ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ವನ ಸಿದ್ದ: ನ.13ರಂದು ಪ್ರಧಾನಿ ಮೋದಿ ಉದ್ಘಾಟನೆ

ನಗರೀಕರಣದ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಹಸಿರು ಪರಿಸರವನ್ನು ಮರಳಿ ಕಟ್ಟಿ ಕೊಡುವು ದಷ್ಟೇ ಈ ಯೋಜನೆಯ ಉದ್ದೇಶವಲ್ಲ. ಮುಂದಿನ ಪೀಳಿಗೆಗೆ ಸ್ವಚ್ಛ ಗಾಳಿ, ತಂಪಾದ ವಾತಾವರಣ ಹಾಗೂ ಸಮೃದ್ಧ ಜೀವವೈವಿಧ್ಯವನ್ನು ಕೊಡುಗೆಯಾಗಿ ನೀಡುವ ದೂರದೃಷ್ಟಿಯ ಪ್ರಯತ್ನವೂ ಇದಾಗಿದೆ.

ಅರಣ್ಯದ ನೀಲನಕ್ಷೆ (ಎಡಬದಿ), ನೆಡಲ್ಪಟ್ಟಿರುವ ಸಸ್ಯ (ಬಲಬದಿ)

ಕೆ.ಜೆ.ಲೋಕೇಶ್ ಬಾಬು, ಮೈಸೂರು

ಕಾಂಕ್ರೀಟ್ ಕಾಡಿನ ನಡುವೆ ನೈಜ ಹಸಿರು ಕಾಡುಗಳನ್ನು ಸೃಷ್ಟಿಸಿ, ಮಲಿನತೆ ಮತ್ತು ಏರುತ್ತಿರುವ ತಾಪಮಾನಕ್ಕೆ ಪ್ರಕೃತಿಯ ಮೂಲಕವೇ ಉತ್ತರ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಸಾಂಸ್ಕೃ ತಿಕ ನಗರಿ ಮೈಸೂರು ಸಜ್ಜಾಗಿದೆ. ನಗರದ 2 ಪ್ರಮುಖ ಪ್ರದೇಶಗಳಲ್ಲಿ ಬರೋಬ್ಬರಿ 2 ಲಕ್ಷ ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿ ಸಲಿರುವ ‘ಭಾರತ ವನ’ ಎಂಬ ವಿಶಿಷ್ಟ ನಗರ ಅರಣ್ಯ ಯೋಜನೆಗೆ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ನಗರೀಕರಣದ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಹಸಿರು ಪರಿಸರವನ್ನು ಮರಳಿ ಕಟ್ಟಿ ಕೊಡುವುದಷ್ಟೇ ಈ ಯೋಜನೆಯ ಉದ್ದೇಶವಲ್ಲ. ಮುಂದಿನ ಪೀಳಿಗೆಗೆ ಸ್ವಚ್ಛ ಗಾಳಿ, ತಂಪಾದ ವಾತಾವರಣ ಹಾಗೂ ಸಮೃದ್ಧ ಜೀವವೈವಿಧ್ಯವನ್ನು ಕೊಡುಗೆಯಾಗಿ ನೀಡುವ ದೂರದೃಷ್ಟಿಯ ಪ್ರಯತ್ನವೂ ಇದಾಗಿದೆ.

ಎರಡು ಪ್ರದೇಶಗಳಲ್ಲಿ ಹಸಿರಿನ ಮಹಾಪರ್ವ: ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಈಗಾ ಗಲೇ ಮಿಯಾವಾಕಿ ಮಾದರಿಯಲ್ಲಿ ಐದು ಉದ್ಯಾನಗಳನ್ನು ಕಿರು ಅರಣ್ಯಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದೀಗ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ನೀಡಲಾಗುತ್ತಿದೆ. ಹೆಲಿಪ್ಯಾಡ್ ಎದುರಿನ ಕೆ.ಸಿ.ಲೇಔಟ್ ಪಾಕ್ ನಲ್ಲಿ 40 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ವಿಜಯನಗರ ನಾಲ್ಕನೇ ಹಂತದ ಆರು ಉದ್ಯಾನಗಳಲ್ಲಿ 1.60 ಲಕ್ಷ ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ

ಈ ಎರಡೂ ಪ್ರದೇಶಗಳಲ್ಲಿ ಒಟ್ಟು 2 ಲಕ್ಷ ಗಿಡಗಳನ್ನು ನೆಟ್ಟು ‘ಭಾರತ ವನ’ ರೂಪಿಸಲಾಗುತ್ತಿದೆ. ಎಸ್‌ಬಿಐ ಫೌಂಡೇಶನ್ ಹಾಗೂ ಎಸ್‌ಬಿಐ ಬ್ಯಾಂಕ್‌ನ ಸಿಎಸ್‌ಆರ್ ಅನುದಾನದಡಿ ಈ ಯೋಜನೆ ಅನುಷ್ಠಾನ ಗೊಳ್ಳುತ್ತಿದೆ. ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ನಗರಪಾಲಿಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿವೆ. ಮಿಯಾವಾಕಿಗೆ ‘ಭಾರತ ವನ’ದ ಹೊಸರೂಪ: ಜಪಾನ್‌ನ ಡಾ.ಅಕಿರಾ ಮಿಯಾವಾಕಿ ಅಭಿವೃದ್ಧಿಪಡಿಸಿದ ಅರಣ್ಯೀಕರಣ ಪದ್ಧತಿಗೆ ಭಾರತೀಯ ಪರಿಸರಕ್ಕೆ ಸೂಕ್ತವಾದ ಮಾರ್ಪಾಡುಗಳನ್ನು ಅಳವಡಿಸಿ ‘ಭಾರತ ವನ’ ರೂಪಿಸಲಾಗುತ್ತಿದೆ.

ಸಾಂಪ್ರದಾಯಿಕ ಮಿಯಾವಾಕಿ ಪದ್ಧತಿಯಲ್ಲಿ ಸಸಿಗಳ ನಡುವೆ ಸುಮಾರು ಅರ್ಧ ಅಡಿ ಅಂತರ ವಿದ್ದರೆ, ಭಾರತ ವನ ಮಾದರಿಯಲ್ಲಿ ಸುಮಾರು ಎರಡು ಅಡಿ ಅಂತರ ಬಿಡಲಾಗುತ್ತದೆ. ಸಣ್ಣ ಸಸಿಗಳಿಗಿಂತ ದೊಡ್ಡ ಗಾತ್ರದ ಸಸಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡಿಕೊಂಡು, ಕಡಿಮೆ ಪ್ರದೇಶದಲ್ಲೇ ದೀರ್ಘ ಕಾಲ ಬಾಳಿಕೆ ಬರುವ ಅರಣ್ಯವನ್ನು ನಿರ್ಮಿಸುವುದು ಇದರ ವಿಶೇಷತೆ.

ಐದು ಉದ್ಯಾನಗಳಲ್ಲಿ ಹಸಿರು ಪ್ರಯೋಗ: ನಗರದಲ್ಲಿ ಈ ಮಾದರಿಯ ಅರಣ್ಯೀಕರಣಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಹಿನಕಲ್ ಪ್ರದೇಶದಲ್ಲಿ 12 ಸಾವಿರ, ದಟ್ಟಗಳ್ಳಿಯ ಜೋಡಿ ಬೇವಿನ ಮರದ ಸಮೀಪದ ಉದ್ಯಾನದಲ್ಲಿ 15 ಸಾವಿರ, ಸಾಲುಮರದ ತಿಮ್ಮಕ್ಕ ಪಾರ್ಕ್‌ನಲ್ಲಿ 15 ಸಾವಿರ ಹಾಗೂ ರಾಜೀವನಗರದ ಎರಡು ಉದ್ಯಾನಗಳಲ್ಲಿ ಒಟ್ಟು 30 ಸಾವಿರ ಗಿಡಗಳನ್ನು ನೆಟ್ಟು ಕಿರು ಅರಣ್ಯ ಗಳನ್ನು ಅಭಿವೃದ್ಧಿ ಡಿಸಲಾಗಿದೆ. ಈಗ ಎರಡು ಲಕ್ಷ ಗಿಡಗಳ ಹೊಸ ಯೋಜನೆಯೊಂದಿಗೆ ನಗರದ ಹಸಿರು ವಲಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಹೇಗೆ ರೂಪುಗೊಳ್ಳಲಿದೆ ಹಸಿರು ಕಾಡು?: ಭಾರತ ವನ ನಿರ್ಮಾಣದಲ್ಲಿ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ 30 ರಿಂದ 50 ವಿವಿಧ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡಲಾಗುತ್ತದೆ. ಸುಮಾರು ಒಂದು ಮೀಟರ್ ಆಳಕ್ಕೆ ಮಣ್ಣು ಅಗೆದು ಸಡಿಲಗೊಳಿಸಲಾಗುತ್ತದೆ. ಕಾಂಪೋಸ್ಟ್ ಗೊಬ್ಬರ, ಕೊಬ್ಬರಿ ನಾರು ಹಾಗೂ ಒಣ ಎಲೆಗಳನ್ನು ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲಾಗುತ್ತದೆ. ಆಯ್ದ ಸ್ಥಳಗಳಲ್ಲಿ ಮೂರುರಿಂದ ಐದು ಸಸಿಗಳನ್ನು ನೆಡುವ ಪದ್ಧತಿ ಅನುಸರಿಸಲಾಗುತ್ತದೆ.

