ಬಿಹಾರದ ನಗರ, ಪಟ್ಟಣ ಪ್ರದೇಶಗಳು ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದ್ದರೂ, ಜಾತಿ ಸಮೀಕರಣ, ಲೆಕ್ಕಾಚಾರಗಳು ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಆಳವಾಗಿ ಬೇರೂರಿದೆ. ನಗರಗಳ ಸೀಮಿತ ಯುವ ವರ್ಗ ಜಾತಿ ಸಂಕೋಲೆಯಿಂದ ಆಚೆ ಬಂದು ಯೋಚಿಸುತ್ತಿದ್ದರೂ, ಸಣ್ಣಸಣ್ಣ ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಜಾತೀಯ ಚಿಂತನೆಗಳು ಮೊದಲಿನಷ್ಟೇ ಇವೆ.
ಬಿಹಾರದಲ್ಲಿ ಈಗಲೂ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ ಮತ್ತು ಅದನ್ನು ಅಳಿಸಿ ಹಾಕುವುದು ಅಷ್ಟೊಂದು ಸುಲಭವೂ ಅಲ್ಲ. ರಾಜ್ಯದ ಮೇಲ್ವರ್ಗದ ರಜಪೂತರು, ಭೂಮಿಹಾರ್, ಬ್ರಾಹ್ಮಣ, ಕಾಯಸ್ಥರು ಮತ್ತು ಇತರೆ ಹಿಂದುಳಿದ ವರ್ಗದ ಯಾದವರನ್ನು (ರಾಜಕೀಯ ಪ್ರಾಬಲ್ಯ ಹೊಂದಿದ ಮತ್ತೊಂದು ಜಾತಿ) ಪರಸ್ಪರ ದ್ವೇಷ ಇರುವುದನ್ನು ರಾಜ್ಯದ ಹಲವೆಡೆ ಕಾಣಬಹುದು.
ಭೋಜಪುರ್ ಜಿಲ್ಲೆಯ ಬರ್ಹಾರ ವಿಧಾನಸಭೆಯಲ್ಲಿ ಪ್ರವಾಸ ಮಾಡುತ್ತಿದ್ದಾಗ ನಾಲ್ಕೈದು ರಜಪೂತ್ ಸಮುದಾಯದ ಯುವಕರು ಸಿಕ್ಕರು. ನಿಮ್ಮ ಊರು ಏಕೆ ಸ್ವಚ್ಛವಾಗಿಲ್ಲ ಎಂದು ಕೇಳಿದ್ದಕ್ಕೆ, ‘ನೋಡಿ ಸಾರ್, ನಾವು ಮೇಲ್ಜಾತಿಯವರು, ಎಲ್ಲವನ್ನೂ ಕ್ಲೀನ್ ಆಗಿ ಇಟ್ಟುಕೊಳ್ಳುತ್ತೇವೆ. ಆದರೆ ಇತರೆ ಕೆಲ ಜಾತಿಯವರು ಕಸ-ತ್ಯಾಜ್ಯಗಳನ್ನು ತಂದು ಇಲ್ಲೇ ಹಾಕುತ್ತಾರೆ. ನಮ್ಮಷ್ಟು ಸಂಸ್ಕಾರ ಅವರಲ್ಲಿಲ್ಲ’ ಎಂದು ಹೇಳಿದ.
‘ಅಂದರೆ ನಿನ್ನ ಮಾತಿನ ಅರ್ಥ, ಇಲ್ಲಿ ಸಂಸ್ಕಾರ ಇರುವುದು ಮೇಲ್ಜಾತಿಯವರಿಗೆ ಮಾತ್ರವೇ?’ ಎಂದು ನಾನು ಕೇಳಿದ್ದಕ್ಕೆ, ‘ಹೌದು’ ಎಂದು ಗಟ್ಟಿ ಧ್ವನಿಯಲ್ಲೇ ಹೇಳಿದ. ಆತ ಯಾದವರನ್ನು ಉದ್ದೇಶಿಸಿ ಹೇಳಿದ್ದ ಮತ್ತು ಇಲ್ಲಿ ಅವರೊಂದಿಗೆ ರಜಪೂತರ ಸಂಘರ್ಷ ಸ್ವಲ್ಪ ಹೆಚ್ಚೇ ಇದೆ ಎಂಬುದನ್ನು ಆ ಯುವಕರೇ ಒಪ್ಪಿಕೊಂಡರು.
