ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಸರಾ ಫಲಪುಷ್ಪ ಪ್ರದರ್ಶನ ಪ್ರಜಾಪ್ರಭುತ್ವದ ಅನಾವರಣ

ಪ್ರಜಾಪ್ರಭುತ್ವ, ಸಂವಿಧಾನ, ಮತದಾನದ ಮಹತ್ವ ಹಾಗೂ ಕಡ್ಡಾಯ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಆಕೃತಿಗಳನ್ನು ಹೂವುಗಳಿಂದಲೇ ನಿರ್ಮಿಸಲಾಗುತ್ತಿದೆ. ಹೂವಿನಲ್ಲೇ ವಿಧಾನಸೌಧ! ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯಲ್ಲಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ವಿಧಾನಸೌಧದ ಪ್ರತಿಕೃತಿ ತಲೆ ಎತ್ತಲಿದೆ.

ಕೆ.ಜೆ.ಲೋಕೇಶ್ ಬಾಬು

ಹೂವಿನಿಂದ ತಲೆ ಎತ್ತಲಿದೆ ವಿಧಾನಸೌಧ, ಸಂವಿಧಾನ, ಅಶೋಕ ಚಕ್ರ, ಮತದಾನದ ಮಹತ್ವ ಸಾರುವ ಆಕೃತಿಗಳು, 70 ಸಾವಿರಕ್ಕೂ ಅಧಿಕ ಹೂಕುಂಡಗಳ ಸೊಬಗು

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವ(Dasara Festival)ದ ಪ್ರಮುಖ ಆಕರ್ಷಣೆ ಯಾದ ಫಲಪುಷ್ಪ ಪ್ರದರ್ಶನ ಈ ಬಾರಿ ಕೇವಲ ಹೂಗಳ ವೈಭವಕ್ಕೆ ಸೀಮಿತವಾಗದೆ, ಪ್ರಜಾ ಪ್ರಭುತ್ವದ ಮಹತ್ವವನ್ನು ಸಾರುವ ವಿಶಿಷ್ಟ ವೇದಿಕೆಯಾಗಲಿದೆ. ಕುಪ್ಪಣ್ಣ ಪಾರ್ಕ್‌ನಲ್ಲಿ ಅ.11ರಿಂದ ಅ.21ರವರೆಗೆ ನಡೆಯ ಲಿರುವ ಫಲಪುಷ್ಪ ಪ್ರದರ್ಶನವನ್ನು ಪ್ರಜಾಪ್ರಭುತ್ವದ ಹಬ್ಬ ಎಂಬ ಪರಿಕಲ್ಪನೆಯಡಿ ಆಯೋಜಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

ಪ್ರಜಾಪ್ರಭುತ್ವ, ಸಂವಿಧಾನ, ಮತದಾನದ ಮಹತ್ವ ಹಾಗೂ ಕಡ್ಡಾಯ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಆಕೃತಿಗಳನ್ನು ಹೂವುಗಳಿಂದಲೇ ನಿರ್ಮಿಸಲಾಗುತ್ತಿದೆ. ಹೂವಿನಲ್ಲೇ ವಿಧಾನಸೌಧ! ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯಲ್ಲಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ವಿಧಾನಸೌಧದ ಪ್ರತಿಕೃತಿ ತಲೆ ಎತ್ತಲಿದೆ. ಸುಮಾರು 42 ಅಡಿ ಅಗಲ, 18 ಅಡಿ ಉದ್ದ ಹಾಗೂ 15 ಅಡಿ ಎತ್ತರದ ಈ ಪ್ರತಿಕೃತಿಯನ್ನು ಹೂವುಗಳಿಂದ ನಿರ್ಮಿಸಲು ಯೋಜಿಸಲಾಗಿದೆ.

