Roopa Gururaj Column: ಆದಿ ಶಂಕರಾಚಾರ್ಯ ಮತ್ತು ಮಂಡನ ಮಿಶ್ರ ಸಂವಾದ
ಶಂಕರಾಚಾರ್ಯರು ಮೊದಲು, ಕರ್ಮ ಮೀಮಾಂಸೆಯ ದೈತ್ಯ ವಿದ್ವಾಂಸರಾದ ಕುಮಾ ರಿಲ ಭಟ್ಟರನ್ನು ಭೇಟಿಯಾಗಲು ಹೋಗಿದ್ದರು. ಆದರೆ ಭಟ್ಟರು ಆಗ ಅಂತ್ಯಕಾಲ ದಲ್ಲಿದ್ದರು. ಅವರು ಶಂಕರರಿಗೆ, “ನನ್ನ ಸಿದ್ಧಾಂತವನ್ನು ಸಮರ್ಥವಾಗಿ ಮಂಡಿಸಬಲ್ಲ ಮತ್ತು ನಿನ್ನ ಅದ್ವೈತ ಸಿದ್ಧಾಂತಕ್ಕೆ ಸರಿಯಾದ ಸವಾಲು ನೀಡಬಲ್ಲ ಒಬ್ಬನೇ ವ್ಯಕ್ತಿ ಎಂದರೆ ಅದು ಮಂಡನ ಮಿಶ್ರ.
-
ಒಂದೊಳ್ಳೆ ಮಾತು
ಭಾರತೀಯ ಸನಾತನ ಧರ್ಮದ ಇತಿಹಾಸದಲ್ಲಿ ಆದಿ ಶಂಕರಾಚಾರ್ಯರು ಮತ್ತು ಮಂಡನ ಮಿಶ್ರರ ನಡುವೆ ನಡೆದ ಸಂವಾದವು ಕೇವಲ ಇಬ್ಬರು ಪಂಡಿತರ ನಡುವಿನ ಚರ್ಚೆಯಾಗಿರಲಿಲ್ಲ; ಅದು ಎರಡು ವಿಭಿನ್ನ ಜೀವನ ದರ್ಶನಗಳ ಮುಖಾಮುಖಿಯಾಗಿತ್ತು.
ಈ ಮಹಾನ್ ವಾದಕ್ಕೆ ಮೂಲ ಕಾರಣ ‘ಮೋಕ್ಷಕ್ಕೆ ಸರಿಯಾದ ಹಾದಿ ಯಾವುದು?’ ಎಂಬ ಜಿಜ್ಞಾಸೆ. ಅಂದಿನ ಕಾಲದ ಉದ್ದಾಮ ಪಂಡಿತರಾಗಿದ್ದ ಮಂಡನ ಮಿಶ್ರರು ‘ಕರ್ಮ ಮೀಮಾಂಸೆ’ಯ ಪ್ರಬಲ ಪ್ರತಿಪಾದಕರು. ಅವರ ಪ್ರಕಾರ, ವೇದೋಕ್ತವಾದ ಯಜ್ಞ-ಯಾಗಾದಿಗಳನ್ನು ಮಾಡುವುದು ಮತ್ತು ಗೃಹಸ್ಥ ಧರ್ಮವನ್ನು ಪಾಲಿಸುವುದೇ ಮುಕ್ತಿಗೆ ಏಕೈಕ ಮಾರ್ಗ.
ಆದರೆ, ಯುವ ಸನ್ಯಾಸಿ ಶಂಕರಾಚಾರ್ಯರು ‘ಅದ್ವೈತ’ ಸಿದ್ಧಾಂತವನ್ನು ನಂಬಿದ್ದರು. ಬಾಹ್ಯ ಕರ್ಮಗಳಿಗಿಂತ ಆತ್ಮಜ್ಞಾನವೇ ಶ್ರೇಷ್ಠ, ಸಂಸಾರವನ್ನು ತೊರೆದು ಜ್ಞಾನ ಮಾರ್ಗದಲ್ಲಿ ನಡೆದರೆ ಮಾತ್ರ ಮುಕ್ತಿ ಸಾಧ್ಯ ಎಂಬುದು ಶಂಕರರ ವಾದವಾಗಿತ್ತು.
