ಪದಸಾಗರ
ನಮ್ಮದೇ ಬರ್ತಡೇ, ಯಾರದ್ದೋ ಮದುವೆಮನೆ, ಇನ್ನೇನೋ ಸಾರ್ವಜನಿಕ ಕಾರ್ಯಕ್ರಮ ಇಂಥದ್ದರ ಮೂರ್ನಾಲ್ಕು ದಿನಗಳ ಸಂಭ್ರಮದ ನಂತರ ದಿಢೀರ್ ಒಂದು ಖಾಲಿ ಭಾವ ಹುಟ್ಟಿಕೊಳ್ಳುತ್ತದೆ. ಮೂರು ದಿನಗಳ ಆಯಾಸ ಅಂದು ಕಾಡಲು ಶುರುವಾಗುತ್ತದೆ. ಮೂರು ದಿನ ಗಡದ್ದಾಗಿ ತಿಂದುಂಡು ತೇಗಿದ್ದಕ್ಕೋ ಏನೋ, ಮನೆಯಲ್ಲಿ ಊಟ ಸೇರದಂತಾಗುತ್ತದೆ. ಪಾರ್ಟಿಯ ಖುಷಿಯಲ್ಲಿ ನಿದ್ದೆಯ ಶೆಡ್ಯೂಲ್ ಬದಲಾದದ್ದಕ್ಕೆ ಸರಿಯಾದ ಹೊತ್ತಿಗೆ ನಿದ್ದೆ ಬಾರದಂತಾಗುತ್ತದೆ.
ಮಗ-ಮಗಳು ಹೀಗೆ ಊಟ ತಿಂಡಿ ಮಾಡದೆಯೇ ಡಿಪ್ರೆಸ್ಡ್ ಎಂಬಂತೆ ಇದ್ದುಬಿಟ್ಟಾಗ, ಮನೆಯಲ್ಲಿ ರುವ ಅಮ್ಮ ಇದಕ್ಕಿಡುವ ಹೆಸರು ‘ದೃಷ್ಟಿ’! ಎಲ್ಲ ಅಮ್ಮಂದಿರಿಗೂ ಅವರವರ ಮಕ್ಕಳೆಂದರೆ ಮುದ್ದು, ಅವ್ರು ಹೇಗೇ ಇದ್ದರೂ ಮುದ್ದು. ತಮ್ಮ ಮಕ್ಕಳ ಮೇಲೆ ಯಾರ ಕೆಟ್ಟಕಣ್ಣು ಬೀಳತ್ತೋ ಎಂಬುದೇ ಅವರ ಚಿಂತೆ. ಹೀಗಾಗಿ ಆಯಾಸದಿಂದ ಬರುವ ಜ್ವರಕ್ಕೆ, ಬೇಸರದಿಂದ ಊಟ ನಿದ್ದೆ ಸೇರದಿರುವು ದಕ್ಕೆ, ಇನ್ಯಾವುದೋ ಕಿರಿಕಿರಿ ಮಾಡುವುದಕ್ಕೆ ಎಲ್ಲದಕ್ಕೂ ಅಮ್ಮ ಇಡುವ ಹೆಸರು ದೃಷ್ಟಿ.
ಬಾಲ್ಯದಲ್ಲಿ ಈ ದೃಷ್ಟಿ ತೆಗೆಸಿಕೊಳ್ಳುವುದೊಂದು ಬಹಳ ಇಷ್ಟದ ವಿಚಾರವಾಗಿ ಬಿಟ್ಟಿತ್ತು. ಕಾರಣ, ಇದು ಒದೆ ತಪ್ಪಿಸಿಕೊಳ್ಳುವ ಮಾರ್ಗವೂ ಆಗಿತ್ತು. ವಿಪರೀತ ರಚ್ಚೆ ಹಿಡಿದು, ಊಟ ತಿಂಡಿ ಮಾಡದೇ ಗಲಾಟೆ ಮಾಡ್ತಾ ಇದ್ದಾಗೆಲ್ಲ ಅಮ್ಮನಿಂದ ಏಟು ಕಾಯಂ. ಆದರೆ ಏಟುಕೊಟ್ಟ ಮರುಕ್ಷಣವೇ ನಮಗಿಂತ ಹೆಚ್ಚು ದುಃಖ ಪಡ್ತಾ ಇದ್ದದ್ದು ಅಮ್ಮ.
