ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Koppal University: ಯುಜಿಸಿ ನಿಯಮದ ಹೆಸರಿನಲ್ಲಿ ಸ್ವಹಿತಾಸಕ್ತಿ ಸಾಧನೆ ಆರೋಪ: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ

ಯಡವಟ್ಟು, ಅವಾಂತರಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯ ಈಗ ಮತ್ತೇ ಸುದ್ದಿಯಲ್ಲಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ನಿಯಮ ಉಲ್ಲಂಘಿಸಿ, ಮನಸೋ ಇಚ್ಛೇ ಮೆರಿಟ್ ಲಿಸ್ಟ್ ಸಿದ್ಧತೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುಜಿಸಿ ನಿಯಮಾವಳಿ ಒಂದೆಡೆ ಇರಲಿ, ಕೊಪ್ಪಳ ವಿಶ್ವವಿದ್ಯಾಲಯದ ಒಂದು ವಿಭಾಗದ ನೇಮಕಾತಿಗೆ ಇದ್ದ ನಿಯಮ ಮತ್ತೊಂದು ವಿಭಾಗಕ್ಕೆ ಅನ್ವಯ ಆಗಿಲ್ಲ

ಶರಣಬಸವ ಹುಲಿಹೈದರ, ಕೊಪ್ಪಳ

ಯಡವಟ್ಟು, ಅವಾಂತರಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯ ಈಗ ಮತ್ತೇ ಸುದ್ದಿಯಲ್ಲಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ನಿಯಮ ಉಲ್ಲಂಘಿಸಿ, ಮನಸೋ ಇಚ್ಛೇ ಮೆರಿಟ್ ಲಿಸ್ಟ್ ಸಿದ್ಧತೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುಜಿಸಿ ನಿಯಮಾ ವಳಿ ಒಂದೆಡೆ ಇರಲಿ, ಕೊಪ್ಪಳ ವಿಶ್ವವಿದ್ಯಾಲಯದ ಒಂದು ವಿಭಾಗದ ನೇಮಕಾತಿಗೆ ಇದ್ದ ನಿಯಮ ಮತ್ತೊಂದು ವಿಭಾಗಕ್ಕೆ ಅನ್ವಯ ಆಗಿಲ್ಲ. ಒಟ್ಟಾರೆಯಾಗಿ ಕೊಪ್ಪಳ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕಾತಿ ಹೊರ ಗುತ್ತಿಗೆ ನೌಕರನೊಬ್ಬನ ಅಣತಿಯಂತೆ ನಡೆಯುತ್ತಿದ್ದು, ಅರ್ಹರಿಗೆ ಅನ್ಯಾಯ ಆಗುತ್ತಿದೆ ಎಂಬ ಆರೋಪ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಂದ ಕೇಳಿ ಬಂದಿದೆ.

ಕೊಪ್ಪಳ ವಿಶ್ವವಿದ್ಯಾಲಯ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಿಂದ ಬೇರ್ಪಟ್ಟು 4 ವರ್ಷ ಕಳೆದಿದೆ. ಕುಲಸಚಿವರ ಹೊರತಾಗಿ ಒಬ್ಬರೂ ಖಾಯಂ ನೌಕರರಿಲ್ಲ. ಸ್ವತಃ ಕುಲಪತಿಗಳೂ ಹಿರಿತನದ ಮೇಲೆ ಪ್ರಭಾರ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇನ್ನು ಬೋಧಕ ಸಿಬ್ಬಂದಿಗೆ ಅತಿಥಿ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗೆ ಹೊರ ಗುತ್ತಿಗೆ ನೌಕರರೇ ಗತಿ. ಇಂಥ ಸ್ಥಿತಿಯಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯ ಸದ್ಯ ಹೊರ ಗುತ್ತಿಗೆ ನೌಕರನೊಬ್ಬನ ಕಪಿ ಮುಷ್ಠಿ ಯಲ್ಲಿ ಸಿಲುಕಿ ನರಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:Koppal News: ಕೊಪ್ಪಳದಲ್ಲಿ ಘೋರ ಘಟನೆ; ಪತ್ನಿ, ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಚಿನ್ನದ ವ್ಯಾಪಾರಿ

