ಕೆ.ಜೆ.ಲೋಕೇಶ್ ಬಾಬು
ಮೈಸೂರು: ನಾಡಹಬ್ಬ ಮೈಸೂರು ದಸರಾ 2026ರ ಸಂಭ್ರಮಕ್ಕೆ ಕರಾವಳಿಯ ಮಣ್ಣಿನ ಸೊಗಡು, ಜಾನಪದ ಪರಂಪರೆಯ ಕಿಚ್ಚು ಹಾಗೂ ಕೋಣಗಳ ಓಟದ ರೋಚಕತೆ ಹೊಸ ಮೆರುಗು ನೀಡಲು ಸಜ್ಜಾಗಿದೆ. ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳ ದಸರಾ ಮಹೋತ್ಸವದ ವೇದಿಕೆ ಯಲ್ಲಿ ತನ್ನ ವೈಭವವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಮಹತ್ವದ ಅವಕಾಶದೊಂದಿಗೆ ಅ.18 ಮತ್ತು 19ರಂದು ಮೈಸೂರಿನ ಹೊರವಲಯದಲ್ಲಿ ಕಣಕ್ಕಿಳಿಯಲಿದೆ.
ಎರಡು ದಿನಗಳ ಕಾಲ ಸುಮಾರು 48 ಗಂಟೆಗಳ ನಿರಂತರ ಕಂಬಳ ಸ್ಪರ್ಧೆ ನಡೆಯಲಿದ್ದು, ಕರಾವಳಿಯ 150 ಜೋಡಿ ಕೋಣಗಳ ಓಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಕೇವಲ ಕೋಣಗಳ ಓಟವಲ್ಲ, ಕರಾವಳಿಯ ಕೃಷಿ ಸಂಸ್ಕೃತಿ, ಗ್ರಾಮೀಣ ಬದುಕು, ಪ್ರಾಣಿ ಸಾಕಾಣಿಕೆಯ ಪರಂಪರೆ ಮತ್ತು ತಲೆಮಾರುಗಳಿಂದ ಉಳಿದುಬಂದ ಜಾನಪದ ಕ್ರೀಡೆಯನ್ನು ನಾಡಿನ ಸಾಂಸ್ಕೃತಿಕ ರಾಜಧಾನಿಗೆ ಪರಿಚಯಿಸುವ ಮಹತ್ವದ ಪ್ರಯತ್ನವೂ ಹೌದು.
150 ತಂಡಗಳ ಆಯ್ಕೆ: ಮೈಸೂರು ದಸರಾ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಅಂತಿಮ ಪಟ್ಟಿಯನ್ನು ರಾಜ್ಯ ಕಂಬಳ ಅಸೋಸಿಯೇಷನ್ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಒಟ್ಟು 172 ಅರ್ಜಿಗಳು ಸಲ್ಲಿಕೆಯಾಗಿದ್ದು, ಲಭ್ಯವಿರುವ ಸ್ಥಳಾವಕಾಶ ಮತ್ತು ಬಜೆಟ್ನ ಮಿತಿಯನ್ನು ಗಮನದಲ್ಲಿಟ್ಟುಕೊಂಡು 150 ಜೋಡಿ ಕೋಣಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: Kambala at Mysuru Dasara: ಮೈಸೂರು ದಸರಾ ಉತ್ಸವದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದ ಎಚ್ಡಿಕೆ
ಆರು ವಿಭಾಗಗಳಲ್ಲಿ ಸ್ಪರ್ಧೆಯ ರೋಚಕತೆ: ದಸರಾ ಕಂಬಳದಲ್ಲಿ ಸಾಂಪ್ರದಾಯಿಕ ಸ್ಪರ್ಧಾ ವಿಭಾಗಗಳಿಗೆ ಅನುಗುಣವಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲಿಯೂ ಕೋಣಗಳ ಸಾಮರ್ಥ್ಯ, ವೇಗ ಮತ್ತು ಕಂಬಳದ ಸಾಂಪ್ರದಾಯಿಕ ಸ್ಪರ್ಧಾ ವೈಖರಿ ಪ್ರೇಕ್ಷಕರನ್ನು ರಂಜಿಸಲಿದೆ.