ಇದನ್ನೂ ಓದಿ: Roopa Gururaj Column: ಸಹಸ್ರಾರು ವರ್ಷಗಳ ಹಿಂದಿನ ಮಹಾನ್ ಸತ್ಯಾನ್ವೇಷಕಿ ಗಾರ್ಗಿ
ಶಂಕರಾಚಾರ್ಯರು ಮೊದಲು, ಕರ್ಮ ಮೀಮಾಂಸೆಯ ದೈತ್ಯ ವಿದ್ವಾಂಸರಾದ ಕುಮಾ ರಿಲ ಭಟ್ಟರನ್ನು ಭೇಟಿಯಾಗಲು ಹೋಗಿದ್ದರು. ಆದರೆ ಭಟ್ಟರು ಆಗ ಅಂತ್ಯಕಾಲ ದಲ್ಲಿದ್ದರು. ಅವರು ಶಂಕರರಿಗೆ, “ನನ್ನ ಸಿದ್ಧಾಂತವನ್ನು ಸಮರ್ಥವಾಗಿ ಮಂಡಿಸಬಲ್ಲ ಮತ್ತು ನಿನ್ನ ಅದ್ವೈತ ಸಿದ್ಧಾಂತಕ್ಕೆ ಸರಿಯಾದ ಸವಾಲು ನೀಡಬಲ್ಲ ಒಬ್ಬನೇ ವ್ಯಕ್ತಿ ಎಂದರೆ ಅದು ಮಂಡನ ಮಿಶ್ರ.
ನೀನು ಅವರನ್ನು ವಾದದಲ್ಲಿ ಗೆದ್ದರೆ ಮಾತ್ರ ನಿನ್ನ ವಿಜಯಯಾತ್ರೆ ಪೂರ್ಣವಾಗುತ್ತದೆ" ಎಂದು ಸಲಹೆ ನೀಡಿದರು. ಶಂಕರಾಚಾರ್ಯರಿಗೆ ಇಡೀ ಭಾರತದಲ್ಲಿ ಅದ್ವೈತ ಸಿದ್ಧಾಂತ ವನ್ನು ಪಸರಿಸುವ ಉದ್ದೇಶವಿತ್ತು. ಅಂದಿನ ಕಾಲದ ಅತಿದೊಡ್ಡ ವಿದ್ವಾಂಸರಾಗಿದ್ದ ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿದರೆ, ಅವರ ಸಾವಿರಾರು ಶಿಷ್ಯರು ಮತ್ತು ಇಡೀ ಸಮಾಜ ಅದ್ವೈತದ ಸತ್ಯವನ್ನು ಒಪ್ಪಿಕೊಳ್ಳುತ್ತದೆ ಎಂಬುದು ಶಂಕರರ ಯೋಜನೆ ಯಾಗಿತ್ತು.
ಹೀಗೆ, ‘ಕ್ರಿಯೆ ಮುಖ್ಯವೋ ಅಥವಾ ಜ್ಞಾನ ಮುಖ್ಯವೋ?’ ಎಂಬ ಮೂಲಭೂತ ಪ್ರಶ್ನೆಯೇ ಈ ಸುದೀರ್ಘ ವಾದಕ್ಕೆ ನಾಂದಿ ಹಾಡಿತು. ವಾದದ ಷರತ್ತುಗಳು ಅತ್ಯಂತ ಕಠಿಣವಾಗಿದ್ದವು, ಮಂಡನ ಮಿಶ್ರರು ಸೋತರೆ, ಅವರು ತಮ್ಮ ಸುಖೀ ಸಂಸಾರ ಮತ್ತು ಪಾಂಡಿತ್ಯದ ಅಹಂಕಾರವನ್ನು ಬಿಟ್ಟು ಶಂಕರರ ಶಿಷ್ಯರಾಗಿ ಸನ್ಯಾಸ ಸ್ವೀಕರಿಸಬೇಕು.
ಶಂಕರಾಚಾರ್ಯರು ಸೋತರೆ, ಅವರು ತಮ್ಮ ಸನ್ಯಾಸವನ್ನು ತ್ಯಜಿಸಿ, ಬಿಳಿ ವಸ್ತ್ರ ಧರಿಸಿ ಗೃಹಸ್ಥರಾಗಬೇಕು. ಈ ವಾದಕ್ಕೆ ನ್ಯಾಯಾಧೀಶೆಯಾಗಿ ಮಂಡನ ಮಿಶ್ರರ ಪತ್ನಿ, ಸಾಕ್ಷಾತ್ ಸರಸ್ವತಿಯ ಅವತಾರವೆಂದೇ ನಂಬಲಾದ ಉಭಯ ಭಾರತಿ ಅವರನ್ನು ಆರಿಸಲಾಯಿತು.
