ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾಗರದ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

ಸಾಗರ ಎಂದಾಕ್ಷಣ ಹಲವು ವಿಶೇಷತೆಯೊಂದಿಗೆ ಕಣ್ಮುಂದೆ ಬರುವುದು ಇಲ್ಲಿನ ಮಾರಿಕಾಂಬ ಜಾತ್ರೆಯ ವೈಭವ. ರಾಜ್ಯದಲ್ಲಿ ಶಿರಸಿ ಮತ್ತು ಸಾಗರ ಎರಡು ಪ್ರಸಿದ್ದ ಐತಿಹಾಸಿಕ ಜಾತ್ರೆಗಳಲ್ಲಿ ಎರಡನೇ ದೊಡ್ಡ ಜಾತ್ರೆ ಎನ್ನುವ ಸ್ಥಾನದಲ್ಲಿ ಸಾಗರ ಮಾರಿಜಾತ್ರೆ ನಿಲ್ಲುತ್ತದೆ. ಅದು ಕೇವಲ ದೇವಿ ಪೂಜೆಯ ಉತ್ಸವವಲ್ಲ ಬದಲಾಗಿ ಜನರ ಭಾವನೆಯ ಮಹಾ ತೇರು.

ಸಾಗರದ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

-

Ashok Nayak
Ashok Nayak Jan 30, 2026 2:43 PM

ರಮೇಶ್ ಹೆಗಡೆ ಗುಂಡೂಮನೆ, ಸಾಗರ

ಶ್ರೀಮಾರಿಕಾಂಬೆದೇವಿ ಪರಿಷೆ ನೆಲ ಸಂಸ್ಕೃತಿಯ ಪ್ರತೀಕ

ರಾಜ್ಯದ ಎರಡನೇ ಅತಿದೊಡ್ಡ ಜಾತ್ರೆ

ಸಾಗರ ಎಂದಾಕ್ಷಣ ಹಲವು ವಿಶೇಷತೆಯೊಂದಿಗೆ ಕಣ್ಮುಂದೆ ಬರುವುದು ಇಲ್ಲಿನ ಮಾರಿಕಾಂಬ ಜಾತ್ರೆಯ ವೈಭವ. ರಾಜ್ಯದಲ್ಲಿ ಶಿರಸಿ ಮತ್ತು ಸಾಗರ ಎರಡು ಪ್ರಸಿದ್ದ ಐತಿಹಾಸಿಕ ಜಾತ್ರೆಗಳಲ್ಲಿ ಎರಡನೇ ದೊಡ್ಡ ಜಾತ್ರೆ ಎನ್ನುವ ಸ್ಥಾನದಲ್ಲಿ ಸಾಗರ ಮಾರಿಜಾತ್ರೆ ನಿಲ್ಲುತ್ತದೆ. ಅದು ಕೇವಲ ದೇವಿ ಪೂಜೆಯ ಉತ್ಸವವಲ್ಲ ಬದಲಾಗಿ ಜನರ ಭಾವನೆಯ ಮಹಾ ತೇರು.

ಕೆಳದಿ ಅರಸರ ಹೆಜ್ಜೆ ಗುರುತು: ಮಲೆನಾಡ ಹೃದಯ ಭಾಗದ ಸಾಗರ ತಾಲೂಕಿನ ಪ್ರತಿ ಸ್ಥಳದಲ್ಲಿ ಯೂ ಕೆಳದಿ ಅರಸರ ಹೆಜ್ಜೆಯ ಗುರುತು ಮೂಡಿಸಿದೆ. ಅಂತಹ ಉತ್ತಮ ಆಡಳಿತಕ್ಕೆ ಹೆಸರಾಗಿರುವ ಅವರ ಆಳ್ವಿಕೆಗೆ ಶಕ್ತಿ ಕೊಟ್ಟ, ಯುದ್ದದಲ್ಲಿ ಶತೃಗಳ ವಿರುದ್ದ ವಿಜಯಮಾಲೆ ದೊರಕಿಸಿಕೊಟ್ಟ, ದುಷ್ಟರ ಶಿಕ್ಷೆಗೆ ಮಾರ್ಗ ತೋರಿದ ಶಕ್ತಿ ಸ್ವರೂಪಿಣಿ ಮಾರಿಕಾಂಬೆಯನ್ನು ಭಕ್ತಿ ಶ್ರದ್ದೆಯಿಂದ ಪೂಜಿಸಿ, ಅದರ ಮಹತ್ವವನ್ನು ಜನತೆಗೆ ವಿಸ್ತರಿಸಿ ಅದಕ್ಕೊಂದು ಪೂಜನೀಯ ಸ್ಥಾನ ಕಲ್ಪಿಸಿರು ವುದು ಮುಂದೆ ನೆಲೆದ ಸಂಸ್ಕೃತಿಯಾಗಿ ನಡೆದುಕೊಂಡು ಬರುವಂತಾಗಿದೆ.