ನಿಯಮ ಉಲ್ಲಂಘನೆ: ಕೆಲವರ ಸ್ವ ಹಿತಾಸಕ್ತಿಗೆ ಪ್ರತಿ ವರ್ಷವೂ ಸೇವಾ ಹಿರಿತನ ಹೊಂದಿರುವ ಅತಿಥಿ ಉಪನ್ಯಾಸಕರನ್ನು ಹೊರ ದೂಡುವ ಕೆಲಸ ನಡೆದಿದೆ. ಇದರಿಂದ ಪ್ರತಿ ವಿಭಾಗಕ್ಕೆ ಒಂದೊಂದು ರೀತಿಯ ನಿಯಮ ಅನುಸರಿಸಲಾಗುತ್ತಿದೆ ಎಂಬುದು ಅವಕಾಶ ವಂಚಿತ ಆರೋಪ. ಈ ಬಾರಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಮೂಲ ದಾಖಲೆ ಇಲ್ಲದೇ ಸಂದರ್ಶನಕ್ಕೆ ಬಂದವರಿಗೆ ಅವಕಾಶ ನೀಡಲಾಗಿದೆಯಂತೆ.

ಮತ್ತೊಂದೆಡೆ ಇತಿಹಾಸ ವಿಭಾಗದಲ್ಲಿ ನಕಲಿ ಸೇವಾ ಅನುಭವ ಪತ್ರ ಸಲ್ಲಿಸಿರುವ ಅಭ್ಯರ್ಥಿಗೆ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಕಲಿ ಪಿ.ಎಚ್‌ಡಿ ಪ್ರಕರಣದಲ್ಲಿ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕ ಆಯ್ಕೆ ಪ್ರಕ್ರಿಯೆಯಿಂದ ತಿರಸ್ಕೃತಗೊಂಡ ಅಭ್ಯರ್ಥಿಗೆ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂದರ್ಶನಕ್ಕೆ ಅವಕಾಶ ನೀಡಿದ್ದಾರೆ. ಈ ಮೂಲಕ ಕೊಪ್ಪಳ ವಿವಿ ಆರಂಭದಿಂದ ಕೆಲಸ ಮಾಡುತ್ತಿರುವವರನ್ನು ಹೊರ ದೂಡುವ ಹುನ್ನಾರ ನಡೆದಿದೆ ಎಂಬ ದೂರು ಕೇಳಿ ಬಂದಿವೆ.

ಹೊರಗುತ್ತಿಗೆ ನೌಕರನೇ ಬಾಸ್: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆ ಪರಿಶೀಲಿಸಲು ತಜ್ಞರ ಸಮಿತಿ ನೇಮಕ ಮಾಡಿಲ್ಲ. ಬದಲಾಗಿ ವಿವಿಯ ಹೊರ ಗುತ್ತಿಗೆ ನೌಕರನೇ ಅತಿಥಿ ಉಪನ್ಯಾಸಕರ ಅರ್ಜಿ ಪರಿಶೀಲನೆ ಮಾಡಿದ್ದಾನೆ ಎಂಬ ಆರೋಪ ಇದೆ. ಇನ್ನು ರಾಜ್ಯದ ಬಹುತೇಕ ವಿವಿಯಲ್ಲಿ ಸದ್ಯ ಕೆಲಸ ಮಾಡುವ ಅತಿಥಿ ಉಪನ್ಯಾಸಕರನ್ನೇ ಮುಂದು ವರಿಸುತ್ತಿದ್ದಾರೆ. ಆದರೆ, ಕೊಪ್ಪಳ ವಿವಿಯಲ್ಲಿ ಮಾತ್ರ ಪ್ರತಿ ವರ್ಷ ಅರ್ಜಿ ಕರೆದು ನೇಮಕಾತಿ ಮಾಡಿ ಕೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಇಷ್ಟೆಲ್ಲ ನಡೆದರೂ ಸಿಂಡಿಕೇಟ್ ಸದಸ್ಯರು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಶೋಚನೀಯ.

ಹೇಳಿಕೆಯ ಇದೆ ತಪ್ಪಿನ ಅನುಮಾನ!