ವಿಧಾನಸೌಧದ ಜತೆಗೆ ಸಂವಿಧಾನದ ಪುಸ್ತಕ, ಅಶೋಕ ಚಕ್ರ ಹಾಗೂ ರಾಜಲಾಂಛನಗಳ ಪ್ರತಿ ಕೃತಿಗಳೂ ಹೂವಿನಿಂದಲೇ ಅರಳಲಿವೆ. ಈ ಎಲ್ಲ ಆಕೃತಿಗಳಿಗೆ ಮುಖ್ಯವಾಗಿ ಗುಲಾಬಿ ಹೂಗಳನ್ನು ಬಳಸುವ ಉದ್ದೇಶವಿದ್ದು, ಯಾವ ಬಣ್ಣದ ಗುಲಾಬಿ ಬಳಸಬೇಕು ಎಂಬುದನ್ನು ಅಂತಿಮ ಗೊಳಿಸಲಾಗುತ್ತಿದೆ.

ಇದನ್ನೂ ಓದಿ: Dasara Holidays 2026: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಈ ಬಾರಿ 19 ದಿನ ದಸರಾ ರಜೆ!

30-40 ಸಾವಿರ ಪ್ರವಾಸಿಗರಿಗೆ ಪ್ರಜಾಪ್ರಭುತ್ವದ ಸಂದೇಶ ದಸರಾ ಸಂದರ್ಭದಲ್ಲಿ ಪ್ರತಿದಿನ ಸುಮಾರು 30 ರಿಂದ 40 ಸಾವಿರ ಪ್ರವಾಸಿಗರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಹೀಗಾಗಿ, ಹೂವಿನ ಕಲಾಕೃತಿಗಳ ಮೂಲಕ ಪ್ರಜಾಪ್ರಭುತ್ವದ ಮಹತ್ವ, ಮತದಾನದ ಜವಾಬ್ದಾರಿ ಹಾಗೂ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಲು ಇಲಾಖೆ ಮುಂದಾಗಿದೆ.

ಬಿಸಿಲಿನ ನಡುವೆ ಹೂಗಳ ತಾಜಾತನ ಕಾಪಾಡುವ ಸವಾಲು ಹೂವಿನಿಂದ ನಿರ್ಮಿಸಿರುವ ಬೃಹತ್ ಆಕೃತಿಗಳನ್ನು ಪ್ರದರ್ಶನದ ಕೊನೆಯ ದಿನದವರೆಗೂ ತಾಜಾವಾಗಿ ಉಳಿಸಿಕೊಳ್ಳುವುದು ಈ ಬಾರಿ ತೋಟಗಾರಿಕಾ ಇಲಾಖೆಗೆ ದೊಡ್ಡ ಸವಾಲಾಗಿದೆ. ಆಕೃತಿಗಳಿಗೆ ಬಳಸಿರುವ ಹೂವುಗಳ ತಾಜಾತನ ಕಾಪಾಡಲು ಸುಮಾರು ಆರು ದಿನಗಳ ಬಳಿಕ ಅಗತ್ಯವಿದ್ದಲ್ಲಿ ಹೂವುಗಳನ್ನು ಬದಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ, ಬಿಸಿಲಿನ ತಾಪದಿಂದ ಹೂವುಗಳು ಬಾಡದಂತೆ ಗಾಜಿನ ಮನೆಯೊಳಗೆ ಹಾಗೂ ಆಕೃತಿಗಳ ಸುತ್ತ ನೂರಾರು ಸ್ಪ್ರಿಂಕ್ಲರ್‌ಗಳ ಮೂಲಕ ನೀರಿನ ಸಿಂಚನ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ.

ಪಾರ್ಕ್‌ನಲ್ಲೂ ಅರಳಲಿವೆ ಹಲವು ಪರಿಕಲ್ಪನೆಗಳು ಗಾಜಿನ ಮನೆಯಲ್ಲಿ ವಿಧಾನಸೌಧ ಸೇರಿದಂತೆ ಪ್ರಜಾಪ್ರಭುತ್ವದ ಪರಿಕಲ್ಪನೆಯ ಆಕೃತಿಗಳು ಮೂಡಿಬರಲಿದ್ದರೆ, ಕುಪ್ಪಣ್ಣ ಪಾರ್ಕ್‌ನ ವಿವಿಧ ಭಾಗಗಳಲ್ಲಿ ಇನ್ನಷ್ಟು ವಿಷಯಾ ಧಾರಿತ ಹೂವಿನ ಕಲಾಕೃತಿಗಳು ಗಮನ ಸೆಳೆಯಲಿವೆ. ಮಹಿಳಾ ಸಬಲೀಕರಣ, ಸರ್ಕಾರದ ಗ್ಯಾರಂಟಿ ಯೋಜನೆಗಳು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆ ಸೇರಿದಂತೆ ವಿವಿಧ ವಿಷಯಗಳನ್ನು ಆಧರಿಸಿದ ಆಕೃತಿಗಳನ್ನು ನಿರ್ಮಿ ಸಲು ಸಿದ್ಧತೆ ನಡೆದಿದೆ.

