ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಮೊದಲು ಈ ಖಾತೆಗೆ ರಾಮಲಿಂಗಾರೆಡ್ಡಿ ಪಟ್ಟು, ರಾಜೀನಾಮೆ, ಬಳಿಕ ಜಲಸಂಪನ್ಮೂಲಕ್ಕೇ ತೃಪ್ತಿ,
ಖಾತೆ ಹೊಂದಿರುವ ಕೃಷ್ಣ ಭೈರೇಗೌಡರಿಗೂ ಇದು ಬೇಡ
ಬೇರೆ ನೀಡಿ ಎಂದು ವರಿಷ್ಠರಿಗೆ ಮನವಿ
ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಭುಗಿಲೆ ದ್ದಿದ್ದ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯ ವಿವಾದ ಸುಖಾಂತ್ಯವಾಗಿದೆ. ಈ ಗೊಂದಲ ಬಗೆಹರಿಯಿತು ಎಂದು ಸಮಾಧಾನವಾಗುವ ಮೊದಲೇ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗೆ ಸಚಿವರು ಯಾರು ಎನ್ನುವ ಗೊಂದಲ ಪಕ್ಷದಲ್ಲಿ ಶುರುವಾಗಿದೆ.
ಖಾತೆ ಹಂಚಿಕೆಯ ಕ್ಷಣದಿಂದಲೂ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದು ಪೂರ್ಣ ಒಪ್ಪಿಗೆ ಇರಲಿಲ್ಲ. ಇದ ರೊಂದಿಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನ, ಜಿಬಿಎ ಚುನಾವಣೆಯಿಂದ ಅಂತರ ಕಾಯ್ದು ಕೊಳ್ಳುವುದಾಗಿ ರೆಡ್ಡಿ ಎಚ್ಚರಿಕೆ ನೀಡಿದ ಬೆನ್ನ, ಈ ಖಾತೆ ನನಗೆ ಬೇಡ ಎನ್ನುವ ಕ್ಯಾತೆಯನ್ನು ಕೃಷ್ಣ ಬೈರೇಗೌಡ ಎತ್ತಿದ್ದಾರೆ. ಈ ಖಾತೆಯ ಬದಲು ಬೇರೆ ಖಾತೆಯ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬಿಗಿಪಟ್ಟು ಹಿಡಿದು ರಾಜೀನಾಮೆಯ ಸವಾಲು ತೆಗೆದುಕೊಂಡಿದ್ದ ರಾಮಲಿಂಗಾರೆಡ್ಡಿ ಅವರು, ಕೃಷ್ಣಬೈರೇಗೌಡ ಅವರು ಖಾತೆ ಬಿಟ್ಟು ಕೊಡಲು ಸಿದ್ಧರಿದ್ದರೂ, ಅವರು ಬಿಟ್ಟುಕೊಡುವ ಖಾತೆ ನಾನು ತೆಗೆದುಕೊಳ್ಳಲ್ಲ. ಈಗ ನೀಡಿರುವ ಜಲಸಂಪನ್ಮೂಲದಲ್ಲಿಯೇ ಮುಂದುವರಿಯುವೆ ಅಥವಾ ಬೇರೆ ಖಾತೆ ನೀಡಿ. ಆದರೆ ಬೆಂಗಳೂರು ನಗರಾಭಿವೃದ್ಧಿ ಮಾತ್ರ ಬೇಡ ಎಂದಿದ್ದಾರೆ.
