ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಯಾಪ್ಟನ್ ಸ್ಥಾನಕ್ಕೆ ಧನಂಜಯ ಪೈಪೋಟಿ: ಪ್ರಶಾಂತ ಆನೆ ಹೆಗಲಿಗೆ ಚಿನ್ನದ ಅಂಬಾರಿ?

ಅನುಭವ, ವಯಸ್ಸು ಹಾಗೂ ಸಾಮರ್ಥ್ಯ ಕ್ಯಾಪ್ಟನ್ ಆಗುವ ಆನೆಗೆ ಪರಿಗಣಿಸಲಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಮಹೇಂದ್ರ ಆನೆ ಹೊಂದಿದ್ದು, ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಆನೆಯನ್ನು ಮಹೇಂದ್ರ ಹೊರಲಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಧನಂಜಯ ಆನೆ ಹೆಸರು ಕೂಡ ಸ್ಪರ್ಧೆಯಲ್ಲಿದೆ.

ಕೆ.ಜೆ.ಲೋಕೇಶ್ ಬಾಬು ಮೈಸೂರು

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಗಜರಾಜ ಯಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ ಆರು ವರ್ಷಗಳಿಂದ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಯಶಸ್ವಿಯಾಗಿ ಹೊತ್ತು ಸಾಗಿದ್ದ ಅಭಿಮನ್ಯು ನಿವೃತ್ತಿಗೊಂಡಿ ರುವ ಹಿನ್ನೆಲೆ ಆ ಮಹತ್ತರ ಜವಾಬ್ದಾರಿ ಯಾವ ಆನೆ ತುಂಬಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ದಸರಾಜ ಗಜಪಡೆಗೆ ತಾಲೀಮು ನಡೆದಿದ್ದು, ಕ್ಯಾಪ್ಟನ್ ಆನೆಯನ್ನು ಹುಡುಕಾಡಲಾಗುತ್ತಿದೆ.

ಅನುಭವ, ವಯಸ್ಸು ಹಾಗೂ ಸಾಮರ್ಥ್ಯ ಕ್ಯಾಪ್ಟನ್ ಆಗುವ ಆನೆಗೆ ಪರಿಗಣಿಸಲಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಮಹೇಂದ್ರ ಆನೆ ಹೊಂದಿದ್ದು, ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಆನೆಯನ್ನು ಮಹೇಂದ್ರ ಹೊರಲಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಧನಂಜಯ ಆನೆ ಹೆಸರು ಕೂಡ ಸ್ಪರ್ಧೆಯಲ್ಲಿದೆ.

ಅನುಭವದ ಬಲ: ದಸರಾ ಜಂಬೂಸವಾರಿ ಯಲ್ಲಿ ಅಂಬಾರಿ ಹೊರುವುದು ಸಾಮಾನ್ಯ ಸಂಗತಿ ಯಲ್ಲ. ಲಕ್ಷಾಂತರ ಜನರ ಸಮ್ಮುಖದಲ್ಲಿ, ವಾದ್ಯಗಳ ಸದ್ದು, ಜನರ ಸಂಭ್ರಮ, ಪಟಾಕಿಗಳ ಅಬ್ಬರದ ನಡುವೆ ಶಾಂತಚಿತ್ತದಿಂದ ಹೆಜ್ಜೆ ಹಾಕುವುದು ಆನೆಯ ಪಾಲಿಗೆ ದೊಡ್ಡ ಸವಾಲು. ಇಂತಹ ಜವಾಬ್ದಾರಿಯನ್ನು ನಿರ್ವಹಿಸಲು ದೈಹಿಕ ಬಲದ ಜತೆಗೆ ಅಪಾರ ಅನುಭವ, ಶಿಸ್ತು ಹಾಗೂ ಸಂಯಮವೂ ಅಗತ್ಯ. ಈ ಎಲ್ಲ ಗುಣಗಳಿರುವ ಹಿರಿಯ ಗಜರಾಜ ಪ್ರಶಾಂತ ಇದೀಗ ಅಂಬಾರಿ ಹೊರುವ ಆನೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾನೆ.