ಶರಾವತಿ ದಡದ ವರದೆಯ ಒಡಲೊಳು ಅಂದದ ನಗರವಾಗಿಸಿ ಸುಂದರ ಕೆರೆ ನಿರ್ಮಿಸಿದ ಸದಾಶಿವ ನಾಯಕ, ಸಾಗರ ಐತಿಹಾಸಿಕ ಕ್ಷೇತ್ರವಾಗಿ ಇಂದು ಗುರುತಿಸಿಕೊಳ್ಳಲು ಹತ್ತು ಹಲವು ಅಂಶ ಗಳಿದ್ದರೂ ಹೆಚ್ಚು ಪ್ರಸಿದ್ಧ ಪಡೆದಿರುವುದು ಮಾರಿಕಾಂಬೆ ಜಾತ್ರೆ ಎನ್ನುವುದು ಸರ್ವವಿಧಿತ.

ಇದನ್ನೂ ಓದಿ: Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್‌ ಮಿನುಗುತಾರೆ

ದೇವಿಯ ಪಾದುಕೆ ಸ್ಥಳ: ಮಹಾ ಪುರುಷ ಆದಿ ಶಂಕರಾಚಾರ್ಯರು ದೇವಿಯ ಪಾದುಕೆ ಇಟ್ಟ ಸ್ಥಳವೇ ಇಂದು ಅಮ್ಮನ ಗುಡಿಯಾಗಿ ಲೋಕ ಪ್ರಸಿದ್ದಿ ಹೊಂದಿದೆ ಎಂಬ ಪ್ರತೀತಿಯೂ ಜನರ ಮಾತುಗಳಲ್ಲಿದೆ. ಕೇರಳದ ಕಾಲಟಿಯಿಂದ ಜಗನ್ಮಾತೆಯರನ್ನು ಕರೆತಂದು ಕೊಲ್ಲೂರಿನಲ್ಲಿ ಮೂಕಾಂಬಿಕೆ ಮತ್ತು ಶೃಂಗೇರಿಯಲ್ಲಿ ಶಾರದಾಂಬೆ ಪ್ರತಿಷ್ಠಾಪಿಸಿರುವ ಹಿನ್ನೆಲೆ ಗಮನಿಸಿದ ದೇವಿ ಆರಾಧಕರು ಸಾಗರದ ಮಾರಿಕಾಂಬೆ ಕೂಡ ಹೀಗೆ ಆಗಿರಲೂ ಬಹುದು ಎನ್ನುತ್ತಾರೆ.

ನಾಡ ದೇವತೆಯ ಪೂಜೆ: ಕೆಳದಿ ಇಕ್ಕೇರಿ ಮತ್ತು ಬಿದನೂರು ನಗರವನ್ನು ಆಯಾ ಕಾಲಘಟ್ಟಕ್ಕೆ ತಮ್ಮ ರಾಜಧಾನಿಯಾಗಿಸಿಕೊಂಡು ರಾಜ್ಯಭಾರ ನಡೆಸಿದ ಕೆಳದಿಯ ವೀರ ಪರಂಪರೆಯ ರಾಜರು ದೇವಿಯನ್ನು ನಾಡದೇವತೆಯಾಗಿ ಪೂಜಿಸಿಕೊಂಡು ಬಂದಿದ್ದರು ಎನ್ನುವುದು ಇತಿಹಾಸದ ಪುಟಗಳು ಹೇಳುತ್ತದೆ. ವೆಂಕಟಪ್ಪನಾಯಕ, ಸದಾಶಿವನಾಯಕ, ಶಿಸ್ತಿನ ಶಿವಪ್ಪನಾಯಕ, ಮಾತ್ರವಲ್ಲ ವೀರಮಹಿಳೆ ಚೆನ್ನಮ್ಮಾರ ಕಾಲದಲ್ಲಿ ನಾಡ ದೇವಿಯ ಪೂಜೆ ವಿಜೃಂಜಣೆಯಿಂದ ನಡೆಯುತ್ತಿತ್ತು. ಒಂದು ಉಲ್ಲೇಖದ ಪ್ರಕಾರ ಯಾವುದೇ ಕಷ್ಟ ನಷ್ಟಗಳ ಪರಿಹಾರಕ್ಕೆ ಪ್ರಾರ್ಥನೆ ಸಲ್ಲಿಸುವ ದೇವಾ ಲಯವಾಗಿ ರೂಪುಗೊಂಡು ಪ್ರಸಿದ್ದಿ ಪಡೆದ ಮಾರಿಕಾಂಬೆ ಅವರ ಇಷ್ಟಾರ್ಥ ಸಿದ್ದಿಸಿ ಕೊಡುವ ದೇವಿಯಾಗಿತ್ತು.