ಹಗ್ಗ ಹಿರಿಯ: 15 ಜೋಡಿ ಹಗ್ಗ ಕಿರಿಯ: 20 ಜೋಡಿ ನೇಗಿಲು ಹಿರಿಯ: 36 ಜೋಡಿ ನೇಗಿಲು ಕಿರಿಯ: 55 ಜೋಡಿ ಅಡ್ಡ ಹಲಗೆ ಹಿರಿಯ: 13 ಜೋಡಿ ಕನೆ ಹಲಗೆ ಹಿರಿಯ: 11 ಜೋಡಿ ಒಟ್ಟು 150 ಜೋಡಿ ಕೋಣಗಳು ಕಂಬಳದ ಕಣದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ನಾಳೆ ಮೈಸೂರಿಗೆ ಆಗಮನ: ದಸರಾ ಕಂಬಳದ ಪ್ರಮುಖ ಆಕರ್ಷಣೆಗಳಲ್ಲಿ ಕೋಣಗಳ ಮೈಸೂರಿನತ್ತ ಪ್ರಯಾಣವೂ ಒಂದಾಗಲಿದೆ. ಆಯ್ಕೆಯಾದ ಎಲ್ಲ ತಂಡಗಳು ಅ.17ರಂದು ಸಂಜೆ 6.30ಕ್ಕೆ ಮೈಸೂರು ತಲುಪುವ ನಿರೀಕ್ಷೆ ಇದೆ. ಒಂದೇ ಗುರಿಯತ್ತ ಸಾಗುವ ಈ ಪ್ರಯಾಣವು ಕರಾವಳಿಯ ಕಂಬಳ ಕುಟುಂಬಗಳ ಒಗ್ಗಟ್ಟು ಮತ್ತು ಸಂಘಟಿತ ಸಿದ್ಧತೆಗೆ ಸಾಕ್ಷಿಯಾಗಲಿದೆ.
ಕೋಣಗಳ ಆರೈಕೆಗೆ ವಿಶೇಷ ವ್ಯವಸ್ಥೆ: ಕಂಬಳದ ವೈಭವದ ಹಿಂದೆ ಕೋಣಗಳ ಸಾಕಾಣಿಕೆ, ಅವುಗಳ ದೈಹಿಕ ಸಾಮರ್ಥ್ಯ ಮತ್ತು ನಿರಂತರ ಆರೈಕೆಯಲ್ಲಿ ತೊಡಗಿರುವ ಮಾಲೀಕರು ಹಾಗೂ ಸಹಾಯಕರ ಪರಿಶ್ರಮ ಅಡಗಿದೆ. ಒಂದು ಜೋಡಿ ಕೋಣದೊಂದಿಗೆ ಸುಮಾರು 50 ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಕೋಣಗಳಿಗೆ ಅಗತ್ಯವಿರುವ ಕುಡಿಯುವ ನೀರು, ಹವಾನಿಯಂತ್ರಣ ವ್ಯವಸ್ಥೆ, ಹುಲ್ಲು ಮತ್ತು ಇತರ ಸೌಲಭ್ಯಗಳನ್ನು ಮಾಲೀಕರೇ ವ್ಯವಸ್ಥೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ಸಾಗಾಟಕ್ಕೂ ಮುನ್ನ ಸಂಬಂಧಪಟ್ಟ ತಾಲೂಕಿನ ಪಶುವೈದ್ಯಾಧಿಕಾರಿ ಗಳಿಂದ ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ ಹಾಗೂ ಸಾಗಾಣಿಕೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ದೀರ್ಘ ಪ್ರಯಾಣದ ಸಂದರ್ಭದಲ್ಲಿ ಕೋಣಗಳ ಆರೋಗ್ಯ ಮತ್ತು ಆರೈಕೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿರಿಯರಿಗೆ 65 ಸಾವಿರ, ಕಿರಿಯರಿಗೆ 50 ಸಾವಿರ ಗೌರವಧನ: ದಸರಾ ಕಂಬಳದಲ್ಲಿ ಭಾಗವಹಿಸುವ ತಂಡಗಳಿಗೆ ಸರ್ಕಾರ ದಿಂದ ವಿಶೇಷ ಗೌರವಧನ ನಿಗದಿಪಡಿಸಲಾಗಿದೆ.