ಬರ್ಹಾರದಲ್ಲಿ ಆರ್.ಜೆ.ಡಿ. ಮತ್ತು ಬಿಜೆಪಿಯಿಂದ ಇಬ್ಬರೂ ರಜಪೂತ ಸಮುದಾಯದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. 2015ರಲ್ಲಿ ಆರ್.ಜೆ.ಡಿಯಿಂದ ಗೆದ್ದಿದ್ದ ಯಾದವ ಸಮಾಜದ ಸರೋಜ್ ಯಾದವ್ ಮಹಾಘಟಬಂಧನದಿಂದ ಟಿಕೆಟ್ ಕೇಳಿದ್ದರೂ, ತೇಜಸ್ವಿ ಯಾದವ್ ಟಿಕೆಟ್ ನೀಡಲಿಲ್ಲ ಮತ್ತು ಅನಿವಾರ್ಯವಾಗಿ ಆ ಭಾಗದ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲ ರಜಪೂತ ಸಮುದಾಯಕ್ಕೆ ಮಣೆ ಹಾಕಬೇಕಾಯಿತು.
ರಜಪೂತ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಅತಿ ಹೆಚ್ಚು ಜನಸಂಖ್ಯೆ ಇರುವ ನಾವೆಲ್ಲರೂ ಒಗ್ಗೂಡಿ ಬಿಜೆಪಿಗೆ ಮತ ಹಾಕಲಿದ್ದೇವೆ ಎಂದು ಸಮುದಾಯ ಮುಖಂಡರು ಬೆದರಿಕೆ ಹಾಕಿದ್ದರಿಂದ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕೊನೆಗೆ ಬರ್ಹಾರಕ್ಕೆ ಆರ್.ಜೆ.ಡಿ. ಅಭ್ಯರ್ಥಿಯನ್ನು ಘೋಷಿಸಲಾಗಿತ್ತು.
2015ರಲ್ಲಿ ಯಾದವ ಸಮುದಾಯದ ಸರೋಜ್ ಯಾದವ್‌ಇಲ್ಲಿ ಶಾಸಕರಾದಲ್ಲಿಂದ ರಜಪೂತ-ಯಾದವ ಸಂಘರ್ಷ ಮತ್ತೆ ಜೋರಾಗಿದೆ. ಇಲ್ಲಿ ರಜಪೂತರ ಪ್ರಾಬಲ್ಯದಿಂದ ಕ್ಷೇತ್ರವನ್ನು ಬರ್ಹಾರ ‘ಚಿತ್ತೋರ್‌ಗಢ’ ಎಂದೇ ರಜಪೂತರು ಕರೆಯುತ್ತಾರೆ. ಚಿತ್ತೋರ್’ಗಢ ರಾಜಸ್ಥಾನದಲ್ಲಿದ್ದು, ಆ ಭಾಗವನ್ನು ರಜಪೂತ ಅರಸು ಮನೆತನ ಆಳಿದ್ದರಿಂದ ತಮ್ಮ ಊರಿಗೆ ಕೂಡ ಚಿತ್ತೋರ್‌ಗಢ ಎಂಬ ಹೆಚ್ಚುವರಿ ಶಬ್ದವನ್ನು ರಜಪೂತರು ಸೇರಿಸಿ ಕೊಂಡಿದ್ದಾರೆ.
ಆದರೆ ಇದು ಸರೋಜ್ ಯಾದವ್‌ಗೆ ಹಿಡಿಸಿಲ್ಲ ಮತ್ತು ಈ ಸಲದ ಟಿಕೆಟ್ ಘೋಷಣೆಗೆ ಸುಮಾರು ೧೦ ದಿನಕ್ಕೆ ಮುನ್ನ, ನಾನು ಮತ್ತೆ ಶಾಸಕನಾದರೆ ಬರ್ಹಾರ ಹೆಸರಿಗೆ ಹೆಚ್ಚುವರಿ ಯಾಗಿ ಸೇರಿಸಿರುವ ಚಿತ್ತೋರಗಢ ಹೆಸರನ್ನು ಕಿತ್ತುಹಾಕುತ್ತೇನೆ ಎಂದು ಹೇಳಿದ್ದರು.
