ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅ.13ರಿಂದ 17ರವರೆಗೆ ದಸರಾ ಕವಿಗೋಷ್ಠಿ, ಐದು ಬಗೆಯ ಕಾವ್ಯ ಸಂಭ್ರಮ, 200ಕ್ಕೂ ಅಧಿಕ ಕವಿಗಳ ಸಮಾಗಮ: ಕವಿತೆಯ ಪಂಚಪರ್ವಕ್ಕೆ ಮೈಸೂರು ಸಜ್ಜು

ದಸರೆಯ ವೈಭವಕ್ಕೆ ಕಾವ್ಯದ ಕಂಪು ಬೆರೆಸುವ ಕ್ಷಣ ಮತ್ತೆ ಬಂದಿದೆ. ನಾಡಹಬ್ಬದ ಸಾಂಸ್ಕೃತಿಕ ಸಂಭ್ರಮದ ಭಾಗವಾಗಿ ಈ ಬಾರಿಯ ದಸರಾ ಕವಿಗೋಷ್ಠಿ ಅ.13ರಿಂದ 17ರವರೆಗೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಐದು ದಿನಗಳ ಕಾಲ ನಡೆ ಯಲಿರುವ ಈ ಕಾವ್ಯೋತ್ಸವದಲ್ಲಿ ಚುಟುಕುಹಾಸ್ಯ, ಯುವ, ಚಿಗುರು, ಜನಪದ ಹಾಗೂ ಪ್ರಧಾನ ಕವಿಗೋಷ್ಠಿ ಸೇರಿದಂತೆ ಐದು ವಿಭಿನ್ನ ಸ್ವರೂಪದ ಗೋಷ್ಠಿಗಳು ನಡೆಯಲಿವೆ.

ಕೆ.ಜೆ. ಲೋಕೇಶ್ ಬಾಬು

ಮೈಸೂರು: ದಸರೆಯ ವೈಭವಕ್ಕೆ ಕಾವ್ಯದ ಕಂಪು ಬೆರೆಸುವ ಕ್ಷಣ ಮತ್ತೆ ಬಂದಿದೆ. ನಾಡಹಬ್ಬದ ಸಾಂಸ್ಕೃತಿಕ ಸಂಭ್ರಮದ ಭಾಗವಾಗಿ ಈ ಬಾರಿಯ ದಸರಾ ಕವಿಗೋಷ್ಠಿ ಅ.13ರಿಂದ 17ರವರೆಗೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಐದು ದಿನಗಳ ಕಾಲ ನಡೆ ಯಲಿರುವ ಈ ಕಾವ್ಯೋತ್ಸವದಲ್ಲಿ ಚುಟುಕುಹಾಸ್ಯ, ಯುವ, ಚಿಗುರು, ಜನಪದ ಹಾಗೂ ಪ್ರಧಾನ ಕವಿಗೋಷ್ಠಿ ಸೇರಿದಂತೆ ಐದು ವಿಭಿನ್ನ ಸ್ವರೂಪದ ಗೋಷ್ಠಿಗಳು ನಡೆಯಲಿವೆ.

ನಾಡಿನ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಕವಿಗಳು ಪಾಲ್ಗೊಳ್ಳಲಿದ್ದು, ಕಾವ್ಯದ ವಿವಿಧ ಮುಖಗಳು ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿವೆ.

ಕಾವ್ಯೋತ್ಸವಕ್ಕೆ ವೈದೇಹಿ ಚಾಲನೆ: ಅ.13ರಂದು ಬೆಳಿಗ್ಗೆ 10.30ಕ್ಕೆ ಹಿರಿಯ ಲೇಖಕಿ ವೈದೇಹಿ ಅವರು ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯ ದಿನವೇ ಹಾಸ್ಯ ಮತ್ತು ಚುಟುಕು ಕವಿಗೋಷ್ಠಿ ನಡೆಯಲಿದೆ. ಅ.14ರಂದು ಯುವ ಕವಿಗೋಷ್ಠಿ, ಅ.15ರಂದು ಉದಯೋನ್ಮುಖ ಬರಹಗಾರರನ್ನು ಪರಿಚಯಿಸುವ ಚಿಗುರು ಕವಿಗೋಷ್ಠಿ. ಅ.16ರಂದು ಜನಪದ ಕಾವ್ಯಗೋಷ್ಠಿ. ಅ.17ರಂದು ಪ್ರಧಾನ ಕವಿಗೋಷ್ಠಿಯೊಂದಿಗೆ ವೈಭವದ ತೆರೆ ಬೀಳಲಿದೆ.