ನಂಬಿಕೆಯ ಹರಕೆ: ಹಿರಿಯವರು ಹೇಳಿದ ಕತೆಯಾದರೂ ಇಂದಿನ ನಂಬಿಕೆಗೆ ಪೂರಕವಾದ ದೇವಿ ದರ್ಶನದ ಮಹತ್ವ ಹೀಗಿದೆ. ಅನೇಕ ದಶಕಗಳ ಹಿಂದೆ ಸಾಗರದ ಜನತೆಯನ್ನು ಮರಣಗಳಿಂದ ತಲ್ಲಣಗೊಳಿಸಿದ ಭಯಾನಕ ಬೇನೆಯಿಂದ ಸಾವು ನೋವುಗಳಿಗೆ ಕಾರಣವಾಯಿತು. ಈ ಕಷ್ಟಕ್ಕೆ ಪರಹಾರ ದೇವಿಯ ಆರಾಧನೆಯಿಂದ ಮಾತ್ರವೇ ಸಾಧ್ಯ ಎಂಬ ವಿಷಯ ಅರಿತ ಅಂದಿನ ಜನರು ಪ್ರತಿ ಮೂರು ವರ್ಷಕ್ಕೊಮ್ಮೆ ದೇವಿಗೆ ವಿಶೇಷ ಪೂಜೆ ಉತ್ಸವ ನೆರವೇರಿಸಿ ಕೊಡುವುದಾಗಿ ಹರಕೆ ಹೊತ್ತರು. ಈ ಹರಕೆಯ ಫಲವಾಗಿ ಮೂರು ವರ್ಷಕ್ಕೊಮ್ಮೆ 9 ದಿನಗಳ ವಿಶೇಷ ಪೂಜೆಯ ಜಾತ್ರೆ ರೂಢಿಗೆ ಬಂತು.

ಗುಡಿಯ ವಿಶೇಷ: ಎರಡು ಸಿಂಹಗಳೊಂದಿಗಿನ ರಥವನ್ನು ಹೊಂದಿರುವ ಬಹು ಆಕರ್ಷಣೆಯ ಮುಂಭಾಗದ ದೇವಿ ಆಲಯದಲ್ಲಿ ಹನ್ನೊಂದು ಅಡಿ ಎತ್ತರದ ದೇವಿಯ ಉತ್ಸವಮೂರ್ತಿಯನ್ನು ನೋಡುವುದೇ ಒಂದು ಸೊಗಸು. ಸೊರಬ ತಾಲೂಕು ಜಡೆಗ್ರಾಮದ ಮಂಜುನಾಥಪ್ಪ ಗುಡಿಗಾರ್, ಹಿರಿಯಣ್ಣಪ್ಪ ಮತ್ತು ಕುಟುಂಬದವರು ಸಿದ್ದಪಡಿಸಿದ ಮೂಲವಿಗ್ರಹಕ್ಕೆ ಇಂದು ಗುಡಿಗಾರ್ ದೇವಿಕುಮಾರ್ ಪ್ರತಿ ಜಾತ್ರೆಯಲ್ಲೂ ಬಣ್ಣಹಚ್ಚುವ ಕಾರ್ಯಕ್ರಮ ನೆರವೇರಿಸುತ್ತಾ ಬಂದಿದ್ದರು.

ಜಾತ್ರೆಗೂ ಮುನ್ನ ಪದ್ಧತಿ: ಜಾತ್ರೆಗೂ ಮುಂಚಿತವಾಗಿ ಶೂನ್ಯ ಮಾಸದಲ್ಲಿ ಮರ ಕಡಿದು ಅಮ--ನವರ ವಿಗ್ರಹ ತಯಾರಿಸಬೇಕೆಂಬ ಪದ್ದತಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಬದಲಾದ ಕಾಲ ಘಟ್ಟದಲ್ಲಿ ಶಾಶ್ವತ ಉತ್ಸವ ಮೂರ್ತಿಯ ವಿಗ್ರಹ ನಿರ್ಮಿಸಿರುವ ಜತೆಗೆ ಜಾತ್ರೆಯ ವೇಳೆ ಮರ ಕಡಿಯುವ ಶಾಸ್ತ್ರ ಪೂಜಾ ವಿಧಾನ ಎಲ್ಲವೂ ಮಮೂಲು ನಡೆಯಲಿದೆ.

ಅರ್ಚಕ ಪೋತರಾಜ ಅಮ್ಮನವರ ಪ್ರೇರಣೆ ಪಡೆದು ಅರಣ್ಯದಲ್ಲಿ ತೋರಿಸುವ ಹಲಸಿನ ಮರ ಕತ್ತರಿಸಿ ಅಮ್ಮನವರ ಮೂಲ ವಿಗ್ರಹಕ್ಕೆ ಒಂದು ಹೊಸ ಕೀಲು ಮಾಡುವುದು ಇಂದಿನ ವ್ಯವಸ್ಥೆ.

ಅಂಕೆಯ ಸಂಕ ದಾಟಬಾರದು: ಜಾತ್ರೆಗೂ ಒಂದು ವಾರದ ಮುಂಚೆ ನಗರದಲ್ಲಿ ಅಂಕೆ ಹಾಕುವ ಕಾರ್ಯಕ್ರಮವಿರುತ್ತದೆ. ಅಂಕೆ ಹಾಕಿದ ನಂತರ ಜಾತ್ರೆ ಮುಗಿಯುವವರೆಗೂ ಈ ಊರಿನಿಂದ ಯಾವುದೇ ಕಾರಣಕ್ಕೂ ಯಾರೂ ಹೊರ ಹೋಗಬಾರದು ಎಂಬ ಸಂಪ್ರಾದಾಯ ಇತ್ತು. ಇಂದಿಗೂ ಕೆಲವರು ಈ ಪದ್ಧತಿಯನ್ನು ಅನುಸರಿಸುತ್ತಾರೆ. ಈ ಊರಿನಿಂದ ಉದ್ಯೋಗ ಮತ್ತಿತರ ಕಾರಣ ಗಳಿಂದ ಬೇರೆ ಬೇರೆ ಊರುಗಳಲ್ಲಿರುವವರೂ, ಕುಟುಂಬದ ಬಂಧುಗಳು ಎಷ್ಟೇ ದೂರವಿದ್ದರೂ ಜಾತ್ರೆಯ ವೇಳೆ ಸಾಗರಕ್ಕೆ ಬಂದೇ ಬರುತ್ತಾರೆ.

ಜಾತ್ರೆಗೆ ಹರಿದು ಬರಲಿದೆ ಜನ ಸಾಗರ

ಜನರಲ್ಲಿನ ಭಕ್ತಿ ಎಷ್ಟಿದೆ ಎನ್ನುವುದಕ್ಕೆ ಸಾಗರ ಜಾತ್ರೆ ಉದಾಹರಣೆ. ವಿಪರೀತ ನೂಕುನುಗ್ಗಲು ಇದ್ದರೂ ದೇವಿಗೆ ಹಣ್ಣು ಕಾಯಿ ಸಮರ್ಪಿಸುವ ಸಲುವಾಗಿ ಎಷ್ಟೇ ಕಷ್ಟವಾದರೂ ಕಿಮಿ ದೂರ ದಿಂದಲೂ ಸರತಿ ನಿಂತು ಪೂಜೆ ಮಾಡಿಸುತ್ತಾರೆ. ಇದಕ್ಕಾಗಿ ರಾಜ್ಯದ ವಿವಿಧ ಭಾಗದಿಂದಲೂ ಲಕ್ಷಾಂತರ ಜನ ಬರುತ್ತಾರೆ. ಮೂರು ವರ್ಷಗಳಿಗೊಮ್ಮೆ ಹತ್ತು ದಿನ ನಡೆಯುವ ಸಾಗರದ ಮಾರಿಕಾಂಬೆ ಜಾತ್ರೆಗೆ ಜನ ಸಾಗರವೇ ಹರಿದು ಬರಲಿದೆ...!!