ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BSY's celebration: ಬಿಎಸ್‌ʼವೈ ಅಭಿಮಾನೋತ್ಸವ ಲಾಭ, ನಷ್ಟ ಲೆಕ್ಕದಲ್ಲಿ ಬಿಜೆಪಿ

ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಸಂಭ್ರಮದಲ್ಲಿ ಅಭಿಮಾನ ಪ್ರವಾಹವಿದ್ದ ಜನ ಸಾಗರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆಯೇ ? ಇದನ್ನು ಸರಕಾರದ ವಿರುದ್ಧ ಸಮರ ಸಾರಲು ಬಳಸಿಕೊಳ್ಳಬಹುದಿತ್ತಲ್ಲವೇ? ಹಾಗಾದರೆ ಇದರಿಂದ ಯಾರಿಗೆ ಲಾಭವಾಗಿದೆ? ಎಂಬ ಇತ್ಯಾದಿ ಪ್ರಶ್ನೆಗಳೊಂದಿಗೆ ಪಕ್ಷದ ನಾಯಕರಲ್ಲೇ ಚರ್ಚೆಯಾಗಿದೆ ಎನ್ನಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ, ಬೆಂಗಳೂರು

ಕಾಂಗ್ರೆಸ್ ವಿರುದ್ಧ ಹೋರಾಟ ಕೊರತೆ ಬಗ್ಗೆ ಬೇಸರ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಹತ್ತು ಹಲವು ಟೀಕೆಗಳ ನಡುವೆಯೂ ಅರ್ಥಪೂರ್ಣವಾಗಿಯೇ ನಡೆದಿದೆ. ಆದರೆ ಬಿಜೆಪಿ ಆಂತರ್ಯದಲ್ಲಿ ಈ ಅತಿ ಅಪರೂಪದ ಸಮಾವೇಶದ ಲಾಭ, ನಷ್ಟಗಳ ಚರ್ಚೆ ಶುರುವಾಗಿದೆ.

ಸರಕಾರದ ವಿರುದ್ಧ ಬಿಜೆಪಿ ನಡೆಸಿದ ಎಲ್ಲಾ ಸಮಾವೇಶಗಳಿಗೆ ಹೋಲಿಸಿದೆ ಲಕ್ಷಾಂತರ ಮಂದಿ ಒಂದೆಡೆ ಸೇರಿದ್ದು, ಅದರಲ್ಲೂ ರಾಜ್ಯದ ಉತ್ತರ, ದಕ್ಷಿಣ ಭಾಗಗಳ ಕೇಂದ್ರ ಸ್ಥಾನ ಚಿತ್ರದುರ್ಗದಲ್ಲಿ ಆಯೋಜಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಸಂಭ್ರಮದಲ್ಲಿ ಅಭಿಮಾನ ಪ್ರವಾಹವಿದ್ದ ಜನ ಸಾಗರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆಯೇ ? ಇದನ್ನು ಸರಕಾರದ ವಿರುದ್ಧ ಸಮರ ಸಾರಲು ಬಳಸಿಕೊಳ್ಳಬಹುದಿತ್ತಲ್ಲವೇ? ಹಾಗಾದರೆ ಇದರಿಂದ ಯಾರಿಗೆ ಲಾಭವಾಗಿದೆ? ಎಂಬ ಇತ್ಯಾದಿ ಪ್ರಶ್ನೆಗಳೊಂದಿಗೆ ಪಕ್ಷದ ನಾಯಕರಲ್ಲೇ ಚರ್ಚೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: BS Yediyurappa: ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಬಿ.ಎಲ್‌.ಸಂತೋಷ್‌ ಭೇಟಿ; 50 ವರ್ಷಗಳ ಯಶಸ್ವಿ ರಾಜಕೀಯ ಜೀವನಕ್ಕೆ ವಿಶ್‌