ಇದನ್ನೂ ಓದಿ: Mysuru Dasara vs Mahisha Dasara: ಮಹಿಷಾಸುರ ರಾಕ್ಷಸನೋ, ಬೌದ್ಧ ದೊರೆಯೋ? ದಸರಾ ಸಮೀಪಿಸುತ್ತಿದ್ದಂತೆ ಮತ್ತೆ ಆರಂಭವಾಯ್ತು ಚರ್ಚೆ: ಏನಿದು ವಿವಾದ?

ದುಬಾರೆ ಆನೆ ಶಿಬಿರದ 54 ವರ್ಷದ ಪ್ರಶಾಂತ 18 ದಸರಾ ಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾನೆ. 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೇಕೊಪ್ಪದಲ್ಲಿ ಸೆರೆಸಿಕ್ಕ ಈ ಆನೆ ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲಿಯೂ ಪಾಲ್ಗೊಂಡಿದೆ. ಶಾಂತ ಸ್ವಭಾವ, ಶಿಸ್ತು ಹಾಗೂ ಮಾವುತರ ಸೂಚನೆಗಳಿಗೆ ಸ್ಪಂದಿಸುವ ಗುಣ ಪ್ರಶಾಂತನ ಪ್ರಮುಖ ಬಲಗಳಾಗಿವೆ.

ಅರಣ್ಯ ಇಲಾಖೆಯು ಅವಕಾಶ ನೀಡಿದರೆ, ಮುಂದಿನ ಕೆಲವು ವರ್ಷಗಳ ಕಾಲ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯವೂ ಈತನಿಗಿದೆ ಎಂಬ ನಿರೀಕ್ಷೆ ವ್ಯಕ್ತ ವಾಗಿದೆ. ಹೀಗಾಗಿ, ಅನುಭವವನ್ನೇ ಅಸವಾಗಿಸಿ ಕೊಂಡಿರುವ ಪ್ರಶಾಂತ ಈ ಬಾರಿಯ ಪ್ರಮುಖ ಆಕರ್ಷಣೆ ಯಾಗಿದ್ದಾನೆ.