ಇದನ್ನೂ ಓದಿ: Naveen Sagar Column: ತಪ್ಪು ಮಾಡದವ್ರ್ ಯಾರವ್ರೆ...ತಪ್ಪೇ ಮಾಡದವ್ರ್ ಎಲ್ಲವ್ರೆ !
ಏಟುಕೊಟ್ಟು ಸ್ವಲ್ಪ ಹೊತ್ತಿಗೆ ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ಒಣಮೆಣಸಿನ ತೊಟ್ಟು, ಪೊರಕೆ ಕಡ್ಡಿ ಎಲ್ಲ ಒಟ್ಟು ಮಾಡಿ ತರುತ್ತಿದ್ದರು. ಒಂದು ಮರದ ಮಣೆ ಹಾಕಿ ಕೂರಿಸಿ, ದೃಷ್ಟಿ ನೀವಾಳಿಸಲು ಶುರುವಿಡುತ್ತಿದ್ದರು. ಅಳುವಿನಲ್ಲಿ ನಾವು ಉಸಿರು ಏಕುತ್ತಾ ಇದ್ದರೆ, ಅಮ್ಮ ಎಡಗೈ ಮುಷ್ಟೀಲಿ ದೃಷ್ಟಿ ಐಟಮ್ ಹಿಡ್ಕೊಂಡು ಉಲ್ಟಾ ರೌಂಡ್ ತಿರುಗಿಸಲು ಪ್ರಾರಂಭಿಸುತ್ತಿದ್ದರು.
ಅದ್ಯಾರ‍್ಯಾರದ್ದೋ ಹೆಸ್ರೆಲ್ಲ ಹೇಳಿ ಬಿದ್ದಿರೋ ಕಣ್ಣೆಲ್ಲ ಹೋಗ್ಲಿ ಎಂದು ಶಪಿಸಿ, ಕಾಳಿ ಬೋಳಿ ಅಂತೇನೇನೋ ಹೇಳಿ ನಮ್ಮಿಂದ ಥುಥುಥು ಅನ್ನಿಸುತ್ತಿದ್ದರು. ಆಮೇಲೆ ಕೈಲಿದ್ದ ಆ ದೃಷ್ಟಿ ಐಟಮ್ ಗಳನ್ನು ಒಯ್ದು, ಉರಿಯುತ್ತಿದ್ದ ಅಡುಗೆ ಒಲೆಗೆ ಹಾಕುತ್ತಿದ್ದರು. ಚಟಾಪಟ ಸೌಂಡ್ ಬರ್ತಾ ಇದ್ರೆ, ನೋಡು ಎಷ್ಟೊಂದ್ ದೃಷ್ಟಿ ಆಗಿತ್ತು ಅಂತ ಅಂತಿದ್ರು. ನಂಗೆ ಹೌದೇನೋ ಅನಿಸ್ತಿತ್ತು. ಅದರ ವಾಸನೆ ಅಂತೂ ಸಕತ್ ಟೆಂಪ್ಟಿಂಗ್.
ತಿಂದುಬಿಡೋಣ ಅನಿಸುವಷ್ಟು. ಆಮೇಲೆ ಆ ಒಲೆಯಿಂದ ಕಪ್ಪುಮಸಿ ತಂದು ಹಣೆಗೆ ಹಚ್ಚಿಬಿಟ್ರೆ ದೃಷ್ಟಿ ಶಾಸ್ತ್ರ ಫಿನಿಷ್. ಅಷ್ಟೊತ್ತಿಗೆ ಅಮ್ಮ ಕೊಟ್ಟ ಏಟಿನ ಪ್ರಭಾವವೂ ವರ್ಕ್ ಮಾಡಿರ್ತಿತ್ತು. ದೃಷ್ಟಿ ತೆಗೀತಾ ಮಾಡಿರೋ ಮುದ್ದೂ ವರ್ಕ್ ಆಗಿರ್ತ್ತಿತ್ತು.