ಲಕ್ಷಾಂತರ ಮಂದಿ ತುಂಬಿದ್ದ ಈ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಭಾಗವಹಿಸಿದ್ದ ಮಠಾಧಿಪತಿಗಳು, ಸ್ವಾಮೀಜಿಗಳು, ಪಕ್ಷದ ಅನೇಕ ನಾಯಕರು ಹಾಗೂ ಪಕ್ಷದ ಎರಡನೇ ಆಗ್ರ ನಾಯಕ, ಕೇಂದ್ರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದು, ಅವರೆಲ್ಲರೂ ಯಡಿಯೂರಪ್ಪ ಅವರ ಗುಣಗಾನ ಮಾಡಿದ್ದನ್ನು ನೋಡಿದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನೂ ಬಿಜೆಪಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ತೋರಿಸಿ (ಮಾರ್ಗದರ್ಶನ) ಹೋಗಬೇಕಾದ ಅನಿವಾರ್ಯ ವನ್ನು ಒತ್ತಿ ಹೇಳಿದಂತಾಗಿದೆ.

ಇದನ್ನು ಅಮಿತ್ ಶಾ ತಮ್ಮ ಭಾಷಣದಲ್ಲಿ ಸ್ಪರ್ಶ ಕೂಡ ಮಾಡಿದ್ದು ಗಮನಾರ್ಹ. ಹಾಗೆಯೇ ಮಠಾಧಿಪತಿಗಳು ಹಾಗೂ ಬಿಎಸ್ ವೈ ಅಭಿಮಾನದ ಸಮಾವೇಶದ ಮೂಲಕ ಮುಂದಿನ ಚುನಾವಣೆಗಳಲ್ಲಿ ಲಿಂಗಾಯತರಿಗೆ ಸಾರಥ್ಯವಿಲ್ಲದೆ ಅಧಿಕಾರ ಸುಲಭವಲ್ಲ ಎನ್ನುವ ಸಂದೇಶವನ್ನೂ ರವಾನಿಸಿದಂತಾಗಿದೆ.

ಒಟ್ಟಾರೆ ಇದರ ಹಿಂದಿನ ಉದ್ದೇಶ ಬಿ.ವೈ.ವಿಜಯೇಂದ್ರ ಅವರನ್ನು ಎರಡನೇ ಬಾರಿಗೆ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಸುವಂತೆ ಮಾಡುವುದು ಎಂಬ ಟೀಕೆಗಳಂತೂ ಇದ್ದವು. ಹೀಗೆಂದು ಶಾಸಕ ಬಸನಗೌಡ ಯತ್ನಾಳ್ ಬಹಿರಂಗವಾಗಿಯೇ ಟೀಕಿಸಿದ್ದೂ ಉಂಟು.

ಮೂಲಗಳ ಪ್ರಕಾರ, ಸೂಕ್ತ ಸಂಪನ್ಮೂಲಗಳನ್ನು ಹೊಂದಿಸಿ ಪಕ್ಷವನ್ನು ಮುನ್ನಡೆಸು ವವರು ಲಭಿಸುವವರೂ ಹಾಲಿ ಅಧ್ಯಕ್ಷರೇ ಇರಬೇಕೆಂಬ ಚಿಂತನೆ ಕೂಡ ಬಿಜೆಪಿಯದು ಎನ್ನಲಾಗಿದೆ.

ಇದು ಮುಂದುವರಿದು ವಿಜಯೇಂದ್ರ ಅವರು ಎರಡನೇ ಅವಧಿಗೂ ಮುಂದುವರಿಯಲೂ ಬಹುದು. ಆದರೆ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ಹೇಗೆ ಎನ್ನುವ ಚಿಂತನೆಗಳಿಗೆ ಪಕ್ಷದ ಹಿರಿಯ ನಾಯಕರಲ್ಲಿ ಉತ್ತರವಿಲ್ಲ. ಹೀಗಾಗಿ ಚಿತ್ರದುರ್ಗದ ಅಭಿಮಾನೋತ್ಸವ ಸಮಾವೇಶದಿಂದ ಪಕ್ಷಕ್ಕೆ ಹಾಗೂ ಸಂಘಟನೆಗೆ ಅಷ್ಟೇನೂ ಲಾಭವಾಗಿಲ್ಲ ಎನ್ನುವ ಬೇಸರ ಪಕ್ಷದ ಅನೇಕ ನಾಯಕರಲ್ಲಿ ಮೂಡಿರು ವುದು ಉಂಟು ಎನ್ನಲಾಗಿದೆ.

