ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಸಂಪುಟ ರಚನೆಯ ನಿರಂತರ ಕಸರತ್ತು ನಡೆಸಿದ ನಂತರ ಪಕ್ಷದ ಹೈಕಮಾಂಡ್, ಖಾತೆಗಳ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ನಾಯಕರಿಗೆ ಸೂಚನೆಗಳು ನೀಡಿದೆ. ಇದನ್ನು ಆಧರಿಸಿ ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ತಾತ್ಕಾಲಿಕ ಪಟ್ಟಿಯನ್ನು ಒಂದು ಹಂತಕ್ಕೆ ಸಿದ್ಧಪಡಿಸಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಬೆಂಗಳೂರು ನಗರ ಅಭಿವೃದ್ಧಿಗೆ ರಾಮಲಿಂಗಾರೆಡ್ಡಿ, ಆರೋಗ ಖಾತೆಗೆ ಯು.ಟಿ.ಖಾದರ್ ಅನಿವಾರ್ಯ

ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಹೊಸ ಆಡಳಿತ ಶುರುವಾಗಿದ್ದು, 14 ನೂತನ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಹೊಣೆ ಮುಖ್ಯಮಂತ್ರಿ ಅವರ ಮೇಲಿದ್ದು ಗುರುವಾರ ಅಥವಾ ಶುಕ್ರವಾರದ ಒಳಗಾಗಿ ಖಾತೆಗಳನ್ನು ನೀಡುವ ಸಾಧ್ಯತೆ ಇದೆ.

ಸಂಪುಟ ರಚನೆಯ ನಿರಂತರ ಕಸರತ್ತು ನಡೆಸಿದ ನಂತರ ಪಕ್ಷದ ಹೈಕಮಾಂಡ್, ಖಾತೆಗಳ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ನಾಯಕರಿಗೆ ಸೂಚನೆಗಳು ನೀಡಿದೆ. ಇದನ್ನು ಆಧರಿಸಿ ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ತಾತ್ಕಾಲಿಕ ಪಟ್ಟಿಯನ್ನು ಒಂದು ಹಂತಕ್ಕೆ ಸಿದ್ಧಪಡಿಸಲಾಗಿದೆ.

ಇದೀಗ ಕೆಲವು ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಅಂತಿಮ ರೂಪ ನೀಡುವ ಪ್ರಕ್ರಿಯೆ ಗುರುವಾರದ ಒಳಗೆ ಪೂರ್ಣಗೊಳ್ಳಲಿದೆ. ಹೀಗಾಗಿ ಪ್ರಬಲ ಹಾಗೂ ಹೆಚ್ಚು ಅನುಕೂಲಕರ ಖಾತೆಗಳಿಗೆ ಸಚಿವರು ಲಾಬಿ ಆರಂಭಿಸಿದ್ದು, ಇದಕ್ಕಾಗಿ ಮತ್ತೆ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ನಾಯಕರ ಮೇಲೆ ಒತ್ತಡ ಮತ್ತು ಪ್ರಭಾವಗಳನ್ನು ತಂದಿದ್ದಾರೆ ಎನ್ನಲಾಗಿದೆ.

ಇದರ ಮಧ್ಯೆ ಕೆಲವು ಸಚಿವರಿಗೆ ನಿಗದಿತ ಖಾತೆಗಳನ್ನೇ ನೀಡಬೇಕಾದ ಅನಿವಾರ್ಯ ಪಕ್ಷಕ್ಕಿದ್ದು ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಅವರಿಗೆ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಅಂದರೆ ಹಿರಿಯ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಹಾಗೂ ಸ್ಪೀಕರ್ ಆಗಿದ್ದ ಯು.ಟಿ.ಖಾದರ್ ಅವರಿಗೆ ಆರೋಗ್ಯ ಖಾತೆಯನ್ನು ಮತ್ತು ಕೆ. ಎಚ್.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಅಥವಾ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ನೀಡಬೇಕಾದ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿ ಅವರು ಇದ್ದಾರೆ ಎಂದು ಹೇಳಲಾಗಿದ್ದು ಇದರ ಬಗ್ಗೆ ಪಕ್ಷದ ವರಿಷ್ಠರುಕೂಡ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹಾಗೆ ನೋಡಿದರೆ ಈಗಿನ ಬಹುತೇಕ ಎಲ್ಲಾ ಸಚಿವರು ಆಡಳಿತದಲ್ಲಿ ಉತ್ತಮ ಅನುಭವ ಇರುವವರೇ ಆಗಿದ್ದರೂ ಅವರ ಆಸಕ್ತಿ ಅನುಭವ ಆಧರಿಸಿ ಖಾತೆ ಹಂಚಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: Roopa Gururaj Column: ʼಲೆಫ್ಟಿನೆಂಟ್‌ ಕಮಾಂಡರ್‌ʼ ಯಶಸ್ವಿ ಸೋಲಂಕಿ ಇತಿಹಾಸ ಬರೆದ ಹೆಣ್ಣುಮಗಳು

ಯಾರಿಗೆ ಯಾವ ಖಾತೆ ಸೂಕ್ತ, ಏಕೆ?

