ಬೆಂಕಿ ಬಸಣ್ಣ, ನ್ಯೂಯಾರ್ಕ್
ಟೋಕಿಯೋ ಕನ್ನಡ ಬಳಗದ ರಜತ ಮಹೋತ್ಸವದ ಸಂಭ್ರಮ
ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳ ಸಾಂಸ್ಕೃತಿಕ ವೈಭವ
ಟೋಕಿಯೋ (ಜಪಾನ್) : ಪೂರ್ವ - ಪಶ್ಚಿಮಗಳ ಸಂಗಮ, ಕನ್ನಡಿಗರೆಲ್ಲರ ಆನಂದದ ಸಂಭ್ರಮ! When East Meets West, the Result Is the Best! ಎಂಬ ಮಾತಿಗೆ ಅಕ್ಷರಶಃ ಸಾಕ್ಷಿಯಾದದ್ದು ಜಪಾನ್ನ ರಾಜ ಧಾನಿ ಟೋಕಿಯೋದಲ್ಲಿ ನವೆಂಬರ್ 22ರಂದು ಅದ್ಧೂರಿಯಾಗಿ ನಡೆದ ಎಂಟನೇ ವಿಶ್ವ ಕನ್ನಡ ಸಮ್ಮೇಳನ ನಾವಿಕೋತ್ಸವ- 2026.
ಅಮೆರಿಕದ ‘ನಾವು ವಿಶ್ವ ಕನ್ನಡಿಗರು’ (ನಾವಿಕ) ಸಂಸ್ಥೆ ಹಾಗೂ ಟೋಕಿಯೋ ಕನ್ನಡ ಬಳಗ ಜಂಟಿಯಾಗಿ ಆಯೋಜಿಸಿದ್ದ ಈ ವಿಶ್ವ ಕನ್ನಡ ಸಮ್ಮೇಳನವು ಅಭೂತ ಪೂರ್ವ ಯಶಸ್ಸು ಕಂಡಿತು. ಕಿಜುನಾ (KIZUNA – Bond Beyond Borders) ಅಂದರೆ ಗಡಿಗಳನ್ನು ಮೀರಿದ ಬಾಂಧವ್ಯ ಎಂಬ ಪರಿಕಲ್ಪನೆಯಡಿ ನಡೆದ ಈ ಸಮ್ಮೇಳನದಲ್ಲಿ ಪೂರ್ವದ ಜಪಾನ್ ಹಾಗೂ ಪಶ್ಚಿಮದ ಅಮೆರಿಕದ ಕನ್ನಡಿಗರು ಒಂದಾಗಿ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ವೈಭವವನ್ನು ಮೆರೆ ದರು.
ಇದೇ ಸಂದರ್ಭದಲ್ಲಿ ಟೋಕಿಯೋ ಕನ್ನಡ ಬಳಗದ 25ನೇ ವಾರ್ಷಿಕೋತ್ಸವದ ರಜತ ಮಹೋ ತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮವೂ ಸೇರಿ ಈ ಕನ್ನಡ ಹಬ್ಬಕ್ಕೆ ವಿಶೇಷ ಮೆರುಗು ನೀಡಿತು. ನಾವಿಕ ಅಧ್ಯಕ್ಷೆ ಡಾ.ಅನ್ನಪೂರ್ಣ ಭಟ್ ಅವರ ನೇತೃತ್ವದಲ್ಲಿ ನಾವಿಕೋತ್ಸವದ ಸಂಚಾಲಕ ಅಜಿತ್ ಭಾಸ್ಕರ್ ಅವರ ಸಮರ್ಥ ಸಂಘಟನೆ ಹಾಗೂ ಟೋಕಿಯೋ ಕನ್ನಡ ಬಳಗದ ಸಹಕಾರದೊಂದಿಗೆ ಈ ಬೃಹತ್ ಕನ್ನಡ ಹಬ್ಬ ಯಶಸ್ವಿಯಾಗಿ ನೆರವೇರಿತು.