ಅಷ್ಟಕ್ಕೂ ಈ ಸಮಾವೇಶ ಯಡಿಯೂರಪ್ಪ ಅವರ ಜೀವನ ಸಾಧನೆಗಳನ್ನು ಸ್ಮರಿಸುವ ಅಭಿಮಾನೋತ್ಸವವಾಗಿದ್ದರಿಂದ ಇಲ್ಲಿ ರಾಜಕೀಯ ಲಾಭವನ್ನಾಗಲಿ, ಸರಕಾರದ ವಿರುದ್ಧ ಬಾಣ, ಬಿರುಸು ಹೂಡುವುದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿಯೇ ಅಮಿತ್ ಶಾ ಸಾಂದರ್ಭಿಕ ವಾಗಿ ಮಾತನಾಡಿ ನಿರ್ಗಮಿಸಿದ್ದರು. ಆದರೆ ಇಡೀ ಸಮಾವೇಶ ಯಾವುದೇ ಅನ್ಯಪಕ್ಷಗಳಿಗೆ ಅವಕಾಶವಿಲ್ಲದ ಸಂಪೂರ್ಣ ಕೇಸರಿಮಯವಾಗಿದ್ದರಿಂದ ನಾಯಕರು, ಕಾಂಗ್ರೆಸ್ ಸರಕಾರ ಮತ್ತು ಸಚಿವರ ಅಕ್ರಮಗಳ ವಿರುದ್ಧ ಗುಡುಗು, ಸಿಡಿಲು ಉದುರಿಸಬಹುದಿತ್ತು ಎನ್ನುವುದೂ ಬಿಜೆಪಿಯ ಕೆಲವು ಶಾಸಕರ ವಾದ.

ಹೈಕಮಾಂಡ್‌ಗೂ ಗೊತ್ತಿದೆ

ಹಾಗೆ ನೋಡಿದರೆ ಬಿಜೆಪಿಯಲ್ಲಿ ಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದ ಯಡಿಯೂರಪ್ಪ ಅವರೇ ಮುಂದಿನ ಚುನಾವಣೆಗೂ ಸಾರಥ್ಯ ವಹಿಸುವುದು ಅನೇಕರಿಗೆ ಹೆಮ್ಮೆ ವಿಚಾರ. ಆದರೆ ಮೂರು ವರ್ಷಗಳಿಂದ ಹತ್ತುಹಲವು ಅಕ್ರಮ ಗಳನ್ನು ಹೊತ್ತ ಸರಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸದಿರು ವುದು ಹಾಗೂ ನಡೆಸುವ ನಾಯಕರಿಲ್ಲದಿರುವುದು ನಮ್ಮ ಅಸಹಾಯಕತೆ ಎನ್ನುತ್ತಾರೆ ಸಮಾವೇಶದಿಂದ ದೂರ ಉಳಿದಿದ್ದವರು.

