ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರಂಜಿಕೆರೆಗೆ ಪ್ರವಾಸೋದ್ಯಮದ ಹೊಸ ಸ್ಪರ್ಶ

ಮೈಸೂರು ಮೃಗಾಲಯದ ವ್ಯಾಪ್ತಿಗೆ ಒಳಪಡುವ ಕಾರಂಜಿಕೆರೆಯಲ್ಲಿ ಇಕೋ ಟವರ್, ಗಾಜಿನ ಸೇತುವೆಯ ಮಾದರಿಯ ಕೆನೋಪಿ ವಾಕ್, ಲೇಕ್ ವಾಕ್, ಜಿಪ್‌ಲೈನ್, ರೋಪ್ ಬ್ರಿಡ್ಜ್ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳು ತಲೆ ಎತ್ತಲಿವೆ. ಈಗಾಗಲೇ ಕೆಲವು ಕಾಮಗಾರಿಗಳು ವೇಗ ಪಡೆದು ಕೊಂಡಿದ್ದು, ಮುಂದಿನ ದಸರಾ ಮಹೋತ್ಸವದ ವೇಳೆಗೆ ಯೋಜನೆಯನ್ನು ಪೂರ್ಣ ಗೊಳಿಸಿ ಪ್ರವಾಸಿಗರಿಗೆ ಸಮರ್ಪಿಸುವ ಗುರಿ ಹೊಂದಲಾಗಿದೆ.

ಕೆ.ಜೆ. ಲೋಕೇಶ್ ಬಾಬು

18 ಕೋಟಿ ರು.ವೆಚ್ಚದಲ್ಲಿ ಸಾಹಸ, ಮನರಂಜನೆ, ಪ್ರಕೃತಿ ಸೌಂದರ್ಯದ ಸಂಗಮ

ಮುಂದಿನ ದಸರಾ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಸಿದ್ಧ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ನೀಡಲು ಕಾರಂಜಿಕೆರೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಪ್ರಕೃತಿಯ ಮಡಿಲಲ್ಲಿ ಪ್ರವಾಸಿಗರಿಗೆ ಸಾಹಸ, ಮನರಂಜನೆ ಹಾಗೂ ರಮಣೀಯ ಪರಿಸರದ ಸೊಬಗನ್ನು ಒಂದೇ ಕಡೆ ಆಸ್ವಾದಿಸುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಸ್ವದೇಶಿ ದರ್ಶನ್ 2.0 ಯೋಜನೆಯಡಿ ಬರೋಬ್ಬರಿ 18 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿವೆ.

ಮೈಸೂರು ಮೃಗಾಲಯದ ವ್ಯಾಪ್ತಿಗೆ ಒಳಪಡುವ ಕಾರಂಜಿಕೆರೆಯಲ್ಲಿ ಇಕೋ ಟವರ್, ಗಾಜಿನ ಸೇತುವೆಯ ಮಾದರಿಯ ಕೆನೋಪಿ ವಾಕ್, ಲೇಕ್ ವಾಕ್, ಜಿಪ್‌ಲೈನ್, ರೋಪ್ ಬ್ರಿಡ್ಜ್ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳು ತಲೆ ಎತ್ತಲಿವೆ. ಈಗಾಗಲೇ ಕೆಲವು ಕಾಮಗಾರಿಗಳು ವೇಗ ಪಡೆದು ಕೊಂಡಿದ್ದು, ಮುಂದಿನ ದಸರಾ ಮಹೋತ್ಸವದ ವೇಳೆಗೆ ಯೋಜನೆಯನ್ನು ಪೂರ್ಣ ಗೊಳಿಸಿ ಪ್ರವಾಸಿಗರಿಗೆ ಸಮರ್ಪಿಸುವ ಗುರಿ ಹೊಂದಲಾಗಿದೆ.

ಆಕಾಶದೆತ್ತರದಿಂದ ಸೌಂದರ್ಯ ವೀಕ್ಷಣೆ: ಕಾರಂಜಿಕೆರೆಯ ಪ್ರಮುಖ ಆಕರ್ಷಣೆಯಾಗಿ 21 ಮೀಟರ್ ಎತ್ತರದ ಏಳು ಅಂತಸ್ತಿನ ಇಕೋ ಟವರ್ ನಿರ್ಮಾಣವಾಗುತ್ತಿದೆ. ಥಂಡಿ ಸಡಕ್ ರಸ್ತೆಗೆ ಹೊಂದಿಕೊಂಡಂತೆ ಈ ಟವರ್ ಕಾಮಗಾರಿ ನಡೆಯುತ್ತಿದ್ದು, 200 ಎಂಎಂ ಸಾಮರ್ಥ್ಯದ ಕಬ್ಬಿಣದ ಪೈಪ್‌ಗಳನ್ನು ಬಳಸಿ ಬಲಿಷ್ಠ ರಚನೆ ನಿರ್ಮಿಸಲಾಗುತ್ತಿದೆ. ಈ ಹಿಂದೆ 24 ಮೀಟರ್ ಅಗಲದ ಅಡಿಪಾಯ ನಿರ್ಮಿಸಲಾಗಿದ್ದು, ಅದರ ಮೇಲೆ 17.25 ಮೀಟರ್ ಅಗಲದ ಟವರ್ ರೂಪುಗೊಳ್ಳು ತ್ತಿದೆ.