ಉಪವಿಷಯಗಳನ್ನು ಶೀಘ್ರ ಅಂತಿಮಗೊಳಿಸಿ, ಅದಕ್ಕೆ ಅನುಗುಣವಾಗಿ ಮತ್ತಷ್ಟು ಕಲಾಕೃತಿಗಳನ್ನು ರೂಪಿಸಲಾಗುತ್ತದೆ. 70 ಸಾವಿರಕ್ಕೂ ಅಧಿಕ ಹೂಕುಂಡಗಳ ಸಿದ್ಧತೆ ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 70 ಸಾವಿರಕ್ಕೂ ಅಧಿಕ ಹೂಕುಂಡಗಳನ್ನು ಬಳಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

ಈಗಾಗಲೇ 25ಕ್ಕೂ ಹೆಚ್ಚು ಬಗೆಯ ಹೂಗಳನ್ನು ಒಳಗೊಂಡ ಸುಮಾರು 55 ಸಾವಿರ ಹೂಕುಂಡ ಗಳನ್ನು ಸಿದ್ಧಪಡಿಸಲಾಗಿದೆ. ಮತ್ತಷ್ಟು 15 ರಿಂದ 20 ಸಾವಿರ ಹೂಕುಂಡಗಳನ್ನು ಊಟಿ ಮತ್ತು ಪುಣೆಯಿಂದ ತರಿಸಿಕೊಳ್ಳಲಾಗುತ್ತಿದೆ. ಪ್ರದರ್ಶನದಲ್ಲಿ ಡಚ್ ರೋಸಸ್, ಆರ್ಕಿಡ್ಸ್, ಡೇಲಿಯಾ, ಜರ್ಬೇರಾ, ಜಿನ್ನಿಯಾ, ಆಸ್ಟರ್, ಸೆಲೋಸಿಯಾ, ಕಾಕ್ಸ್ ಕಾಂಬ್, ಕಾಸ್ಮೋಸ್, ಕಾರ್ನೇಷನ್, ಲಿಲಿ ಸೇರಿದಂತೆ ವಿವಿಧ ಬಗೆಯ ಹೂಗಳು ಕಣ್ಮನ ಸೆಳೆಯಲಿದೆ.

ಅಂತಿಮ ಹಂತದಲ್ಲಿ ಸಿದ್ದತೆ

ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಪ್ಪಣ್ಣ ಪಾರ್ಕ್'ನಲ್ಲಿ ಸಿದ್ಧತಾ ಕಾರ್ಯಗಳು ಬಿರುಸು ಗೊಂಡಿವೆ. ಫಲಪುಷ್ಪ ಪ್ರದರ್ಶನದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಪ್ರವೇಶ ಶುಲ್ಕ ಸಂಗ್ರಹಣೆ ಹಾಗೂ ಆಹಾರ ಮಳಿಗೆಗಳ ಸ್ಥಾಪನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನೂ ಶೀಘ್ರ ಪೂರ್ಣಗೊಳಿಸಲು ಇಲಾಖೆ ಮುಂದಾಗಿದೆ. ಒಟ್ಟಾರೆ, ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನ ದಲ್ಲಿ ಬಣ್ಣಬಣ್ಣದ ಹೂಗಳ ಸೊಬಗಿನ ಜತೆಗೆ ಪ್ರಜಾಪ್ರಭುತ್ವದ ಆಶಯವೂ ಅರಳಲಿದ್ದು, ಹೂವಿನ ವಿಧಾನಸೌಧವೇ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