ಇವರು ರಾಜ್ಯದ ಕೆಲವು ಅಸಹಾಯಕ ಸ್ಥಿತಿಯನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಉತ್ತರದಲ್ಲಿ ಬಿಜೆಪಿ ನಿರೀಕ್ಷಿತ ಗೆಲವು ದಾಖಲಿಸಿರುವ ಕಾರಣ, ಈಗ ಕರ್ನಾಟಕದ ಕಡೆ ಗಮನ ಹರಿಸುವ ಸಾಧ್ಯತೆ ಇದೆ. ಈಗಾಗಲೇ ಕೇರಳ ಮತ್ತು ತಮಿಳು ನಾಡಿನಲ್ಲಿ ನಿರೀಕ್ಷಿತ ಫಲ ಲಭಿಸದ ಕಾರಣ, ರಾಜ್ಯ ಬಿಜೆಪಿಯಲ್ಲಿರುವ ಸಂಘಟನಾ ಸಮಸ್ಯೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸುವ ಹೋರಾಟಗಳು ಮತ್ತು ಸಮರ್ಥ ಸಂಘಟನೆಗಳನ್ನ ಮಾಡುವ ಪ್ರಧಾನ ಕಾರ್ಯದರ್ಶಿಗಳಲ್ಲೇ ಸಮಸ್ಯೆ ಇರುವುದು ಪಕ್ಷದ ಹೈಕಮಾಂಡ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಅಂದರೆ ಪ್ರಧಾನ ಕಾರ್ಯದರ್ಶಿಗಳಾದ ಮಾಜಿ ಸಚಿವ ಸುನೀಲ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಉಳಿದಂತೆ ಪ್ರೀತಂ ಗೌಡ, ನಂದೀಶ್ ರೆಡ್ಡಿ ಹಾಗೂ ರಾಜೀವ್ ಅವರಿಗೆ ಪಕ್ಷ ಸಂಘಟನೆಗಿಂತ ತಮ್ಮದೇ ಉದ್ದೇಶಿತ ಅಜೆಂಡಾಗಳಿಗಾಗಿ ಹೋರಾಡುವವರು ಎನ್ನುವುದನ್ನು ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೋರಾಟಗಳಿಲ್ಲದೆ ಸೊರಗಿದ ಪಕ್ಷ

ಹೀಗಾಗಿ ಇಡೀ ಸಮಾವೇಶದಿಂದ ಪಕ್ಷಕ್ಕೆ ಹೇಳಿಕೊಳ್ಳುವ ಲಾಭವೇನೂ ಆಗಿಲ್ಲ ಎಂದು ಪಕ್ಷದ ಕೆಲವು ಹಿರಿಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸರಕಾರದ ವಿರುದ್ಧ ಪರಿಣಾಮಕಾರಿ ಹೋರಾಟಗಳನ್ನು ರೂಪಿಸಬೇಕಿದ್ದು ಇದಕ್ಕಾಗಿ ಪಕ್ಷದ ನಾಯಕರು ಒಂದಾಗಿ ಶ್ರಮಿಸದಿರುವುದು ಕಾಂಗ್ರೆಸ್ ಗೆ ಲಾಭವಾಗಿದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಣ್ಣ ನೀರಾವರಿ ಇಲಾಖೆ, ಗೃಹ ಇಲಾಖೆ, ವಸತಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಬಿಜೆಪಿಗೆ ಬೇಕಾದಷ್ಟು ಅಕ್ರಮಗಳ ಅಸ್ತ್ರಗಳನ್ನು ನೀಡಿದರೂ ತುಟಿ ಬಿಚ್ಚುತ್ತಿಲ್ಲ. ಇದಕ್ಕೆ ಕಾರಣ, ರಾಜ್ಯದಲ್ಲಿ ಪಕ್ಷ ಸಂಘಟನೆ ಇಲ್ಲದಿರುವುದು. ಅಂದರೆ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಲ್.ಸಂತೋಷ್, ಅರುಣ್ ಹಾಗೂ ರಾಜೇಶ್ ನಂತರ ಕಳೆದ ಮೂರು ವರ್ಷಗಳಿಂದ ಯಾರನ್ನೂ ನೇಮಿಸದಿರುವುದು ಎಂದು ಆರ್ ಎಸ್ ಎಸ್ ನಲ್ಲಿ ಸುದೀರ್ಘ ಕಾಲ ದುಡಿದ ಅನೇಕ ನಾಯಕರು ನೊಂದು ಹೇಳಿದ್ದಾರೆ. ಹಿಂದಿನ ಸಂಘಟನಾ ಕಾರ್ಯದರ್ಶಿ ರಾಜೇಶ್ ವಿರುದ್ಧ ಸಾಕಷ್ಟು ದೂರುಗಳಿದ್ದ ಕಾರಣ, ಪಕ್ಷ ಮತ್ತು ಸಂಘಟನೆಗಾಗಿ ಬದ್ಥತೆಯಿಂದ ದುಡಿಯು ವವರನ್ನು ನೇಮಿಸಬೇಕೆಂದು ಹಿರಿಯ ನಾಯಕರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.