14ರ ಪೈಕಿ ಸುಗ್ರೀವನೇ ಬಲಶಾಲಿ
೧೪ ಆನೆಗಳ ಪೈಕಿ ಸುಗ್ರೀವ ಈ ಕ್ಷಣಕ್ಕೆ ಹೆಚ್ಚಿಗೆ ತೂಗಿದ್ದಾನೆ. ಬರೋಬ್ಬರಿ ೫೫೪೫ ಕೆಜಿ ತೂಕ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ ಆನೆಗಳ ಎರಡನೇ ತಂಡದ ತೂಕ ಕಾರ್ಯದ ವೇಳೆ ಐದು ಆನೆಗಳ ಪೈಕಿ ಸುಗ್ರೀವ ೫೫೪೫ ಕೆಜಿ ತೂಕ ಹೊಂದುವ ಮೂಲಕ ಅತಿ ಬಲಶಾಲಿ ಎಂಬ ಖ್ಯಾತಿಗೆ ಪಾತ್ರನಾದ.


ಕೆ.ಜೆ.ಲೋಕೋಶ್ ಬಾಬು
ಅಂಬಾರಿ ಹೊತ್ತ ಆನೆಯೇ ಜನಾಕರ್ಷಣೆಯ ಕೇಂದ್ರ ಬಿಂದು
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯೇ ಆನೆ ಹಾಗೂ ಅಂಬಾರಿ. ಹಾಗೆಂದ ಮಾತ್ರಕ್ಕೆ ಇನ್ನುಳಿದವೆಲ್ಲವೂ ಗೌಣ ಎನ್ನುವಂತಿಲ್ಲವಾದರೂ, ಅಂಬಾರಿ ಹೊತ್ತ ಆನೆಯೇ ಜನಾಕರ್ಷಣೆಯ ಕೇಂದ್ರ ಬಿಂದು ಎಂಬುದು ಮಾತ್ರ ಜನಜನಿತ.
ಅಂದುಕೊಂಡಂತೆ ೨೦೨೫ನೇ ಸಾಲಿನ ದಸರಾ ಮಹೋತ್ಸವಕ್ಕೆ ಸಿದ್ದತೆ ಭರದಿಂದ ನಡೆದಿರುವುದರ ನಡುವೆಯೇ ಪೂರ್ವನಿಗಽಯಂತೆ ೧೪ ಆನೆಗಳು ಅರಮನೆ ಅಂಗಳ ಬಂದು ಸೇರಿವೆ. ಇಲ್ಲಿ ಆನೆಗಳ ಅಂಕಿಸಂಖ್ಯೆ ಒಂದೆಡೆಯಾದರೆ, ೧೪ ಆನೆಗಳ ಪೈಕಿ ಬಲಶಾಲಿ ಯಾವುದು? ಜನಾಕರ್ಷಿಸುವುದು ಯಾವುದು? ಎಂಬ ಒಂದಷ್ಟು ಕುತೂಹಲಕಾರಿ ವಿಷಯಗಳೂ ಕೂಡ ದಸರಾ ವೇಳೆ ಚರ್ಚೆಗೆ ಇಂಬು ನೀಡುತ್ತವೆ.
ಗಜಪಡೆ ನಾಯಕ ಅಭಿಮನ್ಯು(೫೯) ನೇತೃತ್ವದಲ್ಲಿ ಮತ್ತಿಗೋಡು ಶಿಬಿರದ ಭೀಮ (೨೫), ದುಬಾರೆ ಶಿಬಿರದ ಕಂಜನ್ (೨೪), ಧನಂಜಯ (೪೪) ಮತ್ತು ಪ್ರಶಾಂತ್ (೫೩), ಬಳ್ಳೆ ಶಿಬಿರದ ಮಹೇಂದ್ರ (೪೨), ದೊಡ್ಡಹರವೆ ಶಿಬಿರದ ಏಕಲವ್ಯ (೪೦) ಸೇರಿದಂತೆ ೭ ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ(೪೫), ಬಳ್ಳೆಯ ದೊಡ್ಡಹರವೆ ಲಕ್ಷ್ಮೀ(೫೩) ಈಗಾಗಲೇ ಅರಮನೆಯಲ್ಲಿದ್ದರೆ, ಇನ್ನುಳಿದ ಐದು ಆನೆಗಳು ಆ.೨೫ರ ಸೋಮವಾರವಷ್ಟೇ ಮೈಸೂರಿಗೆ ಬಂದಿಳಿದಿವೆ.
ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ...ಇದು ಭಾಗ್ಯ !
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ(೫೬), ಭೀಮನ ಕಟ್ಟೆ ಆನೆ ಶಿಬಿರದಿಂದ ರೂಪಾ(೪೪), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದಿಂದ ಗೋಪಿ(೪೨), ಸುಗ್ರೀವ್(೪೩), ಹೇಮಾವತಿ(೧೧) ಬಂದಿದ್ದಾರೆ. ಸಂಪ್ರದಾಯದಂತೆ ಪೂಜೆ ಪುರಸ್ಕಾರದೊಂದಿಗೆ ಆನೆಗಳ ತಂಡವನ್ನು ಆರಮನೆಯೊಳಗೆ ಕರೆದುಕೊಂಡಿರುವುದು ಒಂದೆಡೆ ಯಾದರೆ, ಮಂಗಳವಾರ ಬೆಳಗ್ಗೆ ಎಲ್ಲರೂ ಹುಬ್ಬೇರುವಂತೆ ಮಾಡಿದ್ದು ಅವುಗಳನ್ನು ತೂಕ ಮಾಡುವ ಸಂದರ್ಭದಲ್ಲಿ. ಅಂಬಾರಿ ಹೊರುವ ಅಭಿಮನ್ಯು ಹಾಗೂ ಭೀಮನೇ ಬಲಶಾಲಿ ಎಂದುಕೊಂಡ ಮಂದಿಯ ಲೆಕ್ಕಾಚಾರ ಬದಲಿಸಿದವನು ಸುಗ್ರೀವ.
೧೪ ಆನೆಗಳ ಪೈಕಿ ಸುಗ್ರೀವ ಈ ಕ್ಷಣಕ್ಕೆ ಹೆಚ್ಚಿಗೆ ತೂಗಿದ್ದಾನೆ. ಬರೋಬ್ಬರಿ ೫೫೪೫ ಕೆಜಿ ತೂಕ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ ಆನೆಗಳ ಎರಡನೇ ತಂಡದ ತೂಕ ಕಾರ್ಯದ ವೇಳೆ ಐದು ಆನೆಗಳ ಪೈಕಿ ಸುಗ್ರೀವ ೫೫೪೫ ಕೆಜಿ ತೂಕ ಹೊಂದುವ ಮೂಲಕ ಅತಿ ಬಲಶಾಲಿ ಎಂಬ ಖ್ಯಾತಿಗೆ ಪಾತ್ರನಾದ.
ಶ್ರೀಕಂಠ: ಈ ಆನೆಯನ್ನು ೨೦೧೪ರಲ್ಲಿ ಹಾಸನ ವಿಭಾಗದ ಶನಿವಾರಸಂತೆ ವಲಯದ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಉತ್ತಮ ಎತ್ತರ, ಬಲಿಷ್ಠ ಶರೀರ, ಶಾಂತ ಸ್ವಭಾವ ಮತ್ತು ಮನುಷ್ಯರೊಂದಿಗೆ ಸುಲಭವಾಗಿ ಹೊಂದಿಕೆಯಾಗುವ ಗುಣಗಳಿರುವ ಈ ಆನೆ ಇದೀಗ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದೆ.
ರೂಪ: ೨೦೧೬ರಲ್ಲಿ ಪ್ರಕೃತಿ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಒಂದು ಸರ್ಕಸ್ ಕಂಪನಿ ಯಿಂದ ರಕ್ಷಿಸಿ ಅರಣ್ಯ ಇಲಾಖೆಯವರು ಆನೆ ಶಿಬಿರಕ್ಕೆ ರೂಪಾಳನ್ನು ಸ್ಥಳಾಂತರಿಸಿದರು. ಶಿಬಿರದಲ್ಲಿ ದೊರೆತ ತರಬೇತಿಯಿಂದ ಆನೆಯು ಶಾಂತ ಮತ್ತು ಮನುಷ್ಯರೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ಗುಣ ಮೆರೆದಿತು. ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸುವ ಅವಕಾಶ ದೊರೆತಿದೆ.