ಮನಸ್ಸು ಹಗುರಾಗಿ ಆಡ್ಕೊಳೋಕೋ ಓದ್ಕೊಳೋಕೋ ಸಿದ್ಧವಾಗ್ತಿದ್ವಿ. ಮುಂದಿನ ದಿನಗಳಲ್ಲಿ ಬರ್ತಾ ಬರ್ತಾ, ಕೊಂಚ ತಲೆ ಓಡಿಸೋಕೆ ಶುರು ಮಾಡಿದ್ದೆ. ಹಟ, ಸಿಟ್ಟು, ಗಲಾಟೆ ಮಾಡಿ ಒದೆ ತಿನ್ನುವ ಪರಿಸ್ಥಿತಿ ಬಂದಾಗ, ಅಮ್ಮ ಕೈ ಎತ್ತಿ ಹೊಡೆಯೋಕೆ ಬರ್ತಾ ಇದ್ದ ಹಾಗೇ, ಕೈ ಅಡ್ಡ ಇಟ್ಟು ಈ ದೃಷ್ಟಿಯನ್ನು ಡಿಫೆನ್ಸಿಗೆ ತಂದುಬಿಡ್ತಿದ್ದೆ. ಹೊಡೀಬೇಡ ನಂಗೆ ದೃಷ್ಟಿ ಆಗಿದೆ.. ದೃಷ್ಟಿ ತೆಗೀ, ಸರಿ ಹೋಗಿಬಿಡ್ತೀನಿ ಅಂತ!
ಇದು ದೃಷ್ಟಿ ಪುರಾಣ. ಇಂದಿಗೂ ಪುಟ್ಟ ಮಕ್ಕಳಿಗೆ ದೃಷ್ಟಿ ತೆಗೆಯುತ್ತಾ ಇದ್ದರೆ ಆ ಹಳೆ ಅಡುಗೆ ಒಲೆಯಿಂದ ಸೃಷ್ಟಿಯಾಗುತ್ತಿದ್ದ ಶಬ್ದ ಮತ್ತು ವಾಸನೆ ನೆನಪಾಗಿ ನೋಸ್ ಟಾಲ್ಜಿಯಾಗೆ ಮನಸ್ಸು ಹಾರುತ್ತದೆ. ಆದರೆ ಇವತ್ತಿಗೂ ನಂಗೆ ಈ ದೃಷ್ಟಿ/ಕಣ್ಣುದೃಷ್ಟಿ/ಕಾಕದೃಷ್ಟಿ/ಕೆಟ್ಟಕಣ್ಣು ಇವೆಲ್ಲ ನಿಜವೋ ಸುಳ್ಳೋ ಎಂಬ ನಿರ್ಧಾರಕ್ಕೆ ಬರಲಾಗಿಲ್ಲ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಹುಡುಗರು ಹುಡುಗಿಯರು ಕಾಲಿಗೆ ಕಪ್ಪುದಾರ ಕಟ್ಟುವುದನ್ನು ಗಮನಿಸಿದ್ದೆ. ನನಗೂ ಸಾಕಷ್ಟು ಜನ ‘ದೃಷ್ಟಿಗಾಗಿ ಕಾಲಿಗೆ ಕಪ್ಪು ದಾರ ಕಟ್ಟು’ ಎಂದು ಸಲಹೆ ಕೊಟ್ಟಿದ್ದರು. ಅಂದಿಗೆ ತಮಾಷೆ ಅನಿಸಿತ್ತು. ಕಾಲಿಗೆ ಕಪ್ಪುದಾರ ಕಟ್ಟಿದ್ರೆ ಏನುಪ ಯೋಗ ಎಂಬ ಪ್ರಶ್ನೆ ಹುಟ್ಟಿತ್ತು. ಕಟ್ಟುತ್ತಿರುವ ಮನೆಮುಂದೆ ದೃಷ್ಟಿಬೊಂಬೆ ಇಡುತ್ತಾರೆ. ಯಾಕೆ? ಮನೆಗೆ ದೃಷ್ಟಿ ಬೀಳಬಾರದು ಅಂತ. ಮನೆಕಡೆ ಕಣ್ಣು ಹಾಕೋವ್ರ ದೃಷ್ಟಿ ಆ ಬೊಂಬೆ ಕಡೆ ಹೋಗಲಿ ಎಂಬುದು ಲಾಜಿಕ್.
