ವಿನುತಾ ಹೆಗಡೆ ಶಿರಸಿ
ಪ್ರಸ್ತಾವಿತ ಬಾವಿಕೇರಿ ಎನ್‌ಟಿಪಿಸಿ ಉಷ ವಿದ್ಯುತ್ ಸ್ಥಾವರಕ್ಕೆ ತಾಂತ್ರಿಕ ಅಡ್ಡಿ
ಸರಕಾರಕ್ಕೆ ಜಿಲ್ಲಾಡಳಿತ ವರದಿ
ಎಲ್ಲ ತರಹದ ವಿದ್ಯುತ್ ತಯಾರಿಕೆಗೆ ಉತ್ತರ ಕನ್ನಡ ಜಿಲ್ಲೆಯೇ ಬೇಕೆ? ಎಂದು ಜಿಲ್ಲೆಯ ಜನರು ಅಸಮಾಧಾನ ವ್ಯಕ್ತಪಡಿಸಿದ್ದಿದೆ. ಅಣು ವಿದ್ಯುತ್ ಸ್ಥಾವರ, ಜಲ ವಿದ್ಯುತ್ ಸ್ಥಾವರ ಇದೀಗ ಉಷ್ಣ ವಿದ್ಯುತ್ ಸ್ಥಾವರದ ಸರದಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆಗೆ ಈಗ ದೊಡ್ಡ ತಾಂತ್ರಿಕ ಅಡ್ಡಿ ಎದುರಾಗಿದೆ. ಈ ಪ್ರದೇಶವು ಬೃಹತ್ ಯೋಜನೆಗೆ ಪೂರಕವಾಗಿಲ್ಲ ಎನ್ನುವ ಸವಿಸ್ತಾರವಾದ ವರದಿಯನ್ನು ಜಿಲ್ಲಾಡಳಿತವು ಸರಕಾರಕ್ಕೆ ಸಲ್ಲಿಸಿದ್ದು, ಯೋಜನೆಯ ಭವಿಷ್ಯ ಈಗ ಅತಂತ್ರವಾಗಿದೆ.
ಬಾವಿಕೇರಿ ಗ್ರಾಮವು ಕೇವಲ ಒಂದು ಕಂದಾಯ ಗ್ರಾಮವಾಗಿ ಉಳಿದಿಲ್ಲ. ಇದು ಭಾರತದ ರಕ್ಷಣಾ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ವರದಿಯ ಪ್ರಕಾರ, ಈ ಪ್ರದೇಶವು ಪ್ರಸ್ತಾಪಿತ ಭಾರತೀಯ ನೌಕಾಪಡೆಯ ವಿಮಾನ ನಿಲ್ದಾಣ ಯೋಜನೆಯ ನೇರ ವ್ಯಾಪ್ತಿಗೆ ಬರುತ್ತದೆ.
ನೌಕಾನೆಲೆಯ ಆವರಣಗಳು ಗ್ರಾಮದ ಮಿತಿಯೊಳಗೆ ಇರುವುದರಿಂದ, ಇಲ್ಲಿ ಬೃಹತ್ ಕೈಗಾರಿಕಾ ಚಟುವಟಿಕೆಗಳು ರಕ್ಷಣಾ ಹಿತಾಸಕ್ತಿಗೆ ಧಕ್ಕೆ ತರಬಹುದು ಎಂಬ ಆತಂಕ ವರದಿಯಲ್ಲಿದೆ.
ಅಣು ವಿದ್ಯುತ್ ಸ್ಥಾವರದ ಸಾಮೀಪ್ಯ: ಜಿಲ್ಲೆಯಲ್ಲಿ ಈಗಾಗಲೇ ಏಷ್ಯಾದಲ್ಲೇ ಹೆಸರಾದ ಕೈಗಾ ಅಣು ವಿದ್ಯುತ್ ಸ್ಥಾವರ ಕಾರ್ಯನಿರ್ವಹಿಸುತ್ತಿದೆ. ಬಾವಿಕೇರಿಯಿಂದ ಕೈಗಾ ಕೇವಲ 45 ರಿಂದ 50 ಕಿ.ಮೀ. ವೈಮಾನಿಕ ದೂರದಲ್ಲಿದೆ. ಅಣು ಸ್ಥಾವರದ ಸುತ್ತಲಿನ ನಿರ್ದಿಷ್ಟ ವ್ಯಾಪ್ತಿಯು ಭದ್ರತಾ ವಲಯ ವಾಗಿರುವುದರಿಂದ, ಅದರ ಸಮೀಪದಲ್ಲಿ ಮತ್ತೊಂದು ಬೃಹತ್ ವಿದ್ಯುತ್ ಸ್ಥಾವರ ಸ್ಥಾಪಿಸುವುದು ತಾಂತ್ರಿಕವಾಗಿ ಮತ್ತು ಭದ್ರತಾ ದೃಷ್ಟಿಯಿಂದ ಅಪಾಯಕಾರಿ ಎಂದು ವಿಶ್ಲೇಷಿಸ ಲಾಗಿದೆ.