ಹೇಮಾವತಿ: ೨೦೧೪ರ ನವೆಂಬರ್‌ನಲ್ಲಿ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಜನನ ವಾಗಿತ್ತು. ಶಿಸ್ತು, ಶಾಂತ ಸ್ವಭಾವ ಮತ್ತು ಕೌಶಲ ಮೂಲಕ ಗಮನ ಸೆಳೆದಿದೆ. ಇದೀಗ ಆನೆಯು ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.
ಗೋಪಿ: ೧೯೯೩ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯ ಲಾಯಿತು. ಬಳಿಕ ದುಬಾರೆ ಶಿಬಿರದಲ್ಲಿ ತರಬೇತಿ ನೀಡಲಾಗಿದ್ದು, ಅಲ್ಲಿನ ಸಫಾರಿ ಸೇವೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶಾಂತ, ನಿಯಂತ್ರಿತ ನಡವಳಿಕೆಯು ಇದರ ಪ್ರಮುಖ ಲಕ್ಷಣ. ಈ ಆನೆ ಕಳೆದ ೧೪ ವರ್ಷಗಳಿಂದ ನಿರಂತರವಾಗಿ ಮೈಸೂರ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ೨೦೧೫ ರಿಂದ ಈ ಆನೆಗೆ ಪಟ್ಟದ ಆನೆಯ ಜತೆ ನಿಶಾನೆ ಆನೆಯಾಗಿ ಅರಮನೆ ಆವರಣದಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಗೌರವ ಲಭಿಸಿದೆ.
ನಿಶಾನೆ ಆನೆಯಾಗಿ, ರಾಜದರ್ಶನ ಹಾಗೂ ಧಾರ್ಮಿಕ ವಿಧಿಗಳ ಸಂದರ್ಭಗಳಲ್ಲಿ ಇದು ಶಾಂತ ಮತ್ತು ಗಂಭೀರ ನಡವಳಿಕೆಯೊಂದಿಗೆ ಹಾಜರಿರುತ್ತದೆ. ಇದರ ಶಿಸ್ತಿನ ನಡೆ, ದೈಹಿಕ ಶಕ್ತಿಯುತ ಮತ್ತು ಅನುಭವದಿಂದ ಈ ಆನೆ ಇಂದು ದಸರಾದ ಪ್ರಮುಖ ಆನೆಗಳಲ್ಲಿ ಒಂದಾಗಿದೆ.
ಸುಗ್ರೀವ: ೨೦೧೬ರಲ್ಲಿ ಕೊಡಗು ಜಿಲ್ಲೆಯ ಕುಶಾಲ ನಗರ ಅರಣ್ಯ ವಲಯದಲ್ಲಿ ಸೆರೆ ಹಿಡಿಯ ಲಾಯಿತು. ಶಾಂತ ಸ್ವಭಾವ, ಶಿಸ್ತುಪೂರ್ಣ ನಡೆ ಹಾಗೂ ಉತ್ತಮ ಆಜ್ಞಾಪಾಲನೆಯೊಂದಿಗೆ ಅರಣ್ಯ ಇಲಾಖೆಯ ನಂಬಿಗಸ್ಥ ಆನೆಯಾಗಿದೆ. ಕಳೆದ ೨ ಬಾರಿ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿ, ಮೆರವಣಿಗೆಯಲ್ಲಿ ತನ್ನ ಶಕ್ತಿಯುತ ಹಾಗೂ ಸ್ಥಿರ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜನಸಂದಣಿಯ ನಡುವೆಯೂ ಶಾಂತವಾಗಿ ನಡೆದು ನಿಷಿದ್ಧ ಶಬ್ದಗಳಿಗೂ ಬೆಚ್ಚದೆ ಪ್ರತಿಕ್ರಿಯಿಸುವ ಧೈರ್ಯ ಈ ಆನೆಯ ಬಲವಾಗಿದೆ.