ಆ ನಮ್ಮ ಮೇಲೆ ದೃಷ್ಟಿ ಬೀಳಬಾರದು ಅಂದ್ರೆ ನಾವು ಆ ಕಪ್ಪು ದಾರವನ್ನು ಢಾಳಾಗಿ ಗೋಚರ ವಾಗುವಂತೆ ತಾನೆ ಕಟ್ಟಿಕೊಳ್ಳಬೇಕು? ಮಗುವಿಗೆ ದೃಷ್ಟಿ ಬೀಳಬಾರದು ಅಂತ ದೊಡ್ಡದೊಡ್ಡ ಕಪ್ಪುಚುಕ್ಕೆಯನ್ನು ಮಗುವಿನ ಹಣೆ ಬದಿಗೆ, ಕೆನ್ನೆ ಮೇಲೆಲ್ಲ ಇಡುತ್ತಾರೆ. ಕಪ್ಪುಚುಕ್ಕೆ ಕಡೆಗೆ ದೃಷ್ಟಿ ಹಾಯಲಿ ಎಂಬುದು ಉದ್ದೇಶವಿರಬಹುದು. ಆದರೆ ವಿಚಿತ್ರ ನೋಡಿ, ಆ ಕಪ್ಪು ಬೊಟ್ಟು ಇಟ್ಟಿದ್ದ ರಿಂದಲೇ ಮಗು ಇನ್ನೂ ಹೆಚ್ಚು ಆಕರ್ಷಿಸಿಬಿಡುತ್ತದೆ.
ಆಗ ದೃಷ್ಟಿಬೊಟ್ಟು ಇಟ್ಟು ಉಪಯೋಗವಾದರೂ ಏನು? ಈ ಕಾಲಬುಡಕ್ಕೆ ಕಪ್ಪು ದಾರ ಕಟ್ಟಿ ಕೊಳ್ಳೋದ್ರಿಂದ ನಾವು ಯಾರ ದೃಷ್ಟಿಯಿಂದ ಬಚಾವಾಗೋಕೆ ಸಾಧ್ಯ? ನೋಡೋಕೆ ಚೆನ್ನಾಗಿ ದೀಯ ಅಂತ ಯಾರಾದರೂ ದಿಟ್ಟಿಸಿದರೆ, ಕಾಲು ನೋಡು ಅಂತ ಹೇಳೋಕಾಗತ್ತಾ? ಪ್ಯಾಂಟು ಸೀರೆ ಇಂಥ ಉದ್ದ ವಸ್ತ್ರ ಧರಿಸಿದಾಗ ಆ ಕಾಲಿನ ದಾರ ಕಾಣೋಕೆ ಚಾನ್ಸೇ ಇಲ್ಲ.
ದಾರದಿಂದೇನು ಉಪಯೋಗ? ಇನ್ನು ಮಾಡರ್ನ್ ಹೆಣ್ಮಕ್ಕಳು ಮಿಡಿ, ಮಿನಿ, ಚೆಡ್ಡಿ ಇವೆಲ್ಲ ಧರಿಸೋದ್ರಿಂದ ಕಾಲು, ಕಾಲಲ್ಲಿರೋ ದಾರ ಎಲ್ಲವೂ ಕಾಣುತ್ತದೆ. ಆದರೆ ನುಣುಪಾದ ವ್ಯಾಕ್ಸಿಂಗ್ ಮಾಡಿಸಿರೋ ಬಿಳಿಬಿಳಿ ಕಾಲುಗಳು, ಆ ಕಪ್ಪುದಾರವನ್ನು ನೋಡೋಕೆ ಬಿಡುತ್ತವೆಯಾ? ಕಾಲಿನ ಕಡೆಗೆ ಹುಡುಗರು ಆಕರ್ಷಿತರಾಗುತ್ತಾರೆ. ಆ ದಾರ ಕಟ್ಟಿರೋದ್ರಿಂದ ಕಾಲು ಇನ್ನೂ ಸೆಕ್ಸಿಯಾಗಿ ಕಾಣುತ್ತಿದೆ ಎಂದು ರಸಿಕರು ಮಾತಾಡುತ್ತಾರೆ.