ಇದನ್ನೂ ಓದಿ: ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ; ಭಾರತ, ಭೂತಾನ್, ಚೀನಾದಲ್ಲೂ ಕಂಪಿಸಿದ ಭೂಮಿ
ಅಮೆರಿಕದಿಂದ ಸುಮಾರು 300 ಹಾಗೂ ಜಪಾನ್ ನಿಂದ ಸುಮಾರು 300 ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ ಈ ಸಮ್ಮೇಳನಕ್ಕೆ ಭಾರಿ ಬೇಡಿಕೆ ಉಂಟಾಗಿ ಎಲ್ಲ ಟಿಕೆಟ್ಗಳೂ ಮಾರಾಟ ವಾಗಿದ್ದವು. ಅನೇಕ ಕನ್ನಡಾ ಭಿಮಾನಿಗಳಿಗೆ ಟಿಕೆಟ್ ದೊರೆಯದಷ್ಟು ಜನಪ್ರಿಯತೆ ಈ ಕಾರ್ಯಕ್ರಮಕ್ಕೆ ಲಭಿಸಿತ್ತು. ಸಮ್ಮೇಳನದ ಯಶಸ್ಸಿನಲ್ಲಿ ಸಂಚಾಲಕ ಅಜಿತ್ ಭಾಸ್ಕರ್ ಅವರ ಪರಿಶ್ರಮ ವಿಶೇಷ ವಾಗಿ ಗಮನ ಸೆಳೆಯಿತು. ಅಮೆರಿಕ ಹಾಗೂ ಜಪಾನ್ನ ಕನ್ನಡಿಗರನ್ನು ಒಗ್ಗೂಡಿಸಿ, ವಿವಿಧ ಸಮಿತಿಗಳ ಕಾರ್ಯ ಚಟುವಟಿಕೆಗಳನ್ನು ಸಮನ್ವಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಯ್ ಬೊಳ್ಳೂರು ಅವರು ಕಲಾವಿದರ ಕಾರ್ಯ ಕ್ರಮಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಪ್ರವಾಸ ಸಮಿತಿ ಅಧ್ಯಕ್ಷೆ ರಜನಿ ಮಹೇಶ್ ಅಮೆರಿಕದಿಂದ ಆಗಮಿಸಿದ ಕನ್ನಡಿಗರ ಒಂಬತ್ತು ದಿನಗಳ ಜಪಾನ್ ಪ್ರವಾಸದ ಯೋಜನೆ ಹಾಗೂ ಸಮನ್ವಯ ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಾವಿಕೋತ್ಸವದ ಕಾರ್ಯಕ್ರಮಗಳು ಬೆಳಿಗ್ಗೆ ಸಾಹಿತ್ಯ ವೇದಿಕೆ, ಉದ್ಯಮ ವೇದಿಕೆ ಹಾಗೂ ಮುಂದುವರಿದ ವೈದ್ಯಕೀಯ ಶಿಕ್ಷಣ ಎಂಬ ಮೂರು ಸಮಾ ನಾಂತರ ವಿಚಾರಗೋಷ್ಠಿಗಳೊಂದಿಗೆ ಆರಂಭ ಗೊಂಡವು.
ಸಾಹಿತ್ಯ ವೇದಿಕೆಯಲ್ಲಿ ಕನ್ನಡದ ಕಂಪು: ನಾವಿಕ ಸಾಹಿತ್ಯ ಸಮಿತಿ ಅಧ್ಯಕ್ಷ ಬೆಂಕಿ ಬಸಣ್ಣ ಹಾಗೂ ಜಪಾನ್ ನ ಶ್ರೀಕಲಾ ಬೊಳ್ಳಾಜೆ ಅವರ ಸಂಯೋಜನೆಯಲ್ಲಿ ನಡೆದ ಸಾಹಿತ್ಯ ವೇದಿಕೆ ಯನ್ನು ನಾವಿಕ ಅಧ್ಯಕ್ಷೆ ಡಾ. ಅನ್ನಪೂರ್ಣ ಭಟ್ ಉದ್ಘಾಟಿಸಿದರು. ಕನ್ನಡ ಚಿತ್ರ ರಂಗದ ಹಿರಿಯ ನಟ, ಪ್ರಣಯರಾಜ ಶ್ರೀನಾಥ್ ಮುಖ್ಯಅತಿಥಿಯಾಗಿ ಭಾಗವಹಿಸಿ ಸಾಹಿತ್ಯ ಕಾರ್ಯ ಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಈ ಸಂದರ್ಭ ದಲ್ಲಿ ಎರಡು ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ವಿಶ್ವ ಕನ್ನಡ ಕೂಟಗಳ ಕೈಪಿಡಿ ಬಿಡುಗಡೆ: ವಿಶ್ವದ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಕನ್ನಡ ಸಂಘಟನೆಗಳು, ಕನ್ನಡಿಗರ ಚಟುವಟಿಕೆಗಳು ಹಾಗೂ ಜಾಗತಿಕ ಕನ್ನಡ ಸಮುದಾಯಗಳ ಮಾಹಿತಿಯನ್ನು ಒಂದೆಡೆ ಸಂಗ್ರಹಿಸುವ ಮಹತ್ವಾಕಾಂಕ್ಷೆಯ ಪ್ರಯತ್ನ ವಾದ ವಿಶ್ವ ಕನ್ನಡ ಕೂಟಗಳ ಕೈಪಿಡಿ ಕೃತಿಯನ್ನು ಹಿರಿಯ ನಟ ಶ್ರೀನಾಥ್ ಬಿಡುಗಡೆ ಮಾಡಿದರು. ಬೆಂಕಿ ಬಸಣ್ಣ ಈ ಕೃತಿಯ ಪ್ರಧಾನ ಸಂಪಾದಕರಾಗಿದ್ದಾರೆ.
ವಿಶ್ವದ ವಿವಿಧ ಭಾಗಗಳ ಕನ್ನಡಿಗರ ಸಹಯೋಗದಲ್ಲಿ ರೂಪುಗೊಂಡ ಈ ಕೈಪಿಡಿಯು ಜಾಗತಿಕ ಕನ್ನಡ ಸಂಘಟನೆಗಳ ನಡುವೆ ಸಂಪರ್ಕ ಸೇತುವೆಯಾಗುವ ಉದ್ದೇಶ ಹೊಂದಿದೆ. ಕವನ ಸಂಕಲನ ಬಿಡುಗಡೆ: ಬಹುಭಾಷಾ ಸಾಹಿತಿ ಕಿರಣ್ ಭಟ್ ಅವರ ‘ಒಂದು ವಲಸೆ ಕಥೆ’ ಕವನ ಸಂಕಲನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವಲಸೆ ಬದುಕಿನ ಅನುಭವಗಳು, ಭಾವನೆಗಳು ಹಾಗೂ ಮಾನವ ಸಂಬಂಧಗಳ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಈ ಕೃತಿ ಸಾಹಿತ್ಯ ವೇದಿಕೆಗೆ ಮತ್ತಷ್ಟು ಮೆರುಗು ನೀಡಿತು.
ತೊಂಬತ್ತರ ಹರೆಯದಲ್ಲೂ ಕನ್ನಡದ ಪ್ರೀತಿ: ಸಾಹಿತ್ಯ ವೇದಿಕೆಯ ವಿಶೇಷ ಆಕರ್ಷಣೆ ಯಾಗಿದ್ದು ಅಮೆರಿಕದಿಂದ ಜಪಾನ್ಗೆ ಆಗಮಿಸಿದ್ದ 90 ವರ್ಷದ ಹಿರಿಯ ಕನ್ನಡಿಗ ಚಂದ್ರಶೇಖರ ರಾವ್ ಅವರ ಕವನ ವಾಚನ. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಅಮೆರಿಕದಲ್ಲಿ ನೆಲೆಸಿರುವ ಅವರು ಅನಿವಾಸಿ ಕನ್ನಡಿಗರ ಬದುಕು, ತಾಯ್ನಾಡಿನ ನೆನಪುಗಳು ಹಾಗೂ ವಲಸೆ ಜೀವನದ ಅನುಭವಗಳನ್ನು ಪ್ರತಿಬಿಂಬಿಸುವ ಕವನಗಳನ್ನು ವಾಚಿಸಿದರು. ತೊಂಬತ್ತರ ಹರೆಯ ದಲ್ಲೂ ಕನ್ನಡ ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿ ಮತ್ತು ಉತ್ಸಾಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಮೆರಿಕದ ರಾಜೇಶ್ವರ ಮೂರ್ತಿ ಅವರು ಸ್ವರಚಿತ ಕಿರುಕಥೆಯನ್ನು ಪ್ರಸ್ತುತ ಪಡಿಸಿದರೆ, ಫ್ಲೋರಿಡಾದ ಶಾಲಿನಿ ಉಮೇಶ್ ತಮ್ಮ ಕವನ ವಾಚನದ ಮೂಲಕ ಸಾಹಿತ್ಯ ಸಂಭ್ರಮಕ್ಕೆ ಕೊಡುಗೆ ನೀಡಿದರು.
