ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯದಲ್ಲಿ ಕೆಎಎಸ್‌ನಿಂದ ಐಎಎಸ್ ಬಡ್ತಿ ಅವಕಾಶ ಕುಸಿತ: ಐಎಎಸ್‌-ಕೆಎಎಸ್‌ ನಡುವೆ ಸದ್ದಿಲ್ಲದ ಹುದ್ದೆ ಗುದ್ದಾಟ

ಇನ್ನು ಕೆಲವರ ಅಧಿಕಾರಿಗಳು ಇದು ‘ಐಎಎಸ್ ಲಾಬಿ’ ಎಂದು ಹೇಳುತ್ತಿದ್ದರೆ, ಅನೇಕರು ಇದು ಸರಕಾರದ ಜಾಣತನದ ವಂಚನೆ ಎನ್ನುವುದು ಟೀಕಿಸುತ್ತಿದ್ದಾರೆ. ಸದ್ಯ ಕೆಲವು ಕೆಎಎಸ್ ಅಧಿಕಾರಿಗಳು ನಿರ್ಲಕ್ಷದ ವಿರುದ್ಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಕೆಇಟಿ) ಮೊರೆ ಹೋಗಿದ್ದು, ನ್ಯಾಯ ಮಂಡಳಿ ಆರು ವಾರಗಳೊಳಗೆ ಸರಕಾರ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಈಗ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ನಡುವೆ ಸದ್ದಿಲ್ಲದೆ ‘ಹುದ್ದೆ ಗುದ್ದಾಟ’ ಶುರುವಾಗಿದೆ. ರಾಜ್ಯದಲ್ಲಿ ಕೆಎಎಸ್ ಅಧಿಕಾರಿಗಳಿಂದ ಐಎಎಸ್ ಹುದ್ದೆಗೆ ಬಡ್ತಿಯಾಗುವ ಅವಕಾಶಗಳು ತೀರ ಕಡಿಮೆಯಾಗಿದ್ದು, ಇದರಿಂದ ಕೆಎಎಸ್ ಅಧಿಕಾರಿಗಳು ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ ಎನ್ನಲಾಗಿದೆ. ಕಾರಣ ರಾಜ್ಯದಲ್ಲಿ ಕಳೆದ 18 ವರ್ಷ ಗಳಿಂದ ಐಎಎಸ್ ಅಧಿಕಾರಿಗಳ ವೃಂದ ಬಲ ಹೆಚ್ಚಿಸಲು ಕೇಡರ್ ಪರಿಷ್ಕರಿಸದಿರುವುದು. ಅಂದರೆ ಐಎಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಸುವ ಕೇಡರ್ ಪರಿಷ್ಕರಣೆ ಮಾಡುವಲ್ಲಿ ರಾಜ್ಯ ಸರಕಾರ ಆಸಕ್ತಿ ತೋರದ ಕಾರಣ ಕೆಎ ಎಸ್ ಅಧಿಕಾರಿಗಳು ಐಎಎಸ್ ಆಗಿ ಬಡ್ತಿ ಹೊಂದುವ ಅವಕಾಶಗಳು ಕಡಿಮೆಯಾಗಿದೆ ಎನ್ನಲಾಗಿದೆ.

ಪರಿಣಾಮ ಕೆಎಎಸ್‌ನಿಂದ ಬಡ್ತಿ ಪಡೆದು ಐಎಎಸ್ ಅಧಿಕಾರಿ ಆಗಬಹುದಾಗಿದ್ದ ನೂರಾರು ಅಧಿಕಾರಿಗಳಿದ್ದರೂ ಇರುವ ಐಎಎಸ್ ಅಧಿಕಾರಿಗಳಿಂದಲೇ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ. ಒಬ್ಬ ಅಧಿಕಾರಿಗೆ ಮೂನಾಲ್ಕು ಹೆಚ್ಚುವರಿ ಪ್ರಭಾರಿ ಹುದ್ದೆಗಳು, ಹೆಚ್ಚು ಹೊಣೆಗಳನ್ನು ನೀಡಿ ಕೆಲಸ ಮಾಡಿಸಬೇಕಾದ ಅನಿವಾರ್ಯವಿದೆ. ಅಲ್ಲದೆ ಇದರಿಂದ ನೇರ ನೇಮಕಗೊಂಡ ಐಎಎಸ್ ಅಧಿಕಾರಿ ಗಳ ಸಂಖ್ಯೆ ಹೆಚ್ಚಾಗಿದೆ.