ಇದನ್ನೂ ಓದಿ: PM Narendra Modi in Mysuru: ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

ಟವರ್ ಮೇಲ್ಭಾಗಕ್ಕೆ ತಲುಪಲು ವೃತ್ತಾಕಾರದ ರ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿಂದ ಪ್ರವಾಸಿಗರು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಅಷ್ಟೇ ಅಲ್ಲ, ಪಕ್ಷಿ ವೀಕ್ಷಣೆಗೂ ಇದು ಅತ್ಯುತ್ತಮ ತಾಣವಾಗಲಿದೆ. ದಕ್ಷಿಣ ಕರ್ನಾಟಕದಲ್ಲೇ ಮೊದಲ ಇಂತಹ ಟವರ್ ಎಂಬ ಹೆಗ್ಗಳಿಕೆಯೂ ಇದಕ್ಕೆ ದೊರೆಯಲಿದೆ.

ರೋಚಕ ಅನುಭವ: ಕಾರಂಜಿಕೆರೆಯ ಪ್ರವಾಸಿ ಆಕರ್ಷಣೆಗೆ ಮತ್ತೊಂದು ವಿಶೇಷ ಸೇರ್ಪಡೆ ಲೇಕ್ ವಾಕ್ ಮತ್ತು ಕೆನೋಪಿ ವಾಕ್. ಇಕೋ ಟವರ್‌ನಿಂದ ಆರಂಭವಾಗುವ ಈ ಪಥ ಸುಮಾರು 350 ಮೀಟರ್ ಉದ್ದವಿರಲಿದೆ. ಲೇಕ್ ವಾಕ್‌ಗಾಗಿ ಸೇತುವೆಯ ಮಾದರಿಯ ವ್ಯವಸ್ಥೆ ನಿರ್ಮಿಸಲಾಗು ತ್ತಿದ್ದರೆ, ಅದರ ಮೇಲ್ಭಾಗದಲ್ಲಿ ಗಾಜಿನ ಸೇತುವೆಯ ಮಾದರಿಯಲ್ಲಿ ಕೆನೋಪಿ ವಾಕ್ ರೂಪಿಸ ಲಾಗುತ್ತಿದೆ. ಇದರಿಂದ ನೀರಿನ ಮೇಲೆಯೇ ನಡೆಯುತ್ತಿರುವ ಅನುಭವ ಪ್ರವಾಸಿಗರಿಗೆ ಸಿಗಲಿದೆ. ಕೆರೆಯ ಸೌಂದರ್ಯ, ಹಸಿರು ಪರಿಸರ ಹಾಗೂ ಜಲಚರ-ಪಕ್ಷಿಗಳ ಚಟುವಟಿಕೆ ವೀಕ್ಷಿಸಲು ಅವಕಾಶ ದೊರೆಯಲಿದೆ.

ಕೆರೆ ಮೇಲಿಂದ ಹಾರುವ ಸಾಹಸ: ಸಾಹಸಕ್ರೀಡೆಗಳನ್ನು ಇಷ್ಟಪಡುವ ಪ್ರವಾಸಿಗರಿಗಾಗಿ ಜಿಪ್‌ ಲೈನ್ ವ್ಯವಸ್ಥೆಯೂ ಸಿದ್ಧವಾಗುತ್ತಿದೆ. ಕೆರೆಯ ದಡದಲ್ಲಿರುವ ಚಿಟ್ಟೆ ಪಾರ್ಕ್ ಸಮೀಪದಿಂದ ಬೋಟಿಂಗ್ ಪಾಯಿಂಟ್‌ವರೆಗೆ ಸುಮಾರು 380ರಿಂದ 450 ಮೀಟರ್ ಉದ್ದದ ಜಿಪ್‌ಲೈನ್ ನಿರ್ಮಿಸು ವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕೆರೆಯ ಎರಡೂ ಬದಿಗಳಲ್ಲಿ ಫಿಲ್ಲರ್ ನಿರ್ಮಾಣ ಮಾಡಲಾಗಿದೆ. ಜಿಪ್‌ಲೈನ್ ಮೂಲಕ ಕೆರೆಯ ಮೇಲಿನಿಂದ ಸಾಗುವಾಗ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯುವ ಜೊತೆಗೆ ಸಾಹಸದ ರೋಚಕ ಅನುಭವವನ್ನೂ ಪಡೆಯಬಹುದು.