ಇದು ರಜಪೂತರ ಆಕ್ರೋಶದ ಕಿಡಿ ಹೆಚ್ಚಿಸಿ, ತೇಜಸ್ವಿ ಯಾದವ್‌ಗೂ ಅದರ ಬಿಸಿ ತಟ್ಟಿತ್ತು. ಸರೋಜ್ ಯಾದವ್‌ಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದ ತೇಜಸ್ವಿ ಯಾದವ್ ಅದರಿಂದ ಹಿಂದೆ ಸರಿದು, ರಜಪೂತರ ಒತ್ತಡಕ್ಕೆ ಮಣಿದರು. ಅಂತಿಮವಾಗಿ ರಜಪೂತ ಸಮುದಾಯದ ಅಶೋಕ್‌ಕುಮಾರ್ ಸಿಂಗ್‌ಗೆ ಟಿಕೆಟ್ ನೀಡಲಾಯಿತು.
ಇದರಿಂದಾಗಿ ಯಾದವರು ಅಸಮಾಧಾನಗೊಂಡಿದ್ದು, ಎನ್ ಡಿಎ ಮೈತ್ರಿಕೂಟ ಮತ್ತು ಮಹಾಘಟಬಂಧನ ಎರಡರ ಸಹವಾಸವೂ ಬೇಡ ಎಂದು ಪಕ್ಷೇತರನಾಗಿ ಸ್ಪರ್ಧಿಸುತ್ತಿರುವ ಸರೋಜ್ ಯಾದವ್‌ರನ್ನು ಬೆಂಬಲಿಸಲೂಬಹುದು. ಯಾದವರ ಮತಗಳ ವಿಭಜನೆಯಾಗಿ ಎನ್‌ಡಿಎಗೆ ಲಾಭವಾದರೂ ಅಚ್ಚರಿ ಇಲ್ಲ.
‘ನಾವು ಪಾಸ್ವಾನ್ ಅಥವಾ ದಲಿತರನ್ನು ದ್ವೇಷಿಸುವುದಿಲ್ಲ. ಆದರೆ ಯಾದವರನ್ನು ಒಪ್ಪುವುದಿಲ್ಲ. ಸ್ವಲ್ಪ ಸಡಿಲ ಬಿಟ್ಟರೆ ಅಟ್ಟಹಾಸ ಮೆರೆಯುತ್ತಾರೆ. ಹೀಗಾಗಿ ಮಹಾಘಟ ಬಂಧನದಿಂದ ರಜಪೂತರನ್ನೇ ಆಯ್ಕೆ ಮಾಡಿದ್ದೇವೆ’ ಎಂದು ರಜಪೂತ ಯುವಕ ರಂಜಿತ್ ಕುಮಾರ್ ಸಿಂಗ್ ಹೇಳುತ್ತಾರೆ.
ಬೋಧಗಯಾದ ಮಹಾ ಬೋಧಿವಿಹಾರದ ಹೊರಭಾಗದಲ್ಲಿ ಕಳೆದ ೧೦ ವರ್ಷಗಳಿಂದ ಎಳನೀರು ಮಾರುತ್ತಿರುವ ಸಾವ್(ಗಾಣಿಗ) ಸಮುದಾಯದ ಚಂದನ್‌ಕುಮಾರ್‌ಸಾವ್, ‘ಯಾದವ ಪರಿವಾರದ ಹತೋಟಿ ಇರುವ ಆರ್.ಜೆ.ಡಿ. ಮತ ಹಾಕಲಾರೆ. 2005ರಿಂದ ನಿತೀಶ್ ಆಡಳಿತ ಶುರುವಾದಲ್ಲಿಂದ ಯಾದವರ ಅಟ್ಟಹಾಸ ಕಡಿಮೆಯಾಗಿದೆ.
ಹಿಂದುಳಿದವರ ಪರ ಕೆಲಸ ಮಾಡುತ್ತೇನೆ ಎಂದ ಲಾಲೂ ತನ್ನ ಸಮುದಾಯದ ಹಿತವನ್ನಷ್ಟೇ ಕಾಪಾಡಿದರು. ನಿತೀಶ್-ಮೋದಿ ಅವಧಿಯಲ್ಲಿ ಬಿಹಾರ ತುಂಬಾ ಬದಲಾಗಿದೆ. ಅಂದಿನ ಜಂಗಲ್‌ರಾಜ್ ನೆನೆಸಿಕೊಂಡರೆ ಭಯವಾಗುತ್ತದೆ. ನಮ್ಮ ಸಮುದಾಯ ಜೆಡಿಯು-ಬಿಜೆಪಿಯನ್ನೇ ಬೆಂಬಲಿಸುವುದು’ ಎಂದು ಹೇಳಿದ.