ಆರಂಭದ ಎರಡರಿಂದ ಮೂರು ವರ್ಷಗಳ ಕಾಲ ನಿರಂತರ ನೀರುಣಿಸುವುದು, ಕಳೆ ತೆಗೆಯುವುದು ಸೇರಿದಂತೆ ವಿಶೇಷ ಆರೈಕೆ ಮಾಡಲಾಗುತ್ತದೆ. ಗಿಡಗಳು ನೆಲೆಯೂರಿದ ಬಳಿಕ ಸಹಜವಾಗಿ ಬೆಳೆಯಲು ಅನುಕೂಲ ಕಲ್ಪಿಸುವುದು ಈ ಪದ್ಧತಿಯ ಆಶಯವಾಗಿದೆ. ಪಾಲಿಕೆಗೆ ನಿರ್ವಹಣೆಯ ಹೊಣೆ: ಯೋಜನೆಗೆ ಚಾಲನೆ ನೀಡುವುದಷ್ಟೇ ಅಲ್ಲ, ನೆಟ್ಟ ಸಸಿಗಳನ್ನು ಉಳಿಸಿ ಬೆಳೆಸುವುದೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಗರಪಾಲಿಕೆ ವಿಶೇಷ ನಿರ್ವಹಣಾ ವ್ಯವಸ್ಥೆ ರೂಪಿಸುತ್ತಿದೆ. ಫಾನ್ಸಿಂಗ್, ಗೇಟ್ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ ಗಿಡಗಳಿಗೆ ಹಾನಿಯಾ ಗದಂತೆ ರಕ್ಷಣೆ ಒದಗಿಸ ಲಾಗುತ್ತದೆ. ಈಗಾಗಲೇ ಅಭಿವೃದ್ಧಿಪಡಿಸಿರುವ ಮಿಯಾವಾಕಿ ಉದ್ಯಾನಗಳ ರಕ್ಷಣೆಯನ್ನೂ ಪಾಲಿಕೆ ಮಾಡುತ್ತಿದೆ.

ಪ್ರಧಾನಿ ಮೋದಿ ಅವರ ಉದ್ಘಾಟನೆಯ ಬಳಿಕ ಭಾರತ ವನದ ಸಂಪೂರ್ಣ ನಿರ್ವಹಣೆಯ ಜವಾ ಬ್ದಾರಿಯನ್ನು ನಗರಪಾಲಿಕೆ ವಹಿಸಿಕೊಳ್ಳಲಿದೆ. ಗಿಡ ನೆಡುವುದಕ್ಕಿಂತ ಗಿಡ ಉಳಿಸುವುದೇ ಸವಾಲು: ಮೈಸೂರಿನಲ್ಲಿ ಎರಡು ಲಕ್ಷ ಗಿಡಗಳನ್ನು ನೆಡುವ ಈ ಯೋಜನೆ ನಗರ ಪರಿಸರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ. ಆದರೆ ಯೋಜನೆಯ ನಿಜವಾದ ಯಶಸ್ಸು ಉದ್ಘಾಟನೆಯ ದಿನ ನೆಲಕ್ಕಿಳಿಯುವ ಸಸಿಗಳ ಸಂಖ್ಯೆಯಲ್ಲಿಲ್ಲ; ಅವುಗಳಲ್ಲಿ ಎಷ್ಟು ಗಿಡಗಳು ಮರಗಳಾಗಿ ಬೆಳೆದು ಮುಂದಿನ ಪೀಳಿಗೆಗೆ ನೆರಳು ನೀಡುತ್ತವೆ ಎಂಬುದರಲ್ಲಿದೆ. ಕಾಂಕ್ರೀಟ್ ಕಟ್ಟಡಗಳ ನಡುವೆ ಹಸಿರು ಉಸಿರಿಗೆ ಜಾಗ ಕಲ್ಪಿಸುವ ‘ಭಾರತ ವನ’ ಮೈಸೂರಿನ ಪರಿಸರ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ಆಶಯ ಮೂಡಿಸಿದೆ.

