ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Belgaum Municipal Corporation controversy: ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸದಸ್ಯರ ಆಗ್ರಗಕ್ಕೆ ಧ್ವನಿಗೂಡಿಸಿದ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಈಗಾಗಲೇ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದ್ದು ಬೆಳಗಾವಿ ಮಹಾ ನಗರ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇದೆಯಾ ಎಂಬುದನ್ನು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಲಾಗುತ್ತದೆ.

ವಿನಾಯಕ ಮಠಪತಿ ಬೆಳಗಾವಿ

ಎಂಇಎಸ್ ಪ್ರಾಬಲ್ಯ ಕುಸಿತ

ಮೇಯರ್, ಉಪ ಮೇಯರ್ ಸ್ಥಾನ ಅಲಂಕರಿಸಿದ ಕನ್ನಡಿಗರು

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಕೈಗೊಳ್ಳುವಂತೆ ಕನ್ನಡ ಸಂಘಟನೆಗಳ ಆಗ್ರಹಕ್ಕೆ ತಲೆಬಾಗಿದ ಬೆಳಗಾವಿ ಮಹಾನಗರ ಪಾಲಿಕೆ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೊದಲು ಸರಕಾರದ ಅಭಿಪ್ರಾಯ ಕೇಳಲು ಮುಂದಾಗಿದೆ.

ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಸಂಪೂರ್ಣವಾಗಿ ಕನ್ನಡಮಯವಾಗಿದೆ. ಎಂಇಎಸ್ ಪ್ರಾಬಲ್ಯ ಕುಸಿತ ಕಂಡಿದ್ದು ಕನ್ನಡಿಗರೇ ಬಹುಮತದಿಂದ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಅಲಂಕರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡುವ ಮೂಲಕ ಪದೇ, ಪದೇ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಎಂಇಎಸ್ ಪುಂಡರಿಗೆ ಹಾಗೂ ಕನ್ನಡ ವಿರೋಧಿ ಮಹಾರಾಷ್ಟ್ರದ ರಾಜಕಾರಣಿಗಳಿಗೆ ಸರಿಯಾದ ಪಾಠ ಕಲಿಸುವಂತೆ ಕನ್ನಡ ಸಂಘಟನೆಗಳು ಆಗ್ರಹಿಸಿತ್ತಿವೆ.

ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಪಕ್ಷ ಬುಧವಾರ ಸಾಮಾನ್ಯ ಸಭೆ ಕರೆದಿತ್ತು.

ಇದನ್ನೂ ಓದಿ: BMC Election Result: ಶಿವ ಸೇನೆ ಭದ್ರಕೋಟೆ ಮಹಾಯುತಿ ಪಾಲಿಗೆ! ಠಾಕ್ರೆ ಎಡವಿದ್ದೆಲ್ಲಿ?

ಸಭೆ ಪ್ರಾರಂಭವಾಗುತ್ತಿದ್ದಂತೆ ನಾಮನಿರ್ದೇಶಿತ ಸದಸ್ಯರು ಬೆಳಗಾವಿಯನ್ನು ಕರ್ನಾಟಕ ಅವಿಭಾಜ್ಯ ಅಂಗವೆಂದು ಘೋಷಣೆ ಮಾಡುವಂತೆ ಸಭೆ ಗಮನಕ್ಕೆ ತಂದರು. ಗಡಿ ಜಿಲ್ಲೆ ಬೆಳಗಾವಿ ಮಹಾನಗರ ಪಾಲಿಕೆ ಇಂತಹ ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾದರೆ ಕನ್ನಡ ವಿರೋಧಿ ಮನಸ್ಥಿತಿಗಳಿಗೆ ಇದರಿಂದ ದೊಡ್ಡ ಹೊಡೆತ ನೀಡಿದಂತಾಗುತ್ತದೆ ಎಂದು ಸದಸ್ಯರಾದ ರಮೇಶ್ ಸೊಂಟಕ್ಕಿ, ದಿನೇಶ್ ನಾಸಿಪುಡಿ ಸೇರಿದಂತೆ ಕೆಲವರು ಆಗ್ರಹಿಸಿದರು.

ಸದಸ್ಯರ ಆಗ್ರಗಕ್ಕೆ ಧ್ವನಿಗೂಡಿಸಿದ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಈಗಾಗಲೇ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದ್ದು ಬೆಳಗಾವಿ ಮಹಾನಗರ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇದೆಯಾ ಎಂಬುದನ್ನು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಲಾಗುತ್ತದೆ. ಅಲ್ಲಿಂದ ಬರುವ ಉತ್ತರವನ್ನು ಪಡೆದುಕೊಂಡು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡುವ ನಿರ್ಧಾರದ ಕುರಿತು ಚಿಂತನೆ ಮಾಡುವುದಾಗಿ ಮೇಯರ್ ತಮ್ಮ ನಿರ್ಧಾರ ಪ್ರಕಟಿಸಿದರು.