ಈಗ ದೃಷ್ಟಿ ಕತೆ ಏನು ಹಾಗಾದ್ರೆ? ವಿನಾಕಾರಣ ಕಾಲಿಗೆ ಸಂಚಕಾರ ತಂದೊಡ್ಡಿದಂತಾಗಲಿಲ್ವೇ? ದೃಷ್ಟಿಯ ರೀತಿ ರಿವಾಜುಗಳೇ ಅರ್ಥವಾಗುವುದಿಲ್ಲ. ದೃಷ್ಟಿ ದಾರಗಳು, ಬೊಟ್ಟುಗಳು ಎಲ್ಲ ಜನರನ್ನು ಡೈವರ್ಟ್ ಮಾಡಿಸುವ ಸಾಧನಗಳಾ ಅಥವಾ ನೆಗೆಟಿವ್ ಎನರ್ಜಿಯನ್ನು ಕೊಲ್ಲುವ ಸಾಧನಗಳಾ? ಕಪ್ಪು ಎಲ್ಲವನ್ನೂ ಹೀರಿಕೊಳ್ಳುವ ವಸ್ತು. ಹೀಗಾಗಿ ಕಪ್ಪು ಬೊಟ್ಟು, ಕಪ್ಪು ದಾರ ಇವನ್ನೆಲ್ಲ ದೃಷ್ಟಿನಿವಾರಣೆಗೆ ಬಳಸೋದು ಅಂತಾರೆ.
ನಮ್ಮ ಮೈಗಂಟಿಕೊಂಡಿರೋ ಆ ಕಪ್ಪುದಾರ, ಬೊಟ್ಟು ನೆಗೆಟಿವ್ ಎನರ್ಜಿ ಹೀರಿಕೊಂಡರೆ ಅದು ಇನ್ನಷ್ಟು ಅಪಾಯವಲ್ಲವೇ? ದಿನವೂ ದಾರ ಬಿಸಾಕಿ ಹೊಸ ದಾರ ಕಟ್ಟಿಕೊಳ್ಳಬೇಕೇ? ಈ ದೃಷ್ಟಿ ಅನ್ನೋದು ನಿಜವೇ ಆಗಿದ್ದರೆ, ಇಷ್ಟೊತ್ತಿಗೆ ಅಂಬಾನಿ-ಅದಾನಿ ಸರ್ವನಾಶ ಆಗಿಬಿಡಬೇಕಿತ್ತಲ್ಲವಾ? ಮೋದಿಯ ಏಳಿಗೆಗೆ ಕರುಬುವವರು ಒಬ್ಬರಾ ಇಬ್ಬರಾ? ಸಿನಿತಾರೆಯರ ಅಂದಚಂದ ಮೆಚ್ಚುವವರು, ಅಸೂಯೆ ಪಡುವವರು ಅದೆಷ್ಟು ಕೋಟಿ ಜನರಿಲ್ಲ? ಸಚಿನ್ ತೆಂಡೂಲ್ಕರ್‌ಗೆ ದೃಷ್ಟಿ ತಾಗ್ತಾ ಇತ್ತಾ? ಅದ್ಕೇ ಅವ್ನು ಒಂದು ಸೆಂಚುರಿ ಹೊಡೆದ ನಂತರ ಫ್ಲಾಪ್ ಆಗ್ತಾ ಇದ್ನಾ? ದೃಷ್ಟಿ ತಾಗೋದು ನಿಜವೇ ಆಗಿದ್ರೆ ಅವನ ಕೆರಿಯರ್ ಕೆಲವೇ ದಿನಗಳಲ್ಲಿ ಮುಗಿದು ಹೋಗಬೇಕಿತ್ತಲ್ವೇ? ಅವನ ಕೆರಿಯರ್ ಮೇಲ್ಮುಖವೇ ಚಲಿಸುವಂತೆ ನೋಡಿಕೊಳ್ಳೋಕೆ ಪ್ರತಿದಿನ ದೃಷ್ಟಿ ತೆಗೆಸಿಕೊಳ್ತಾ ಇದ್ನಾ? ಮೋದಿ, ರಿಷಬ್ ಶೆಟ್ಟಿ, ಯಶ್, ಸುದೀಪ್ ಇವ್ರೆಲ್ಲ ದಿನಾಲೂ ದೃಷ್ಟಿ ತೆಗೆಸಿಕೊಳ್ತಾರಾ? ದಿನವೂ ಫೇಸ್‌ಬುಕ್ಕಲ್ಲಿ ಇನ್‌ಸ್ಟಾಗ್ರಾಮಲ್ಲಿ ಫೊಟೋ ಹಾಕಿಕೊಳ್ಳೋ, ಸ್ವಪ್ರಶಂಸೆಯ ಪೋ ಹಾಕಿಕೊಳ್ಳೋ ಜನರೆಲ್ಲ ದೃಷ್ಟಿಶಾಪಕ್ಕೆ ಬಲಿಯಾಗ್ತಾ ಇದ್ದಾರಾ? ಹಾಗಿದ್ದಿದ್ದರೆ ಇಷ್ಟೊತ್ತಿಗೆ ಇನ್‌ಸ್ಟಾಗ್ರಾಮ್ ಸ್ಮಶಾನ ಆಗಬೇಕಿತ್ತಲ್ಲವಾ? ಹಾಗಾದರೆ ದೃಷ್ಟಿ ಅನ್ನೋದೇ ಸುಳ್ಳಾ? ನಿಂಬೆಹಣ್ಣು ಸುಲಿಯೋದು, ಕುಂಬಳಕಾಯಿ ಒಡೆಯೋದು,
ಉಪ್ಪುನೀರಲ್ಲಿ ಸ್ನಾನ ಮಾಡೋದು ಇವೆಲ್ಲವೂ ಅರ್ಥಹೀನವಾ? ಇಂಥ ಹಲವಾರು ವಿಚಾರಗಳು ಒಂಥರಾ ಟ್ರಿಕ್ಕಿ. ಒಮ್ಮೆ ನಂಬಿಕೆ ಹುಟ್ಟಿಸುತ್ತವೆ. ಮತ್ತೊಮ್ಮೆ ಇವೆಲ್ಲ ಸುಳ್ಳು ಎಂದನಿಸುತ್ತವೆ. ಅಸಲಿಗೆ ಏನಾಗಿರುತ್ತದೆ? ಸರಳವಾಗಿ ಹೇಳೋದಾದರೆ ಇದೊಂದು ಮನೋವೈಜ್ಞಾನಿಕ ವಿಷಯ. ಯಾರೋ ನಿಮ್ಮನ್ನು ವಿಪರೀತವಾಗಿ ಹೊಗಳುತ್ತಾರೆ. ನೀವು ಹೊಗಳಿಕೆಯ ಹೊನ್ನಶೂಲಕ್ಕೆ ತಲೆ ಕೊಡುತ್ತೀರಿ. ಹೊಗಳಿಕೆಯಲ್ಲಿ ಮೈಮರೆಯುತ್ತೀರಿ. ಸಹಜವಾಗಿಯೇ ಒಂದು ಎಚ್ಚರಿಕೆಯ ಏಟು ಬೀಳುತ್ತದೆ. ಅದಕ್ಕೆ ನೀವು ಕೊಡಬಹುದಾದ ಹೆಸರು ದೃಷ್ಟಿ.
ಬಹಳ ಕಷ್ಟಪಟ್ಟು ಓದುತ್ತೀರಿ. ಒಳ್ಳೆ ಮಾರ್ಕ್ಸ್ ತೆಗೆಯುತ್ತೀರಿ. ನಿಮ್ಮನ್ನು ಜಾಣ, ಬುದ್ಧಿವಂತ ಎಂದು ಹೊಗಳುತ್ತಾರೆ. ಅಷ್ಟು ದಿನ ಹಾರ್ಡ್‌ವರ್ಕ್ ಮಾಡಿದ ನೀವು ಹೊಗಳಿಕೆಯ ಸೂರಿನಲ್ಲಿ ಕೊಂಚ ರಿಲ್ಯಾಕ್ಸ್ ಆಗಿ ಬಿಡುತ್ತೀರಿ. ಮುಂದಿನ ಪರೀಕ್ಷೆಯಲ್ಲಿ ಅಂಕಗಳು ಕಮ್ಮಿಯಾಗುತ್ತವೆ. ದೃಷ್ಟಿ ಬಿತ್ತು ಅಂದ್ಕೋತೀರಿ.
