ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಂಪುಟದಲ್ಲಿ ಬಾಕಿ ಉಳಿದಿರುವ ಎರಡು ಸಚಿವ ಸ್ಥಾನಗಳ ಭರ್ತಿ ವಿಚಾರ ಮತ್ತೆ ನನೆಗುದಿಗೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿಯ ನಂತರ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮೂಲೆ ಸೇರುವ ಸೂಚನೆ ಕಾಣತೊಡಗಿದೆ. ಹಾಗಂತ ಇದಕ್ಕೆ ಸಿದ್ದರಾಮಯ್ಯ ಅವರ ಭೇಟಿ ಕಾರಣವಲ್ಲ.
ಬದಲಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭೇಟಿಯ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಆಗಲಿ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರಗಳಾಗಲಿ ಚರ್ಚೆಗೇ ಬಾರದಿರುವುದು ಮೂಲ ಕಾರಣ. ಅಂದರೆ ಸಂಪುಟದಲ್ಲಿ ಮಹಿಳೆಗೆ ಮೀಸಲು ಎನ್ನಲಾಗುವ ಒಂದು ಸ್ಥಾನವೂ ಸೇರಿದಂತೆ ಖಾಲಿ ಇರುವ ಎರಡು ಮಂತ್ರಿ ಸ್ಥಾನಗಳ ಭರ್ತಿಗೆ ಕಾಂಗ್ರೆಸ್ ಕಳೆದ ಆಗಸ್ಟ್ ನಿಂದಲೂ ತಿಣಕಾಡುತ್ತಿದ್ದು, ಇದು ಸದ್ಯಕ್ಕೆ ಬಗೆಹರಿಯಲಾರದಂತಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ, ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲೂ ಹಿರಿಯೂರು ಉಪಚುನಾವಣೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ದಿನಾಂಕ ಪ್ರಕಟವಾಗಿ ನೀತಿ ಸಂಹಿತೆ ಆರಂಭವಾದರೆ ಸಂಪುಟ ವಿಸ್ತರಣೆ ಕನಿಷ್ಠ ತಿಂಗಳು ಮುಂದೆ ಹೋಗುವ ಸಾಧ್ಯತೆ ಇದೆ. ನಂತರ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಸಂಸತ್ ಅಧಿವೇಶನ ಕೂಡ ಜರುಗುವ ಸಂಭವವಿದೆ. ಇನ್ನು ಸರ್ಕಾರ ಈಗಾಗಲೇ ಹೇಳಿರುವಂತೆ ಜನವರಿಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ದಿನಾಂಕ ಪ್ರಕಟವಾದರೆ ಅನಂತರ ರಾಜ್ಯ ಬಜೆಟ್ ಸಿದ್ಧತೆ ಶುರುವಾಗುತ್ತದೆ.
ಇದನ್ನೂ ಓದಿ: Bangalore News: ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ
ಇಷ್ಟೆಲ್ಲ ಒತ್ತಡಗಳ ನಡುವೆಯೂ ಖಾಲಿಯಿರುವ ಮಂತ್ರಿ ಸ್ಥಾನಗಳನ್ನಾಗಲಿ, ನಿಗಮ ಮಂಡಳಿ ಅಧ್ಯಕ್ಷರ ನೇಮಕಗಳನ್ನಾಗಲಿ ಭರ್ತಿ ಮಾಡಿ ಪಕ್ಷದ ನಾಯಕರು ಶಾಸಕರು ಮತ್ತು ಕಾರ್ಯರ್ತರ ನಿರೀಕ್ಷೆ ಈಡೇರಿಸುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಸಚಿವ ಆಕಾಂಕ್ಷಿ ಶಾಸಕರು. ಹಾಗೆ ನೋಡಿದರೆ, ನಿರೀಕ್ಷೆಯಂತೆ ನಾಯಕತ್ವ ಬದಲಾವಣೆ ಸಂದರ್ಭದ ಖಾಲಿ ಉಳಿದಿರುವ ಎರಡೂ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡಬೇಕಿತ್ತು. ಆದರೆ ಸಂಪುಟದಲ್ಲಿ ಮಹಿಳೆಗೆ ಅವಕಾಶ ಕೊಡುವುದಾದರೆ ಯಾರಿಗೆ ಕೊಡಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ನಾಯಕರ ಹಗ್ಗಜಗ್ಗಾಟ ನಡೆದು ನನೆಗುದಿಗೆ ಬಿದ್ದಿತ್ತು.
