ದೇವೇಂದ್ರ ಜಾಡಿ ಕಲಬುರಗಿ
ಶಿಕ್ಷಕರ ನೇಮಕಾತಿಯ ನಿಯಮ ಬದಲಾವಣೆ, ಹೊಸ ಸುತ್ತೋಲೆ, ತಂತ್ರಾಂಶದ ಕಿರಿಕಿರಿ ಓದಬೇಕಾದವರು ಕಚೇರಿ ಮೆಟ್ಟಿಲು ಹತ್ತುವ ಪರಿಸ್ಥಿತಿ
ಅರ್ಜಿ ಸಲ್ಲಿಕೆಗೆ ಹತ್ತೇ ದಿನ ಬಾಕಿ
ರಾಜ್ಯದ ಪ್ರಥಮಿಕ ಮತ್ತು ಪ್ರೌಢಶಾಲೆಗಳ 15000 ಶಿಕ್ಷಕರ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಇದೇ 15ರಂದು ಮುಕ್ತಾಯವಾಗಲಿದೆ. ಇನ್ನು 10 ದಿನಗಳಲ್ಲೇ ಅರ್ಜಿ ಸಲ್ಲಿಕೆ ಮುಕ್ತಾಯವಾಗಲಿದೆ. ಈ ನಡುವೆಯೇ ನಿಯಮ ಬದಲಾವಣೆ, ಹೊಸ ಸುತ್ತೋಲೆ ಹಾಗೂ ತಂತ್ರಾಂಶದ ದೋಷಗಳು ಅಭ್ಯರ್ಥಿಗಳನ್ನು ಹೈರಾಣಾಗಿಸಿವೆ.
ಕಲ್ಯಾಣ ಕರ್ನಾಟಕದ 6967 ಹಾಗೂ ಬ್ಯಾಕ್ ಲಾಗ್/ನಾನ್-ಎಚ್‌ಕೆ 8033 ಹುದ್ದೆಗಳಿಗೆ ಸೆ.15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಪರೀಕ್ಷಾ ಸಿದ್ಧತೆ ಬದಿಗಿಟ್ಟು ದಾಖಲೆಗಳ ತಿದ್ದುಪಡಿ, ಆರ್‌ಡಿ ನಂಬರ್ ಗೊಂದಲ ಪರಿಹಾರಕ್ಕೆ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಪರೀಕ್ಷೆಗೆ ಓದಬೇಕೋ, ಆದೇಶ ಬೆನ್ನತ್ತಬೇಕೋ? ಎಂಬ ಪ್ರಶ್ನೆ ಅಭ್ಯರ್ಥಿಗಳನ್ನು ಕಾಡುತ್ತಿದೆ. ಪಿಎಸ್‌ಟಿ, ಜಿಪಿಟಿ, ಎಮ್ ಸೇರಿದಂತೆ ವಿವಿಧ ವೃಂದಗಳ ಹುzಗಳಿಗೆ ಅರ್ಜಿ ಸಲ್ಲಿಸಲು ಮುಂದಾದವರಿಗೆ ಒಂದಿಂದು ಸಮಸ್ಯೆ ಎದುರಾಗು ತ್ತಿದೆ. ಅರ್ಜಿ ತುಂಬಲು ಹೋದರೆ ದಾಖಲೆಗಳ ಪ್ರಶ್ನೆ; ದಾಖಲೆ ಸರಿಪಡಿಸಲು ಕಚೇರಿಗೆ ತೆರಳಿದರೆ ಹೊಸ ನಿಯಮ; ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಿದರೆ MISMATCH, REJECTED ಸಂದೇಶ. ಹೀಗಾಗಿ ನೇಮಕಾತಿ ಪ್ರಕ್ರಿಯೆಗಿಂತ ಅರ್ಜಿ ಸಲ್ಲಿಕೆಯೇ ದೊಡ್ಡ ಪರೀಕ್ಷೆಯಂತಾಗಿದೆ.
ಇದನ್ನೂ ಓದಿ: Kalaburagi Bandh: ಬರ ಘೋಷಣೆಗೆ ಆಗ್ರಹಿಸಿ ಕಲಬುರಗಿ ಬಂದ್: ರೈತರ ಆಕ್ರೋಶ, ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ
ಅರ್ಜಿ ಪ್ರಕ್ರಿಯೆ ನಡುವೆಯೇ ನಿಯಮದ ಸ್ಪಷ್ಟನೆ: ವಿವಾಹಿತ ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೆ.1ರಂದು ಆದೇಶ ಹೊರಡಿಸಿದ್ದು, ವಿವಾಹಿತ ಅಭ್ಯರ್ಥಿಯ ಆದಾಯ ಲೆಕ್ಕಾಚಾರದಲ್ಲಿ ತಂದೆ-ತಾಯಿಯ ಆದಾಯವನ್ನು ಪರಿಗಣಿಸಬಾರದು. ಪತಿ-ಪತ್ನಿ ಪ್ರತ್ಯೇಕ ಕುಟುಂಬವಾಗಿ ವಾಸಿಸುತ್ತಿದ್ದರೆ ಜೀವನ ಸಂಗಾತಿಯ ಆದಾಯವನ್ನು ಮಾತ್ರ ಪರಿಗಣಿಸಬೇಕು.