ಮಸ್ತಾಗಿ ಜಿಮ್ ವರ್ಕೌಟ್ ಮಾಡಿ, ದೇಹವನ್ನು ಹುರಿಗಟ್ಟಿಸಿರುತ್ತೀರಿ. ಚಳಿಗಾಲದಲ್ಲೂ ಕನಿಷ್ಠ ಬಟ್ಟೆ ಹಾಕಿಕೊಂಡು ಎಲ್ಲರೆದುರು ಸೌಷ್ಠವ ಪ್ರದರ್ಶಿಸುತ್ತೀರಿ. ಸಹಜವಾಗಿಯೇ ಹೊಗಳಿಕೆ ಕೇಳಿ ಬರುತ್ತದೆ. ಹೊಗಳಿಕೆಯ ಅಲೆಗೆ ಮೈಮರೆತು ಒಂದೋ ಕಮ್ಮಿ ತಿಂದು ಅಥವಾ ಜಾಸ್ತಿ ತಿಂದು ದೇಹದಲ್ಲಿ ಸಣ್ಣ ವ್ಯತ್ಯಾಸವಾದರೂ ನೀವು ಆರೋಪಿಸೋದು ದೃಷ್ಟಿಗೆ!
ಬರೆದ ಲೇಖನವೊಂದಕ್ಕೆ ಅಥವಾ ಪುಸ್ತಕವೊಂದಕ್ಕೆ ಭಾರಿ ಮೆಚ್ಚುಗೆ, ಪ್ರಚಾರ ಎಲ್ಲವೂ ಸಿಗುತ್ತದೆ. ಅದಕ್ಕಿಂತ ಉತ್ತಮವಾದದ್ದು ಬರೆಯುವ ಒತ್ತಡದಲ್ಲಿ ಬರಹ ಹುಟ್ಟದಂತಾಗುತ್ತದೆ. ಅಥವಾ ಮೆಚ್ಚುಗೆಯ ಮಹಾಪೂರದಲ್ಲಿ ಮೈಮರೆತು ಏನೋ ಬರೆದು ಟೀಕೆಗೆ ಗುರಿಯಾಗುತ್ತೀರಿ. ಇದಕ್ಕೂ ಹೊಣೆಮಾಡುವುದು ದೃಷ್ಟಿಯನ್ನೇ.
ಹಣ ಗಳಿಸಿ ಮೆರೆಯುತ್ತಿರುತ್ತೀರಿ. ಜನ ಹೊಗಳಿ ಅಟ್ಟಕ್ಕೇರಿಸುತ್ತಾ ಇರುತ್ತಾರೆ. ಹಣದ ಮೂಲ ಅಕ್ರಮದ್ದಾಗಿರುತ್ತದೆ. ಇಲಾಖೆಯ ಕಣ್ಣು ಬಿದ್ದು ರೇಡ್ ಆಗುತ್ತದೆ. ಕಣ್ಣು ಬಿದ್ದದ್ದು ಐಟಿ ಇಲಾಖೆ ಯದ್ದು. ನೀವು ಆರೋಪಿಸೋದು ಜನರ ಕೆಟ್ಟ ಕಣ್ಣು ಎಂದು. ಹಣ ಗಳಿಸುವ ಭರದಲ್ಲಿ ಆರೋಗ್ಯ ದ ಕಾಳಜಿ ಮರೆತಿರುತ್ತೀರಿ. ಹಣ ನಿಮಗೆ ಖ್ಯಾತಿ ತಂದುಕೊಟ್ಟ ಬೆನ್ನ ಆರೋಗ್ಯ ಕೈಕೊಡುತ್ತದೆ. ನೀವು ಗೂಬೆ ಕೂರಿಸೋದು ದೃಷ್ಟಿಯ ಮೇಲೆ.
