಟ್ರಾ ವಯಲೆಟ್ ಕ್ರಿಮಿನಾಶಕಗಳಿಗಿಂತಲೂ ಅಗ್ಗ.
ವಿಶ್ಲೇಷಕರ ಪ್ರಕಾರ ಇದೊಂದು ಉತ್ತಮ ತಂತ್ರಜ್ಞಾನ. ಇದು ಚರಂಡಿಯ ನೀರನ್ನೂ ಸಂಸ್ಕರಿಸಿ ಕುಡಿಯಲು ಯೋಗ್ಯವಾಗಿಸುತ್ತದೆ ಎಂದರೆ ನೀವು ನಂಬಲೇಬೇಕು. ಕಾಲರಾ ದಂಥ ಮಾರಕ ರೋಗಗಳನ್ನು ತಡೆಗಟ್ಟಲೂ ಇದು ಸಹಕಾರಿಯಾಗಿದೆ. ಅಂದಹಾಗೆ, ಈ ಪುಸ್ತಕದ ಜನನಿ ಅಮೆರಿಕದ ಪಿಟ್ಸ್ ಬರ್ಗ್ ಪೆನ್ಸಿಲ್ವೇನಿಯಾದ ಡಾಕ್ಟರ್ ಟೆರಿಸಾ ಡೆಂಕೋ ವಿಚ್. ಕೊಳಚೆ ಪ್ರದೇಶದಲ್ಲಿ ವಾಸಿಸುವವರಿಗೆ ಇದು ವರದಾನ ಹೌದಾದರೂ ಅವರ ಕೈ ಗೆಟುಕುವಷ್ಟು ಸೋವಿಯ ವಸ್ತು ಅಲ್ಲವಾದ್ದರಿಂದ ‘ವಾಟರ್ ಈಸ್ ಲೈಫ್’ (Water Is Life) ಹೆಸರಿನ ಲಾಭರಹಿತ ಸಂಸ್ಥೆಯ ಜತೆಗೂಡಿ ಇದನ್ನು ಪೂರೈಸುತ್ತಿದ್ದಾರೆ.
ಸ್ವಿಜರ್ಲೆಂಡ್ ಮೂಲದ ವೆಸ್ಟ್‌ರ್ಗಾರ್ಡ್ ಎಂಬ ಒಂದು ಸಂಸ್ಥೆ ಇದೆ. ವೆಸ್ಟ್‌ರ್ಗಾರ್ಡ್ ಫ್ರಾಂಡ್ಸನ್ ಎಂಬಾತ ಹುಟ್ಟು ಹಾಕಿದ ಸಂಸ್ಥೆ ಇದು. ಎಂಟು ದಶಕದ ಹಿಂದೆ ಸಮವಸ್ತ್ರ ತಯಾರಿಸುವ ಸಂಸ್ಥೆ ಇದಾಗಿತ್ತು. ಇಂದು ನೂರ ಎಪ್ಪತ್ತು ಮಂದಿ ಕೆಲಸ ಮಾಡುವ ಈ ಸಂಸ್ಥೆ ಗಾತ್ರದಲ್ಲಿ ಸಣ್ಣದಾದರೂ, ಅದು ಉತ್ಪಾದಿಸುವ ವಸ್ತುಗಳು ಅಭೂತಪೂರ್ವ. ಈ ಸಂಸ್ಥೆ ಕಳೆದ ಮೂರು ದಶಕಗಳಿಂದ ‘ಲೈಫ್ ಸ್ಟ್ರಾ’ ಹೆಸರಿನಲ್ಲಿ, ಸಭೆ ಸಮಾರಂಭಗಳಲ್ಲಿ ಉಪಯೋಗಿಸಲು ಲೈಫ್ ಸ್ಟ್ರಾ ಕಮ್ಯುನಿಟಿ, ಗ್ರಹಬಳಕೆಗಾಗಿ ಲೈಫ್ ಸ್ಟ್ರಾ ಫ್ಯಾಮಿಲಿ ಇತ್ಯಾದಿ ನೀರು ಶುದ್ಧೀಕರಿಸುವ ಉಪಕರಣಗಳನ್ನು ತಯಾರಿಸುತ್ತದೆ.
