ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ban on Safari: ಸಫಾರಿಗೆ ನಿರ್ಬಂಧ; ಕರುನಾಡು ಪ್ರವಾಸಿ ಸಂಸ್ಕೃತಿಗೆ ಧಕ್ಕೆ

ಉತ್ತರ ಭಾರತದಿಂದ ವಾರಗಟ್ಟಲೇ ರಾಜ್ಯಕ್ಕೆ ಆಗಮಿಸುವವರು, ಕೇವಲ ಬಂಡೀಪುರಕ್ಕೆ ಬರುವುದಿಲ್ಲ. ಬದಲಿಗೆ ಬಂಡೀಪುರಕ್ಕೆ ಬಂದು ಇಲ್ಲಿನ ಸಫಾರಿ ವೀಕ್ಷಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಕರ್ನಾಟಕದಲ್ಲಿ ಸಫಾರಿ ಇಲ್ಲ ಎಂದರೆ ಅವರು ನೆರೆ ರಾಜ್ಯಗಳಿಗೆ ಭೇಟಿ ನೀಡುವ ಸಾಧ್ಯತೆಯಿರುತ್ತದೆ ಎನ್ನುವ ಆತಂಕವನ್ನು ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ.

ರಂಜಿತ್ ಎಚ್.ಅಶ್ವತ್ಥ ಬೆಂಗಳೂರು

ಅರಣ್ಯ ಇಲಾಖೆಯ ಅವೈಜ್ಞಾನಿಕ ತೀರ್ಮಾನದಿಂದ ವಿದೇಶಿಗರು ವಿಮುಖ

ಸರಾಸರಿ 5000 ವಿದೇಶಿಗರಿಗೆ ಈಗ ಹಿಂಜರಿಕೆ, ಸರಕಾರಕ್ಕೆ ವಾರ್ಷಿಕ ಭಾರೀ ನಷ್ಟ

ಯಾರದ್ದೋ ಪ್ರತಿಷ್ಠೆಗೆ ಬಲಿಯಾಗಿರುವ ಬಂಡೀಪುರ, ನಾಗರಹೊಳೆ ಸಫಾರಿ ಸಮಸ್ಯೆಯಿಂದ ಕೇವಲ ಈ ಭಾಗಕ್ಕೆ ಮಾತ್ರವಲ್ಲದೇ, ಮುಂದಿನ ದಿನದಲ್ಲಿ ಇಡೀ ರಾಜ್ಯದ ಪ್ರವಾಸೋದ್ಯಮದ ಮೇಲೆ ತೀವ್ರ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನುವ ಆತಂಕ ಶುರುವಾಗಿದೆ.

ಸಚಿವರ-ಅಧಿಕಾರಿಗಳ ಪ್ರತಿಷ್ಠೆಯೋ, ರೈತ ಸಂಘಗಳ ಒತ್ತಡಕ್ಕೋ ಮಣಿದು ಅರಣ್ಯ ಇಲಾಖೆ ಸಫಾರಿಯನ್ನು ನಿರ್ಬಂಧಿಸಿದೆ. ಹುಲಿ ಗಳು ಮಾನವರ ಮೇಲೆ ದಾಳಿ ಮಾಡಿರುವ ‘ಕುಂಟುನೆಪ’ ಮುಂದಿಟ್ಟುಕೊಂಡು ಬಂಡೀಪುರ-ನಾಗರಹೊಳೆ ಸಫಾರಿ ನಿರ್ಬಂಧಿಸಿರುವ ‘ಪ್ರಭೂತಿ’ಗಳು ಕಾಡಿನ ಲ್ಲಾಗುತ್ತಿರುವ ಹುಲಿ ದಾಳಿಯ ಹಿಂದಿನ ಕಾರಣವೇನು ಎನ್ನುವುದು ತಿಳಿಯದೇ, ಸಫಾರಿಯನ್ನು ನಿರ್ಬಂಧಿಸಿದ್ದಾರೆ.

ಮೂರು ತಿಂಗಳಿನಿಂದ ಆಗಿರುವ ಈ ನಿರ್ಬಂಧದಿಂದ, ಈ ಭಾಗದ ರೆಸಾರ್ಟ್, ಹೋಮ್ ಸ್ಟೇ ಮಾಲೀಕರು ಈಗಾಗಲೇ ನಷ್ಟ ಅನುಭವಿಸಿ, ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಸಫಾರಿಯ ನಿರ್ಬಂಧ ಇಡೀ ಕರ್ನಾಟಕ ‘ಪ್ರವಾಸೋದ್ಯಮ’ದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ವಿಶ್ಲೇಷಣೆಗಳು ಶುರುವಾಗಿವೆ.

ಇದನ್ನೂ ಓದಿ: Safari struggle: ಐಎಫ್‌ಎಸ್‌- ಖಂಡ್ರೆ ಕಿತ್ತಾಟದಲ್ಲಿ ಸಫಾರಿ ಸ್ಥಗಿತ ?

