ವದರಿ: ಪರಶುರಾಮ ಎಸ್ ಡಿ
ಹಾವೇರಿ: ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ರೈತರ ಬೆವರು, ಶ್ರಮಕ್ಕೆ ತಕ್ಕ ಬೆಲೆ ದೊರೆಯಬೇಕು. ಆದರೆ ರೈತರ ಹೋರಾಟದ ಹೆಸರಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಜನಸಾಮಾನ್ಯರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ಬದುಕಿಗೆ ಸಂಕಷ್ಟ ತಂದೊಡ್ಡುವುದು ಎಷ್ಟರಮಟ್ಟಿಗೆ ಸರಿ? ರೈತರ ಸಮಸ್ಯೆಗೆ ಪರಿಹಾರ ಸಿಗಬೇಕೆಂಬ ಆಶಯದ ನಡುವೆಯೇ ಬಂದ್ನಿಂದ ಬದುಕು ಕಳೆದುಕೊಂಡ ಸಾಮಾನ್ಯ ಜನರ ನೋವು ಇದೀಗ ಹಾವೇರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಬ್ಬಿನ ಬೆಂಬಲ ಬೆಲೆ ವಿಚಾರವಾಗಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಂದ್ನ ಪರಿಣಾಮ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ಬೀರಿದೆ. ದುಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾ ರಸ್ಥರು, ಹೋಟೆಲ್ ಮಾಲೀಕರು, ಆಟೋ ಚಾಲಕರು ಹಾಗೂ ದಿನಗೂಲಿ ಕಾರ್ಮಿಕರು ವ್ಯಾಪಾರ ವಿಲ್ಲದೆ ಪರದಾಡುವಂತಾಗಿದೆ. ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ಬಂದ್ ಮತ್ತೊಂದು ಆರ್ಥಿಕ ಹೊಡೆತ ನೀಡಿದೆ.
ಇದನ್ನೂ ಓದಿ: Haveri News: ಮೇವುಂಡಿ ಗ್ರಾಮದ ಮೂರು ಓಣಿಗಳ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿದ ಪಿಡಿಒ
ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ; ಆದರೆ ಜನರ ಬದುಕು ಬೀದಿಗೆ ಬರಬಾರದು
ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡುವ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಆದರೆ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹೋರಾಟ ಮತ್ತೊಬ್ಬರ ಬದುಕಿಗೆ ಸಮಸ್ಯೆಯಾಗ ಬಾರದು. ಹೋರಾಟದ ಹೆಸರಿನಲ್ಲಿ ಹೆದ್ದಾರಿಗಳನ್ನು ಬಂದ್ ಮಾಡುವುದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವುದು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವುದರಿಂದ ಯಾರಿಗೆ ಲಾಭವಾಗುತ್ತದೆ? ರೈತರ ನೋವು ಅರ್ಥವಾಗುವಂತೆ ಜನಸಾಮಾನ್ಯರ ನೋವನ್ನು ಕೂಡ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು ಎಂಬುದು ವ್ಯಾಪಾರಸ್ಥರ ಅಳಲಾಗಿದೆ.
ಕಬ್ಬು ಬೆಳೆಗಾರರ ಸಮಸ್ಯೆ ಗಂಭೀರವಾಗಿದ್ದರೆ ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಾಬ್ದಾರಿಯುತವಾಗಿ ಸ್ಪಂದಿಸಬೇಕು. ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ ರೈತರಿಗೆ ನ್ಯಾಯಯುತ ಬೆಲೆ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮಾತುಕತೆ ಮೂಲಕ ಬಗೆಹರಿಸಬಹುದಾದ ಸಮಸ್ಯೆ ಬೀದಿಗೆ ಬಂದು ಜನಸಾಮಾನ್ಯರ ಬದುಕನ್ನು ಅಸ್ತವ್ಯಸ್ತ ಗೊಳಿಸುವ ಹಂತಕ್ಕೆ ತಲುಪಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಬ್ಬು ಮಾತ್ರವೇ ಕೃಷಿಯಲ್ಲ, ಉಳಿದ ಬೆಳೆಗಳಿಗೂ ಬೆಲೆ ಬೇಕು
ಕೃಷಿ ಎಂದರೆ ಕೇವಲ ಕಬ್ಬು ಬೆಳೆಯೊಂದೇ ಅಲ್ಲ. ಭತ್ತ, ಜೋಳ, ಗೋವಿನಜೋಳ ಸೇರಿದಂತೆ ಅನೇಕ ಆಹಾರ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಮಳೆ, ಬರ, ಅತಿವೃಷ್ಟಿ, ಬೆಲೆ ಕುಸಿತ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಎಲ್ಲ ಬೆಳೆಗಾರರೂ ಸಂಕಷ್ಟ ಎದುರಿಸುತ್ತಿದ್ದಾರೆ. ಆಹಾರ ಬೆಳೆಗಳನ್ನು ಬೆಳೆಯುವ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಬೇಕು. ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುವಂತೆ ಉಳಿದ ಬೆಳೆಗಾರರಿಗೂ ಸೂಕ್ತ ಬೆಲೆ ಹಾಗೂ ಪರಿಹಾರ ದೊರೆಯುವ ವ್ಯವಸ್ಥೆಯಾಗ ಬೇಕು ಎಂಬುದು ಜನಸಾಮಾನ್ಯರ ಒತ್ತಾಯವಾಗಿದೆ.
ಪ್ರತಿಷ್ಠೆಯ ಹೋರಾಟವಾಗದಿರಲಿ
ರೈತರ ಹೋರಾಟವು ನ್ಯಾಯಕ್ಕಾಗಿ ನಡೆಯಬೇಕೇ ಹೊರತು ವೈಯಕ್ತಿಕ ಪ್ರತಿಷ್ಠೆ ಅಥವಾ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಬಾರದು. ಹೋರಾಟದ ಉದ್ದೇಶ ರೈತರಿಗೆ ನ್ಯಾಯ ಕೊಡಿಸುವು ದಾಗಿರಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ, ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಪ್ರತಿಭಟನೆ ನಡೆಸಲು ಮಾರ್ಗ ಕಂಡುಕೊಳ್ಳಬೇಕು. ಸರ್ಕಾರವೂ ಸಮಸ್ಯೆಯನ್ನು ಮುಂದೂಡದೆ ರೈತ ಸಂಘಟನೆಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಒಟ್ಟಿನಲ್ಲಿ, ರೈತರ ಕಣ್ಣೀರನ್ನು ಒರೆಸುವ ಹೋರಾಟದಲ್ಲಿ ಸಾಮಾನ್ಯ ಜನರ ಕಣ್ಣಲ್ಲಿ ನೀರು ತರಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ರೈತರಿಗೂ ನ್ಯಾಯ ಸಿಗಲಿ, ವ್ಯಾಪಾರಿಗಳಿಗೂ ಬದುಕುವ ಅವಕಾಶ ಸಿಗಲಿ, ಜನಸಾಮಾನ್ಯರಿಗೂ ನೆಮ್ಮದಿಯ ಬದುಕು ದೊರೆಯಲಿ ಎಂಬುದು ಹಾವೇರಿಯ ಸಣ್ಣಪುಟ್ಟ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಮನದಾಳದ ಮಾತಾಗಿದೆ.