ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sowjanya Case: ವೈರುಧ್ಯದ ಹೇಳಿಕೆಗಳು: ಸೌಜನ್ಯ ಪ್ರಕರಣ: 8 ಸುಳ್ಳುಗಳು, ದಿಢೀರ್ ಹುಟ್ಟಿದ 20 ಸಾಕ್ಷಿಗಳು

ದೇಶದ ಮುಂದೆ ಸಾಕ್ಷಿಗಳ ವ್ಯವಸ್ಥಿತ ನಿರ್ಮೂಲನೆ ನಡೆದಿದೆ ಎಂದು ಕುಸುಮಾವತಿ ಪರ ವಕೀಲರು ಭೀಕರ ಚಿತ್ರಣವನ್ನು ಮುಂದಿಟ್ಟರು, ಆದರೆ ಸಾರ್ವಜನಿಕ ದಾಖಲೆ ಗಳಲ್ಲಿರುವ ದಿನಾಂಕಗಳು, ವಿಚಾರಣಾ ಹಂತಗಳು, ತನಿಖೆಯ ಫಲಿತಾಂಶಗಳು ಮತ್ತು ಸಾವಿನ ವಾಸ್ತವಗಳನ್ನು ಕ್ರಿಮಿನಲ್ ನ್ಯಾಯ ಶಾಸ್ತ್ರದ ತರ್ಕದಲ್ಲಿ ಪರಿಶೀಲಿಸಿದಾಗ ಎದ್ದು ಕಾಣುವ ಚಿತ್ರಣವೇ ಬೇರೆಯಾಗಿದೆ.

ಜಿತೇಂದ್ರ ಕುಂದೇಶ್ವರ, ಮಂಗಳೂರು

ಧರ್ಮಸ್ಥಳದಲ್ಲಿ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮೂಲಕ 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ ಬಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವ ವೇಳೆ ಸಾಕ್ಷ್ಯ ನಾಶವನ್ನೇ ಪ್ರಧಾನವಾಗಿ ಮುಂದಿಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿತ ರೆನ್ನಲಾದ ವ್ಯಕ್ತಿಗಳಿಗೆ ಸ್ಥಳೀಯ ಸಾಕ್ಷಿಗಳ ನಿರ್ಮೂಲನೆಯಿಂದ ಸಿಗುವ ಕಾನೂನಾತ್ಮಕ ಲಾಭವಾದರೂ ಏನು? ಲಾಭವೇ ಇಲ್ಲದ ವ್ಯಕ್ತಿಗಳ ಮೇಲೆ ಸಾಕ್ಷಿ ನಾಶದ ಸಂಚನ್ನು ಆರೋಪಿಸುವುದು ಕಾನೂನಿನ ತರ್ಕಕ್ಕೇ ನಿಲುಕದ ಸಂಗತಿ ಎಂಬುದು ಇದೀಗ ಚರ್ಚಾ ವಿಷಯವಾಗಿದೆ.

ನಮ್ಮ ದೇಶದ ಅಂತಿಮ ನ್ಯಾಯ ಸ್ಥಾನ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆಯಾಗುವಾಗ ಪ್ರತಿಯೊಂದು ಮಾತೂ ಸಾಕ್ಷ್ಯಾಧಾರ ಹಾಗೂ ತನಿಖಾ ದಾಖಲೆಗಳ ಭದ್ರ ಅಡಿಪಾಯದ ಮೇಲೆಯೇ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಸೌಜನ್ಯ ಪ್ರಕರಣದ ಸುಪ್ರೀಂ ಕೋರ್ಟ್ ವಿಚಾರಣೆಯ ನೇರ ಪ್ರಸಾರವನ್ನು ವೀಕ್ಷಿಸಿದಾಗ ಅಲ್ಲಿ ಮಂಡನೆಯಾದ ವಾದ ನಿರೂಪಣೆಗೂ, ಸಾರ್ವಜನಿಕವಾಗಿ ಲಭ್ಯ ವಿರುವ ದಾಖಲೆಗಳ ಲ್ಲಿರುವ ವಾಸ್ತವಾಂಶ ಗಳಿಗೂ ನಡುವೆ ಇರುವ ಅಜಗಜಾಂತರವನ್ನು ಕಂಡು ಎಂಥವರಿಗೂ ಅಚ್ಚರಿ ಮೂಡದೇ ಇರದು.