ಮೇಲ್ನೋಟಕ್ಕೆ ಈ ಸಫಾರಿಯ ನಿರ್ಬಂಧ ಕೇವಲ ಮೈಸೂರು, ಚಾಮರಾಜನಗರ ಭಾಗಕ್ಕೆ ಸೀಮಿತವಾಗಲಿದೆ ಎಂದು ವಿಶ್ಲೇಷಿಸಿದರೂ, ವಿದೇಶಿ ಪ್ರವಾಸಿಗರು, ಉತ್ತರ ಭಾರತದಿಂದ ಆಗಮಿಸು ವ ಪ್ರವಾಸಿಗರ ಆಯಾಮದಲ್ಲಿ ನೋಡಿದರೆ ಇದು ಇಡೀ ಕರ್ನಾಟಕದ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳುತ್ತದೆ.

ಏಕೆಂದರೆ, ಉತ್ತರ ಭಾರತದಿಂದ ವಾರಗಟ್ಟಲೇ ರಾಜ್ಯಕ್ಕೆ ಆಗಮಿಸುವವರು, ಕೇವಲ ಬಂಡೀಪುರಕ್ಕೆ ಬರುವುದಿಲ್ಲ. ಬದಲಿಗೆ ಬಂಡೀಪುರಕ್ಕೆ ಬಂದು ಇಲ್ಲಿನ ಸಫಾರಿ ವೀಕ್ಷಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಕರ್ನಾಟಕದಲ್ಲಿ ಸಫಾರಿ ಇಲ್ಲ ಎಂದರೆ ಅವರು ನೆರೆ ರಾಜ್ಯಗಳಿಗೆ ಭೇಟಿ ನೀಡುವ ಸಾಧ್ಯತೆಯಿರುತ್ತದೆ ಎನ್ನುವ ಆತಂಕವನ್ನು ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಐದಾರು ಸಾವಿರ ವಿದೇಶಿಗರು: ಬಂಡೀಪುರ ಹಾಗೂ ಕಬಿನಿಗೆ ಪ್ರತಿವರ್ಷ ವಿಶ್ವದ ವಿವಿಧ ಭಾಗದಿಂದ ಐದಾರು ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಇದರಲ್ಲಿ ಅನೇಕರು ರೆಸಾರ್ಟ್‌ ಗಳಲ್ಲಿ ಉಳಿದುಕೊಂಡು ವಾರಗಟ್ಟಲೇ ಸಫಾರಿಗೆ ಹೋಗುತ್ತಾರೆ. ಆದರೀಗ ಬಂಡೀಪುರ, ನಾಗರ ಹೊಳೆ ಸಫಾರಿ ನಿರ್ಬಂಧಿಸಿರುವುದರಿಂದ ಈಗಾಗಲೇ ಬುಕ್ ಮಾಡಿರುವವರು, ರೆಸಾರ್ಟ್‌ ಗಳಿಗೆ ಬಂದು ಬೇಸರದೊಂದಿಗೆ ತೆರಳುತ್ತಿದ್ದರೆ, ಹೊಸದಾಗಿ ಯಾರೂ ಬುಕಿಂಗ್ʼಗಳನ್ನು ಮಾಡಿಕೊಳ್ಳು ತ್ತಿಲ್ಲ. ಇದು ಹೀಗೆ ಮುಂದುವರಿದರೆ, ಇಷ್ಟು ದಿನ ಕರ್ನಾಟಕ ಪ್ರವಾಸೋದ್ಯಮದ ವಿಷಯದಲ್ಲಿ ವಿದೇಶಿಗರಲ್ಲಿದ್ದ ‘ಕಲ್ಚರ್’ ಮರೆಯಾಗುತ್ತದೆ.

ಒಮ್ಮೆ ಈ ಕಲ್ಚರ್ ಮರೆಯಾದರೆ ವಿದೇಶಿಗರನ್ನು ಪುನಃ ಸೆಳೆಯುವುದು ಭಾರಿ ಕಷ್ಟದ ಕೆಲಸ. ಬಂಡೀಪುರ, ಕಬಿನಿಗೆ ಆಗಮಿಸುವ ವಿದೇಶಿಗರಿಂದಲೇ ಕರ್ನಾಟಕದಲ್ಲಿ ವಾರ್ಷಿಕ 125 ಕೋಟಿ ರು. ಸರಾಸರಿ ವಹಿವಾಟು ಆಗುತ್ತಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ಈ ಸಫಾರಿ ಇಲ್ಲವೆಂದು ನೆರೆ ಕೇರಳದ ವಯನಾಡು, ತಮಿಳುನಾಡಿನ ಮಧುಮಲೈಗೆ ಅನೇಕ ವಿದೇಶಿಗರು ಮುಖ ಮಾಡಿದ್ದಾರೆ. ಇದು ಭವಿಷ್ಯ ಕರ್ನಾಟಕ ಪ್ರವಾಸೋದ್ಯಮದ ದೃಷ್ಟಿಯಿಂದ ಭಾರಿ ಹೊಡೆತ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