ಇದನ್ನೂ ಓದಿ: Ranjith H Ashwath Column: ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು
ಇದೀಗ ಅತ್ತ ಕೃಷ್ಣಬೈರೇಗೌಡ ಅವರಿಗೂ ಬೇಡವಾದ, ಇತ್ತ ರಾಮಲಿಂಗಾರೆಡ್ಡಿ ಅವರಿಗೂ ಬೇಡವಾದ ಸಂಪುಟದ ಪ್ರಮುಖ ಖಾತೆಯಾಗಿರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅನಾಥವಾಗಿ ಉಳಿಯುವ ಸಾಧ್ಯತೆಯಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಹಂಚುವರೋ ಅಥವಾ ಮುಖ್ಯಮಂತ್ರಿಗಳೇ ನಿರ್ವಹಣೆ ಮಾಡುವರೇ ಎನ್ನುವ ಗೊಂದಲ ಪಕ್ಷದಲ್ಲಿ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
ನೀರಾವರಿಯಲ್ಲಿಯೇ ಮುಂದುವರಿಕೆ: ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ನಡೆದ ಸರಣಿ ಸಂಧಾನಸಭೆಯ ವೇಳೆ ಜಲ ಸಂಪನ್ಮೂಲದ ಬದಲಿಗೆ ವಸತಿ, ಸಹಕಾರ ಸೇರಿದಂತೆ ಹಲವು ಇಲಾಖೆಗಳನ್ನು ನೀಡುವ ಮಾತುಗಳನ್ನು ಆಡಿದ್ದಾರೆ. ಆದರೆ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ ಅವರು, ಸಂಧಾನ ಮುಗಿಯುವ ಹೊತ್ತಿಗೆ ಜಲಸಂಪನ್ಮೂಲ ಖಾತೆಯ ಲ್ಲಿಯೇ ಮುಂದುವರಿಯುವೆ.
ಇದರೊಂದಿಗೆ ಹೆಚ್ಚುವರಿ ಖಾತೆ ನೀಡಿದರೆ ನಿಭಾಯಿಸುವೆ ಅಥವಾ ನೀರಾವರಿ ಬದಲಿಗೆ ಬೇರೆ ಇಲಾಖೆ ಕೊಟ್ಟರೂ ನಿಭಾಯಿಸುವೆ. ಆದರೆ ಕೃಷ್ಣ ಬೈರೇಗೌಡ ಬಿಟ್ಟುಕೊಡುವ ಬೆಂಗಳೂರು ನಗರಾಭಿವೃದ್ಧಿ ಖಾತೆ ಮಾತ್ರ ವಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ರಾಜೀನಾಮೆ ನೀಡಿದ ಬಳಿಕ ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲು ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು, ಹಲವು ಸಚಿವರು, ಬೆಂಗಳೂರಿನ ಕೆಲ ಆಪ್ತ ಶಾಸಕರು ಪ್ರಯತ್ನಿಸಿದರು. ಯಶಸ್ವಿಯಾಗದ ಬಳಿಕ ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ ಜಯನಗರ ಖಾಸಗಿ ಹೋಟೆಲ್ʼನಲ್ಲಿ ಸಭೆ ನಡೆಸಿದರು.