ಇದನ್ನೂ ಓದಿ: Hebbal Dasara: ಶತಮಾನ ಇತಿಹಾಸದ ಹೆಬ್ಬಾಳ ದಸರಾಗೆ ಅ.11 ರಂದು ಚಾಲನೆ: ಅ.21 ರವರೆಗೆ ನಡೆಯಲಿರುವ ರಾಜ್ಯದ ಎರಡನೇ ಮೈಸೂರು ದಸರಾ

ಕಾವ್ಯಕ್ಕೆ ಹೊಸ ಬಣ್ಣ ನೀಡುವ ಬಹುರೂಪಿ: ಈ ಬಾರಿಯ ದಸರಾ ಕವಿಗೋಷ್ಠಿಯ ವಿಶೇಷ ಆಕರ್ಷಣೆ ಬಹುರೂಪಿ ಕವಿಗೋಷ್ಠಿ. ಕಾವ್ಯವೆಂದರೆ ಕೇವಲ ಸಾಹಿತಿಗಳ ವೇದಿಕೆಯಲ್ಲ ಎಂಬು ದನ್ನು ಸಾರುವ ರೀತಿಯಲ್ಲಿ, ಗಾರೆ ಕೆಲಸಗಾರರು, ಪೊಲೀಸ್ ಕಾನ್ ಸ್ಟೆಬಲ್, ಸ್ವಾಮೀಜಿ, ಗೃಹಿಣಿ ಸೇರಿದಂತೆ ವಿವಿಧ ವೃತ್ತಿ, ವರ್ಗ ಹಾಗೂ ವಯೋಮಾನದ ಕವಿಗಳು ಈ ಬಾರಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಕಾವ್ಯದ ಜತೆಗೆ ಪುಸ್ತಕ, ಕರಕುಶಲ, ಖಾದಿ... ಕವಿಗೋಷ್ಠಿ ನಡೆಯುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆವರಣವೂ ಈ ಬಾರಿ ಸಾಹಿತ್ಯಸಂಸ್ಕೃತಿಯ ಮೇಳವಾಗಿ ರೂಪುಗೊಳ್ಳಲಿದೆ. ಪುಸ್ತಕ, ಕರಕುಶಲ ವಸ್ತುಗಳು, ಖಾದಿ ಬಟ್ಟೆ ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ. ಕವಿಗಳೊಂದಿಗೆ ನೆನಪಿನ ಚಿತ್ರ ಸೆರೆಹಿಡಿಯಲು ಅಧ್ಯಯನ ಸಂಸ್ಥೆಯ ಎರಡು ಕಡೆ ವಿಶೇಷ ಸೆಲಿ ಸ್ಪಾಟ್‌ಗಳು ನಿರ್ಮಾಣಗೊಳ್ಳಲಿವೆ.

ವಿದೇಶದ ಕನ್ನಡ ಕವಿಗಳೂ ಕಾವ್ಯ ಹೇಳಲಿದ್ದಾರೆ!: ನಾಡಿನ ಕವಿಗಳಷ್ಟೇ ಅಲ್ಲ, ವಿದೇಶದಲ್ಲಿ ನೆಲೆಸಿರುವ ಕನ್ನಡ ಕವಿಗಳಿಗೂ ಈ ಕಾವ್ಯೋತ್ಸವದಲ್ಲಿ ವೇದಿಕೆ ಸಿಗಲಿದೆ. ವಿದೇಶದಲ್ಲಿರುವ ಕನ್ನಡ ಕವಿಗಳು ವಿಡಿಯೊ ಮೂಲಕ ಕಳುಹಿಸುವ ಕವಿತೆಗಳನ್ನು ಎಲ್‌ಇಡಿ ಪರದೆಯ ಮೂಲಕ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ಮೈಸೂರಿನ ವೇದಿಕೆಯಲ್ಲಿ ದೂರದ ದೇಶಗಳಲ್ಲಿರುವ ಕನ್ನಡದ ಕಾವ್ಯಧ್ವನಿಯೂ ಮೊಳಗಲಿದೆ.