ಅವರು ಇಬ್ಬರ ಕೊರಳಿಗೆ ತಾಜಾ ಹೂವಿನ ಹಾರಗಳನ್ನು ಹಾಕಿ, ಯಾರ ಹಾರ ಮೊದಲು ಬಾಡುವುದೋ ಅವರೇ ಪರಾಜಿತರು ಎಂದು ಘೋಷಿಸಿದರು. ಇದು ಕೇವಲ ಬುದ್ಧಿವಂತಿಕೆ ಯ ಪರೀಕ್ಷೆಯಾಗಿರದೆ, ಮನಸ್ಸಿನ ಶಾಂತಿಯ ಪರೀಕ್ಷೆಯೂ ಆಗಿತ್ತು. ಹದಿನೆಂಟು ದಿನಗಳ ಕಾಲ ನಡೆದ ಘೋರ ತರ್ಕದ ಅಂತ್ಯದಲ್ಲಿ, ಮಂಡನ ಮಿಶ್ರರ ಹಾರ ಬಾಡತೊಡಗಿತು. ಸೋಲನ್ನು ಒಪ್ಪಿಕೊಳ್ಳುವ ಕ್ಷಣದಲ್ಲಿ ಉಭಯ ಭಾರತಿಯವರು ಎದ್ದು ನಿಂತು ಶಾಸ್ತ್ರದ ಪ್ರಕಾರ ಪತ್ನಿ ಪತಿಯ ಅರ್ಧಾಂಗಿ. ನೀವು ನನ್ನ ಪತಿಯನ್ನು ಸೋಲಿಸಿರಬಹುದು,
ಆದರೆ ಅವರ ಇನ್ನರ್ಧ ಭಾಗವಾದ ನನ್ನನ್ನು ಸೋಲಿಸದ ಹೊರತು ನಿಮ್ಮ ವಿಜಯ ಅಪೂರ್ಣ ಎಂದು ಸನ್ಯಾಸಿಗೆ ತಿಳಿಯದ ‘ಕಾಮಶಾಸ್ತ್ರ’ ಮತ್ತು ಸಂಸಾರ ಜೀವನದ ಅನು ಭವಗಳ ಬಗ್ಗೆ ಪ್ರಶ್ನೆ ಗಳನ್ನು ಕೇಳಿದರು. ಆಗ ಶಂಕರರು, ಇನ್ನೇನು ಮರಣ ಹೊಂದುತ್ತಿದ್ದ ಒಬ್ಬ ರಾಜನ ದೇಹದೊಳಗೆ ತಮ್ಮ ಯೋಗಶಕ್ತಿಯಿಂದ ‘ಪರಕಾಯ ಪ್ರವೇಶ’ ಮಾಡಿ ಆ ಜ್ಞಾನವನ್ನೂ ಪಡೆದು ಬಂದು, ಆಕೆಯ ಪ್ರಶ್ನೆಗಳಿಗೆ ಉತ್ತರಿಸಿದರು.
ತಮ್ಮ ಸಿದ್ಧಾಂತದ ಮಿತಿಯನ್ನು ಅರಿತ ಮಂಡನ ಮಿಶ್ರರು ಕಿಂಚಿತ್ತೂ ಅಹಂಕಾರ ತೋರದೆ, ಶಂಕರರ ಪಾದಗಳಿಗೆ ನಮಸ್ಕರಿಸಿ ತಮ್ಮ ಇಡೀ ಜೀವನದ ನಂಬಿಕೆಯನ್ನು ಬದಲಿಸಿಕೊಂಡು ಸನ್ಯಾಸ ದೀಕ್ಷೆ ಪಡೆದರು. ಅವರೇ ಮುಂದೆ ಶೃಂಗೇರಿ ಶಾರದಾ ಪೀಠದ ಮೊದಲ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರಾದರು.
ನಮ್ಮ ನಂಬಿಕೆಗಳಿಗಿಂತ ಸತ್ಯ ಯಾವಾಗಲೂ ದೊಡ್ಡದು. ಯಾರಾದರೂ ನಮಗೆ ನಮ್ಮ ತಪ್ಪುಗಳನ್ನು ತೋರಿಸಿ ಸರಿಯಾದ ದಾರಿ ವಿವರಿಸಿದಾಗ ಅದನ್ನು ಒಪ್ಪಿಕೊಳ್ಳುವ ಪರಿಪಕ್ವತೆ ನಮಗಿರಬೇಕು. ಎಲ್ಲಿಯವರೆಗೆ ನಾವು ಮತ್ತೊಬ್ಬರ ನಿಲುವನ್ನು ಗೌರವಿಸುವ, ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಇರಿಸಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ಬೆಳೆಯುತ್ತಲೇ ಇರುತ್ತೇವೆ.