ಹಾಗಾದರೆ ಕೆಟ್ಟಕಣ್ಣು, ದೃಷ್ಟಿ ಇವೆಲ್ಲ ಸುಳ್ಳಾ? ಹಾಗೆನ್ನಲಾಗುವುದಿಲ್ಲ. ನಿಮ್ಮೆದುರೇ ಯಾರೋ ಕರುಬುತ್ತಾರೆ. ನಿಮ್ಮ ಏಳಿಗೆ ಸಹಿಸದೇ ನೀವು ಹಾಳಾಗಲೆಂದು ಬಯಸುತ್ತಾರೆ. ಎದುರಿಗೆ ಹೊಗಳಿ, ನೀವು ಆಚೆ ಹೋಗುತ್ತಿದ್ದಂತೆಯೇ ಮನಸ್ಸಿನಲ್ಲಿ ಅಸೂಯೆ ಪಟ್ಟುಕೊಳ್ಳುತ್ತಾರೆ.
ಅವ್ಯಾವುದಕ್ಕೂ ನಯಾಪೈಸೆ ಕಿಮ್ಮತ್ತಿಲ್ಲ. ಆದರೆ ಅದು ನಿಮ್ಮ ಮನಸಿನ ಮೇಲೆ ಪರಿಣಾಮ ಬೀರುವುದಕ್ಕೆ ನೀವು ಅವಕಾಶ ಕೊಟ್ಟಿರಿ ಅಂದುಕೊಳ್ಳಿ, ಆಗ ಶುರುವಾಗುತ್ತದೆ ಸೋ ಕಾಲ್ಡ್ ದೃಷ್ಟಿಯ ಪರಿಣಾಮ. ಯಾರೋ ನಿಮ್ಮನ್ನು ಶಪಿಸುತ್ತಾರೆ, ಶಪಿಸುತ್ತಲೇ ಇರುತ್ತಾರೆ. ನೆಗೆಟಿವಿಟಿ ಬಿತ್ತುತ್ತಲೇ ಇರುತ್ತಾರೆ. ಅಂಥವರಿಂದ ನೀವು ವಿಚಲಿತರಾದಿರೆಂದರೆ ಅದು ಸೋ ಕಾಲ್ಡ್ ದೃಷ್ಟಿ ಯಿಂದ ಆಗುವ ಅನಾಹುತ. ಅಕ್ರಮದಿಂದ ಜನಪ್ರಿಯತೆ, ಹಣ ಇತ್ಯಾದಿ ಗಳಿಸಿದ್ದೀರಿ, ಪಾಪಪ್ರಜ್ಞೆ ಕಾಡುತ್ತಿರುತ್ತದೆ,
ಭಯ ಕಾಡುತ್ತಿರುತ್ತದೆ. ಅದರ ಪರಿಣಾಮ ದೇಹದ ಮೇಲೆ, ಆಸ್ತಿ-ಅಂತಸ್ತಿನ ಮೇಲೆ ಆಗುತ್ತದೆ. ಅದನ್ನು ದೃಷ್ಟಿ ಮೇಲೆ ಆರೋಪಿಸಿ, ನೀವು ಸರಿಯಿದ್ದೀರೆಂದು ನಿಮ್ಮನ್ನು ನೀವು ನಂಬಿಸಿ ಕೊಳ್ಳುತ್ತೀರಿ. ದೃಷ್ಟಿ ಎಂಬುದು ದುರ್ಬಲ ಮನಸ್ಸಿನ ಸುತ್ತ ನಡೆಯುವ ಆಟವೇ ಹೊರತು, ಬೇರೇನೂ ಅಲ್ಲ.
ಒಬ್ಬರಿಗೆ ಇನ್ನೊಬ್ಬರನ್ನು ಕುಂದಿಸುವ ಅಸ, ಮತ್ತೊಬ್ಬರಿಗೆ ಅದು ಎಸ್ಕೇಪಿಸಂ ಅಸ. ಕೆಲವರಿಗೆ ಅದು ನಿರಾಳವಾಗಲು ಒಂದು ಸಾಧನ. ನಿಮಗೇನನಿಸುತ್ತೆ ಹೇಳಿ. ಮನೋವೈಜ್ಞಾನಿಕ ಹಾಗೂ ನಂಬಿಕೆಯ ಸುತ್ತ ಇರುವ ಚರ್ಚೆ ಮತ್ತು ಸಂವಾದಗಳಿಗೂ ಈ ಬರಹ ಮುಕ್ತವಾಗಿರುತ್ತದೆ.