US Open: ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಕ್
ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಎಮ್ಮಾ ರಾಡುಕಾನು ಅದ್ಭುತ ಪ್ರದರ್ಶನ ನೀಡಿ, ಇಂಡೋನೇಷ್ಯಾದ ಅರ್ಹತಾ ಸುತ್ತಿನ ಆಟಗಾರ್ತಿ ಜಾನಿಸ್ ಟ್ಜೆನ್ ಅವರನ್ನು 6-2, 6-1 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.


ನ್ಯೂಯಾರ್ಕ್: ಯುಎಸ್ ಓಪನ್(US Open) ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂತು ನೊವಾಕ್ ಜೊಕೊವಿಕ್(Novak Djokovic) ಮೂರನೇ ಸುತ್ತಿಗೇರಿದರು. ನಾಲ್ಕು ಸೆಟ್‌ಗಳ ಕಠಿಣ ಹೋರಾಟದಲ್ಲಿ 6-7(7-5), 6-3,6-3, 6-1 ಅಂತರದಿಂದ ಜಚಾರಿ ಸ್ವಜ್ಡಾ ವಿರುದ್ಧ ಗೆದ್ದು ಬಂದರು. ಈ ಗೆಲುವಿನೊಂದಿಗೆ, ಜೊಕೊವಿಕ್ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಹಾರ್ಡ್ ಕೋರ್ಟ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದರು. ಇಬ್ಬರೂ ದಂತಕಥೆಗಳು ತಲಾ 191 ಗೆಲುವು ಕಂಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಜೊಕೋ, "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಪ್ರದರ್ಶನದ ಬಗ್ಗೆ ನನಗೆ ಅಷ್ಟು ಸಂತಸವಿಲ್ಲ. ಆದರೆ ನಿಜವಾಗಿಯೂ ಉತ್ತಮ ಗುಣಮಟ್ಟದ ಟೆನಿಸ್ ಆಡಿದ್ದಕ್ಕಾಗಿ ಸ್ವಜ್ಡಾಗೆ ಧನ್ಯವಾದಗಳು" ಎಂದು ಅವರು ಹೇಳಿದರು.
"ಎರಡನೇ ಸೆಟ್‌ನ ಅಂತ್ಯದ ವೇಳೆಗೆ ಅವರು( ಸ್ವಜ್ಡಾ) ಗಾಯದಿಂದ ಬಳಲಿದ್ದು ದುರದೃಷ್ಟಕರ, ಆದರೆ ಅವರು ಕೋರ್ಟ್‌ನಲ್ಲಿ ಉಳಿದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ನಿಜವಾಗಿಯೂ ಚೆನ್ನಾಗಿ ಆಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಆದ್ದರಿಂದ ನಾನು ಅವರಿಗೆ ಶುಭ ಹಾರೈಸುತ್ತೇನೆ" ಎಂದರು.
4 ವರ್ಷಗಳ ನಂತರ ಮೂರನೇ ಸುತ್ತಿಗೆ ರಾಡುಕಾನು
ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಎಮ್ಮಾ ರಾಡುಕಾನು ಅದ್ಭುತ ಪ್ರದರ್ಶನ ನೀಡಿ, ಇಂಡೋನೇಷ್ಯಾದ ಅರ್ಹತಾ ಸುತ್ತಿನ ಆಟಗಾರ್ತಿ ಜಾನಿಸ್ ಟ್ಜೆನ್ ಅವರನ್ನು 6-2, 6-1 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ಬ್ರಿಟಿಷ್ ತಾರೆಗೆ ತನ್ನ ಗೆಲುವನ್ನು ಪೂರ್ಣಗೊಳಿಸಲು ಕೇವಲ ಒಂದು ಗಂಟೆ ಬೇಕಾಯಿತು. ಗ್ರ್ಯಾಂಡ್ ಸ್ಲಾಮ್‌ನಲ್ಲಿ ತನ್ನ ಅತ್ಯಂತ ವೇಗದ ಗೆಲುವು ಸಾಧಿಸಿದ ರಾಡುಕಾನು ಕೂಟದಲ್ಲಿ 4 ವರ್ಷಗಳ ನಂತರ ಮೂರನೇ ಸುತ್ತಿಗೇರಿದರು.
ಇದನ್ನೂ ಓದಿ US Open 2025: ಮೆಡ್ವೆಡೇವ್ ಔಟ್; ಜೊಕೋ, ಸಬಲೆಂಕಾ, ಪೆಗುಲಾ ಗೆಲುವಿನ ಶುಭಾರಂಭ