ಜೊತೆಗೆ ಒಂದೇ ಹಗರಣದ ಆರೋಪಕ್ಕೆ ಸಚಿವರಾಗಿದ್ದ ನಾಗೇಂದ್ರ ಎರಡು ಬಾರಿ ರಾಜೀನಾಮೆ ಸಲ್ಲಿಸಬೇಕಾಗಿತ್ತು. ಆಗ ಮುಂದೂಡಿದ್ದ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ವಿಚಾರ ಮತ್ತೆ ಮುನ್ನೆಲೆಗೆ ಬರಲೇ ಇಲ್ಲ. ಹೀಗಾಗಿ ಇತ್ತೀಚೆಗೆ ಸಿದ್ದರಾಮಯ್ಯ- ರಾಹುಲ್ ಗಾಂಧಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ಆಗಲಿದೆ. ಆನಂತರ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರನ್ನು ಕರೆಸಿ ವಿಸ್ತರಣೆ ಮತ್ತು ನಿಗಮ ಮಂಡಳಿ ವಿಚಾರಗಳನ್ನು ಅಂತಿಮ ಗೊಳಿಸುತ್ತಾರೆ ಎನ್ನುವ ಲೆಕ್ಕಾಚಾರವಿತ್ತು. ಆದರೆ ಹೈಕಮಾಂಡ್ ಅಂಗಳದಲ್ಲಿ ಇದು ಚರ್ಚೆಗೇ ಬಾರದೆ ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಕಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪ್ರಾತಿನಿಧ್ಯ ಮರೀಚಿಕೆ
ಇದೀಗ ಹಿರಿಯೂರು ಉಪಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಬೆಳಗಾವಿ ಅಧಿವೇಶನ ಸಂಪುಟ ವಿಸ್ತರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದಾದ ಮೇಲೆ ಜಿಲ್ಲಾ ಪಂಚಾಯತ್ ಚುನಾವಣೆ ಹಾಗೂ ನಂತರದ ಬಜೆಟ್ ಸಿದ್ಧತೆಗಳು ಎದುರಾಗಲಿವೆ. ಈ ವೇಳೆ ಒತ್ತಡ ಸೃಷ್ಟಿಯಾದರೆ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ಲಭಿಸಲಿದೆ. ಒಂದೊಮ್ಮೆ ವಿವಿಧ ಕಾರಣಗಳನ್ನು ಮುಂದೊಡ್ಡಿ ವಿಸ್ತರಣೆ ಮುಂದೂಡುತ್ತಾ ಹೋದರೆ, ಉಳಿದ ಅವಧಿಗೆ ಸರ್ಕಾರದಲ್ಲಿ ಮಹಿಳಾ ಪ್ರತಿನಿಧಿತ್ವವೇ ಇಲ್ಲದಂತಾಗುವ ಸಂಭವ ಕಾಣುತ್ತಿದೆ ಎಂದು ಮಹಿಳಾ ಶಾಸಕರು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಏಕೆ ಕಷ್ಟ ಆಗುತ್ತಿದೆ?
ಸಂಪುಟ ವಿಸ್ತರಣೆಯ ವೇಳೆ ಕೊನೆ ಗಳಿಗೆಯಲ್ಲಿ ಆದ ಬದಲಾವಣೆ ಪರಿಣಾಮ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಂತ್ರಿ ಸ್ಥಾನ ತಪ್ಪಿಸಿಕೊಂಡರು. ಅನಂತರ ಈ ಸ್ಥಾನವನ್ನು ಎಸ್ಟಿ ಸಮುದಾಯದ ಮಹಿಳೆ ಅನ್ನಪೂರ್ಣ ತುಕಾರಾಂ ಅವರಿಗೆ ನೀಡಬೇಕೆನ್ನುವ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆದವು. ಆದರೆ ಅನ್ನಪೂರ್ಣ ಅವರಿಗೆ ಕೊಡುವ ಬದಲು ಅದೇ ಸಮುದಾಯದ ಶಾಸಕರಿಗೆ ನೀಡಬೇಕೆನ್ನುವ ಬಗ್ಗೆ ಸಮುದಾಯದ ನಾಯಕರ ಭಿನ್ನಾಭಿಪ್ರಾಯವಿದೆ ಎನ್ನಲಾಗಿದೆ. ಈ ಮಧ್ಯೆ ಹೈಕಮಾಂಡ್ ನಾಯಕರೊಬ್ಬರು ಗಾಯತ್ರಿ ಪರ ಇನ್ನು ಬ್ಯಾಟಿಂಗ್ ಮಾಡುತ್ತಿದ್ದಾರೆ ಇಂದು ತಿಳಿದು ಬಂದಿದೆ. ಉಳಿದೊಂದು ಸ್ಥಾನಕ್ಕೆ ಬಸವರಾಜ ಶಿವಣ್ಣನವರ್ ಹೆಸರು ಅಂತಿಮ ಗೊಂಡಿದೆ ಎನ್ನಲಾಗಿದೆ