ಇದಕ್ಕೂ ಬಗ್ಗದಿದ್ದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ಮಾಡಿ, ಮಾತನಾಡಿzರೆ. ಖರ್ಗೆ ಸೂಚನೆಯ ಬಳಿಕ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯಲು ರಾಮಲಿಂಗಾರೆಡ್ಡಿ ಸಮ್ಮತಿಸಿದರು. ಆದರೆ ಈ ವೇಳೆ ನೀರಾವರಿ ಇಲಾಖೆಯೊಂದಿಗೆ ಹೆಚ್ಚುವರಿ ಖಾತೆ ನೀಡುವ ಭರವಸೆ ನೀಡಿದರೂ, ನೀವು ಕೊಡುವ ಖಾತೆ ನಿರ್ವಹಿಸುವೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೆ ನೋಡಿದರೆ ಬೆಂಗಳೂರು ನಗರಾಭಿವೃದ್ಧಿಗೆ ರಾಮಲಿಂಗಾರೆಡ್ಡಿ ಪಟ್ಟು ಹಿಡಿಯಲು ಬೆಂಗಳೂರಿನ ಕೆಲ ಹಿರಿಯ ಶಾಸಕರ ಬೆಂಬಲವೂ ಇತ್ತು ಎನ್ನಲಾಗಿದೆ. ಕಳೆದ ಒಂದು ದಶಕದಿಂದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಬೆಂಗಳೂರಿನ ಶಾಸಕರಿಗೆ ನೀಡಿಲ್ಲ. ಡಾ.ಜಿ. ಪರಮೇಶ್ವರ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲರೂ ಬೆಂಗಳೂರಿನ ಆಚೆಯ ಶಾಸಕರು. ಇನ್ನು ಕೃಷ್ಣಬೈರೇ ಗೌಡ ಅವರು ಬ್ಯಾಟರಾಯನಪುರ ಶಾಸಕರಾಗಿದ್ದರೂ, ಮೂಲತಃ ಪಕ್ಕದ ಜಿಲ್ಲೆಯವರು. ಬೆಂಗಳೂರಿನಲ್ಲಿ ಪಕ್ಷ ಸಂಘಟಿಸಿದವರ ಬದಲು ಹೊರಗಿನಿಂದ ಬಂದವರಿಗೆ ಖಾತೆ ನೀಡುತ್ತಾ ಹೋದರೆ, ಬೆಂಗಳೂರು ಶಾಸಕರು ಏನು ಮಾಡಬೇಕು ಎನ್ನುವ ಅಸಮಾಧಾನ ಬೆಂಗಳೂರಿನ ಶಾಸಕರಿಗಿದೆ. ಈ ಎಲ್ಲ ಗೊಂದಲಗಳ ನಡುವೆ ಇದೀಗ ಇತ್ತ ರಾಮಲಿಂಗಾರೆಡ್ಡಿ, ಅತ್ತ ಕೃಷ್ಣಬೈರೇ ಗೌಡ ಇಬ್ಬರೂ ಬೆಂಗಳೂರು ನಗರಾಭಿವೃದ್ಧಿ ಖಾತೆಯಿಂದ ಅಂತರ ಕಾಯ್ದುಕೊಳ್ಳುತ್ತಿರುವು ದರಿಂದ ಪುನಃ ಈ ಖಾತೆ ಡಿ.ಕೆ.ಶಿವಕುಮಾರ್ ಅವರೇ ಹಿಂಪಡೆಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಬಿಡಿಎ, ಜಲಮಂಡಳಿ ಸಿಎಂ ಬಳಿ
ಆರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ನೀಡುವುದಾಗಿ ನಾಯಕರು ಹೇಳಿದಾಗ ಬಿಡಿಎ, ಬೆಂಗಳೂರು ಜಲಮಂಡಳಿ, ಬಿಎಂಆರ್‌ಡಿಎ ಸೇರಿದಂತೆ ಎಲ್ಲ ಇಲಾಖೆಗಳನ್ನು ಸೇರಿಸಿ ಕೊಡಬಹುದು ಎನ್ನುವ ನಿರೀಕ್ಷೆಯಲ್ಲಿ ಕೃಷ್ಣ ಬೈರೇಗೌಡ ಅವರು ಒಪ್ಪಿದ್ದರು. ಆದರೆ ಖಾತೆ ಹಂಚಿಕೆ ವೇಳೆ ಗ್ರೇಟರ್ ಬೆಂಗಳೂರಿನ ಐದು ನಗರಪಾಲಿಕೆ, ಬಿಎಂಆರ್‌ಡಿಎ ಮಾತ್ರ ಕೃಷ್ಣ ಬೈರೇಗೌಡ ಅವರಿಗೆ ಹಂಚಿಕೆ ಮಾಡಿ, ಬಿಡಿಎ, ಬೆಂಗಳೂರು ಜಲಮಂಡಳಿ, ಬಿಎಂಆರ್‌ಡಿಎ ನಂತಹ ಪ್ರಮುಖ ಇಲಾಖೆಗಳು ಡಿ.ಕೆ.ಶಿವಕುಮಾರ್ ಅವರೇ ಉಳಿಸಿಕೊಂಡಿದ್ದಾರೆ.