ದೇಶದ ಮುಂದೆ ಸಾಕ್ಷಿಗಳ ವ್ಯವಸ್ಥಿತ ನಿರ್ಮೂಲನೆ ನಡೆದಿದೆ ಎಂದು ಕುಸುಮಾವತಿ ಪರ ವಕೀಲರು ಭೀಕರ ಚಿತ್ರಣವನ್ನು ಮುಂದಿಟ್ಟರು, ಆದರೆ ಸಾರ್ವಜನಿಕ ದಾಖಲೆ ಗಳಲ್ಲಿರುವ ದಿನಾಂಕಗಳು, ವಿಚಾರಣಾ ಹಂತಗಳು, ತನಿಖೆಯ ಫಲಿತಾಂಶಗಳು ಮತ್ತು ಸಾವಿನ ವಾಸ್ತವಗಳನ್ನು ಕ್ರಿಮಿನಲ್ ನ್ಯಾಯ ಶಾಸ್ತ್ರದ ತರ್ಕದಲ್ಲಿ ಪರಿಶೀಲಿಸಿದಾಗ ಎದ್ದು ಕಾಣುವ ಚಿತ್ರಣವೇ ಬೇರೆಯಾಗಿದೆ.

ಸಾಕ್ಷಿ ನಾಶದಿಂದ ಲಾಭ ಯಾರಿಗೆ : ಕ್ರಿಮಿನಲ್ ಕಾನೂನಿನಲ್ಲಿ ಯಾವುದೇ ಸಾಕ್ಷಿಯ ನಾಶ ಅಥವಾ ನಿರ್ಮೂಲನೆಯ ಆರೋಪ ಬಂದಾಗ ತನಿಖಾಧಿಕಾರಿಗಳು ಮೊದಲು ಹಾಕಿಕೊಳ್ಳುವ ಪ್ರಶ್ನೆ ಕ್ವಿ ಬೋನೋ-ಅಂದರೆ ಇದರಿಂದ ಅಂತಿಮವಾಗಿ ಲಾಭ ಯಾರಿಗೆ ಎಂಬುದಾಗಿದೆ. ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆಯ ಆರೋಪ ಹೊತ್ತು ಸಿಐಡಿ ಮತ್ತು ಸಿಬಿಐ ತನಿಖೆ ಎದುರಿಸಿ ಚಾರ್ಜ್‌ಶೀಟ್‌ಗೆ ಗುರಿಯಾಗಿದ್ದ ವ್ಯಕ್ತಿ ಸಂತೋಷ್ ರಾವ್. ಘಟನೆಯ ಸ್ಥಳದಲ್ಲಿ ಸಂತೋಷ್ ರಾವ್ ಉಪಸ್ಥಿತಿಯ ಸುತ್ತ ಹರೀಶ್ ಮಡಿವಾಳ ಹಾಗೂ ಆತನನ್ನು ಸೆರೆ ಹಿಡಿದ ರವಿ ಪೂಜಾರಿ ಅವರಂತಹ ವ್ಯಕ್ತಿಗಳ ಹೆಸರು ಪ್ರಸ್ತಾಪವಾಗುತ್ತದೆ.

ಇದನ್ನೂ ಓದಿ: ‌Sowjanya case: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ಒಂದು ವೇಳೆ ಪ್ರತ್ಯಕ್ಷ ಅಥವಾ ಮಹತ್ವದ ಸಾಕ್ಷಿಯೊಬ್ಬರು ಇಲ್ಲವಾದರೆ ಅಥವಾ ಆ ಸಾಕ್ಷ ಕಡತದಿಂದ ದೂರವಾದರೆ ಅದರ ನೇರ ಕಾನೂನಾತ್ಮಕ ಲಾಭ ಸಿಗುವುದು ಆರೋಪಪಟ್ಟಿಯಲ್ಲಿ ಹೆಸರಿಸಲ್ಪಟ್ಟ ಸಂತೋಷ್ ರಾವ್‌ಗೆ ಮಾತ್ರ.

ಇನ್ನೊಂದೆಡೆ ಸಾರ್ವಜನಿಕ ಚರ್ಚೆಗಳಲ್ಲಿ ತಳುಕು ಹಾಕಲಾದ ಇತರ ವ್ಯಕ್ತಿಗಳ ವಿಚಾರಕ್ಕೆ ಬಂದರೆ ತನಿಖಾ ಸಂಸ್ಥೆಗಳು ನಡೆಸಿದ ಸುದೀರ್ಘ ವೈಜ್ಞಾನಿಕ ತನಿಖೆ, ಮೊಬೈಲ್ ಟವರ್ ಲೊಕೇಶನ್ ದಾಖಲೆಗಳು ಮತ್ತು ನಾರ್ಕೋ/ಮಂಪರು ಪರೀಕ್ಷೆಗಳ ಆಧಾರದಲ್ಲೇ ಅವರು ಘಟನಾ ಸ್ಥಳದಲ್ಲಿ ಇರಲಿಲ್ಲ ಎಂಬುದು ದೃಢಪಟ್ಟಿತ್ತು.

ತನಿಖಾ ಸಂಸ್ಥೆಗಳ ದೋಷಾರೋಪ ಪಟ್ಟಿಯಲ್ಲೇ ಆರೋಪಿಗಳಾಗದ ವ್ಯಕ್ತಿಗಳಿಗೆ, ಸ್ಥಳೀಯ ಸಾಕ್ಷಿಗಳ ನಿರ್ಮೂಲನೆಯಿಂದ ಸಿಗುವ ಕಾನೂನಾತ್ಮಕ ಲಾಭವಾದರೂ ಏನು? ಲಾಭವೇ ಇಲ್ಲದ ವ್ಯಕ್ತಿಗಳ ಮೇಲೆ ಸಾಕ್ಷಿ ನಾಶದ ಸಂಚನ್ನು ಆರೋಪಿಸುವುದು ಕಾನೂನಿನ ತರ್ಕಕ್ಕೇ ನಿಲುಕದ ಸಂಗತಿ.

ದಾಖಲೆಗಳ ಚಿತ್ರಣವೇ ಬೇರೆ ಆರೋಪಿತರೆನ್ನಲಾದವರ ಮನೆಯಲ್ಲಿ ಕೆಲಸ ಮಾಡುತ್ತಿದ ವಾರಿಜಾ ಆಚಾರ್ತಿ ಮೃತಪಟ್ಟಿದ್ದು, ಪ್ರಮುಖ ಸಾಕ್ಷಿಯೊಬ್ಬರನ್ನು ವ್ಯವಸ್ಥಿತವಾಗಿ ಇಲ್ಲವಾಗಿಸಲಾಗಿದೆ ಎಂದು ಬಿಂಬಿಸಲಾಗಿದೆ. ಸಾರ್ವಜನಿಕ ದಾಖಲೆಗಳ ಪ್ರಕಾರ, ಈಕೆ ಪ್ರಕರಣದ ಸಾಕ್ಷಿಯೇ ಆಗಿರಲಿಲ್ಲ. ಘಟನೆಯನ್ನು ಈಕೆ ನೋಡಿದ್ದಾಳೆ ಅಥವಾ ಮಹತ್ವದ ಮಾಹಿತಿ ಹೊಂದಿದ್ದಳು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟಿದ್ದ ಈಕೆಯ ಮರಣೋತ್ತರ ಪರೀಕ್ಷೆ ಹಾಗೂ ಸ್ವಂತ ಸಹೋದರನ ಅಧಿಕೃತ ಹೇಳಿಕೆಯೇ ಇದರಲ್ಲಿ ಯಾವುದೇ ಸಂಶಯಾಸ್ಪದ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ರವಿ ಪೂಜಾರಿ ಪಾತ್ರ: ರವಿ ಪೂಜಾರಿ ಅವರ ನಿಧನವನ್ನು ಪ್ರಮುಖ ಸಾಕ್ಷಿಯೊಬ್ಬರ ಸಾವು ಎಂದು ಬಿಂಬಿಸಲಾಯಿತು. ರವಿ ಪೂಜಾರಿ ಘಟನೆಯ ನೇರ ಪ್ರತ್ಯಕ್ಷದರ್ಶಿಯಲ್ಲ. ಕೃತ್ಯ ನಡೆದ 2 ದಿನಗಳ ಬಳಿಕ ಆರೋಪಿ ಸಂತೋಷ್ ರಾವ್‌ನನ್ನು ಹಿಡಿದುಕೊಂಡ 5 ಜನರಲ್ಲಿ ಅವರೂ ಒಬ್ಬರಷ್ಟೇ.

ಪಾಪ, ಆರೋಪಿಯನ್ನು ಹಿಡಿದುಕೊಟ್ಟ ಈ ವ್ಯಕ್ತಿಗಳೂ ಸಹ ತನಿಖೆಯ ಹಂತದಲ್ಲಿ ಮಂಪರು ಪರೀಕ್ಷೆಗೆ ಒಳಗಾಗಿ ತೀವ್ರ ಸಮಸ್ಯೆಗಳನ್ನು ಎದುರಿಸಿದ್ದರು. ಅವರಲ್ಲಿದ್ದ ಇತರ 3 ಜನರನ್ನು ನ್ಯಾಯಾಲಯ ಈಗಾಗಲೇ ಕಟಕಟೆಯಲ್ಲಿ ನಿಲ್ಲಿಸಿ ಸಾಕ್ಷ್ಯ ವಿಚಾರಣೆಗೆ ಒಳಪಡಿಸಿದೆ. ರವಿ ಪೂಜಾರಿ ಅವರ ಹೇಳಿಕೆ ಈಗಾಗಲೇ ಕಡತಗಳಲ್ಲಿದೆ. ಕಾನೂನಿನ ದೃಷ್ಟಿಯಿಂದ ನೋಡಿದರೆ, ರವಿ ಪೂಜಾರಿ ಅವರ ಸಾವು ಸಂಭವಿಸಿದರೆ ಅದರಿಂದ ಏನಾದರೂ ಲಾಭವಾಗುವುದಿದ್ದರೆ ಅದು ಆರೋಪಿ ಸಂತೋಷ್ ರಾವ್‌ಗೆ ಮಾತ್ರವೇ ಹೊರತು ತನಿಖೆಯಿಂದ ಹೊರಗುಳಿದವರಿಗಲ್ಲ. ಆದ್ದರಿಂದ ಈ ಸಾವನ್ನು ಸಾಕ್ಷಿ ನಾಶ ಎಂದು ಬಿಂಬಿಸುವುದು ಅರ್ಥವಿಲ್ಲದ ವಾದವಾಗಿದೆ.

ಗೋಪಾಲಕೃಷ್ಣ ಗೌಡರ ವಿಚಾರಣೆ ವಾದದಲ್ಲಿ ಕೇಳಿಬಂದದ್ದು: ಗೋಪಾಲಕೃಷ್ಣ ಗೌಡರು 05.11.2013 ರಂದೇ ನಿಧನರಾಗಿದ್ದರಿಂದ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಯಿತು. ದಾಖಲೆ ಹೇಳುವ ವಾಸ್ತವ ಏನೆಂದರೆ 05.11.2013 ಎಂಬುದು ಪ್ರಕರಣ ವರ್ಗಾವಣೆ ಯಾದ ದಿನಾಂಕವೇ ಹೊರತು, ಗೌಡರ ಮರಣದ ದಿನಾಂಕವಲ್ಲ. ದಾಖಲೆಗಳ ಪ್ರಕಾರ ಆ ದಿನಾಂಕದ ನಂತರವೂ ಅವರು ಜೀವಂತವಾಗಿದ್ದು, 25.04.2014ರಂದು ಅಧಿಕೃತವಾಗಿ ಹೇಳಿಕೆ ಯನ್ನೂ ದಾಖಲಿಸಿದ್ದರು.

ದಿನೇಶ್ ಗೌಡರ ಸಾವಿನ ಕುರಿತಾದ ವಾದದಲ್ಲಿ ಕೇಳಿಬಂದದ್ದು: ದಿನೇಶ್ ಗೌಡರ ಸಾವನ್ನು ಸಂಶಯಾಸ್ಪದ ಅಪಘಾತ ಎಂದು ಕರೆದು, ಪ್ರಮುಖ ಸಾಕ್ಷಿಯ ನಿರ್ಮೂಲನೆ ಎಂಬಂತೆ ವಿವರಿಸ ಲಾಯಿತು. ದಾಖಲೆ ಹೇಳುವ ವಾಸ್ತವ ಏನೆಂದರೆ ಅಧಿಕೃತ ದೋಷಾರೋಪ ಪಟ್ಟಿಯಲ್ಲಾ ಗಲಿ ಅಥವಾ ಸಾಕ್ಷಿಗಳ ಪಟ್ಟಿಯಲ್ಲಾಗಲಿ ದಿನೇಶ್ ಗೌಡರ ಹೆಸರೇ ಇರಲಿಲ್ಲ. ಇವರು ಪ್ರತ್ಯಕ್ಷದರ್ಶಿ ಅಥವಾ ಮಾಹಿತಿ ಹೊಂದಿದ್ದ ವ್ಯಕ್ತಿ ಎಂಬುದಕ್ಕೆ ಯಾವುದೇ ಕಾಗದಪತ್ರಗಳ ಆಧಾರಗಳಿಲ್ಲ.

ಹರೀಶ್ ಮಡಿವಾಳರ ಸಾಕ್ಷ್ಯ: ಸಾಕ್ಷ್ಯ ನುಡಿಯುವ ಸನಿಹದಲ್ಲೇ ಅಂದರೆ 31.12.2021ರಂದು ಇವರು ಮೃತಪಟ್ಟರು ಎಂದು ವಾದದಲ್ಲಿ ಪ್ರತಿಪಾದಿಸಿದರು. ದಾಖಲೆ ಹೇಳುವ ವಾಸ್ತವ ಏನೆಂದರೆ ಲಭ್ಯ ಕಡತಗಳ ಪ್ರಕಾರ, ತನಿಖೆ ಚಾರ್ಜ್‌ಶೀಟ್ ಪ್ರಕ್ರಿಯೆಗಳು ಮುಗಿದ ನಂತರ, ಅಂದರೆ 16.10.2022ರಂದು ಅವರು ತೀರಿಕೊಂಡಿದ್ದಾರೆ. ವಾದದಲ್ಲಿ ಹೇಳಲಾದ ದಿನಾಂಕಕ್ಕೂ, ಅಧಿಕೃತ ದಾಖಲೆಯ ದಿನಾಂಕಕ್ಕೂ ಬರೋಬ್ಬರಿ 10 ತಿಂಗಳಿಗೂ ಮೀರಿದ ಅಂತರವಿದೆ, ಅಷ್ಟೇ ಅಲ್ಲದೆ ಸಂತೋಷ್ ರಾವ್ ಉಪಸ್ಥಿತಿಯ ಸಾಕ್ಷಿಯಾಗಿದ್ದ ಇವರ ಸಾವಿನಿಂದ ತನಿಖೆಗೆ ಹಿನ್ನಡೆ ಆಗುವುದೇ ವಿನಾ ಆರೋಪ ಮುಕ್ತರಾದವರಿಗೆ ಇದರಿಂದ ಯಾವುದೇ ಪ್ರಯೋ ಜನವಿರುವುದಿಲ್ಲ.