ಸಂತ್ರಸ್ತರ ಮೇಲೆ ಮತ್ತೆ ಪ್ರಹಾರ ಬೇಡ: ಬಾವಿಕೇರಿ ಗ್ರಾಮವು ಕೇವಲ ಭೂಮಿಯಲ್ಲ, ಅದು ಸಾವಿರಾರು ಜನರ ಭಾವನೆಗಳ ನೆಲೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಐತಿಹಾಸಿಕ ’ಸೀಬರ್ಡ್’ ನೌಕಾನೆಲೆ ಯೋಜನೆಗಾಗಿ ತಮ್ಮ ಪಿತ್ರಾರ್ಜಿತ ಆಸ್ತಿ ಕಳೆದುಕೊಂಡ ಭೂನಿರಾಶ್ರೀತರು ಇಲ್ಲಿ ಪುನರ್ವಸತಿ ಪಡೆದಿದ್ದಾರೆ. ಒಂದು ಬಾರಿ ದೇಶಕ್ಕಾಗಿ ತ್ಯಾಗ ಮಾಡಿದ ಜನರನ್ನು ಮತ್ತೊಮ್ಮೆ ಒಕ್ಕಲೆಬ್ಬಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂಬ ಅಂಶವನ್ನು ವರದಿಯಲ್ಲಿ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.
ತೀರ್ಮಾನವೇನು?
ಜಿಲ್ಲಾಡಳಿತದ ಈ ವರದಿಯು ಬಾವಿಕೇರಿ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ತಾಂತ್ರಿಕ, ರಕ್ಷಣಾತ್ಮಕ ಮತ್ತು ಮಾನವೀಯ ನೆಲಗಟ್ಟಿನಲ್ಲಿ ಈ ಯೋಜನೆ ಇಲ್ಲಿ ಅಸಾಧ್ಯ ಎಂಬುದು ಜಿಲ್ಲಾಡಳಿತದ ಸ್ಪಷ್ಟ ಅಭಿಪ್ರಾಯವಾಗಿದೆ. ಇದರಿಂದಾಗಿ ಸರಕಾರವು ಈಗ ಪರ್ಯಾಯ ಜಾಗದ ಹುಡುಕಾಟ ನಡೆಸಬೇಕಾದ ಅಥವಾ ಯೋಜನೆಯನ್ನೇ ಕೈಬಿಡಬೇಕಾದ ಅನಿವಾರ್ಯತೆ ಎದುರಾಗಿದೆ.
ಅಡ್ಡಿಗಳೇನು?
ಪ್ರಸ್ತಾವಿತ ಬಾವಿಕೇರಿ ಗ್ರಾಮ ಕಂದಾಯ ಗ್ರಾಮವಲ್ಲ.
ಭಾರತೀಯ ನೌಕಾಪಡೆ ವಿಮಾನ ನಿಲ್ದಾಣ ವ್ಯಾಪ್ತಿಗೆ ಬರಲಿರುವ ಗ್ರಾಮ
ಇಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ದೇಶದ ರಕ್ಷಣಾ ಹಿತಾಸಕ್ತಿಗೆ ಅಡ್ಡಿ ಆತಂಕ
ಆದ್ದರಿಂದ ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರಕ್ಕೆ ತಾಂತ್ರಿಕ ಅಡ್ಡಿ ಎಂದು ವರದಿ
![]()
ಬಾವಿಕೇರಿ ಗ್ರಾಮವು ತಂತ್ರಮೂಲಕ ಹಾಗೂ ಭದ್ರತಾ ದೃಷ್ಟಿಯಿಂದ ಅತ್ಯಂತ ಸಂವೇದನಾಶೀಲ ಪ್ರದೇಶವಾಗಿದೆ. ನೌಕಾಪಡೆ ವಿಮಾನ ನಿಲ್ದಾಣದ ಸಾಮೀಪ್ಯ, ಕೈಗಾ ಅಣು ವಿದ್ಯುತ್ ಸ್ಥಾವರದ ಭದ್ರತಾ ವಲಯ ಹಾಗೂ ಈಗಾಗಲೇ ಇಲ್ಲಿ ನೆಲೆಸಿರುವ ಭೂನಿರಾಶ್ರೀ ತರ ಹಿತದೃಷ್ಟಿಯಿಂದ, ಈ ಭೂಮಿಯು ಎನ್‌ಟಿಪಿಸಿ ಯೋಜನೆಗೆ ಸೂಕ್ತವಲ್ಲ ಎಂಬ ವರದಿಯನ್ನು ಸರಕಾರಕ್ಕೆ ಸಲ್ಲಿಸ ಲಾಗಿದೆ.
-ಕೆ. ಲಕ್ಷ್ಮಿ ಪ್ರಿಯಾ ಉತ್ತರ ಕನ್ನಡ, ಜಿಲ್ಲಾಧಿಕಾರಿ