ಕನ್ನಡ ಸಂಘಟನೆಗಳಿಂದ ನಿರಂತರ ಪ್ರತಿಭಟನೆ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡುವಂತೆ ಆಗ್ರಹಿಸಿ ಬೆಳಗಾವಿಯ ಕನ್ನಡಪರ ಸಂಘಟನೆ ಗಳು ಕಳೆದ ಕೆಲ ದಿನಗಳಿಂದ ಪ್ರತಿಭಟನೆ ಹಮ್ಮಿಕೊಂಡಿವೆ. ಜತೆಗೆ ಪಾಲಿಕೆ ಆಡಳಿತ ಪಕ್ಷದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತೀವೆ. ಅಷ್ಟೇ ಅಲ್ಲದೆ ಮಹಾಜನ್ ವರದಿಯೇ ಅಂತಿಮ ಎಂಬ ನಿರ್ಧಾರಕ್ಕೆ ಬರುವಂತೆ ಆಗ್ರಹಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಬೆಳಗಾವಿ ಮಹಾನಗರ ಪಾಲಿಕೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

2005ರಲ್ಲಿ ಪುಂಡಾಟ ಮೆರೆದಿದ್ದ ಎಂಇಎಸ್: 2005ರಲ್ಲಿ ಎಂಇಎಸ್ ಹಿಡಿತದಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ನಿರ್ಣಯ ಕೈಗೊಳ್ಳಲಾಗಿತ್ತು. ಬೆಳಗಾವಿ, ಖಾನಾಪೂರ, ನಿಪ್ಪಾಣಿ, ಬಾಲ್ಕಿ, ಬೀದರ್ ಸೇರಿದಂತೆ ಗಡಿ ಭಾಗದ ಕೆಲ ಪ್ರದೇಶ ವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ವಿವಾದಾತ್ಮಕ ನಿರ್ಣಯ ಕೈಗೊಂಡಿತ್ತು. ಈ ವೇಳೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆದರೆ ಈಗ ಬೆಳಗಾವಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ, ಕನ್ನಡಿಗರ ಕೈಯ ಪಾಲಿಕೆ ಆಡಳಿತ ಚುಕ್ಕಾಣಿ ಇದ್ದು ಮುಂದೆ ಯಾವೆಲ್ಲ ಕ್ರಮ ಜರುಗಿಸುತ್ತಾರೆ ಎಂದು ಕಾದು ನೋಡ ಬೇಕು.

ಆಡಳಿತ ಪಕ್ಷ ಬಿಜೆಪಿಯಿಂದ ಚಾಣಾಕ್ಷ ನಡೆ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಕೈಗೊಳ್ಳುವಂತೆ ಆಗ್ರಹ ಹೆಚ್ಚುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಬೆಳಗಾವಿ ನಗರ ಪ್ರದೇಶ ದಲ್ಲಿರುವ ಮರಾಠಿ ಭಾಷಿಕ ಮತಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿಗೆ ಸದ್ಯದ ಪರಿಸ್ಥಿತಿ ತಲೆನೋವು ತರಿಸಿದೆ. ಆದರೆ ಚಾಣಾಕ್ಷತನದಿಂದ ಪರಿಸ್ಥಿತಿ ನಿಭಾಯಿಸಲಾಗಿದ್ದು ಸಂಪೂರ್ಣ ನಿರ್ಣಯವನ್ನು ರಾಜ್ಯ ಸರಕಾರದ ಹೆಗಲಿಗೆ ಏರಿಸುವ ಮೂಲಕ ಇತ್ತ ಕನ್ನಡ ಹಾಗೂ ಮರಾಠಿ ಭಾಷಿಕರಿಗೆ ನೋವಾಗದ ರೀತಿಯಲ್ಲಿ ನಿರ್ಣಯ ಕೈಗೊಂಡಿದ್ದು, ಸದ್ಯ ರಾಜ್ಯ ಸರಕಾರ ಇಕ್ಕಟ್ಟಿಗೆ ಸಿಲುಕಿದ್ದು ಸುಳ್ಳಲ್ಲ.

ತುಟಿ ಬಿಚ್ಚದ ಕಾಂಗ್ರೆಸ್ ಸದಸ್ಯರು

ಪಾಲಿಕೆಯಲ್ಲಿ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸದಸ್ಯರು ಬೆಳಗಾವಿ ಅಸ್ಮಿತೆಯ ವಿಚಾರ ವಾಗಿ ತುಟಿ ಬಿಚ್ಚಲಿಲ್ಲ. ಕೇವಲ ನಾಮನಿರ್ದೇಶಿತ ಸದಸ್ಯರು ಮಾತ್ರ ಬೆಳಗಾವಿ ಕರ್ನಾ ಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಅಂಗೀರಕಿಸುವಂತೆ ಆಗ್ರಹಿಸಿದರು. ಕನ್ನಡಿಗರ ಮತ ಪಡೆದು ಪಾಲಿಕೆ ಸದಸ್ಯರಾಗಿರುವ ಕಾಂಗ್ರೆಸ್ ಪಕ್ಷದವರ ನಡೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

image

ಗಡಿಯಲ್ಲಿ ಪದೇ, ಪದೇ ಭಾಷೆ ವಿಚಾರವಾಗಿ ತಂಟೆ ತಗೆಯುವ ನಾಡ ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ಉದ್ದೇಶಕ್ಕಾಗಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಅಂಗೀರಿಸುವಂತೆ ನಮ್ಮ ಆಗ್ರಹವಾಗಿದೆ. ಈ ಕುರಿತು ಪಲಿಕೆ ಸೂಕ್ತ ನಿರ್ಧಾರ ಕೈಗೊಂಡು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು.

- ದಿನೇಶ್ ನಾಸಿಪುಡಿ, ಬೆಳಗಾವಿ ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