ಡಾ.ಆದಮ್ ಸಾವು ಸಾಕ್ಷ ಪ್ರಕ್ರಿಯೆ: ಸಂತ್ರಸ್ತೆಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ. ಆದಮ್ ಸಾವು ಸಂಶಯಾಸ್ಪದ ಎಂದು ವಾದದಲ್ಲಿ ಹೇಳಲಾಯಿತು. ದಾಖಲೆ ಪ್ರಕಾರ ತನಿಖೆಯ ಮುಂದೆ ಮೊದಲೇ ಹೇಳಿಕೆ ದಾಖಲಿಸಿದ್ದರು, ಅಷ್ಟೇ ಅಲ್ಲದೆ ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷ್ಯ ನುಡಿದು ವಿಚಾರಣಾ ಪ್ರಕ್ರಿಯೆ ಯನ್ನು ಪೂರೈಸಿದ್ದರು. ಅವರು ಸಾಯುವ ಹೊತ್ತಿಗೆ ನ್ಯಾಯಾಲಯಗಳಲ್ಲಿ ತೀರ್ಪು ಕೂಡ ಪ್ರಕಟವಾಗಿತ್ತು. ತೀರ್ಪು ಬಂದ ಬಳಿಕ ಸಂಭವಿಸಿದ ಸಾವನ್ನು ಸಾಕ್ಷ್ಯ ನಾಶ ಎಂಬಂತೆ ಬಿಂಬಿಸಿರುವುದು ಕಡತಗಳಿಗೆ ವಿರುದ್ಧವಾಗಿದೆ.

ವ್ಯವಸ್ಥಿತ ನಿರ್ಮೂಲನೆ ಸಿದ್ಧಾಂತ: ಇವೆಲ್ಲವೂ ಸಾಕ್ಷಿಗಳನ್ನು ವ್ಯವಸ್ಥಿತವಾಗಿ ಮುಗಿಸಿದ ಕೃತ್ಯ ಗಳು ಎಂಬಂತೆ ವಾದದಲ್ಲಿ ಬಿಂಬಿಸಲಾಯಿತು. ದಾಖಲೆಗಳ ಪ್ರಕಾರ ವ್ಯಕ್ತಿಗಳ ಸಾವು, ದಿನಾಂಕ ಮತ್ತು ಕಾರಣಗಳು ಸಂಪೂರ್ಣ ಭಿನ್ನವಾಗಿದ್ದು, ಯಾವುದೇ ಸಮಾನ ಎಳೆಯಿಲ್ಲದಿರುವಾಗ ಇವರದು ವ್ಯವಸ್ಥಿತ ಹತ್ಯೆ ಎನ್ನಲು ದಾಖಲೆಗಳಲ್ಲಿ ಯಾವುದೇ ಆಧಾರಗಳಿಲ್ಲ.

ದಾಖಲೆಗೆ ವ್ಯತಿರಿಕ್ತ ದೂರು: ಸಾಕ್ಷ್ಯಗಳನ್ನು ಮುಚ್ಚಿ ಹಾಕಲಾಗಿದೆ ಎಂದು ಸಾರ್ವಜನಿಕವಾಗಿ ವಾದದಲ್ಲಿ ಬಿಂಬಿಸಲಾಯಿತು. ಆದರೆ ಅಧಿಕೃತ ದಾಖಲೆಗಳಿಗೆ ತದ್ವಿರುದ್ಧವಾದ ಕಥನವನ್ನು ಸೃಷ್ಟಿಸಿ ನ್ಯಾಯಾ ಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂಬುದು ದಾಖಲೆಗಳಿಂದಲೇ ಸ್ಪಷ್ಟವಾಗುತ್ತದೆ.