ಪಕ್ಕದಲ್ಲಿದ್ದ ಮತ್ತೋರ್ವ ವ್ಯಾಪಾರಿ ಕೂಡ ನಿಮ್ಮ ಸಮುದಾಯದವರೇ ಎಂದು ಕೇಳಿದ್ದಕ್ಕೆ, ಕಿವಿ ಹತ್ತಿರ ಬಂದು, ಆತ ಯಾದವ್ ಮತ್ತು ತೇಜಸ್ವಿ ಯಾದವ್ ಅಭಿಮಾನಿ ಎಂದು ಮೆಲ್ಲಗೆ ಹೇಳಿದ. ಗಯಾದ ಅತ್ರಿ ವಿಧಾನಸಭೆಯಲ್ಲಿ ಸಿಕ್ಕ ಅಲ್ತಾಫ್ ಅಹ್ಮದ್, ‘ಜಂಗಲ್‌ರಾಜ್ ಈಗಲೂ ನಡೆಯುತ್ತಿಲ್ಲವೇ? ಲಾಲೂ ಅಧಿಕಾರದಲ್ಲಿದ್ದಾಗ ಯಾದವರು ಜಂಗಲ್ ರಾಜ್ ಮಾಡಿದ್ದು ಎಂಬ ಸುಳ್ಳು ನರೇಟಿವ್ ಮಾಡಲಾಯಿತು.
ಇದರಿಂದ ಉಳಿದ ಜಾತಿಯವರನ್ನು ಯಾದವರಿಂದ ಪ್ರತ್ಯೇಕಿಸುವ ಯತ್ನ ಮಾಡಲಾಯಿತು. ಜಂಗಲ್‌ರಾಜ್‌ಗೆ ಎಲ್ಲಾ ಜಾತಿಯವರೂ ಕಾರಣ. ಯಾದವರು ಸಿಎಂ ಆಗಬಾರದು ಎಂದು ಈ ರೀತಿ ಆರೋಪ ಮಾಡಲಾಗುತ್ತಿದೆ’ ಎಂದು ಹೇಳಿದ.
ಪಟನಾದಲ್ಲಿ 55 ವಯಸ್ಸಿನ ವ್ಯಾಪಾರಿ ವಿದ್ಯಾಭೂಷಣ್ ಕುಮಾರ್ ಎಂಬವರ ಬಳಿ ಮಾತಾಡುತ್ತಿದ್ದಾಗ, ‘ನನಗೆ ಅಭಿವೃದ್ಧಿಯಷ್ಟೇ ಜಾತಿ ಕೂಡ ಮುಖ್ಯ. ನನ್ನ ಕ್ಷೇತ್ರದ ಅಭ್ಯರ್ಥಿ ಯಾವ ಜಾತಿ ಎಂಬುದನ್ನು ನೋಡಿಯೇ ಮತ ಹಾಕುವುದು’ ಎಂದು ಮುಲಾಜಿಲ್ಲದೆ ತಿಳಿಸಿದರು.
ಗೋಪಾಲ್ ಗಂಜ್ ಜಿಲ್ಲೆಯ ಬೋರೆ ಕ್ಷೇತ್ರದ ಉಷಾದೇವಿ ಎಂಬ ಮಹಿಳೆಗೆ ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆ ಅಡಿಯಲ್ಲಿ ರೂ. ೧೦ ಸಾವಿರ ಹಣ ಖಾತೆಗೆ ಜಮೆ ಆಗಿದೆ. ‘ನೀವು ಯಾರೊಂದಿಗೆ ಇದ್ದೀರಿ?’ ಎಂಬ ನನ್ನ ಪ್ರಶ್ನೆಗೆ, ನಾವು ಮೋದಿ ಜತೆಗೆ ಎಂದರು.