ಜಪಾನ್ನಲ್ಲಿ ಬೆಳೆಯುತ್ತಿರುವ ಕನ್ನಡ ಮಕ್ಕಳೂ ಕನ್ನಡ ಕವನಗಳನ್ನು ವಾಚಿಸಿ ಗಮನ ಸೆಳೆದರು. ವಿದೇಶಿ ನೆಲದಲ್ಲಿ ಹುಟ್ಟಿ ಬೆಳೆದ ಮಕ್ಕಳ ಬಾಯಲ್ಲಿ ಕನ್ನಡದ ಕವಿತೆಗಳು ಮೊಳಗಿದ್ದು ಕನ್ನಡ ಭಾಷೆಯ ಭವಿಷ್ಯದ ಕುರಿತು ಆಶಾಭಾವನೆ ಮೂಡಿಸಿತು. ಜಪಾನಿನ ಸಾಹಿತ್ಯ ಪರಂಪರೆಯ ಕುರಿತ ಪರಿಚಯಾತ್ಮಕ ಪ್ರಸ್ತುತಿಯೂ ಕಾರ್ಯಕ್ರಮದ ಭಾಗವಾಗಿತ್ತು. ಮೂರು ಆರ್ಥಿಕತೆಗಳು ಅವಕಾಶ ಗಳ ಒಂದೇ ವಿಶ್ವ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ನಾವೀನ್ಯತೆ, ಹೂಡಿಕೆ, ಕೃತಕ ಬುದ್ಧಿಮತ್ತೆ ಹಾಗೂ ಜಾಗತಿಕ ಸಹಭಾಗಿತ್ವದ ಕುರಿತು ವಿಚಾರ ವಿನಿಮಯ ನಡೆಯಿತು. ವಿಜಯ್ ಕೊಟ್ರಪ್ಪ ಅವರು ಅಮೆರಿಕ ಮತ್ತು ಕರ್ನಾಟಕದ ನಡುವಿನ ಹೂಡಿಕೆ ಹಾಗೂ ಉದ್ಯಮ ಅವಕಾಶಗಳ ಕುರಿತು ವಿಷಯ ಮಂಡಿಸಿದರು. ಶಿವಕುಮಾರ್ ಬೆಂಗಳೂರು ಅವರು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಹಣಕಾಸು ತಂತ್ರಜ್ಞಾನ ಹಾಗೂ ಎಐ ಸಂಬಂಧಿತ ಅಪಾಯಗಳ ಕುರಿತು ಮಾತನಾಡಿದರು.