ರಾಜ್ಯದ ಆಡಳಿತ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದೆ. ಬಿಬಿಎಂಪಿ ಬದಲು ಜಿಬಿಎ ಆಗಿದೆ. ಜಿಲ್ಲೆಗಳ ಸಂಖ್ಯೆ ಹೆಚ್ಚಾಗಿ, ಹೊಸ ಇಲಾಖೆಗಳು, ನಿಗಮ-ಮಂಡಳಿಗಳು ಹಾಗೂ ವಿವಿಧ ಆಡಳಿತಾ ತ್ಮಕ ಹುದ್ದೆಗಳು ಸೃಷ್ಟಿಯಾಗಿವೆ. ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲೂ ಹೊಸ ಹುದ್ದೆಗಳು ಸೇರ್ಪಡೆಯಾಗಿವೆ. ಆದರೆ, ಈ ಎಲ್ಲ ಬದಲಾವಣೆಗಳ ನಡುವೆಯೂ ಕಳೆದ 18 ವರ್ಷಗಳಿಂದ ಕರ್ನಾಟಕದ ಐಎಎಸ್ ವೃಂದ ಬಲದಲ್ಲಿ ನಿರೀಕ್ಷಿತ ಪರಿಷ್ಕರಣೆ ನಡೆದಿಲ್ಲ ಎಂಬುದು ಈಗ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: IAS ಹುದ್ದೆ ತೊರೆದ ಬೆನ್ನಲ್ಲೇ ರಾಜಕೀಯ ಪ್ರವೇಶ; ಯಾರು ಈ ಮಾಜಿ ಅಧಿಕಾರಿ?

ನಿಯಮದ ಪ್ರಕಾರ ಸರಕಾರ ಐಎಎಸ್ ಹುದ್ದೆಗಳ (ಎಸ್‌ಡಿಪಿ) ಗಾತ್ರ ಹೆಚ್ಚಿಸುವ ಕೇಡರ್ ಪರಿಷ್ಕರಣೆ ಮಾಡಿದರೆ ಸದ್ಯ ರಾಜ್ಯದಲ್ಲಿ ಸೇವೆಗೆ ಲಭಿಸಿರುವ 42 ಬಡ್ತಿ ಪಡೆದ ಐಎಎಸ್ ಅಧಿಕಾರಿಗಳ ಸಂಖ್ಯೆ 67ಕ್ಕೆ ಏರಿಕೆಯಾಗಲಿದೆ. ಹಾಗೆಯೇ ನೇರ ನೇಮಕಗೊಳ್ಳುವ ಐಎಎಸ್ ಅಧಿಕಾರಿಗಳ ಸಂಖ್ಯೆಯಲ್ಲಿ 57 ಮಂದಿ ಹೆಚ್ಚುವರಿಯಾಗಿ ಲಭಿಸಲಿದೆ.

ಇದರಿಂದ ಒಬ್ಬ ಐಎಎಸ್ ಅಧಿಕಾರಿಗೆ ಎರಡು ಮೂರು ಹೆಚ್ಚುವರಿ ಪ್ರಭಾರ ಹುದ್ದೆಗಳನ್ನು ನೀಡುವ ತಲೆನೋವು ಸರಕಾರಕ್ಕೆ ಇರುವು ದಿಲ್ಲ. ಜತೆಗೆ ರಾಜ್ಯದ ಕೆಎಎಸ್ ನಿಂದ ಬಡ್ತಿ ಪಡೆದ ಐಎಎಸ್ ಅಧಿಕಾರಿಗಳಿಗೂ ವಿವಿಧ ಹುದ್ದೆಗಳನ್ನು ಹಂಚಿಕೆ ಮಾಡಬಹುದು ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಇದೆಲ್ಲಕ್ಕಿಂತ ಮುಖ್ಯವಾಗಿ ಕೆಎಎಸ್ ಅಧಿಕಾರಿಗಳೇ ನಿರ್ವಹಿಸಬಹುದಾದ ಸುಮಾರು 40ಕ್ಕೂ ಹೆಚ್ಚು ಹುದ್ದೆಗಳಲ್ಲಿ ಸರಕಾರ ಐಎಎಸ್ ಅಧಿಕಾರಿಗಳನ್ನೇ ನಿಯೋಚಿಸಲಾಗುತ್ತಿದೆ. ಇದರಿಂದ ಕೆಎಎಸ್ ಅಧಿಕಾರಿಗಳು ಅರ್ಹರಿದ್ದರೂ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ನೊಂದ ಕೆಎಎಸ್ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಕೆಲವರ ಅಧಿಕಾರಿಗಳು ಇದು ‘ಐಎಎಸ್ ಲಾಬಿ’ ಎಂದು ಹೇಳುತ್ತಿದ್ದರೆ, ಅನೇಕರು ಇದು ಸರಕಾರದ ಜಾಣತನದ ವಂಚನೆ ಎನ್ನುವುದು ಟೀಕಿಸುತ್ತಿದ್ದಾರೆ. ಸದ್ಯ ಕೆಲವು ಕೆಎಎಸ್ ಅಧಿಕಾರಿ ಗಳು ನಿರ್ಲಕ್ಷದ ವಿರುದ್ಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಕೆಇಟಿ) ಮೊರೆ ಹೋಗಿದ್ದು, ನಾಯಮಂಡಳಿ ಆರು ವಾರಗಳೊಳಗೆ ಸರಕಾರ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಇದಕ್ಕೊಂದು ಕಾಯ ಕಲ್ಪ ನೀಡಬೇಕೆನ್ನುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಹುದ್ದೆಗಳ ಒತ್ತುವರಿ ಬಗೆ ಆಕ್ರೋಶ ನಿಯಮಗಳ ಪ್ರಕಾರ, ಎಸ್‌ಡಿಪಿ ಹುದ್ದೆಗಳ ಶೇ.25ರಷ್ಟು, ಅಂದರೆ ಸುಮಾರು 42 ಹುದ್ದೆಗಳವರೆಗೆ ಮಾತ್ರ ಎಕ್ಸ್-ಕೇಡರ್ ವ್ಯವಸ್ಥೆಯಲ್ಲಿ ಬಳಸಲು ಅವಕಾಶವಿದೆ ಎಂಬ ವಾದವಿದೆ. ಆದರೆ ಕಳೆದ ಹಲವು ವರ್ಷಗಳಿಂದ 130ಕ್ಕೂ ಹೆಚ್ಚು ಹುದ್ದೆಗಳನ್ನು ಐಎಎಸ್ ಕೇಡರ್‌ಗೆ ಸೇರಿಸದೆ ಬಳಸಲಾಗುತ್ತಿದೆ ಎಂಬ ಆರೋಪ ಅಧಿಕಾರಿಗಳ ವಲಯದಲ್ಲಿದೆ. ಅಂದರೆ, ಯುವಜನ ಸೇವಾ ಕ್ರೀಡಾ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಾಗೂ ವಾರ್ತಾ ಇಲಾಖೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸೇರಿದಂತೆ ಅನೇಕ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳನ್ನೇ ನೇಮಕ ಮಾಡಬೇಕೆಂಬ ಕಡ್ಡಾಯ ನಿಯಮಗಳಿಲ್ಲ. ಹೀಗಾಗಿ ಈ ಹುದ್ದೆಗಳಿಗೆ ಹಿರಿಯ ಕೆಎಸ್ ಅಧಿಕಾರಿಗಳನ್ನೂ ನಿಯೋಜಿಸಬಹುದು. ಆದರೆ ಸರಕಾರ ಇಲ್ಲಿಗೂ ಐಎಎಸ್ ಅಧಿಕಾರಿಗಳನ್ನೇ ನೇಮಕ ಮಾಡುತ್ತಿದೆ. ಇದು ಅನೇಕ ಹಿರಿಯ ಕೆಎಎಸ್ ಅಽಕಾರಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇದರಿಂದಾಗುವ ವಂಚನೆ ಬಗ್ಗೆ ಅವರು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಅಧಕಾರಿಗಳ ಹುದ್ದೆ ಗದ್ದಲ

