ವಿನುತಾ ಹೆಗಡೆ ಶಿರಸಿ
ಸಾವಿನ ರಸ್ತೆ ಆಗುತ್ತಿರುವ ಕರಾವಳಿ ಕಾಶಿ
ಉತ್ತರ ಕನ್ನಡದ ರಸ್ತೆ ಅಪಘಾತಗಳಿಗೆ ಮುಕ್ತಿ ಯಾವಾಗ?
ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಬೇಕೇ ಹೊರತು ಸ್ಮಶಾನಕ್ಕೆ ಹೋಗುವ ಹಾದಿ ಯಾಗಬಾರದು. ಸರ್ಕಾರದ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಜಾಗೃತಿ ಈ ಎರಡೂ ಸೇರಿದಾಗ ಮಾತ್ರ ಉತ್ತರ ಕನ್ನಡದ ರಸ್ತೆಗಳಲ್ಲಿ ರಕ್ತಪಾತವನ್ನು ತಡೆಯಲು ಸಾಧ್ಯ.
ನೆನಪಿಡಿ, ಮನೆಯಲ್ಲಿ ನಿಮ್ಮ ಹಾದಿ ಕಾಯುವವರಿಗಾಗಿ ನಿಮ್ಮ ಸುರಕ್ಷಿತ ಪಯಣ ಅನಿವಾರ್ಯ ಎಂಬುದನ್ನು ನಾವೂ ಅರಿಯಬೇಕು. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಉತ್ತರ ಕನ್ನಡ ಜಿಲ್ಲೆ ಇಂದು ರಕ್ತಸಿಕ್ತ ರಸ್ತೆಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸರಣಿ ರಸ್ತೆ ಅಪಘಾತಗಳು ಮತ್ತು ಹೆಚ್ಚುತ್ತಿರುವ ಸಾವಿನ ಸಂಖ್ಯೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅಂಕಿ-ಅಂಶಗಳನ್ನು ಗಮನಿಸಿದರೆ, ದಿನವೊಂದೂ ಸಾವು ಸಂಭವಿಸದ ದಿನವೇ ಇಲ್ಲ ಎನ್ನುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಅಪಘಾತಗಳಿಗೆ ಪ್ರಮುಖ ಕಾರಣಗಳೇನು?: ಜಿಲ್ಲೆಯ ರಸ್ತೆ ಅಪಘಾತಗಳನ್ನು ವಿಶ್ಲೇಷಿಸಿ ದರೆ ಎರಡು ಮುಖ್ಯ ಅಂಶಗಳು ಎದ್ದು ಕಾಣುತ್ತವೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹದಗೆಟ್ಟ ರಸ್ತೆಗಳು, ಅರ್ಧಕ್ಕೆ ನಿಂತ ಸೇತುವೆಗಳು, ಸೂಚನಾ ಫಲಕಗಳ ಕೊರತೆ ಮತ್ತು ಅವೈಜ್ಞಾನಿಕ ತಿರುವುಗಳು ವಾಹನ ಸವಾರರಿಗೆ ಮೃತ್ಯುಪಾಶವಾಗಿವೆ.
ಇದನ್ನೂ ಓದಿ: Fire Accident: ಬೆಂಗಳೂರಿನ ಮನೆಯೊಳಗೆ ಅಗ್ನಿ ದುರಂತ, ಮಹಿಳೆ ದುರ್ಮರಣ, ಮೂವರ ರಕ್ಷಣೆ
ಕೇವಲ ರಸ್ತೆಯನ್ನು ದೂಷಿಸಿದರೆ ಸಾಲದು; ಅತಿ ವೇಗ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಮೊಬೈಲ್ ಬಳಕೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಅಪಘಾತಗಳಿಗೆ ಶೇ.50ರಷ್ಟು ಕಾರಣವಾಗುತ್ತಿವೆ.
ತಡೆಗಟ್ಟಲು ಅಗತ್ಯವಿರುವ ಕ್ರಮಗಳು: ಬ್ಲ್ಯಾಕ್ ಸ್ಪಾಟ್ʼಗಳ ಗುರುತಿಸುವಿಕೆ: ಅಪಘಾತ ಗಳು ಪದೇ ಪದೇ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ತಕ್ಷಣವೇ ವೈಜ್ಞಾನಿಕ ಸುಧಾರಣೆಗಳನ್ನು ಮಾಡಬೇಕು. ಅಪಾಯಕಾರಿ ತಿರುವುಗಳು, ಕಿರಿದಾದ ರಸ್ತೆಗಳು ಮತ್ತು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸ್ಪಷ್ಟವಾಗಿ ಕಾಣುವಂತಹ "ರೇಡಿಯಂ" ಅಳವಡಿಸಿದ ಫಲಕಗಳನ್ನು ಹಾಕಬೇಕು.