ಅವಿಭಕ್ತ ಕುಟುಂಬವಾಗಿದ್ದರೆ ಜಂಟಿ ಕುಟುಂಬದ ಒಟ್ಟು ಆದಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳ ಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ನೇಮಕಾತಿ ಅರ್ಜಿ ಪ್ರಕ್ರಿಯೆ ನಡೆಯುತ್ತಿರು ವಾಗಲೇ ಇಂತಹ ಸ್ಪಷ್ಟನೆ ಹೊರಬಂದಿರುವುದು ಸಹಜವಾಗಿಯೇ ಪ್ರಶ್ನೆ ಹುಟ್ಟುಹಾಕಿದೆ. ಅಧಿಸೂಚನೆ ಹೊರಡಿಸುವ ಮುನ್ನವೇ ನಿಯಮಗಳನ್ನು ಅಂತಿಮಗೊಳಿಸಿ, ಅಭ್ಯರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗಲಿಲ್ಲವೇ? ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ತಂತ್ರಾಂಶದ ದೋಷ; ಹೊರೆ ಅಭ್ಯರ್ಥಿಗಳದ್ದೇ?: ಆರ್‌ಡಿ ನಂಬರ್ ನಮೂದಿಸಿದಾಗ ಎಸ್‌ಎಸ್ ಎಲ್‌ಸಿ ದಾಖಲೆ ಮತ್ತು ಅರ್ಜಿಯ ಮಾಹಿತಿಯಲ್ಲಿ ಹೊಂದಾಣಿಕೆ ಇಲ್ಲದಿದ್ದರೆ MISMATCH ಅಥವಾ REJECTED ಸಂದೇಶ ಕಾಣಿಸಿಕೊಳ್ಳುತ್ತಿದೆ. ಇದನ್ನು ಪರಿಹರಿಸಲು ಅಭ್ಯರ್ಥಿಗಳೇ ಮ್ಯಾನುಯಲ್ ಎಂಟ್ರಿ ಮಾಡಿ, ಸಂಬಂಧಿತ ಪ್ರಮಾಣಪತ್ರಗಳ ಪಿಡಿಎಫ್ ಅನ್ನು ನಿಗದಿತ ಮಿತಿಯೊಳಗೆ ಅಪ್ಲೋಡ್ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ತಂತ್ರಾಂಶದ ದೋಷಕ್ಕೆ ಪರಿಹಾರ ಕಲ್ಪಿಸಬೇಕಾದದ್ದು ಇಲಾಖೆಯ ಕೆಲಸ. ಆದರೆ ಅಭ್ಯರ್ಥಿಗಳೇ ದಾಖಲೆ ಹುಡುಕಿ, ಸೈಬರ್ ಕೇಂದ್ರಗಳಿಗೆ ತೆರಳಿ ಸಮಸ್ಯೆ ನಿವಾರಿಸಿಕೊಳ್ಳಬೇಕಾಗಿದೆ.
ಒಂದೇ ಬಾರಿ ತಿದ್ದುಪಡಿಗೆ ಅವಕಾಶ: ಸೆ.5ರಿಂದ ಅರ್ಜಿಯಲ್ಲಿ ಒಂದೇ ಬಾರಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆಯ ಗಡುವನ್ನು ಸೆ.15ರವರೆಗೆ ವಿಸ್ತರಿಸಲಾಗಿದೆ. ಆದರೆ ತಿದ್ದುಪಡಿ ಮಾಡಿದ ಬಳಿಕ ಹಿಂದಿನ ಅರ್ಜಿ ಅಮಾನ್ಯವಾಗುವುದರಿಂದ ಫೈನಲ್ ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ಮಾಹಿತಿಯನ್ನೂ ಎಚ್ಚರಿಕೆಯಿಂದ ಪರಿಶೀಲಿಸಬೇಕಾದ ಅನಿವಾರ್ಯತೆ ಇದೆ. ಪರೀಕ್ಷೆಗೆ ಸಿದ್ಧತೆ ನಡೆಸಬೇಕಾದ ಅಮೂಲ್ಯ ಸಮಯವನ್ನು ದಾಖಲೆ ಸಂಗ್ರಹಣೆ, ಕಚೇರಿ ಅಲೆದಾಟ ಹಾಗೂ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ವ್ಯಯಿಸುವಂತಾಗಿದೆ. ಹೀಗಾಗಿ ಇಲಾಖೆ ಇನ್ನು ಮುಂದೆ ಹೊಸ ಗೊಂದಲಗಳಿಗೆ ಅವಕಾಶ ನೀಡದೆ, ಒಂದೇ ಸ್ಪಷ್ಟ ಮಾರ್ಗಸೂಚಿ, ದೋಷರಹಿತ ತಂತ್ರಾಂಶ ಹಾಗೂ ಅಗತ್ಯ ಕಾಲಾವಕಾಶ ಕಲ್ಪಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಇನ್ನಷ್ಟು ಗಡುವಿಗೆ ಆಗ್ರಹ