ಸಿ.ವಿ. ಶಶಿಕುಮಾರ್ ಅವರು ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸೇತುವೆಗಳ ಬಲವರ್ಧನೆ ಹಾಗೂ ಮೂಲಸೌಕರ್ಯ ತಂತ್ರಜ್ಞಾನದ ಕುರಿತು ವಿಷಯ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ವಿಶೇಷ ಸಂವಾದದಲ್ಲಿ ಜಪಾನ್ನ ಪರಿಸರ ವಿಜ್ಞಾನಿ, ಉದ್ಯಮಿ ಹಾಗೂ ಸಮಾಜಸೇವಕ ಡಾ. ಶ್ರೀಹರಿ ಚಂದ್ರಘಟಗಿ ಅವರು ಜಪಾನ್ನಲ್ಲಿ ಉದ್ಯಮ ಕಟ್ಟುವ ಅನುಭವಗಳು, ನಾವೀನ್ಯತೆ ಹಾಗೂ ಉದ್ಯಮಶೀಲತೆಯ ಯಶಸ್ಸಿನ ಕುರಿತು ವಿಚಾರ ಹಂಚಿಕೊಂಡರು.
ಜಾಗತಿಕ ಚಿಂತಕ ಸುರೇಶ್ ರಾಮಚಂದ್ರ ಅವರೊಂದಿಗೆ ನಡೆದ ಈ ಸಂವಾದವು ದೇಶಗಳ ಗಡಿಗಳನ್ನು ಮೀರಿ ಉದ್ಯಮಶೀಲತೆಯ ಅವಕಾಶಗಳನ್ನು ಅನ್ವೇಷಿಸುವ ಮಹತ್ವವನ್ನು ಎತ್ತಿ ಹಿಡಿಯಿತು. ವಿದ್ಯುತ್ ವಾಹನಗಳು, ರೊಬೋಟಿಕ್ಸ್, ಉತ್ಪಾ ದನಾ ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಜೈವಿಕ ತಂತ್ರಜ್ಞಾನ ಕುರಿತ ಸಂವಾದದಲ್ಲಿ ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಜಪಾನ್ನ ಉಪಾಧ್ಯಕ್ಷ ಶಿವಕುಮಾರ್ ಸಿ.ಕೆ., ಅಮೆರಿಕದ ಸ್ಮಾರ್ಟ್ ಇನ್ʼಫ್ರಾಸ್ಟ್ರಕ್ಚರ್ ಗ್ರೂಪ್ ಸಂಸ್ಥಾಪಕ ಅಚ್ಯುತ್ ಕುಮಾರ್ ಅಲ್ಲಾಡಿ ಹಾಗೂ ಜುಂಕೊ ನಿರ್ಮಲಾ ಭಾಗವಹಿಸಿದರು.
ಉದ್ಯಮ ವೇದಿಕೆಯ ಅಧ್ಯಕ್ಷ ಸುರೇಶ್ ರಾಮ ಚಂದ್ರ ಅವರ ನೇತೃತ್ವದಲ್ಲಿ ನಡೆದ ಈ ವಿಚಾರ ಗೋಷ್ಠಿ ಮೂರು ರಾಷ್ಟ್ರಗಳ ನಡುವಿನ ಉದ್ಯಮ ಹಾಗೂ ತಂತ್ರಜ್ಞಾನ ಸಹಕಾರದ ಸಾಧ್ಯತೆ ಗಳನ್ನು ತೆರೆದಿಟ್ಟಿತು.
ಹೊಸ ಬೆಳವಣಿಗೆಗಳ ಕುರಿತು ಚರ್ಚೆ: ನಾವಿಕೋತ್ಸವದ ಅಂಗವಾಗಿ ಅಮೆರಿಕದಿಂದ ಆಗಮಿಸಿದ್ದ ವೈದ್ಯರಿಗಾಗಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವೂ ನಡೆಯಿತು. ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ನಡೆದ ಈ ವಿಚಾರಗೋಷ್ಠಿಯಲ್ಲಿ ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ್ದ ವೈದ್ಯರು ಭಾಗವಹಿಸಿ ವೈದ್ಯಕೀಯ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು, ಆಧುನಿಕ ಚಿಕಿತ್ಸಾ ವಿಧಾನಗಳು ಹಾಗೂ ಹೊಸ ಸಂಶೋಧನೆಗಳ ಕುರಿತು ವಿಚಾರ ವಿನಿಮಯ ನಡೆಸಿದರು.