ಕವಿತೆಯಿಂದ ನೃತ್ಯಕ್ಕೆ... ಕಾವ್ಯದಿಂದ ರಂಗಭೂಮಿಗೆ: ಯುವ ಕವಿಗೋಷ್ಠಿಯ ಬಳಿಕ ಕುವೆಂಪು ಅವರ ಹಾಡುಗಳನ್ನು ಆಧರಿಸಿದ ನೃತ್ಯ ಪ್ರದರ್ಶನ ನಡೆಯಲಿದೆ. ಚಿಗುರು ಕವಿಗೋಷ್ಠಿಯ ಬಳಿಕ ರಾಮಾಯಣ ದರ್ಶನಂ ಆಧರಿಸಿದ ಒಂದು ಅಧ್ಯಾಯದ ನಾಟಕ ಪ್ರದರ್ಶನ ಕೂಡ ಇರಲಿದೆ. ಇದರ ಜತೆಗೆ ಉರ್ದು ಕವಿಗೋಷ್ಠಿಯೂ ಪ್ರತ್ಯೇಕವಾಗಿ ನಡೆಯಲಿದೆ.

ಐದು ದಿನ... ಐದು ಬಣ್ಣ... ಒಂದೇ ಕಾವ್ಯೋತ್ಸವ!: ಚುಟುಕುಹಾಸ್ಯದಿಂದ ಆರಂಭವಾಗಿ ಯುವ ಕಾವ್ಯ, ಚಿಗುರು ಬರಹಗಾರರು, ಜನಪದದ ಸೊಗಡು ಹಾಗೂ ಪ್ರಧಾನ ಕಾವ್ಯದವರೆಗೆ ಐದು ದಿನಗಳ ಕಾಲ ಕಾವ್ಯದ ಹಲವು ಮುಖಗಳನ್ನು ಪರಿಚಯಿಸುವ ದಸರಾ ಕವಿಗೋಷ್ಠಿ, ಈ ಬಾರಿ ಸಾಹಿತ್ಯದ ಆಚರಣೆಯನ್ನು ಜನಸಾಮಾನ್ಯರ ಹಬ್ಬವಾಗಿಸುವ ಪ್ರಯತ್ನಕ್ಕೆ ಸಾಕ್ಷಿಯಾಗಲಿದೆ. ಕವಿಗಳಷ್ಟೇ ಅಲ್ಲದೆ, ವಿವಿಧ ವೃತ್ತಿವರ್ಗದ ಜನರು, ಯುವಕರು, ಮಕ್ಕಳು, ವಿದೇಶದ ಕನ್ನಡಿಗರು ಹಾಗೂ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ ದಸರೆಯ ಸಾಂಸ್ಕೃತಿಕ ವೈವಿಧ್ಯಕ್ಕೆ ಕಾವ್ಯದ ಹೊಸ ಆಯಾಮ ನೀಡುವ ಸಿದ್ಧತೆ ನಡೆದಿದೆ. ದಸರೆಯ ಸಂಭ್ರಮದಲ್ಲಿ ಈ ಬಾರಿ ಅರಮನೆಯ ವೈಭವದ ಜತೆಗೆ ಕಾವ್ಯದ ಕಂಪೂ ಮೈಸೂರಿನ ಗಾಳಿಯಲ್ಲಿ ಬೆರೆಯಲಿದೆ.

ಕಾವ್ಯದ ಪ್ರಚಾರ ತೇರು

ಕವಿಗೋಷ್ಠಿಯ ಪ್ರಚಾರವೂ ಈ ಬಾರಿ ವಿಭಿನ್ನವಾಗಿರಲಿದೆ. ಕಾರ್ಯಕ್ರಮ ಆರಂಭಕ್ಕೂ ಸುಮಾರು ಹತ್ತು ದಿನ ಮುಂಚೆಯೇ ಕವಿಗೋಷ್ಠಿ ಪ್ರಚಾರ ತೇರು ಮೈಸೂರಿನಾದ್ಯಂತ ಸಂಚರಿಸಿ ಕಾವ್ಯೋತ್ಸವ ದ ಮಹತ್ವವನ್ನು ಸಾರಲಿದೆ.