ಸೆ.15ರವರೆಗೆ ಗಡುವು ವಿಸ್ತರಿಸಿದ್ದರೂ ಹೊಸ ಪ್ರಮಾಣಪತ್ರ ಪಡೆಯುವುದು, ದಾಖಲೆಗಳ ತಿದ್ದುಪಡಿ, ಆರ್‌ಡಿ ನಂಬರ್ ಸಮಸ್ಯೆ ನಿವಾರಣೆ ಹಾಗೂ ತಿದ್ದುಪಡಿ ಪ್ರಕ್ರಿಯೆ ಪೂರ್ಣ ಗೊಳಿಸಲು ಹೆಚ್ಚುವರಿ ಸಮಯ ಅಗತ್ಯವಿದೆ ಎಂಬುದು ಅಭ್ಯರ್ಥಿಗಳ ಆಗ್ರಹ. ಗಡುವನ್ನು ಮತ್ತಷ್ಟು ವಿಸ್ತರಿಸುವುದರ ಜತೆಗೆ ಪ್ರತಿ ಜಿಯಲ್ಲಿ ಪರಿಣಾಮಕಾರಿ ಸಹಾಯವಾಣಿ, ತಾಂತ್ರಿಕ ನೆರವು ಹಾಗೂ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಅಭ್ಯರ್ಥಿಗಳ ಒತ್ತಾಯವಾಗಿದೆ.
ಅಧಿಕಾರಿಗಳೇ ಇದಕ್ಕೆ ಉತ್ತರಿಸಿ
ಅಧಿಸೂಚನೆಗೂ ಮುನ್ನ ನಿಯಮಗಳನ್ನು ಏಕೆ ಸ್ಪಷ್ಟಪಡಿಸಲಿಲ್ಲ?
ತಂತ್ರಾಂಶವನ್ನು ಸಮರ್ಪಕವಾಗಿ ಪರೀಕ್ಷಿಸದೆ ಅರ್ಜಿ ಪ್ರಕ್ರಿಯೆ ಆರಂಭಿಸಿದ್ದು ಏಕೆ?
ಇಲಾಖೆಯ ತಾಂತ್ರಿಕ ದೋಷದ ಹೊರೆ ಅಭ್ಯರ್ಥಿಗಳೇ ಹೊರಬೇಕೇ?
ಪರೀಕ್ಷೆಗೆ ಓದಬೇಕಾದವರನ್ನು ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡಿಸುವುದು ಸರಿಯೇ?
![]()
ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪದೇ ಪದೆ ನಿಯಮ ಬದಲಾವಣೆ ಹಾಗೂ ತಾಂತ್ರಿಕ ದೋಷ ಗಳಿಂದ ಅಭ್ಯರ್ಥಿಗಳು ತೊಂದರೆ ಅನುಭವಿಸುತ್ತಿzರೆ. ಇಲಾಖೆಯು ತಕ್ಷಣ ಎಲ್ಲ ಗೊಂದಲಗಳಿಗೆ ತೆರೆ ಎಳೆದು, ಸ್ಪಷ್ಟ ಮಾರ್ಗಸೂಚಿ ನೀಡಬೇಕು. ಯಾವುದೇ ಅರ್ಹ ಅಭ್ಯರ್ಥಿ ಅವಕಾಶದಿಂದ ವಂಚಿತರಾಗದಂತೆ ಸಮರ್ಪಕ ಕಾಲಾವಕಾಶ ನೀಡಿ ಕ್ರಮ ಕೈಗೊಳ್ಳಬೇಕು.
- ಶಶೀಲ್ ನಮೋಶಿ ವಿಧಾನ ಪರಿಷತ್ ಸದಸ್ಯ
![]()
ಪರೀಕ್ಷೆಗೆ ಸಿದ್ಧತೆ ಮಾಡಿ ಕೊಳ್ಳಬೇಕಾದ ಸಮಯವನ್ನು ಪ್ರಮಾಣಪತ್ರಕ್ಕಾಗಿ ಕಚೇರಿಗಳಿಗೆ ಅಲೆಯುವುದರಲ್ಲಿ ಕಳೆಯುತ್ತಿದ್ದೇವೆ. ನಿಯಮಗಳನ್ನು ಮೊದಲೇ ಸ್ಪಷ್ಟಪಡಿಸಿದ್ದರೆ ಈ ಗೊಂದಲವೇ ಇರುತ್ತಿರಲಿಲ್ಲ. ತಂತ್ರಾಂಶದ ಸಮಸ್ಯೆಗೂ ಅಭ್ಯರ್ಥಿಗಳೇ ಪರಿಹಾರ ಹುಡುಕಬೇಕಾದ ಪರಿಸ್ಥಿತಿ ಬೇಸರ ತಂದಿದೆ.
- ಚನ್ನು ಬಿರಾದಾರ ಅಭ್ಯರ್ಥಿ