ಇವುಗಳಲ್ಲಿ ಗಮನ ಸೆಳೆಯುವಂಥದ್ದು, ವೈಯಕ್ತಿಕ ಉಪಯೋಗಕ್ಕೆ ಬಳಸುವ, ಫಿಲ್ಟರ್ ಯುಕ್ತ ಒಂದು ಸಣ್ಣ ಕೊಳವೆ. ನೀವು ಎಲ್ಲಾ ಹೋಗುವುದಿದ್ದರೂ ಇದನ್ನೊಂದು ಜತೆ ಯಲ್ಲಿಟ್ಟುಕೊಂಡರೆ ಕಲ್ಮಶ ನೀರು ಕುಡಿಯುವ ಭಯ ಇರುವುದಿಲ್ಲ.
ಒಂದು-ಒಂದೂವರೆ ಇಂಚು ವ್ಯಾಸ, ಆರು-ಏಳು ಇಂಚು ಉದ್ದ, ಒಳಗೆ 0.2 ಮೈಕ್ರೋನ್ ನ ಮೆಂಬ್ರೇನ್ ಹೊಂದಿದ ಈ ಸ್ಟ್ರಾದ ಒಂದು ತುದಿಯನ್ನು ನೀರಿನಲ್ಲಿ ಅದ್ದಿ ನೀರನ್ನು ಎಳೆದರೆ ಆಯಿತು (ಸ್ಟ್ರಾದಲ್ಲಿ ಜ್ಯೂಸ್ ಕುಡಿದಂತೆ), ಬಾಯಿ ಸೇರುವುದರೊಳಗೆ ನೀರು ಶುದ್ಧವಾಗಿರುತ್ತದೆ.
ನೀರಿನಲ್ಲಿರುವ ಮಣ್ಣಿನ ಕಣಗಳು, ಮೈಕ್ರೋ ಪ್ಲಾಸ್ಟಿಕ್, ಪ್ಯಾರಾಸೈಟ್ಸ್, ಇಕೋಲಿ, ಸಮೊನೆಲಾದಂಥ ಬ್ಯಾಕ್ಟೀರಿಯಾಗಳನ್ನೂ ತಡೆದು ಕುಡಿಯಲು ಯೋಗ್ಯವಾಗಿಸುತ್ತದೆ. ಸುಮಾರು ಐದು ವರ್ಷ ಬಾಳಿಕೆ ಬರುವ, ಸುಮಾರು ಒಂದುವರೆ ಸಾವಿರ ರುಪಾಯಿ ಬೆಲೆಯ ಈ ಸಾಧನ ನಾಲ್ಕು ಸಾವಿರ ಲೀಟರ್ ನೀರನ್ನು ಶುದ್ಧೀಕರಿಸುತ್ತದೆ.
ಇಷ್ಟು ಘನಂದಾರಿ ಕೆಲಸ ಮಾಡುವ ಇದರ ತೂಕ ಎಷ್ಟು ಗೊತ್ತಾ? ಕೇವಲ 46 ಗ್ರಾಂ. ಒಂದು ಕಾಲದಲ್ಲಿ ಭಗೀರಥ ಮಹರ್ಷಿ ದೇವಲೋಕದಿಂದ ಸುರಗಂಗೆಯನ್ನು ಭುವಿಗೆ ಇಳಿಸಿದ ಕತೆ ಎಲ್ಲರೂ ತಿಳಿದಿರುವಂಥದ್ದೇ. ಅಚಲ ಶೃದ್ಧೆ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನಕ್ಕೆ ಇನ್ನೊಂದು ಹೆಸರು ಭಗೀರಥ. ‘ಭಗೀರಥ ಪ್ರಯತ್ನ’ ಎಂದರೆ ಸಾಕು, ಅದರ ಹಿಂದಿನ ಕಷ್ಟದ ನೆರಳು ಮನದಲ್ಲಿಹಾದು ಹೋಗುತ್ತದೆ.
ಅಂದು ಲೋಕದ ಕಲ್ಯಾಣಕ್ಕೆ ನೀರು ತಂದವ ಒಬ್ಬ ಭಗೀರಥ. ಇಂದು ಲೋಕಕ್ಕೆ ನೀರುಣಿಸುತ್ತಿರುವವರೂ ಸಣ್ಣ ಸಣ್ಣ ಭಗೀರಥರು ಅಥವಾ ಅವನ ವಂಶಸ್ಥರು, ಅಲ್ಲವೆ? ಮುಂದಿನ ದಿನಗಳಲ್ಲಿ ಇನ್ನಷ್ಟು ಭಗೀರಥ ಪುತ್ರರ ವಿಷಯ ತಿಳಿಯೋಣ, ಏನಂತೀರಾ?