ಅರಣ್ಯ ಬೆಳೆಸುವ ಮಿಯಾವಾಕಿ ತಂತ್ರ

ಮಿಯಾವಾಕಿ ವಿಧಾನವು 1960-70ರ ದಶಕ ದಲ್ಲಿ ಜಪಾನ್‌ನ ಡಾ. ಅಕಿರಾ ಮಿಯಾವಾಕಿ ಅಭಿವೃದ್ಧಿ ಪಡಿಸಿದ ವಿಶಿಷ್ಟ ಅರಣ್ಯೀಕರಣ ತಂತ್ರ ವಾಗಿದೆ. ಸ್ಥಳೀಯ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ನಿರ್ದಿಷ್ಟ ಅಂತರದಲ್ಲಿ ನೆಡುವ ಮೂಲಕ ಸಹಜ ಅರಣ್ಯದ ಬೆಳವಣಿಗೆಯನ್ನು ವೇಗಗೊಳಿಸುವುದು ಇದರ ಮೂಲ ತತ್ವ. ಸಾಮಾನ್ಯವಾಗಿ ಸಹಜ ಅರಣ್ಯವೊಂದು ಪೂರ್ಣವಾಗಿ ಬೆಳೆಯಲು ದೀರ್ಘ ಕಾಲ ಬೇಕಾಗುತ್ತದೆ. ಆದರೆ, ಸೂಕ್ತ ನಿರ್ವಹಣೆ ಮತ್ತು ಪರಿಸರಕ್ಕೆ ಹೊಂದುವ ಸಸ್ಯಗಳ ಆಯ್ಕೆ ಯೊಂದಿಗೆ ಮಿಯಾವಾಕಿ ಮಾದರಿಯ ಕಿರು ಅರಣ್ಯಗಳು 20ರಿಂದ 30 ವರ್ಷಗಳಲ್ಲಿ ಪ್ರಬುದ್ಧ ಸ್ವರೂಪ ಪಡೆದುಕೊಳ್ಳಬಹುದು ಎಂಬುದು ಈ ಪದ್ಧತಿಯ ವಿಶೇಷತೆ.

ಏಳು ಲಾಭಗಳು

ಕಡಿಮೆ ಜಾಗದಲ್ಲಿ ಹೆಚ್ಚು ಹಸಿರು: ನಗರದ ಸೀಮಿತ ಭೂಪ್ರದೇಶದಲ್ಲೇ ದಟ್ಟ ಅರಣ್ಯ ಬೆಳೆಸಲು ಇದು ನೆರವು

ತಾಪ ನಿಯಂತ್ರಣ: ಮರಗಳ ನೆರಳು ಮತ್ತು ಹಸಿರು ಹೊದಿಕೆ ನಗರಗಳ ಉಷ್ಣತೆಯನ್ನು ತಗ್ಗಿಸುತ್ತದೆ

ಗಾಳಿ ಶುದ್ಧೀಕರಣ ಧೂಳು ಹಾಗೂ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿ ನೀಡುತ್ತದೆ

ಕಾರ್ಬನ್ ಹೀರಿಕೊಳ್ಳುವಿಕೆ ಇಂಗಾಲ ಹೀರಿಕೊಳ್ಳುವುದರಿಂದ ವಾತಾವರಣದಲ್ಲಿ ಸಮತೋಲನ ಸಾಧ್ಯ

ಜೀವವೈವಿಧ್ಯ ವೃದ್ಧಿ ಪಕ್ಷಿಗಳು, ಚಿಟ್ಟೆಗಳು, ಕೀಟಗಳು ಸೇರಿದಂತೆ ವಿವಿಧ ಜೀವಿಗಳಿಗೆ ಆಶ್ರಯ ಅಂತರ್ಜಲ ವೃದ್ಧಿ ಮರಗಳು ಬೆಳೆಯುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ ಮಾನಸಿಕ ಆರೋಗ್ಯ ಹಸಿರು ಪರಿಸರವು ಮಾನಸಿಕ ನೆಮ್ಮದಿ, ಆರೋಗ್ಯಕ್ಕೆ ಪೂರಕವಾಗುತ್ತದೆ.