ಮಕ್ಕಳಿಗೆ ರೋಪ್ ಬ್ರಿಡ್ಜ್ ಮೋಜು: ಕುಟುಂಬ ಸಮೇತ ಕಾರಂಜಿಕೆರೆಗೆ ಭೇಟಿ ನೀಡುವ ಪ್ರವಾಸಿ ಗರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು 30 ಮೀಟರ್ ಉದ್ದದ ರೋಪ್ ಬ್ರಿಡ್ಜ್ ನಿರ್ಮಿಸಲಾ ಗುತ್ತಿದೆ. ಹಗ್ಗ ಮತ್ತು ರೋಪ್‌ಗಳಿಂದ ರೂಪುಗೊಳ್ಳುವ ಈ ತೂಗು ಸೇತುವೆ ಮಕ್ಕಳಿಗೆ ಹೊಸ ಅನುಭವ ನೀಡಲಿದೆ. ಆಟ, ಸಾಹಸ ಹಾಗೂ ಮನರಂಜನೆಯ ಮೂಲಕ ಮಕ್ಕಳನ್ನೂ ಸೆಳೆಯುವ ಪ್ರಯತ್ನ ಇದಾಗಿದೆ.

ಮೂರು ಕಿ.ಮೀ. ವಾಕಿಂಗ್ ಪಥ ಅಭಿವೃದ್ಧಿ: ಪ್ರಕೃತಿಯ ನಡುವೆ ಬೆಳಗಿನ ಮತ್ತು ಸಂಜೆಯ ನಡಿಗೆಯನ್ನು ಇಷ್ಟಪಡುವವರಿಗೂ ಅನುಕೂಲ ಕಲ್ಪಿಸಲಾಗುತ್ತಿದೆ. ಕಾರಂಜಿಕೆರೆಯ ಮುಖ್ಯ ದ್ವಾರದ ಟಿಕೆಟ್ ಕೌಂಟರ್‌ನಿಂದ ಇಕೋ ಟವರ್‌ವರೆಗೆ ಸುಮಾರು ಮೂರು ಕಿ.ಮೀ. ಉದ್ದದ ವಾಕಿಂಗ್ ಪಥವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ಇರುವ ವಾಕಿಂಗ್ ಪಥವನ್ನು ಮತ್ತಷ್ಟು ಸುಧಾರಿಸಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ತಿಂಡಿ, ನೀರಿಗೂ ಪರದಾಟವಿಲ್ಲ: ಕಾರಂಜಿಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಇದುವರೆಗೆ ತಿಂಡಿ-ತಿನಿಸು ಹಾಗೂ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿ ಲಭ್ಯವಿರಲಿಲ್ಲ. ಸುಮಾರು ಮೂರು ಕಿ.ಮೀ. ವ್ಯಾಪ್ತಿಯಲ್ಲಿ ನಡೆದು ಸುತ್ತಾಡುವ ಪ್ರವಾಸಿಗರು ಆಯಾಸಗೊಂಡಾಗ ನೀರು ಅಥವಾ ಲಘು ಉಪಾಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ಎರಡು ಕಂಟೇನರ್ ಗಳನ್ನು ಒಳಗೊಂಡ ಫುಡ್ ಕಿಯಾಸ್ಕ್ ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ ನೀರು, ಪಾನೀಯ, ಚಾಟ್ಸ್ ಹಾಗೂ ಲಘು ಉಪಾಹಾರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ

ಕೆರೆ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳಲು ಎಚ್ಚರಿಕೆ ವಹಿಸಲಾಗಿದೆ. ಪರಿಸರ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಸಾಧಿಸುವುದು ಯೋಜನೆಯ ಪ್ರಮುಖ ಆಶಯವಾಗಿದೆ.

ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ಮೈಸೂರು ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಸಾಂಸ್ಕೃತಿಕ ನಗರಿಗೆ ಕಾರಂಜಿಕೆರೆ ಮತ್ತೊಂದು ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ. ಪ್ರಕೃತಿ ವೀಕ್ಷಣೆ, ಪಕ್ಷಿ ವೀಕ್ಷಣೆ, ಸಾಹಸ ಕ್ರೀಡೆ, ನಡಿಗೆ, ಮಕ್ಕಳ ಮನರಂಜನೆ ಹಾಗೂ ಆಹಾರ ಸೌಲಭ್ಯ ಹೀಗೆ ಎಲ್ಲವೂ ಒಂದೇ ಆವರಣದಲ್ಲಿ ಲಭ್ಯವಾಗಲಿವೆ. ಒಟ್ಟಾರೆ, 18 ಕೋಟಿ ರು. ವೆಚ್ಚದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ಕಾರಂಜಿಕೆರೆ ಕೇವಲ ವಾಯು ವಿಹಾರ ತಾಣವಾಗಿ ಉಳಿಯದೆ, ಪ್ರಕೃತಿ ಮತ್ತು ಸಾಹಸ ಪ್ರವಾಸೋದ್ಯಮದ ವಿಶಿಷ್ಟ ಕೇಂದ್ರವಾಗಿ ರೂಪುಗೊಳ್ಳಲಿದೆ. ಎಲ್ಲ ಕಾಮಗಾರಿಗಳು ನಿಗದಿಯಂತೆ ಪೂರ್ಣಗೊಂಡು 2027ರ ದಸರಾ ವೇಳೆಗೆ ಪ್ರವಾಸಿಗರಿಗೆ ಮುಕ್ತವಾದರೆ ಮೈಸೂರಿನ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ.