ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿವೃತ್ತಿಯಂಚಿನ ಆಕಾಂಕ್ಷಿಗಳ ಹೊಸ ಆಟ !

ರಾಜ್ಯ ಕಾಂಗ್ರೆಸ್ ರಾಜಕಾರಣ ಸದ್ಯ ನಾಯಕತ್ವ ಬದಲಾವಣೆಯೋ ಅಥವಾ ಸಂಪುಟ ಪುನಾ ರಚನೆಯೋ ಇಲ್ಲವೇ ಸದ್ಯಕ್ಕೆ ಮುಂದೂಡಿಕೆಯೇ ಎನ್ನುವ ಚರ್ಚೆಗೆ ಉತ್ತರಿಸಲಾಗದ ಸ್ಥಿತಿ ಯಲ್ಲಿದೆ. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದೆಹಲಿ ಪ್ರವಾಸ ಕೈಗೊಳ್ಳ ಲಿದ್ದು, ಮುಖ್ಯಮಂತ್ರಿ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ತೆರೆಮರೆಗೆ ಸರಿಯುವ ಮುನ್ನ ಮಂತ್ರಿಗಿರಿ ಗಿಟ್ಟಿಸಲು 15 ಶಾಸಕರ ಲಾಬಿ

ನಿವೃತ್ತಿಯಂಚಿನ ಆಕಾಂಕ್ಷಿಗಳ ಹೊಸ ಆಟ!

ರಾಜ್ಯ ಕಾಂಗ್ರೆಸ್ ರಾಜಕಾರಣ ಸದ್ಯ ನಾಯಕತ್ವ ಬದಲಾವಣೆಯೋ ಅಥವಾ ಸಂಪುಟ ಪುನಾರಚನೆಯೋ ಇಲ್ಲವೇ ಸದ್ಯಕ್ಕೆ ಮುಂದೂಡಿಕೆಯೇ ಎನ್ನುವ ಚರ್ಚೆಗೆ ಉತ್ತರಿಸಲಾಗದ ಸ್ಥಿತಿಯಲ್ಲಿದೆ. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಮುಖ್ಯಮಂತ್ರಿ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿ ಯಲ್ಲಿ ಠಿಕಾಣಿ ಹೂಡಿದ್ದಾರೆ.

ಇಂಥ ಬದಲಾವಣೆಗಳನ್ನು ನಿರೀಕ್ಷಿಸುವ ಈ ಘಟ್ಟದಲ್ಲಿ ಸಹಜವಾಗಿಯೇ ಸಚಿವಾಕಾಂಕ್ಷಿ ಗಳ ಚಟುವಟಿಕೆಗಳು ತೀವ್ರಗೊಂಡಿದೆ. ಆದರೆ ಮುಖ್ಯವಾಗಿ ಬಹುತೇಕ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ಅನೇಕ ಹಿರಿಯ ಶಾಸಕರು ಕಟ್ಟಕಡೆಯ ಆಟ ಶುರು ಮಾಡಿದ್ದಾರೆ. ಅಂದರೆ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎನ್ನು ಚಿಂತನೆ ಯಲ್ಲಿರುವ ಸುಮಾರು 15 ಹಿರಿಯ ಶಾಸಕರ ಆಸೆ, ಅಸಮಾಧಾನಗಳು ಪಕ್ಷದ ಹೈ ಕಮಾಂಡ್ ಕದ ತಟ್ಟುತ್ತಿವೆ.

ಸುಮಾರು ೯ ಬಾರಿ ವಿಧಾನಸಭೆಯಲ್ಲಿ ಮಿಂಚಿರುವ ಆರ್.ವಿ.ದೇಶಪಾಂಡೆ ಸೇರಿದಂತೆ ೪ ಬಾರಿ ಶಾಸಕರಾಗಿರುವ ಬಹುತೇಕ ಹಿರಿಯ ಶಾಸಕರು ಈ ಬಾರಿ ಹೇಗಾದರೂ ಮಂತ್ರಿ ಯಾಗಲೇಬೇಕೆನ್ನವ ಹಂಬಲದೊಂದಿಗೆ ತೀವ್ರ ಲಾಬಿ ನಡೆಸಿದ್ದಾರೆ.

ಇದನ್ನೂ ಓದಿ: Narayana Yaaji Column: ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು

ಇವರ ಪೈಕಿ ಕೆಲವರು ಕಳೆದ ಒಂದು ತಿಂಗಳಿನಿಂದಲೂ ದೆಹಲಿಯಲ್ಲಿ ಕುಳಿತು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಇವರಲ್ಲಿ ಅನೇಕರು ರಾಹುಲ್ ಗಾಂಧಿ ಭೇಟಿ ಸಾಧ್ಯ ವಾಗದಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತನ್ನ ರಾಜಕೀಯ ಕಟ್ಟಕಡೆಯ ಆಸೆಗಳನ್ನು ಮಂಡಿಸಿ ಬಂದಿದ್ದಾರೆ. ಹೀಗಾಗಿ ಸಾರ್ವತ್ರಿಕ ಚುನಾವಣೆಯ ನಿವೃತ್ತಿ ಅಂಚಿನಲ್ಲಿರುವ ಸುಮಾರು 15 ಮಂದಿ ಆಕಾಂಕ್ಷಿಗಳಲ್ಲಿ ಕೆಲವ ರನ್ನು ಈ ಬಾರಿ ಮಂತ್ರಿ ಮಾಡಲೇಬೇಕಾದ ಅನಿವಾರ್ಯವಿದೆ.

ಹಾಗೆಯೇ ನಿವೃತ್ತಿ ಅಂಚಿನ ಆಕಾಂಕ್ಷಿಗಳಿಗೂ ಕೂಡ ಇದು ರಾಜಕೀಯ ಬದುಕುಳಿವಿನ ಪ್ರಶ್ನೆಯಾಗಿದೆ. ಏಕೆಂದರೆ ನಿವೃತ್ತಿ ಅಂಚಿನ ಆಕಾಂಕ್ಷಿಗಳಲ್ಲಿ ಬಹುತೇಕ ಮಂದಿ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಕೆಲವರು ಸ್ಪರ್ಧಿಸದಿರುವ ಗಂಭೀರ ಚಿಂತನೆ ಯಲ್ಲಿದ್ದಾರೆ. ಅಂದರೆ ಇವರು ಬಹುತೇಕ ತಮ್ಮ ಸ್ಥಾನಗಳಿಗೆ ತಮ್ಮ ಮಕ್ಕಳನ್ನು ಹಾಗೂ ಅವರಿಗೆ ಕ್ಷೇತ್ರವನ್ನೂ ಸಜ್ಜುಗೊಳಿಸಿಕೊಂಡಿದ್ದಾರೆ.

ಹೀಗಾಗಿ ಅವರು ಈ ಬಾರಿ ಮಂತ್ರಿ ಆಗಿಯೇ ತೀರಬೇಕು. ನಂತರ ಮಗನ ಸ್ಪರ್ಧೆಗೆ ಪಕ್ಷದ ಟಿಕೆಟ್ ಕೇಳಬೇಕೆನ್ನುವ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ನಾಯಕತ್ವ ಮತ್ತು ಸಂಪುಟ ಪುನಾರಚನೆ ಸಂಕಷ್ಟದಲ್ಲಿರುವ ಪಕ್ಷದ ಹೈಕಮಾಂಡ್ ಗೆ ಈಗ ನಿವೃತ್ತಿ ಅಂಚಿನ ಆಕಾಂಕ್ಷಿ ಗಳದ್ದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಚಿವರಿಗೂ ಅನಿವಾರ್ಯದ ಬಿಸಿ !

ನಿವೃತ್ತಿ ಅಂಚಿನ ವಿಚಾರದ ಬಿಸಿ ಸದ್ಯ ಬರೀ ಹಿರಿಯ ಶಾಸಕರಿಗೆ ಮಾತ್ರವಲ್ಲದೆ ಕೆಲವು ಹಾಲಿ ಸಚಿವರಿಗೂ ತಟ್ಟುತ್ತಿದೆ. ಅಂದರೆ ಹಾಲಿ ಸಂಪುಟದಲ್ಲಿರುವ ಕೆಲವು ಮಂತ್ರಿ ಗಳಲ್ಲೂ ಕೆಲವರು ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಅನುಮಾನಿಸುತ್ತಿದ್ದಾರೆ ಎನ್ನ ಲಾಗಿದೆ. ಇವರು ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೋ ಅಥವಾ ಕ್ಷೇತ್ರ ಬದಲಿಸ ಬೇಕೋ ಎನ್ನುವ ಚಿಂತನೆಯಲ್ಲಿದ್ದು ಅಲ್ಲಿಯವರೆಗೂ ತಾವು ಪೂರ್ಣಾವಧಿ ಮಂತ್ರಿಯಾಗಿ ಮುಂದುವರಿಯಲೇಬೇಕಾದ ಅಗತ್ಯಗಳನ್ನು ಒತ್ತಿ ಹೇಳುತ್ತಿದ್ದಾರೆ.

ಅವರಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದ ಕೆ.ವೆಂಕಟೇಶ್, ಗದಗ ಜಿಲ್ಲೆಯ ಎಚ್.ಕೆ.ಪಾಟೀಲ್ ಹಾಗೂ ಬೆಂಗಳೂರು ಗ್ರಾಮಾಂತರದ ಕೆ.ಎಚ್.ಮುನಿಯಪ್ಪ ಹಾಗೂ ಯಾದಗಿರಿ ಜಿಲ್ಲೆಯ ಶರಣ ಬಸಪ್ಪ ದರ್ಶನಾಪುರ, ದಾವಣಗೆರೆಯ ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಮಂತ್ರಿಗಳಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇವರೇಕೆ ಸಚಿವರಾಗಲೇಬೇಕು ?

ರಾಜ್ಯದ ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಜಿಲ್ಲೆ ಗಳಲ್ಲೂ ತಲಾ ಒಬ್ಬರಂತೆ ನಿವೃತ್ತಿ ಅಂಚಿನ ಅಥವಾ ಮುಂದೆ ಸ್ಪರ್ಧಿಸುವುದೋ, ಬೇಡವೋ ಎಂದು ಅನುಮಾನದಿಂದಿರುವ ಸಚಿವಾಕಾಂಕ್ಷಿಗಳು ಸಿಗುತ್ತಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಸಮಕಾಲೀನ ಹಾಗೂ ಆಗಾಗ ಅಸಮಾ ಧಾನದ ಬಾಂಬ್ ಸಿಡಿಸುವ ಅಳಂದ ಕ್ಷೇತ್ರದ ಬಿ.ಆರ್.ಪಾಟೀಲ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಬಿ.ಜಿ.ಗೋವಿಂದಪ್ಪ, ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ, ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಬಸವರಾಜ ನೀಲಪ್ಪ ಶಿವಣ್ಣ ನವರ್, ಇಡೀ ವಿಧಾನಸಭೆಯಲ್ಲಿ ಅಂತ್ಯ ಹಿರಿಯ ಹಾಗೂ ಹೆಚ್ಚು ಬಾರಿ ಆಯ್ಕೆಯಾದವ ರೆನಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದ ಆರ್.ವಿ.ದೇಶಪಾಂಡೆ, ಚಾಮರಾಜನಗರ ಜಿಲ್ಲೆಯ ಅದೇ ಕ್ಷೇತ್ರದ ಪುಟ್ಟರಂಗಶೆಟ್ಟಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಬಸವರಾಜ ರಾಯರೆಡ್ಡಿ, ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದ ಕೆ.ಷಡಕ್ಷರಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ.ಗೋಪಾಲ ಕೃಷ್ಣ ಹಾಗೂ ಶಿವಮೊಗ್ಗ ಜಿಲ್ಲೆಯ ಬಿ.ಕೆ.ಸಂಗಮೇಶ್ ಸೇರಿದಂತೆ ಕೆಲವರು ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮರು ಚಿಂತನೆ ಮಾಡುತ್ತಿದ್ದು, ಇವರು ಮಂತ್ರಿಯಾಗಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಇವರ ಜತೆ ಕೆಲವು ವಿಧಾನ ಪರಿಷತ್ ಸದಸ್ಯರಿಗೂ ಈ ಬಾರಿ ಮಂತ್ರಿಯಾಗುವುದು ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಅದರಲ್ಲೂ ಬೆಳಗಾವಿಯ ಪ್ರಕಾಶ್ ಹುಕ್ಕೇರಿ ಹಾಗೂ ಬೆಂಗಳೂ ರಿನ ಹರಿಪ್ರಸಾದ್ ಅವರೂ ಈ ಬಾರಿ ಮಂತ್ರಿಯಾಗದಿದ್ದರೆ ಮತ್ತೆ ಚುನಾವಣೆ ಸ್ಪರ್ಧಿಯೂ ಕಷ್ಟ ಹಾಗೂ ಪರಿಷತ್‌ಗೆ ಪುನರಾಯ್ಕೆಯೂ ಕಷ್ಟ ಎನ್ನುವ ಸ್ಥಿತಿ ಬರಬಹುದು ಎಂದು ಕಾಂಗ್ರೆಸ್ ನ ಹಿರಿಯ ಮುಖಂಡರು ಹೇಳಿದ್ದಾರೆ.