ಧನಂಜಯನಿಂದ ಪ್ರಬಲ ಪೈಪೋಟಿ: ಪ್ರಶಾಂತನಿಗೆ ಪೈಪೋಟಿ ನೀಡುತ್ತಿರುವ ಮತ್ತೊಂದು ಪ್ರಮುಖ ಹೆಸರು ಧನಂಜಯ. ದುಬಾರೆ ಶಿಬಿರದ 45 ವರ್ಷದ ಈ ಗಜರಾಜ ಕಳೆದ ವರ್ಷ ನಿಶಾನೆ ಆನೆಯಾಗಿ ಗಮನ ಸೆಳೆದಿದ್ದಾನೆ. ಎಂಟು ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ ಧನಂಜಯ, ಶಕ್ತಿ ಮತ್ತು ಶಾಂತ ಸ್ವಭಾವದ ಸಮನ್ವಯ ಹೊಂದಿರುವ ಆನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ವಲಯದಲ್ಲಿ ಸೆರೆಸಿಕ್ಕ ಧನಂಜಯ ನನ್ನು ದುಬಾರೆ ಶಿಬಿರಕ್ಕೆ ಕರೆತಂದು ಪಳಗಿಸಲಾ ಗಿದೆ. ಹುಲಿ ಸೆರೆ ಹಾಗೂ ಕಾಡಾನೆ ಸೆರೆ ಕಾರ್ಯಾಚರಣೆಗಳಂತಹ ಸವಾಲಿನ ಸಂದರ್ಭಗಳಲ್ಲಿಯೂ ಭಾಗವಹಿಸಿರುವ ಅನುಭವ ಈತನಿಗಿದೆ. ಹೀಗಾಗಿ, ಅಂಬಾರಿ ಹೊರುವ ಜವಾಬ್ದಾರಿ ನೀಡುವ ವಿಚಾರದಲ್ಲಿ ಧನಂಜಯ ನನ್ನೂ ಗಂಭೀರವಾಗಿ ಪರಿಗಣಿಸ ಲಾಗುತ್ತಿದೆ. ಇವರಿಬ್ಬರ ಜತೆಗೆ ಸುಗ್ರೀವ, ಏಕಲವ್ಯ ಹಾಗೂ ಶ್ರೀಕಂಠ ಕೂಡ ಅಂಬಾರಿ ಹೊರುವ ರೇಸ್‌ನಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಮಹೇಂದ್ರನಿಗೆ ಹಿನ್ನಡೆ: ಅಂಬಾರಿ ಹೊರುವ ಆನೆಗಳ ಪೈಕಿ ಮಹೇಂದ್ರ ಕೂಡ ಪ್ರಮುಖ ಸ್ಪರ್ಧಿಯಾಗಿ ದ್ದನು. 42 ವರ್ಷದ ಈ ಆನೆಗೆ ಶ್ರೀರಂಗಪಟ್ಟಣದ ದಸರೆಯಲ್ಲಿ ಭಾಗವಹಿಸಿದ ಅನುಭವವಿದೆ. ಬಳ್ಳೆ ಶಿಬಿರದ ಮಹೇಂದ್ರ ಅರಣ್ಯ ಇಲಾಖೆಯ ಹಲವು ಅಪಾಯಕಾರಿ ಕಾರ್ಯಾ ಚರಣೆಗಳಲ್ಲಿ ತನ್ನ ಧೈರ್ಯದಿಂದ ಗಮನ ಸೆಳೆದಿದ್ದನು. ಆದರೆ, ಮರದ ಅಂಬಾರಿ ಹೊತ್ತು ತಾಲೀಮು ನಡೆಸುವ ವೇಳೆ ಮಹೇಂದ್ರ ಅರ್ಧ ದಾರಿಯಲ್ಲೇ ಆಯಾಸಗೊಂಡು ನಿಂತಿದ್ದಾನೆ. ಪರಿಣಾಮ, ಮರದ ಅಂಬಾರಿಯನ್ನು ಮಾರ್ಗಮಧ್ಯೆಯೇ ಇಳಿಸಿ, ಆನೆಯನ್ನು ಅರಮನೆ ಆವರಣಕ್ಕೆ ಕರೆತರಲಾಯಿತು. ಈ ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಾರಿ ಮಹೇಂದ್ರನನ್ನು ಅಂಬಾರಿ ಹೊರುವ ಸ್ಪರ್ಧೆಯಿಂದ ಕೈಬಿಟ್ಟಿದೆ. ಈ ಬೆಳವಣಿಗೆ ಅಂಬಾರಿ ಹೊರುವ ಆನೆಯ ಆಯ್ಕೆ ಎಷ್ಟು ಸೂಕ್ಷ್ಮವಾದ ಪ್ರಕ್ರಿಯೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ. ದೈಹಿಕ ಬಲವೊಂದೇ ಮಾನದಂಡವಾಗದೆ, ದೀರ್ಘ ಕಾಲ ಭಾರ ಹೊತ್ತು ಸಾಗುವ ಸಾಮರ್ಥ್ಯ ಮತ್ತು ನಿರಂತರ ತಾಲೀಮಿನಲ್ಲಿ ತೋರುವ ಸ್ಥಿರತೆಯೂ ನಿರ್ಣಾಯಕವಾಗಿವೆ.

ಅಂತಿಮ ಆಯ್ಕೆ ಯಾರಿಗೆ?