ಪೊಲೀಸ್ ಇಲಾಖೆಯು ಹೆದ್ದಾರಿಗಳಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಬೇಕು ಮತ್ತು ವೇಗದ ಮಿತಿ ಮೀರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವೇಗಕ್ಕಿಂತ ವಿವೇ ಚನೆ ಮುಖ್ಯ‘. ಸಕಾಲಕ್ಕೆ ತಲುಪುವ ಧಾವಂತದಲ್ಲಿ ಜೀವ ಕಳೆದುಕೊಳ್ಳುವ ಬದಲು, ನಿಯಮಿತ ವೇಗದಲ್ಲಿ ಚಲಿಸುವುದು ಕ್ಷೇಮ.
ನಿಯಮಗಳ ಪಾಲನೆ: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಲೇಬೇಕು.
ವಿಶ್ರಾಂತಿ ಅಗತ್ಯ: ಸುದೀರ್ಘ ಪ್ರಯಾಣ ಮಾಡುವ ಚಾಲಕರು ದಣಿವಾದಾಗ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು. ನಿದ್ದೆಗಣ್ಣಿನ ಚಾಲನೆ ಸಾವಿಗೆ ನೇರ ಆಹ್ವಾನ.
ತುರ್ತು ಚಿಕಿತ್ಸಾ ವ್ಯವಸ್ಥೆ: ಜಿಲ್ಲೆಯ ಹೆದ್ದಾರಿಗಳ ಉದ್ದಕ್ಕೂ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್‌ಗಳ ಅಗತ್ಯವಿದೆ. ಅಪಘಾತ ಸಂಭವಿಸಿದ ಮೊದಲ "ಗೋಲ್ಡನ್ ಅರ್ವ"ನಲ್ಲಿ ಚಿಕಿತ್ಸೆ ಸಿಕ್ಕರೆ ಅನೇಕ ಜೀವಗಳನ್ನು ಉಳಿಸಬಹುದು.
ಕಾಮಗಾರಿ ಅಪೂರ್ಣ
ಜಿಲ್ಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ವಿಶೇಷವಾಗಿ ಅಂಕೋಲಾ, ಕುಮಟಾ, ಭಟ್ಕಳ ಮತ್ತು ಕಾರವಾರ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಸಾವುಗಳು ಹೆಚ್ಚುತ್ತಿವೆ.
ದ್ವಿಚಕ್ರ ವಾಹನಗಳ ಪಾಲು: ಒಟ್ಟು ಅಪಘಾತಗಳಲ್ಲಿ ಶೇ.40ಕ್ಕಿಂತ ಹೆಚ್ಚು ಪಾಲು ದ್ವಿಚಕ್ರ ವಾಹನಗಳದ್ದಾಗಿದ್ದು, ಹೆಲ್ಮೆಟ್ ಧರಿಸದ ಕಾರಣ ತಲೆಗೆ ಪೆಟ್ಟಾಗಿ ಸಾವನ್ನಪ್ಪು ವವರ ಸಂಖ್ಯೆ ಗಣನೀಯವಾಗಿದೆ. ಕಳೆದ 5-6 ವರ್ಷಗಳಿಂದ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯ ಅಪೂರ್ಣತೆಯಿಂದಾಗಿ ಸುಮಾರು 20% ರಷ್ಟು ಅಪಘಾತಗಳು ತಾಂತ್ರಿಕ ದೋಷಗಳಿಂದ ಸಂಭವಿಸುತ್ತಿವೆ.
ನೂರಾರು ಕುಟುಂಬಗಳ ಕಣ್ಣೀರ ಕಥೆ
ಕಳೆದ ಒಂದು ವರ್ಷದ ಅಂಕಿ-ಅಂಶಗಳನ್ನು ಗಮನಿಸಿದರೆ, ಜಿಲ್ಲೆಯಲ್ಲಿ ರಸ್ತೆ ಅಪಘಾತ ಗಳು ಕೇವಲ ಅಂಕೆಗಳಲ್ಲ, ಅವು ನೂರಾರು ಕುಟುಂಬಗಳ ಕಣ್ಣೀರ ಕಥೆಯಾಗಿವೆ. ಪ್ರತಿ ತಿಂಗಳು ಸರಾಸರಿ 20 ರಿಂದ 25 ಜೀವಗಳು ರಸ್ತೆಯಲ್ಲೇ ಬಲಿಯಾಗುತ್ತಿವೆ. ಇದರಲ್ಲಿ ಶೇ. 70ರಷ್ಟು ಸಂತ್ರಸ್ತರು 18 ರಿಂದ 45 ವರ್ಷದೊಳಗಿನ ಯುವಜನತೆಯಾಗಿರುವುದು ವಿಷಾದ ನೀಯ. ಸರಿಯಾದ ಚಿಕಿತ್ಸೆ ಸಿಗದೆ ಅಥವಾ ಅಪಘಾತ ನಡೆದ ಸ್ಥಳದಿಂದ ಆಸ್ಪತ್ರೆಗೆ ತಲುಪಲು ಆಗುವ ವಿಳಂಬದಿಂದಲೇ ಶೇ.15ರಷ್ಟು ಸಾವುಗಳು ಸಂಭವಿಸುತ್ತಿವೆ ಎಂದು ವರದಿಗಳು ಹೇಳುತ್ತವೆ.