ಐಎಎಸ್ ಅಧಿಕಾರಿಗಳನ್ನು ಎರಡು ರೀತಿಯಲ್ಲಿ ನೇಮಕ ಮಾಡಲಾಗುತ್ತದೆ. ಯುಪಿಎಸ್ಸಿ ಪರೀಕ್ಷೆ ಯ ಮೂಲಕ ನೇರ ನೇಮಕ ಮಾಡುವುದು ಒಂದು ವಿಧಾನವಾದರೆ, ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವ ಮೂಲಕ ನೇಮಕ ಮಾಡುವುದು ಮತ್ತೊಂದು ವಿಧಾನವಾಗಿದೆ. ಈ ಎರಡೂ ವಿಧಾನಗಳ ಮೂಲಕ ನೇಮಕಗೊಂಡಿರುವ ಐಎಎಸ್ ಅಧಿಕಾರಿಗಳ ಸಂಖ್ಯೆ ಸದ್ಯ ರಾಜ್ಯದಲ್ಲಿ ಐಎಎಸ್ ಹುದ್ದೆಗಳ ವೃಂದ ಬಲ 314 ಇದೆ.

ಇದರಲ್ಲಿ ಯುಪಿಎಸ್‌ಸಿ ಮೂಲಕ ನೇರವಾಗಿ ನೇಮಕ ಗೊಂಡ 219 ಅಧಿಕಾರಿಗಳಿದ್ದು, ಕೆಎಎಸ್‌ ನಿಂದ ಬಡ್ತಿ ಹಾಗೂ ನಾನ್-ಕೆಎಎಸ್ ವೃಂದದಿಂದ ಬಂದ ಅಧಿಕಾರಿಗಳ ಸಂಖ್ಯೆ 95. ಆದರೆ, ಕೇಂದ್ರ ನಿಯೋಜನೆ ಹಾಗೂ ತರಬೇತಿ ಸೇರಿದಂತೆ ವಿವಿಧ ಕಾರಣಗಳಿಂದ ಹೊರಗಿರುವವರನ್ನು ಹೊರತು ಪಡಿಸಿದರೆ, ರಾಜ್ಯದಲ್ಲಿ ವಾಸ್ತವವಾಗಿ ಕಾರ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳ ಸಂಖ್ಯೆ ಕೇವಲ 223ರಷ್ಟಿದೆ. ಅಂದರೆ, ಹುದ್ದೆಗಳು 314ರಿದ್ದರೆ, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು 223 ಮೂಲಗಳ ಪ್ರಕಾರ, ರಾಜ್ಯದಲ್ಲಿರುವ 223 ಅಧಿಕಾರಿಗಳೇ 400ಕ್ಕೂ ಹೆಚ್ಚು ಹುದ್ದೆಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.