*

ಬಂಡೀಪುರ-ನಾಗರಹೊಳೆಗೆ ಸಫಾರಿಗೆಂದೇ ಪ್ರತಿವರ್ಷ ಐದು ಸಾವಿರಕ್ಕೂ ಹೆಚ್ಚು ಪ್ರವಾಸಿ ಗರ ಆಗಮನ

ಸಫಾರಿ ನಿರ್ಬಂಧದಿಂದ, ಕರ್ನಾಟಕದ ಬದಲು ಬೇರೆ ರಾಜ್ಯಗಳತ್ತ ಮುಖ ಮಾಡಿರುವ ವಿದೇಶಿಗರು

ವಿದೇಶೀಯರು ಬಾರದೇ ಹೋದರೆ ರಾಜ್ಯಕ್ಕೆ ವಾರ್ಷಿಕ ಕನಿಷ್ಠ 125 ಕೋಟಿ ರು. ನಷ್ಟ ಎನ್ನುವ ಅಂದಾಜು

ರಾಜ್ಯದಲ್ಲಿನ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆ, ಬುಕಿಂಗ್ ಮಾಡಲು ನಿರಾಸಕ್ತಿ

ಸಫಾರಿ ತೆರೆಯದೇ ಹೋದರೆ, ಹಲವು ರಾಜ್ಯಗಳಿಂದ ಅಧಿಕೃತ ಮಾರ್ಗಸೂಚಿ ಬಿಡುಗಡೆಯ ಸಾಧ್ಯತೆ

*

125 ಕೋಟಿ ರು. ನಷ್ಟ

ಸಾಮಾನ್ಯವಾಗಿ ವಿದೇಶದಿಂದ ಬರುವ ಪ್ರವಾಸಿಗರು ಕೇವಲ ಒಂದು ಸ್ಥಳಕ್ಕೆಂದು ಬರುವುದಿಲ್ಲ. ಬಂಡೀಪುರಕ್ಕೆ ಬಂದವರು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಯಾವುದೇ ವಿದೇಶಿ ಪ್ರವಾಸಿಗ ಕರ್ನಾಟಕಕ್ಕೆ ಬಂದರೆ ಸರಾಸರಿ ಎರಡೂವರೆ ಲಕ್ಷ ರುಪಾಯಿಗಳನ್ನು ಇಲ್ಲಿ ಖರ್ಚು ಮಾಡುತ್ತಾನೆ ಎನ್ನುವ ಲೆಕ್ಕಾಚಾರವಿದೆ. ಹೀಗಿರುವಾಗ, ಬಂಡೀಪುರ-ನಾಗರಹೊಳೆಗೆ ವಾರ್ಷಿಕವಾಗಿ ಬರುವ ಐದು ಸಾವಿರ ವಿದೇಶಿ ಪ್ರವಾಸಿಗರು ಕರ್ನಾಟಕಕ್ಕೆ ಬಾರದೇ ಬೇರೆ ರಾಜ್ಯಕ್ಕೆ ಹೋದರೆ, ಕರ್ನಾಟಕಕ್ಕೆ ಸರಾಸರಿ ಲೆಕ್ಕದಲ್ಲಿ ಬರೋಬ್ಬರಿ 125 ಕೋಟಿ ರು. ನಷ್ಟವಾಗುತ್ತದೆ.

ಹುಲಿ ದಾಳಿಗೂ ಸಫಾರಿಗೂ ಸಂಬಂಧವೇ ಇಲ್ಲ

ಸಫಾರಿಗೂ ಹುಲಿಗಳ ದಾಳಿಗೂ ಸಂಬಂಧವಿಲ್ಲದಿದ್ದರೂ, ಸಫಾರಿಯನ್ನು ನಿರ್ಬಂಧಿಸಿರುವ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಬಂಡೀಪುರ- ನಾಗರಹೊಳೆ ಪ್ರದೇಶದ ಸ್ಪಷ್ಟ ಚಿತ್ರಣವಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಏಕೆಂದರೆ, ಮಾನವರ ಮೇಲೆ ಹುಲಿ ದಾಳಿಯಾದ ಮೊದಲ ಘಟನೆ ನಡೆದಿದ್ದು ಹೆಡಿಯಾಳ ಭಾಗದಲ್ಲಿ. ಬಂಡೀಪುರ ಸಫಾರಿ ನಡೆಯುವ ಪ್ರದೇಶಕ್ಕೂ ಬರೋಬ್ಬರಿ 40 ಕಿಮೀ ಅಂತರವಿದೆ. ಹೀಗಿರುವಾಗ, 40 ಕಿಮೀ ದೂರದಲ್ಲಿ ಆಗುತ್ತಿರುವ ಹುಲಿ ದಾಳಿಗೆ ಕಾರಣವೇನು ಎನ್ನುವುದನ್ನು ಅರಿಯದೇ ‘ಯಾರದ್ದೋ’ ಒತ್ತಡ, ಹಿತಾಸಕ್ತಿಗೆ ಮಣಿದು ನಿರ್ಬಂಧಿಸುವ ಮೂಲಕ ಸಾಧಿಸಿದ್ದೇನು ಎನ್ನುವ ಪ್ರಶ್ನೆಗಳಿವೆ.ಸ

ರಂಜಿತ್​ ಎಚ್​ ಅಶ್ವತ್ಥ್

View all posts by this author