ನೃತ್ಯ, ಸಂಗೀತ, ನಾಟಕಗಳ ರಸದೌತಣ: ಮಧ್ಯಾಹ್ನ ಸುಮಾರು ಎರಡು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಾವಿಕೋತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಟೋಕಿಯೋ ಕನ್ನಡ ಬಳಗ ಹಾಗೂ ಅಮೆರಿಕದ ನಾವಿಕ ಕಲಾವಿದರು ಕನ್ನಡದ ಹಾಡು, ನೃತ್ಯ, ನಾಟಕ, ಯಕ್ಷಗಾನ ಮತ್ತು ಫ್ಯಾಷನ್ ಪರೇಡ್ಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದರು. ನಾವಿಕ ಕಲಾವಿದರ ಸಮೂಹ ಗಾಯನ, ಟೋಕಿಯೋ ಕನ್ನಡ ಬಳಗದ ಕಲಾವಿದರ ಜಾನಪದ ಗೀತೆಗಳು, ಪುಟಾಣಿ ಮಕ್ಕಳ ವೇಷಭೂಷಣ ಪ್ರದರ್ಶನ ಹಾಗೂ ವೈವಿಧ್ಯಮಯ ನೃತ್ಯಗಳು ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದವು.
ಮಕ್ಕಳ ಕಲಾ ವೈಭವ: ಜಪಾನ್ನಲ್ಲಿ ನೆಲೆಸಿರುವ ಕನ್ನಡ ಕುಟುಂಬಗಳ ಮಕ್ಕಳು ಕನ್ನಡ ಸಂಸ್ಕೃತಿಯ ಮೇಲಿನ ತಮ್ಮ ಪ್ರೀತಿಯನ್ನು ನೃತ್ಯ, ಸಂಗೀತ ಹಾಗೂ ವೇಷಭೂಷಣಗಳ ಮೂಲಕ ಪ್ರದರ್ಶಿಸಿದರು. ಪುಟಾಣಿ ಪುಂಟರು ನೃತ್ಯ, ಜಾನಪದ ನೃತ್ಯಗಳು, ಕನ್ನಡ ಚಲನಚಿತ್ರ ಗೀತೆಗಳ ಸಮೂಹ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಕಾರ್ಯಕ್ರಮಕ್ಕೆ ಕಳೆ ತಂದವು. ವರ್ಷಿತಾ ನಾಗರಾಜ್ ಅವರ ನೇತೃತ್ವದ ಪುಟಾಣಿ ಪುಂಟರು, ಸಹನಾ ರಾವ್ ಅವರ ಸಂಯೋಜನೆಯ ಮಕ್ಕಳ ಜಾನಪದ ನೃತ್ಯ ಹಾಗೂ ಪಲ್ಲವಿ ವೇಣು ಗೋಪಾಲ್ ಅವರ ತಕಧಿಮಿ ಗರ್ಲ್ಸ್ ನೃತ್ಯಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.
ಜಪಾನ್ ನೆಲದಲ್ಲಿ ಯಕ್ಷಗಾನದ ವೈಭವ: ಟೋಕಿಯೋ ಕನ್ನಡ ಬಳಗದ ಶ್ರೀಕಲಾ ಬೊಳ್ಳಾಜೆ ಅವರ ನೇತೃತ್ವದಲ್ಲಿ ಪ್ರದರ್ಶನಗೊಂಡ ಕಂಸವಧೆ ಯಕ್ಷಗಾನ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಇಹಿತಾ ಅಲಗಂಬಟ್ ಹಾಗೂ ಇಶಾನ್ವಿ ಅಲಗಂಬಟ್ ಭಾಗವಹಿಸಿದ್ದರು. ಟೋಕಿಯೋ ಕನ್ನಡ ಬಳಗದ ಗಣೇಶ್ ಮೇಗೂರು ಅವರ ನಿರ್ದೇಶನದಲ್ಲಿ ಮೂಡಿಬಂದ ‘ಯು ಆರ್ ಡನ್ ಬ್ರೋ’ ಹಾಸ್ಯನಾಟಕವು ಸಾಂಸ್ಕೃತಿಕ ಕಾರ್ಯಕ್ರಮಗಳ ಅತ್ಯಂತ ಯಶಸ್ವಿ ಪ್ರದರ್ಶನಗಳಲ್ಲಿ ಒಂದಾಗಿ ಹೊರಹೊಮ್ಮಿತು. ಅಮೆರಿಕದ ಹ್ಯೂಸ್ಟನ್ನ ಸ್ಟುಡಿಯೋ ಮುದ್ರಾ ನೃತ್ಯಶಾಲೆಯ ಕಲಾ ನಿರ್ದೇಶಕಿ ಗುರು ರಶ್ಮಿ ಶಶಿ ಅವರ ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಸಿರಿನಾಡ ವೈಭವ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯವನ್ನು ಅನಾವರಣಗೊಳಿಸಿತು.