ನಿತೀಶ್ ಬಗ್ಗೆ ಅಭಿಮಾನ ಇಲ್ಲವೇ ಎಂದು ಕೇಳಿದ್ದಕ್ಕೆ, ‘ನನಗೆ ಮೋದಿ ಇಷ್ಟ. ನಾನು ಅವರದ್ದೇ ಜಾತಿಯವಳು’ (ಗುಜರಾತಿನಲ್ಲಿ ಮೋದ್-ಗಾಂಚಿ ಮತ್ತು ಬಿಹಾರದಲ್ಲಿ ಸಾಹ್) ಎಂದು ತನ್ನ ಕೈಯಲ್ಲಿದ್ದ ಸೀರೆಯ ಪಲ್ಲುವನ್ನು ಬಾಯಿಗೆ ಹಿಡಿದು ನಕ್ಕಳು. ಬಿಹಾರದ ನಗರ, ಪಟ್ಟಣ ಪ್ರದೇಶಗಳು ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದ್ದರೂ, ಜಾತಿ ಸಮೀಕರಣ, ಲೆಕ್ಕಾಚಾರಗಳು ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಆಳವಾಗಿ ಬೇರೂರಿದೆ.
ನಗರಗಳ ಸೀಮಿತ ಯುವ ವರ್ಗ ಜಾತಿ ಸಂಕೋಲೆಯಿಂದ ಆಚೆ ಬಂದು ಯೋಚಿಸು ತ್ತಿದ್ದರೂ, ಸಣ್ಣಸಣ್ಣ ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಜಾತೀಯ ಚಿಂತನೆಗಳು ಮೊದಲಿ ನಷ್ಟೇ ಇವೆ. ಇಲ್ಲಿ ಜಾತಿ ಕೇವಲ ಸಾಮಾಜಿಕ ಗುರುತಲ್ಲ, ಅದು ರಾಜಕೀಯದ ಅಡಿಪಾಯ. ಭಾರತದ ಬೇರೆ ಕೆಲವು ರಾಜ್ಯಗಳಲ್ಲಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಗಳ ಮೇಲೆ ಜಾತಿ ಪ್ರಭಾವ ನಿಧಾನವಾಗಿ ಹಿಡಿತ ಕಳೆದುಕೊಳ್ಳುತ್ತಿದ್ದರೂ, ಬಿಹಾರದಲ್ಲಿ ಮಾತ್ರ ಜಾತಿ ಇಂದಿಗೂ ಅತ್ಯಂತ ಬಲಿಷ್ಠ ಶಕ್ತಿಯಾಗಿ ಉಳಿದುಕೊಂಡಿದೆ.
ವ್ಯಕ್ತಿಗಳು ಪರಸ್ಪರ ಕೌನ್‌ಜಾತ್ ಎಂದು ಕೇಳುವುದು ಇಲ್ಲಿ ಮಾಮೂಲು. ಬಿಹಾರದ ಹಿಂದುಳಿದಿರುವಿಕೆ, ನಿರುದ್ಯೋಗ ಮತ್ತು ಕಳಪೆ ಕೈಗಾರಿಕಾ ಅಭಿವೃದ್ಧಿ ಹಿಂದೆ ಜಾತಿ ರಾಜಕೀಯದಿಂದ ಸೃಷ್ಟಿಸಲ್ಪಟ್ಟ ಸಾಮಾಜಿಕ ವಿಭಜನೆಗಳೂ ಕಾರಣ. 2023ರಲ್ಲಿ ಬಿಹಾರ ಸರ್ಕಾರ ನಡೆಸಿದ ಜಾತಿ-ಜನಗಣತಿಯಲ್ಲಿ ಅತ್ಯಂತ ಹಿಂದುಳಿದ ವರ್ಗ (ಇಬಿಸಿ)-36%, ಇತರ ಹಿಂದುಳಿದ ವರ್ಗ (ಒಬಿಸಿ)-27%, ಪರಿಶಿಷ್ಟ ಜಾತಿ/ಪಂಗಡಗಳು (ಎಸ್‌ಸಿ/ಎಸ್‌ಟಿ)-೧೯%, ಮುಸ್ಲಿಮರು-೧೭% ಮತ್ತು ಮೇಲ್ಜಾತಿಗಳು (ಬ್ರಾಹ್ಮಣ, ರಜಪೂತ, ಭೂಮಿಹಾರ್, ಬನಿಯಾಗಳು)-೧೫% ಇದ್ದಾರೆ ಎಂದು ದಾಖಲಾಗಿದೆ.