ತಾಯಿ ಕುಸುಮಾವತಿ ಸಾಕ್ಷಿ ದಾಖಲಿಸಿಲ್ಲ

ನ್ಯಾಯಾಲಯಕ್ಕೆ ಸಲ್ಲಿಕೆಯಾದ ಹೆಚ್ಚುವರಿ ಅಫಿಡವಿಟ್‌ನಲ್ಲಿ ರಕ್ಷಣೆ ಅಗತ್ಯವಿರುವ 20 ಜನರ ಹೆಸರನ್ನು ಒದಗಿಸಲಾಗಿತ್ತು. ಆದರೆ ಈ ಪಟ್ಟಿಯನ್ನು ಪರಿಶೀಲಿಸಿದಾಗ ಕಾಣುವ ಸತ್ಯವೇ ಬೇರೆ.

ಸಂತ್ರಸ್ತೆಯ ತಾಯಿ ಕುಸುಮಾವತಿ ಅವರು ಈವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನೇ ದಾಖಲಿಸಿಲ್ಲ. ಜಗದೀಶ್, ವಿಠ್ಠಲ ಗೌಡ, ಯಶೋಧಾ ಗೌಡ ಸೇರಿದಂತೆ 5 ಜನರನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಕೋರ್ಟಿಗೆ ಯಾವುದೇ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಗುರುಕಿರಣ್, ಪ್ರಭಾಕರ ಭಟ್, ಜಾಹ್ನವಿ, ಎಫ್ಎಸ್‌ಎಲ್‌ನ ಚಂದ್ರಕಲಾ ಸೇರಿದಂತೆ 8 ಮಂದಿ ಈಗಾಗಲೇ ಅಧಿಕೃತ ಹೇಳಿಕೆ ನೀಡಿ ನ್ಯಾಯಾಲಯದ ಪ್ರಕ್ರಿಯೆ ಎದುರಿಸಿದವರು.

ಪ್ರಕೃತಿ ಚಿಕಿತ್ಸಾಲಯದ ಭದ್ರತಾ ಸಿಬ್ಬಂದಿ ಹೆಸರುಗಳನ್ನು ನೇರ ಸಾಕ್ಷಿಗಳು ಎಂದು ಸೇರಿಸಲಾಗಿ ದ್ದರೂ, ಅವರು ಯಾವಾಗ ನೋಡಿದ್ದಾರೆ ಎಂಬ ವಿವರಗಳೇ ಇಲ್ಲ. ಇವೆಲ್ಲದರ ನಡುವೆ ಚಿಕ್ಕಕೆಂಪಮ್ಮ ಅವರ ಪ್ರತ್ಯಕ್ಷ ಸಾಕ್ಷಿಯ ವಾದ. ‘ಘಟನೆಯನ್ನು ಕಣ್ಣಾರೆ ಕಂಡಿದ್ದೇನೆ’ ಎಂದು ಈಕೆ ಹೇಳಿಕೊಂಡ ದಿನದಂದು ಆಕೆ ಮೈಸೂರಿನ ತಮ್ಮ ಕೆಲಸದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದು, ಹಾಜರಾತಿ ಪುಸ್ತಕಕ್ಕೆ ಅರ್ಧ ದಿನ ಅಽಕೃತವಾಗಿ ಸಹಿ ಮಾಡಿರುವ ಮಾಹಿತಿ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿತ್ತು. ಇಷ್ಟು ವೈರುಧ್ಯಗಳಿದ್ದರೂ ಹೇಳಿಕೆಗಳನ್ನು ನೇರ ಸಾಕ್ಷ ಎಂದು ನ್ಯಾಯಾ ಲಯದ ಮುಂದೆ ಪಟ್ಟಿ ಮಾಡಿರುವುದು ಇವು ದಿಢೀರ್ ಸೃಷ್ಟಿಯಾದ ಸಾಕ್ಷಿಗಳೇ ಎಂಬ ಸಂಶಯ ಮೂಡಿಸಿವೆ