ಈಗಾಗಲೇ ಸಿದ್ಧವಾಗಿರುವ ಸಂಭವನೀಯ ಖಾತೆ ಹಂಚಿಕೆ ಪಟ್ಟಿಯಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಎಂ.ಬಿ ಪಾಟೀಲ್ ಹಾಗೂ ಕೆ.ಜೆ.ಜಾರ್ಜ್ ಹಾಗೂ ಸ್ಪೀಕರ್ ಆಗಿದ್ದ ಯು.ಟಿ.ಖಾದರ್ ( ಆರೋಗ್ಯ ) ಅವರಿಗೆ ಈವರೆಗೂ ನಿರ್ವಹಣೆ ಮಾಡಿದ್ದ ಖಾತೆಗಳನ್ನೇ ನೀಡಲು ತೀರ್ಮಾನಿಸಲಾಗಿದೆ. ಆದರೆ ಸಚಿವರಾದ ಪ್ರಿಯಾಂಕ ಖರ್ಗೆಗೆ ಗೃಹ ಖಾತೆ, ಬೈರತಿ ಸುರೇಶ್ ಗೆ ಸಾರಿಗೆ, ಡಾ.ಯತೀಂದ್ರಗೆ ನಗರ ಅಭಿವೃದ್ಧಿ ಹಾಗೂ ಕೆ.ಎಚ್.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಅಥವಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಗಳನ್ನು ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗೆ ಇವರೇ ಏಕೆ ಬೇಕು ?

ಡಿಕೆ ಶಿವಕುಮಾರ್ ನೇತೃತ್ವದ ಹೊಸ ಆಡಳಿತದ ಮೊದಲ ಸವಾಲು ಜಿಬಿಎ ಚುನಾವಣೆ. ಆರು ವರ್ಷಗಳ ವಿಳಂಬ ಹಾಗೂ ಸುದೀರ್ಘ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಆಗಸ್ಟ್ 31ರ ಒಳಗೆ ಜಿಬಿಎ ಚುನಾವಣೆ ನಡೆಸುವಂತೆ ಸೂಚಿಸಿದೆ. ಈ ಮಧ್ಯೆ ಕಾಂಗ್ರೆಸ್ ನಡೆಸಿರುವ ಖಾಸಗಿ ಸಮೀಕ್ಷೆಯಲ್ಲಿ ಐದು ಪಾಲಿಕೆಗಳ ಪೈಕಿ ನಾಲ್ಕು ಬಿಜೆಪಿ ಪಾಲಾಗುತ್ತದೆ ಎನ್ನುವ ಅಂಶ ಪತ್ತೆಯಾಗಿದೆ. ಇಂತಹ ಸಂದರ್ಭದಲ್ಲಿ 5 ಪಾಲಿಕೆಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತಂದುಕೊಳ್ಳಲು ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರಾದಿಯಾಗಿ ದುಡಿದು ಸುದೀರ್ಘ ಅನುಭವ ಹೊಂದಿರುವ ಸಚಿವ ರಾಮಲಿಂಗಾರೆಡ್ಡಿ ಅವರೇ ಸೂಕ್ತ ಎನ್ನುವುದು ಕಾಂಗ್ರೆಸ್‌ನ ಹಿರಿಯರ ವಾದ. ಹೀಗಾಗಿ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಬೇಕು. ಇದರಿಂದ ಸದ್ಯ ಎದುರಾಗಿರುವ ರಸ್ತೆ ಗುಂಡಿ ಮತ್ತು ಕಸದ ಸಮಸ್ಯೆ ಬಗೆಹರಿಸಿ ಪಕ್ಷ ಗೆಲ್ಲಿಸಲು ನೆರವಾಗುತ್ತದೆ ಎಂದು ಪಕ್ಷದ ಹಿರಿಯರು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೃಷ್ಣ ಬೈರೇಗೌಡ ಅವರಿಗೆ ಗ್ರಾಮೀಣ ಅಭಿವೃದ್ಧಿಯಂತಹ ಖಾತೆ ನೀಡಿರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ ನೀಡುವುದು ಸೂಕ್ತ ಎಂದು ಪಕ್ಷದ ಹಿರಿಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.