೧೫% ಮೇಲ್ಜಾತಿ ಹೊರತುಪಡಿಸಿ ಉಳಿದೆಲ್ಲವೂ ಹಿಂದುಳಿದ ಅಥವಾ ಅಂಚಿನಲ್ಲಿರುವ ಸಮುದಾಯಗಳಾಗಿದ್ದು, ಇವರೆಲ್ಲರ ಮತಗಳನ್ನು ಸೆಳೆಯಲು ಎಲ್ಲಾ ಪಕ್ಷಗಳು ಪ್ರಯತ್ನಿಸು ತ್ತಲೇ ಇರುತ್ತವೆ.
ಜನ ಸುರಾಜ್ ಪಕ್ಷದ ಪ್ರಶಾತ್ ಕಿಶೋರ್ ಅವರು ಈ ಬಾರಿ ಚುನಾವಣಾ ಅಖಾಡಕ್ಕಿಳಿದು, ಜಾತಿ-ಮತಗಳಾಚೆ ನೋಡಿ ಮತ ಹಾಕಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತದಾನ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಜಾತಿ ಆಚೆ ಯೋಚನೆ ಮಾಡುವ ಮತವರ್ಗ ಇಲ್ಲಿ ಕಡಿಮೆ ಎಂದು ಅನೇಕರು ಹೇಳಿದರೂ, ಪ್ರಶಾಂತ್ ಕಿಶೋರ್ ಪ್ರಸ್ತಾಪಿಸಿದ ವಿಚಾರ ಗಳು ನಗರ-ಪಟ್ಟಣಗಳ ಯುವಕರನ್ನು ಸೆಳೆದಿದೆ.
ಹೀಗಾಗಿ, ಮೇಲ್ಜಾತಿ ಸೇರಿದಂತೆ ವಿವಿಧ ಜಾತಿಗಳ ನಗರ-ಪಟ್ಟಣಗಳ ಭಾಗದ ಎರಡೂ ಮೈತ್ರಿಕೂಟಗಳ ಯುವ ಮತವರ್ಗದಲ್ಲಿ ಎಷ್ಟು ಮಂದಿ ಜನ ಸುರಾಜ್ ಕಡೆ ಶಿಫ್ಟ್ ಆಗುತ್ತಾರೆ ಎಂಬುದೂ ಕುತೂಹಲಕರ ಅಂಶ.
ಭುರಾಬಲ್ ಸಾಫ್ ಕರೋ: 1990 ದಶಕದ ಆರಂಭದಲ್ಲಿ ಲಾಲು ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ಭುರಾಬಲ್ ಸಾಫ್ ಕರೋ (ಮೇಲ್ಜಾತಿಯನ್ನು ತೆಗೆದುಹಾಕಿ) ಎಂಬ ಕರೆ ನೀಡಿದ್ದರು. ಇದು ಮೇಲ್ಜಾತಿಗಳ ಅತೀವ ಆಕ್ರೋಶಕ್ಕೆ ಕಾರಣವಾಗಿತ್ತು. ತನ್ನನ್ನು ತಾನು ಹಿಂದುಳಿದ ವರ್ಗಗಳ ಚಾಂಪಿಯನ್ ಎಂಬುದಾಗಿ ಬಿಂಬಿಸಿಕೊಳ್ಳುವುದು ಲಾಲೂ ಉದ್ದೇಶವಾಗಿತ್ತು. ಭೂರಾಬಲ್ ಎಂದರೆ ಬಿಹಾರದಲ್ಲಿ ಭೂಮಿಹಾರ್, ರಜಪೂತ್, ಬ್ರಾಹ್ಮಣ ಮತ್ತು ಲಾಲಾ (ಕಾಯಸ್ಥ) ಜಾತಿಯವರು ಎಂದರ್ಥ.