ಹಿರಿಯ ವಿಭಾಗದ ಪ್ರತಿ ತಂಡಕ್ಕೆ: 65000 ಹಾಗೂ ಕಿರಿಯ ವಿಭಾಗದ ಪ್ರತಿ ತಂಡಕ್ಕೆ: 50000 ರೂ ನೀಡಲಾಗುತ್ತದೆ. ಆದರೆ, ಕಂಬಳದ ಮಾಲೀಕರ ಪಾಲಿಗೆ ಬಹುಮಾನದ ಮೊತ್ತವೇ ಭಾಗವಹಿಸು ವಿಕೆಯ ಏಕೈಕ ಉದ್ದೇಶವಲ್ಲ. ತಮ್ಮ ಕೋಣಗಳ ಸಾಮರ್ಥ್ಯವನ್ನು ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶಿಸುವುದು, ಕ್ರೀಡೆಯ ಮೇಲಿನ ಅಭಿಮಾನ ಮತ್ತು ಪರಂಪರೆಯ ಗೌರವವೇ ಹೆಚ್ಚಿನ ಪ್ರೇರಣೆ ಎಂಬ ಅಭಿಪ್ರಾಯವನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ.
48 ಗಂಟೆಗಳ ಕಂಬಳ: ಅ.18 ಮತ್ತು 19ರಂದು ಎರಡು ದಿನಗಳ ಕಾಲ ನಿರಂತರವಾಗಿ ಕಂಬಳ ಆಯೋಜಿಸುವ ಯೋಜನೆ ರೂಪಿಸಲಾಗಿದೆ. ಒಟ್ಟು 48 ಗಂಟೆಗಳವರೆಗೆ ನಡೆಯಲಿರುವ ಈ ಸ್ಪರ್ಧೆಗೆ ಸ್ಥಳದಲ್ಲಿ ಎರಡು ಪ್ರತ್ಯೇಕ ಟ್ರ್ಯಾಕ್ಗಳನ್ನು ನಿರ್ಮಿಸಲಾಗಿದೆ. ಹೆಚ್ಚಿನ ಸಂಖ್ಯೆಯ ತಂಡಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಸ್ಪರ್ಧೆಗಳು ಸುಗಮವಾಗಿ ನಡೆಯಲು ಈ ವ್ಯವಸ್ಥೆ ನೆರವಾಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಂಬಳ ಉದ್ಘಾಟಿಸಲಿದ್ದು, ವಿಐಪಿ, ವಿವಿಐಪಿ ಹಾಗೂ ಸಾರ್ವಜನಿಕರಿಗೆ ಸ್ಪರ್ಧೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ವಿದೇಶಿ ಪ್ರತಿನಿಧಿಗಳಿಗೂ ಕಂಬಳದ ಸಾಂಪ್ರದಾಯಿಕ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ.