ಜಿಬಿಎಯಿಂದ ರೆಡ್ಡಿ ಅಂತರ?
ಈ ನಡುವೆ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಪಟ್ಟು ಕೈ ಬಿಟ್ಟು, ಪಕ್ಷದ ನಾಯಕರು ನೀಡುವ ಖಾತೆಗಳನ್ನೇ ಒಪ್ಪಿಕೊಳ್ಳುವುದಾಗಿ ಹೇಳಿರುವುದು ಹೈಕಮಾಂಡ್‌ಗೆ ನಿರಾಳ ತಂದಿದ್ದರೂ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ವಿಷಯದಲ್ಲಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಹೇಳಿರುವುದು ಹೊಸ ತಲೆಬಿಸಿಯಾಗಿದೆ. ಕೆಲವೇ ತಿಂಗಳಲ್ಲಿ ಎದುರಾಗಲಿರುವ ಜಿಬಿಎ ಚುನಾವಣೆ ವೇಳೆ ಬಿಟಿಎಂ ಕ್ಷೇತ್ರ ಬಿಟ್ಟು ಹೊರ ಹೋಗದಿರಲು ಆಪ್ತರೊಂದಿಗೆ ನಡೆದ ಸಭೆಯಲ್ಲಿ ರಾಮಲಿಂಗಾರೆಡ್ಡಿ ಅವರು ತೀರ್ಮಾನಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಇರುವವರೇ ಚುನಾವಣೆಯನ್ನು ನಡೆಸಬೇಕು ಎನ್ನುವ ರೆಡ್ಡಿ ಹಾಗೂ ಆಪ್ತ ವಾದವೂ ಕೃಷ್ಣಬೈರೇಗೌಡ ಅವರು ಖಾತೆಯ ಜವಾಬ್ದಾರಿ ವಹಿಸಿಕೊಳ್ಳದೇ ಇರಲು ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಇದೇನು ಬೇಡಾಟ?
ಕೃಷ್ಣ ಬೈರೇಗೌಡ ಬಿಟ್ಟು ಕೊಡುವ ಬೆಂಗಳೂರು ನಗರಾಭಿವೃದ್ಧಿ ತನಗೆ ಬೇಡ ಎಂದಿದ್ದಾರೆ ರಾಮಲಿಂಗಾರೆಡ್ಡಿ
ಕೃಷ್ಣ ಬೈರೇಗೌಡರಿಗೆ ಬೆಂಗಳೂರು ನಗರಾಭಿವೃದ್ಧಿ ನೀಡಿದ್ದರೂ, ಬಿಡಿಎ, ಜಲಮಂಡಳಿ ಡಿಕೆ ಬಳಿಯೇ ಇದೆ
ಖೋತಾ ಆಗಿರುವ ನಗರಾಭಿವೃದ್ಧಿ ತನಗೆ ಬೇಡ ಎನ್ನುತ್ತಿದ್ದಾರೆ ಬೈರೇಗೌಡ? ಇತರೆ ಖಾತೆಯತ್ತ ಕೃಷ್ಣ ಚಿತ್ತ
ಬೆಂಗಳೂರು ಹೊರಗಿನ ಶಾಸಕರಿಗೆ ನಗರಾಭಿವೃದ್ಧಿ ಸಿಕ್ಕಿರುವುದಕ್ಕೆ ಬೆಂಗಳೂರು ಶಾಸಕರಿಗೆ ಈ ಪರಿ ಬೇಸರ?
ಅಂತಿಮವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಎಂ ಶಿವಕುಮಾರ್ ಬಳಿಯೇ ಉಳಿಯುತ್ತಾ?