ಪಲ್ಲವಿ ಬೊಳ್ಳೂರು, ಪ್ರಮಿತಿ ಉಪಾಧ್ಯಾಯ, ರೂಪಾ ಕುಲಗೋಡ್, ಮಣಿ ವಿಶ್ವನಾಥ್, ಮೈಥಿಲಿ ಮೂರ್ತಿ ಹಾಗೂ ರಶ್ಮಿ ಶಶಿ ಭಾಗವಹಿಸಿದ ಈ ನೃತ್ಯ ರೂಪಕದಲ್ಲಿ ಕರ್ನಾಟಕದ ನೈಸರ್ಗಿಕ ಸೌಂದರ್ಯ, ಜಾನಪದ ಪರಂಪರೆ ಹಾಗೂ ಶಾಸ್ತ್ರೀಯ ನೃತ್ಯಗಳ ಸಮ್ಮಿಲನ ಕಂಡುಬಂದಿತು. ಕೃತಕ ಬುದ್ಧಿಮತ್ತೆಯ ಆಧುನಿಕ ಯುಗದಲ್ಲಿ ತಂತ್ರಜ್ಞಾನದಿಂದ ಉಂಟಾಗುವ ಹಾಸ್ಯಮಯ ಸನ್ನಿವೇಶ ಗಳನ್ನು ಚಿತ್ರಿಸಿದ ನಾವಿಕ ಕಲಾವಿದರಂI ಅವಾಂತರ! ಕನ್ನಡ ಹಾಸ್ಯನಾಟಕವೂ ಕಾರ್ಯಕ್ರಮಕ್ಕೆ ಮನರಂಜನೆಯ ಮೆರುಗು ನೀಡಿತು.
ಭರ್ಜರಿ ಭೋಜನದ ಸಂಭ್ರಮ: ನಾವಿಕೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲದೆ ಊಟೋಪಚಾರವೂ ವಿಶೇಷ ಮೆಚ್ಚುಗೆ ಗಳಿಸಿತು. ಟೋಕಿಯೋ ಕನ್ನಡ ಬಳಗದ ವತಿಯಿಂದ ಮಧ್ಯಾಹ್ನ ಬಗೆಬಗೆಯ ಖಾದ್ಯಗಳನ್ನೊಳಗೊಂಡ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವೈವಿಧ್ಯಮಯ ಭಾರತೀಯ ಖಾದ್ಯಗಳು, ರುಚಿಕರವಾದ ಊಟ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಭಾಗವಹಿಸಿದ ಕನ್ನಡಿಗರು ಸಂತಸ ವ್ಯಕ್ತಪಡಿಸಿದರು. ರಾತ್ರಿ ಊಟದ ಬಾಕ್ಸ್ಗಳನ್ನು ವಿತರಿಸಲಾಯಿತು.