ದಸರಾ ವೈಭವಕ್ಕೆ ಕಂಬಳದ ಹೊಸ ಆಯಾಮ: ಮೈಸೂರು ದಸರಾ ಎಂದರೆ ಅರಮನೆಯ ಬೆಳಕು, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಡಿನ ಪರಂಪರೆಯ ವೈಭವ. ಈ ಸಂಭ್ರಮಕ್ಕೆ ಕರಾವಳಿಯ ಕಂಬಳ ಸೇರ್ಪಡೆಯಾಗುತ್ತಿರುವುದು ಕರ್ನಾಟಕದ ವಿವಿಧ ಪ್ರದೇಶಗಳ ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಪ್ರಯತ್ನವಾಗಿದೆ. ಬಹುಮಾನಕ್ಕಿಂತ ಪರಂಪರೆಯ ಗೌರವ, ಸ್ಪರ್ಧೆಗಿಂತ ಕ್ರೀಡೆಯ ಮೇಲಿನ ಅಭಿಮಾನ, ಪ್ರಾದೇಶಿಕ ಆಚರಣೆಗಿಂತ ಸಾಂಸ್ಕೃತಿಕ ಒಗ್ಗಟ್ಟಿಗೆ ಹೆಚ್ಚಿನ ಮಹತ್ವ ನೀಡುವ ದಸರಾ ಕಂಬಳವು ಕರಾವಳಿ ಮತ್ತು ಮೈಸೂರು ನಡುವಿನ ಸಾಂಸ್ಕೃತಿಕ ಸೇತುವೆಯಾಗಲು ಸಜ್ಜಾಗಿದೆ.
ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ಹೊರವಲಯದ ಸಾತಗಳ್ಳಿ ಬಡಾವಣೆಯಲ್ಲಿ ನಡೆಯಲಿರುವ ಈ ಮಹೋತ್ಸವ, ಕರಾವಳಿಯ ಕಂಬಳದ ಸೊಗಡನ್ನು ನಾಡಿನ ಜನತೆಗೆ ಇನ್ನಷ್ಟು ಹತ್ತಿರವಾಗಿಸುವುದರ ಜೊತೆಗೆ, ಕರ್ನಾಟಕದ ಜಾನಪದ ಪರಂಪರೆಯನ್ನು ವಿಶಾಲ ವೇದಿಕೆಯಲ್ಲಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಲಿದೆ.
ಕರಾವಳಿಯ ಕ್ರೀಡೆಗೆ ಜಾಗತಿಕ ವೇದಿಕೆಯ ಆಶಯ
ಕಂಬಳ ಕರಾವಳಿ ಕರ್ನಾಟಕದ ಗ್ರಾಮೀಣ ಬದುಕಿನೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಜಾನಪದ ಕ್ರೀಡೆ. ಕೃಷಿ ಸಂಸ್ಕೃತಿ, ಕೋಣಗಳ ಸಾಕಾಣಿಕೆ, ಗ್ರಾಮೀಣ ಸಮುದಾಯಗಳ ಒಗ್ಗಟ್ಟು ಮತ್ತು ಸ್ಥಳೀಯ ಸಂಪ್ರದಾಯಗಳ ಪ್ರತಿಬಿಂಬವಾಗಿರುವ ಈ ಕ್ರೀಡೆಯನ್ನು ಮೈಸೂರು ದಸರಾ ಮೂಲಕ ಹೆಚ್ಚಿನ ಜನರಿಗೆ ಪರಿಚಯಿಸುವುದು ಆಯೋಜಕರ ಪ್ರಮುಖ ಆಶಯವಾಗಿದೆ. ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ನಿರೀಕ್ಷೆ ಒಂದೆಡೆ 150 ಜೋಡಿ ಕೋಣಗಳ ರೋಚಕ ಓಟ, ಮತ್ತೊಂದೆಡೆ ಅವುಗಳ ಹಿಂದೆ ಶ್ರಮಿಸುವ ಮಾಲೀಕರು ಮತ್ತು ಸಹಾಯಕರ ತಂಡ. ಜೊತೆಗೆ ಸಾವಿರಾರು ಪ್ರೇಕ್ಷಕರ ಕುತೂಹಲ ಇವೆಲ್ಲವೂ ಸೇರಿ ಮೈಸೂರಿನಲ್ಲಿ ವಿಶಿಷ್ಟ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ನಿರೀಕ್ಷೆಯಿದೆ.