ಅಂಬಾರಿ ಹೊರುವ ಆನೆಯ ಆಯ್ಕೆ ದೈಹಿಕ ಸಾಮರ್ಥ್ಯ, ಅನುಭವ, ಸ್ವಭಾವ ಮತ್ತು ತಾಲೀಮಿ ನಲ್ಲಿನ ಪ್ರದರ್ಶನವನ್ನು ಸಮಗ್ರವಾಗಿ ಪರಿಗಣಿಸಿ ಕೈಗೊಳ್ಳ ಬೇಕಾದ ನಿರ್ಧಾರ. ಪ್ರಶಾಂತನ ಅಪಾರ ಅನುಭವ, ಧನಂಜಯನ ಸಾಮರ್ಥ್ಯ ಹಾಗೂ ಇತರ ಆನೆಗಳ ಪ್ರದರ್ಶನದ ನಡುವೆ ಅರಣ್ಯ ಇಲಾಖೆಯ ಅಂತಿಮ ತೀರ್ಮಾನದತ್ತ ಎಲ್ಲರ ಗಮನ ನೆಟ್ಟಿದೆ. ಒಂದೆಡೆ ಹಿರಿಯ ಗಜರಾಜ ಪ್ರಶಾಂತ ಅನುಭವದ ಬಲದಿಂದ ಮುಂಚೂಣಿಯಲ್ಲಿದ್ದರೆ, ಮತ್ತೊಂದೆಡೆ ಧನಂಜಯ ಸೇರಿದಂತೆ ಇತರ ಆನೆಗಳು ಅವಕಾಶಕ್ಕಾಗಿ ಸಿದ್ಧವಾಗಿವೆ. ಅಂತಿಮವಾಗಿ ಯಾರ ಹೆಗಲಿಗೆ ಚಿನ್ನದ ಅಂಬಾರಿಯ ಜವಾ ಬ್ದಾರಿ ವರ್ಗಾವಣೆಯಾಗಲಿದೆ ಎಂಬುದು ಸದ್ಯದ ಕುತೂಹಲ. ಅಭಿಮನ್ಯು ವಿನ ನಂತರ ಅಂಬಾರಿ ಹೊರುವ ಗೌರವ ಯಾರಿಗೆ? ಪ್ರಶಾಂತನ ಅನುಭವಕ್ಕೆ ಮನ್ನಣೆ ಸಿಗುತ್ತದೆಯೇ, ಧನಂಜಯನಿಗೆ ಅದೃಷ್ಟ ಒಲಿಯುತ್ತದೆಯೇ? ಮೈಸೂರು ದಸರೆಯ ಈ ಬಾರಿಯ ಜಂಬೂ ಸವಾರಿಗೆ ಮುನ್ನ ಉತ್ತರ ಸಿಗಬೇಕಿರುವ ಪ್ರಮುಖ ಪ್ರಶ್ನೆ.

image

ಆನೆಗಳ ನಡಿಗೆ, ತಾಲೀಮು ವೇಳೆ ಅವುಗಳ ವರ್ತನೆ ಹಾಗೂ ಮಾವುತನ ಕಮಾಂಡ್‌ಗಳನ್ನು ಆನೆಗಳು ಹೇಗೆ ಸ್ವೀಕರಿಸುತ್ತವೆ ಎಂಬುದನ್ನು ಗಮನಿಸಿ, ಅಂಬಾರಿ ಆನೆಯನ್ನು ಜಂಬೂಸವಾರಿಗೆ ಮೂರು ದಿನಗಳ ಮುನ್ನ ಅಂತಿಮಗೊಳಿಸಲಾಗುತ್ತದೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮ ವಾಗಿದ್ದು, ಯಶಸ್ವಿ ಜಂಬೂಸವಾರಿಗೆ ಅರಣ್ಯ ಇಲಾಖೆ ಹಾಗೂ ದಸರಾ ಗಜಪಡೆ ಸನ್ನದ್ಧವಾಗಿದೆ.

-ರವಿಶಂಕರ್, ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