ಶರಣ ಬಸಪ್ಪ ಹುಲಿಹೈದರ, ಕೊಪ್ಪಳ
ಕೊಪ್ಪಳದ ಗವಿ ಸಿದ್ದೇಶ್ವರ ಮಹಾ ರಥದ ಕೊನೆ ಕ್ಷಣದ ಸಿದ್ಧತೆ
ರಂಗೋಲಿಯಿಂದ ಅಲಂಕೃತಗೊಳ್ಳುತ್ತಿರುವ ರಥ ಬೀದಿ
ಮಹಾರಥದ ಕೊನೆ ಕ್ಷಣದ ಸಿದ್ಧತೆಯಲ್ಲಿ ತೊಡಗಿರುವ ಕಾರ್ಮಿಕರು. ರಥ ಸಾಗುವ ಬೀದಿಯಲ್ಲಿ ರಂಗೋಲಿ ಹಾಕುತ್ತಿರುವ ವಿದ್ಯಾರ್ಥಿನಿಯರು. ಗವಿಮಠ ಕಡೆಗೆ ಹರಿದು ಬರುತ್ತಿರುವ ಭಕ್ತರ ದಂಡು. ಜಾತ್ರೋತ್ಸವದ ಮೊದಲ ದಿನದ ಮಹಾ ಪ್ರಸಾದಕ್ಕೆ ಸಿದ್ಧ ಗೊಳ್ಳುತ್ತಿರುವ ಮೈಸೂರು ಪಾಕ್ !
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೋತ್ಸವದ ಹಿನ್ನೆಲೆ ಭಾನುವಾರ ಸಂಜೆ ಕಂಡು ಬಂದ ದೃಶ್ಯಗಳಿವು. ದಕ್ಷಿಣ ಭಾರತದ ಕುಂಭ ಮೇಳ ಎಂಬ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೋ ತ್ಸವದ ಪ್ರಮುಖ ಘಟ್ಟ, ಮಹಾ ರಥೋತ್ಸವ ಇಂದು ಸಂಜೆ 5.30ಕ್ಕೆ ಜರುಗಲಿದ್ದು, ಕ್ಷಣ ಗಣನೆ ಆಂಭವಾಗಿದೆ. ರಥ ಬೀದಿಯನ್ನು ಈಗಾಗಲೇ ವೈಜ್ಞಾನಿಕವಾಗಿ ಗಟ್ಟಿಗೊಳಿಸಲಾಗಿದೆ.
ಅನುಭವಿ ಕಾರ್ಮಿಕರು ರಥ ಅಲಂಕಾರ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕ್ರೇನ್ ಸಹಾಯದಿಂದ ರಥ ಅಲಂಕಾರ ಮಾಡಲಾಗುತ್ತಿದೆ. ಬಣ್ಣ ಬಣ್ಣದ ಬಟ್ಟೆಯ ಮೂಲಕ ರಥ ಶೃಂಗಾರ ಮಾಡುವ ದೃಶ್ಯ ಸೋಮವಾರವೂ ಮುಂದುವರೆಯಲಿದೆ.
ಇದನ್ನೂ ಓದಿ:Koppala news: ಕೊಪ್ಪಳ ಗವಿಮಠದಲ್ಲಿ ನಾಗದೇವರ ಮುಂದೆ ಮುಸ್ಲಿಂ ಮಹಿಳೆಯ ಧ್ಯಾನ!
ಭಾನುವಾರ ಸಂಜೆಯಿಂದಲೇ ಗವಿಮಠ ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆ ಯರು ರಥ ಸಾಗುವ ಬೀದಿಯಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕುವ ಕೆಲಸದಲ್ಲಿ ನಿರತ ರಾಗಿದ್ದಾರೆ. ಸ್ವಾಗತ ಕಮಾನುಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತಿದೆ. ಮಹಾರಥದ ಕೊನೆ ಕ್ಷಣದ ಸಿದ್ಧತೆ ನಡುವೆಯೇ ಭಕ್ತರು ತೇರಿನ ಮುಂದೆ ನಿಂತು ಫೋಟೋ ಕ್ಲೀಕ್ ಮಾಡಿಕೊಳ್ಳುವ ದೃಶ್ಯ ಕಂಡು ಬರುತ್ತಿದೆ.
ಸ್ವಯಂ ಸೇವಕರ ದಂಡು
ಕಳೆದ ಮೂರು ದಿನದಿಂದ ಜಾತ್ರೋತ್ಸವದ ಮಹಾದಾಸೋಹ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ ಶುರುವಾಗಿದೆ. ಈ ಹಿನ್ನೆಲೆ ಈಗಾಗಲೇ ನೂರಾರು ಸ್ವಯಂ ಸೇವರು ದಾಸೋಹ ಮಂಟಪಕ್ಕೆ ಬಂದು ಕೆಲಸದಲ್ಲಿ ತೊಡಗಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿ ಗಳು ತರಕಾರಿ ಕತ್ತರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬಾಣಸಿಗರು ದೊಡ್ಡ ದೊಡ್ಡ ಕೊಪ್ಪರಿಕೆಯಲ್ಲಿ ನಾನಾ ಪದಾರ್ಥ ಮಾಡುವ ಕೆಲಸ ಭರದಿಂದ ಸಾಗಿದೆ. ಇದೇ ಮೊದಲ ಬಾರಿಗೆ ಮಹಾ ದಾಸೋಹದ ಮೊದಲ ದಿನ ಭಕ್ತರು ತುಪ್ಪದ ಮೈಸೂರ ಪಾಕ್ ನ ರುಚಿ ಸವಿಯಲಿದ್ದಾರೆ. ಸಿಂಧನೂರು ವಿಜಯ ಕುಮಾರ ಗೆಳೆಯರ ಬಳಗದ ಭಕ್ತರು ಈಗಾಗಲೇ ಗವಿಮಠದ ದಾಸೋಹ ಮಂಟಪದಲ್ಲಿ ಮೈಸೂರ ಪಾಕ್ ತಯಾರಿಗೆ ಕಾರ್ಯದಲ್ಲಿ ತೊಡಗಿದ್ದಾರೆ.
ಹರಿದು ಬಂದ ಭಕ್ತಸಾಗರ
ಜ.5ರಂದು ಮಹಾರಥೋತ್ಸವ ಜರುಗುವ ಹಿನ್ನೆಲೆ ಈಗಾಗಲೇ ಧಾರ್ಮಿಕ ಕಾರ್ಯಕ್ರಮ ಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಭಾನುವಾರ ಲಘು ರಥೋತ್ಸವ ಜರುಗಿತು. ಜತೆಗೆ ಮಂಗಳವಾರ ಸಂಜೆಯಿಂದಲೇ ಭಕ್ತ ಸಾಗರ ಗವಿಮಠದ ಕಡೆಗೆ ಹರಿದು ಬರುವ ದೃಶ್ಯ ಕಂಡು ಬಂತು. ಟ್ರ್ಯಾಕ್ಟರ್, ಟಂಟಂ, ಕಾರು ಮಾತ್ರವಲ್ಲದೇ ಎತ್ತಿನ ಬಂಡಿ ಮೂಲಕ ಭಕ್ತರು ಗವಿಮಠಕ್ಕೆ ಬರುತ್ತಿದ್ದಾರೆ. ಸಾವಿರಾರು ಭಕ್ತರು ರಾತ್ರಿ ಇಡೀ ಪಾದಯಾತ್ರೆ ಮೂಲಕ ಗವಿಮಠದ ಕಡೆಗೆ ಬರುವ ದೃಶ್ಯ ಸಾಮಾನ್ಯವಾಗಿತ್ತು.
ಮಠದಿಂದ ವಸತಿ ವ್ಯವಸ್ಥೆ!
ಗವಿಮಠ ಜಾತ್ರೆಗೆ ಬರುವ ಭಕ್ತರಿಗೆ ಶ್ರೀಮಠದಿಂದಲೇ ವಸತಿ ವ್ಯವಸ್ಥೆ ಮಾಡಲಾಗಿದೆ. ಬರುವ ಭಕ್ತರು ತಮ್ಮ ಹೆಸರು ನೋಂದಣಿ ಮಾಡಿಕೊಂಡು ವಸತಿ ಸೌಲಭ್ಯ ಪಡೆಯುವಂತೆ ವಾರದ ಹಿಂದೆಯೇ ಪ್ರಕಟಣೆ ನೀಡಲಾಗಿತ್ತು. ನೋಂದಣಿ ಮಾಡಿಕೊಂಡ ಭಕ್ತರು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಭಕ್ತರು ಜಾತ್ರಾ ಆವರಣಕ್ಕೆ ಸಾಗರೋಪಾದಿಯಾಗಿ ಬರುತ್ತಿದ್ದಂ ತೆಯೇ ಪೊಲೀಸರು ಅಲರ್ಟ್ ಆಗಿದ್ದು, ಬಂದೋಬಸ್ತ್ ಕೈಗೊಂಡಿದ್ದಾರೆ.
ಲಘು ರಥೋತ್ಸವ ಅದ್ಧೂರಿ
ಕೊಪ್ಪಳ: ಇಲ್ಲಿನ ಗವಿಸಿದ್ದೇಶ್ವರ ಜಾತ್ರೋತ್ಸವದ ಭಾಗವಾಗಿ ಲಘು ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಸಂಪ್ರದಾಯದಂತೆ ಮಹಾ ರಥೋತ್ಸವ ಜರುಗುವ ಹಿಂದಿನ ದಿನ ಲಘು ರಥ ಎಳೆಯಲಾಗುತ್ತದೆ. ಭಾನುವಾರ ಸಂಜೆ ಮಹಾ ರಥೋತ್ಸವದಲ್ಲಿ ಪ್ರತಿಷ್ಠಾಪಿಸುವ ಉತ್ಸವ ಮೂರ್ತಿ ಮತ್ತು ಕಳಶವನ್ನು ಲಘು ರಥೋತ್ಸವದಲ್ಲಿ ಪ್ರತಿಷ್ಠಾ ಪಿಸಿ, ಚಾಲನೆ ನೀಡಲಾಯಿತು. ಈ ಮೊದಲು ಉತ್ಸವ ಮೂರ್ತಿ ಮತ್ತು ಕಳಶವನ್ನು ನಂದಿ ಕೋಲು ಸೇರಿ ನಾನಾ ಜನಪದ ಕಲಾ ಮೇಳೆದೊಂದಿಗೆ ಲಘು ರಥದ ಬಳಿ ತರಲಾಯಿತು. ಸಾವಿರಾರು ಭಕ್ತರು ಲಘು ರಥೋತ್ಸವಕ್ಕೆ ಸಾಕ್ಷಿಯಾದರು. ಉತ್ತತ್ತಿ ಎಸೆದು ಧನ್ಯತೆ ಮೆರೆದರು.