ಅತಿಥಿ ಉಪನ್ಯಾಸಕರ ದೂರಿನ ಹಿನ್ನೆಲೆ ವಿಶ್ವವಾಣಿ ಪ್ರತಿನಿಧಿ, ರಿಯಾಲಿಟಿ ಚೆಕ್ ಮಾಡಲು, ಕೊಪ್ಪಳ ವಿವಿ ಕುಲಸಚಿವರು ಮತ್ತು ಬಳ್ಳಾರಿ ವಿವಿ ಕುಲಪತಿಗಳಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಇಬ್ಬರೂ ಅಧಿಕಾರಿಗಳ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ. 5 ವರ್ಷ ಸೇವಾ ಅನುಭವ ಮತ್ತು 5 ಲೇಖನ ಪ್ರಕಟ ಆಗಿದ್ದನ್ನು ನೇಮಕಾತಿಗೆ ಪರಿಗಣನೆ ಮಾಡುತ್ತೇವೆ. ಇದು ಯುಜಿಸಿ ನಿಯಮ ಎಂದು ಬಳ್ಳಾರಿ ವಿವಿ ಕುಲಪತಿ ಹೇಳುತ್ತಾರೆ. ಆದರೆ, ಕೊಪ್ಪಳ ವಿವಿ ಕುಲಸಚಿವರ ವರಸೆ ಬೇರೆಯೇ ಇದೆ. ಇನ್ನೂ ಕೊಪ್ಪಳ ವಿವಿ ಕುಲಪತಿಗಳಂತೂ ಯಾರ ಫೋನ್ ಕರೆಗೂ ಪ್ರತಿಕ್ರಿಯೆ ನೀಡುವುದಿಲ್ಲವಂತೆ. ಹೀಗಾದರೆ ಕೊಪ್ಪಳ ವಿವಿ ಗತಿ ಅಧೋಗತಿ.

image

ವಿಶ್ವವಿದ್ಯಾಲಯಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ 5 ವರ್ಷದ ಸೇವಾ ಅನುಭವ ಮತ್ತು ಇತ್ತೀಚಿನ 5 ಲೇಖನ ಪರಿಗಣಿಸಬೇಕು. ಇದು ಯುಜಿಸಿ ನಿಯಮ. ಇದು ಕೇವಲ ಕೊಪ್ಪಳ ಅಥವಾ ಬಳ್ಳಾರಿ ವಿಶ್ವವಿದ್ಯಾ ಲಯಕ್ಕೆ ಮಾತ್ರ ಅನ್ವಯ ಆಗುವುದಿಲ್ಲ. ಬದಲಾಗಿ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಕ್ಕೂ ಇದೇ ನಿಯಮ ಅನ್ವಯ ಆಗಬೇಕು.

-ಪ್ರೊ.ಎಂ.ಮುನಿರಾಜು, ಕುಲಪತಿ ಬಳ್ಳಾರಿ ವಿವಿ
image

ಯುಜಿಸಿ ನಿಯಮದಂತೆಯೇ ನಾವು 3 ವರ್ಷ ಸೇವಾ ಅನುಭವ ಮತ್ತು ಇತ್ತೀಚಿನ 3 ಪ್ರಕಟಿತ ಲೇಖನಗಳನ್ನು ಅತಿಥಿ ಉಪನ್ಯಾಸಕರ ನೇಮಕಾತಿಗೆ ಪರಿಗಣನೆ ಮಾಡಲಾಗುತ್ತದೆ. ಜತೆಗೆ ನೆಟ/ ಸೆಟ್ ಅಥಬಾ ಪಿ.ಎಚ್‌ಡಿ ಸ್ನಾತಕೋತ್ತರ ಶೇಕಡ ಅಂಕ, ಸಂದರ್ಶನದ ಗರಿಷ್ಠ 2.5 ಅಂಕ ಕ್ರೋಢಿಕರಿಸಿ ಮೆರಿಟ್ ಲಿಸ್ಟ್ ಮಾಡಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ಮತ್ತು ನಿಯಮ ಬದ್ಧವಾಗಿಯೇ ಮಾಡಿದ್ದೇವೆ. ಯಾವುದೇ ತಪ್ಪುಗಳು ನಡೆದಿಲ್ಲ.

- ರಮೇಶ, ಕುಲಸಚಿವರು ಕೊಪ್ಪಳ ವಿವಿ