ಫ್ಯಾಷನ್ ಪರೇಡ್ನಲ್ಲಿ ಕನ್ನಡ ಚಿತ್ರರಂಗದ ನೆನಪು ನಾವಿಕ ಕಲಾವಿದರು ಪ್ರಸ್ತುತಪಡಿಸಿದ ಫ್ಯಾಷನ್ ಪರೇಡ್ ಮತ್ತೊಂದು ವಿಶೇಷ ಆಕರ್ಷಣೆಯಾಗಿತ್ತು. ರಶ್ಮಿ ಅವರ ನೃತ್ಯ ಸಂಯೋಜನೆ ಯಲ್ಲಿ ಮೂಡಿ ಬಂದ ಈ ಪ್ರದರ್ಶನವು ಕನ್ನಡ ಚಿತ್ರರಂಗದ ವಿವಿಧ ಕಾಲಘಟ್ಟಗಳ ನೆನಪುಗಳನ್ನು ಮರುಕಳಿಸಿತು. ಹತ್ತು ಜೋಡಿಗಳು ಭಾಗವಹಿಸಿದ ಈ ಪ್ರದರ್ಶನವು ಕನ್ನಡ ಚಿತ್ರರಂಗದ ವೈವಿಧ್ಯ ಮಯ ಶೈಲಿಗಳನ್ನು ವೇದಿಕೆಯ ಮೇಲೆ ಅನಾವರಣಗೊಳಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ನಿನಾದ ಸ್ಮರಣ ಸಂಚಿಕೆ ಬಿಡುಗಡೆ
ನಾವಿಕೋತ್ಸವದ ಮುಖ್ಯ ವೇದಿಕೆಯಲ್ಲಿ ನಿನಾದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾ ಯಿತು. ಜಪಾನ್ನಲ್ಲಿ ನಡೆದ ನಾವಿಕೋತ್ಸವ ಹಾಗೂ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮದ ನೆನಪಿ ಗಾಗಿ ಹೊರತಂದ ಈ ಸಂಚಿಕೆ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು.
ನಾವಿಕೋತ್ಸವ ಯಶಸ್ವಿ: 9 ದಿನಗಳ ಜಪಾನ್ ಪ್ರವಾಸ
ಎಂಟನೇ ವಿಶ್ವ ಕನ್ನಡ ಸಮ್ಮೇಳನ ನಾವಿಕೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ, ಅಮೆರಿಕದಿಂದ ಆಗಮಿಸಿರುವ ಕನ್ನಡಿಗರ ಒಂಬತ್ತು ದಿನಗಳ ಜಪಾನ್ ಪ್ರವಾಸ ಆರಂಭ ವಾಗಿದೆ. ನ.29ರವರೆಗೆ ಆಯೋಜಿಸ ಲಾಗಿರುವ ಈ ಪ್ರವಾಸದಲ್ಲಿ ಟೋಕಿಯೋ, ಮೌಂಟ್ ಫುಜಿ, ಹಕೋನೆ, ಹಿರೋಷಿಮಾ, ಮಿಯಾಜಿಮಾ, ಕ್ಯೋಟೋ, ನಾರಾ ಹಾಗೂ ಒಸಾಕಾ ಮುಂತಾದ ಜಪಾನ್ನ ಪ್ರಮುಖ ಪ್ರವಾಸಿ ತಾಣಗಳಿಗೆ ಕನ್ನಡಿಗರು ಭೇಟಿ ನೀಡಲಿದ್ದಾರೆ. ಜಪಾನ್ನ ಪ್ರಸಿದ್ಧ ಬುಲೆಟ್ ರೈಲು ಪ್ರಯಾಣವೂ ಪ್ರವಾಸದ ವಿಶೇಷ ಆಕರ್ಷಣೆಯಾಗಿದೆ.
ಪ್ರಣಯರಾಜ ಶ್ರೀನಾಥ್ ದಂಪತಿಗೆ ಗೌರವ
ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಅವರ ಉಪಸ್ಥಿತಿ ನಾವಿಕೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಶ್ರೀನಾಥ್ ದಂಪತಿಯನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಅವರೊಂದಿಗೆ ನಡೆದ ಸಂಗೀತ ಸಂಭಾಷಣೆ ಹಾಗೂ ಸಂವಾದ ಕಾರ್ಯಕ್ರಮಗಳು ಕನ್ನಡ ಚಿತ್ರರಂಗದ ಸುವರ್ಣ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಕಲ್ಪಿಸಿದವು.