ಲಾಲೂ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪ್ರಭಾವಳಿ ಕಡಿಮೆಯಾಗಿ, ಕಾಂಗ್ರೆಸ್ ಆರ್.ಜೆ.ಡಿ. ಜತೆ ಕೈಜೋಡಿಸಿತು. ಇದರಿಂದಾಗಿ ಕಾಂಗ್ರೆಸ್ ಜತೆಗಿದ್ದ ಮೇಲ್ಜಾತಿಗಳು ಬಿಜೆಪಿ ಮತ್ತು ಜೆಡಿಯು ಕಡೆ ನಿಧಾನವಾಗಿ ವರ್ಗಾವಣೆಗೊಳ್ಳುತ್ತಾ ಬಂದವು. ಈಗ ಎನ್‌ಡಿಎ ಮೈತ್ರಿಕೂಟದ ಬೆನ್ನೆಲುಬು ಈ ನಾಲ್ಕು ಜಾತಿಗಳೇ ಆಗಿವೆ.
ಭೂಮಿಹಾರರ ಪ್ರಭಾವ: ಶೇಕಡಾ ೩ಕ್ಕಿಂತ ಕಡಿಮೆ ಮತಗಳನ್ನು ಹೊಂದಿರುವ ಭೂಮಿಹಾರರಿಗೆ ಇಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಸಾಂಪ್ರದಾಯಿಕ ವಾಗಿ ಮೇಲ್ಜಾತಿ (ಬ್ರಾಹ್ಮಣರಿಗೆ ಬಹುತೇಕ ಸಮಾನ) ಎಂದು ಪರಿಗಣಿಸ ಲ್ಪಟ್ಟ ಅವರು, ಬಿಹಾರದ ರಾಜಕೀಯದಲ್ಲಿ ಹೆಚ್ಚು ಅಧಿಕಾರ ಸ್ಥಾಪಿಸಿದ್ದಾರೆ. ಅವರು ಮಹಾನ್ ಬೌದ್ಧ ಚಕ್ರವರ್ತಿ ಅಶೋಕನಿಂದ ಭೂದಾನಗಳನ್ನು ಪಡೆದ ಬ್ರಾಹ್ಮಣರು ಎಂದು ನಂಬಲಾಗಿದೆ. ಭೂಮಿಹಾರರು ಹಿಂದೂ ಧರ್ಮಕ್ಕೆ ಮರಳಲು ನಿರ್ಧರಿಸಿದ ನಂತರ, ಹಿಂದೂ ಪುರೋಹಿ ತರು ಅವರಿಗೆ ಧಾರ್ಮಿಕ ಶ್ರೇಣೀಕೃತ ಬ್ರಾಹ್ಮಣರ ಪಕ್ಕದ ಸ್ಥಾನಮಾನ ನೀಡಿದರು. ಅವರನ್ನು ಬ್ರಾಹ್ಮಣರು ಮತ್ತು ರಜಪೂತರ ಮಿಶ್ರಣವೆಂದು ಕೆಲವರು ಪರಿಗಣಿಸುತ್ತಾರೆ. ಸಾಂಪ್ರದಾಯಿಕವಾಗಿ ಅವರು ಭೂಮಾಲೀಕರಾಗಿದ್ದಾರೆ.
ಜಾತಿ ಮತ್ತು ಜನ ನಾಯಕರು
ನಿತೀಶ್ ಕುಮಾರ್ (ಜೆಡಿಯು)-ಕುರ್ಮಿ (ಒಬಿಸಿ) ತೇಜಸ್ವಿ ಯಾದವ್ (ಆರ್.ಜೆ.ಡಿ.)-ಯಾದವ (ಒಬಿಸಿ) ಸಾಮ್ರಾಟ್ ಚೌಧುರಿ (ಬಿಜೆಪಿ)-ಖುಶ್ವಾಹ (ಒಬಿಸಿ) ಉಪೇಂದ್ರ ಖುಶ್ವಾಹ (ಆರ್.ಎಲ್.ಎಸ್.ಪಿ.) -ಖುಶ್ವಾಹ (ಒಬಿಸಿ) ಜೀತನ್ ರಾಮ್ ಮಾಂಜಿ (ಎಚ್.ಎ.ಎಂ)-ಮಾಂಜಿ (ಎಸ್ಸಿ) ಚಿರಾಗ್ ಪಾಸ್ವಾನ್ (ಎಲ್.ಜೆ.ಪಿ.)-ಪಾಸ್ವಾನ್ (ಎಸ್ಸಿ) ಪ್ರಶಾಂತ್ ಕಿಶೋರ್ (ಜ.ಸುರಾಜ್)-ಪಾಂಡೆ ಬ್ರಾಹ್ಮಣ (ಫಾರ್ವರ್ಡ್).