ರಂಗನಾಥ ಕೆ.ಹೊನ್ನಮರಡಿ
ಮಧುಗಿರಿ, ತಿಪಟೂರು ಪ್ರತ್ಯೇಕ ಜಿಲ್ಲೆ ಘೋಷಣೆಗೆ ಸಾರ್ವಜನಿಕರ ಆಗ್ರಹ
ತುಮಕೂರು: ಕಲ್ಪವೃಕ್ಷ ಸೀಮೆಯ ಹತ್ತು ತಾಲೂಕುಗಳನ್ನು ಹೊಂದಿರುವ ಬೃಹತ್ತಾದ ತುಮಕೂರು ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಇಬ್ಬಾಗ ಮಾಡಿ ಎರಡು ಜಿಲ್ಲೆ ಯಾಗಿಸಬೇಕು ಎನ್ನುವುದು ಹಳೇ ಬೇಡಿಕೆ. ಆದರೆ ಯಾವ ತಾಲೂಕು ಕೇಂದ್ರವನ್ನು ಹೊಸ ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಗೊಂದಲ ಮಾತ್ರ ಬಗೆಹರಿದಿಲ್ಲ.
ಸದ್ಯಕ್ಕೆ ಈಗ ಮಧುಗಿರಿ ಮತ್ತು ತಿಪಟೂರು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ಹಲವು ವರ್ಷ ಗಳಿಂದ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ. ಮಧುಗಿರಿ, ತಿಪಟೂರನ್ನು ಜಿಲ್ಲೆಯನ್ನಾಗಿ ಮಾಡುವ ಸಂಬಂಧ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಇದಕ್ಕಾಗಿ ಜನತೆ, ಜನಪ್ರತಿನಿಧಿಗಳು ಧ್ವನಿಗೂಡಿಸಿರುವುದು ಮತ್ತಷ್ಟು ಶಕ್ತಿ ತುಂಬಿದೆ.
ಇದನ್ನೂ ಓದಿ: Raghav Sharma Nidle Column: ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?
ಶಿರಾ ಕೂಡ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದ್ದು ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಎದ್ದಿದೆ. ಮಧುಗಿರಿ ಜಿಲ್ಲೆಗೆ ಒತ್ತಾಯ: ಪಾವಗಡದ ತಿರುಮಣಿಯಿಂದ ತುಮಕೂರು ಜಿಲ್ಲಾಕೇಂದ್ರಕ್ಕೆ 150 ಕಿಮೀ ದೂರವಿದ್ದು, ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಅಲೆದಾಡುವುದು ದೊಡ್ಡ ಸಮಸ್ಯೆ ಯಾಗುತ್ತಿದೆ. ಮಧುಗಿರಿ ಜಿಲ್ಲೆಯಾದರೆ ಮಧುಗಿರಿ, ಪಾವಗಡ, ಶಿರಾ, ಕೊರಟಗೆರೆ ತಾಲೂಕುಗಳನ್ನು ಸೇರ್ಪಡೆ ಮಾಡಲಾಗುವುದು.
ತಿಪಟೂರು ಜಿಲ್ಲೆಗೆ ಆಗ್ರಹ: ತುಮಕೂರು ಜಿಲ್ಲೆಯನ್ನು ವಿಭಾಗಿಸಿ ಪ್ರತ್ಯೇಕವಾಗಿ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಬಲವಾದ ಕೂಗು ಎದ್ದಿದೆ. ಹಲವು ವರ್ಷಗಳಿಂದ ನಡೆ ಯುತ್ತಿರುವ ಹೋರಾಟದಲ್ಲಿ ಸಾರ್ವಜನಿಕರೊಂದಿಗೆ, ಮಠಮಾನ್ಯಗಳು, ಪಕ್ಷಾತೀತವಾಗಿ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿ ಸಿರುವುದು ಮತ್ತಷ್ಟು ಪುಷ್ಟಿ ನೀಡಿದೆ.
ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕುಗಳನ್ನು ಸೇರ್ಪಡೆಗೊಳಿಸಿ ಜಿಲ್ಲೆಯನ್ನಾಗಿ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಹಳ ವರ್ಷಗಳ ಬೇಡಿಕೆಯಾದಂತಹ ತಿಪಟೂರು ಜಿಲ್ಲಾ ಕೇಂದ್ರವನ್ನು ಮಾಡಲು ಹಲವು ಬಾರಿ ಸರಕಾರಕ್ಕೆ ಮನವಿಯನ್ನು ಮಾಡಲಾಗಿದೆ.
ತಿಪಟೂರು ಜಿಲ್ಲಾ ಕೇಂದ್ರವಾಗುವುದರಿಂದ ಸರಕಾರಕ್ಕೆ ಯಾವುದೇ ರೀತಿಯ ಅಧಿಕ ಖರ್ಚು ಆಗುವುದಿಲ್ಲ. ಈಗಾಗಲೇ ಮಿನಿ ವಿಧಾನಸೌಧ, ನಗರಸಭೆ ಕಟ್ಟಡ, ಆರ್‌ಟಿಒ ಕಚೇರಿಯೊಂದಿಗೆ ಜಿಲ್ಲೆಯಾಗಲು ಅವಶ್ಯಕವಿರುವಂತಹ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ತಿಪಟೂರಿನ ಗಡಿ ಭಾಗದಿಂದ ತುಮಕೂರು ಜಿಲ್ಲಾ ಕೇಂದ್ರಕ್ಕೆ ತೆರಳಲು ನೂರಕ್ಕೂ ಅಧಿಕ ಕಿ.ಮೀ. ಕ್ರಮಿಸಬೇಕಾಗಿದೆ. ಆದ್ದರಿಂದ ತಿಪಟೂರನ್ನು ಜಿಲ್ಲೆ ಮಾಡುವಂತೆ ಸಿಎಂಗೆ ತಾಲೂಕಿನ ಜನತೆ ಒತ್ತಾಯ ಮಾಡಿದ್ದಾರೆ.
ಹುಳಿಯಾರು ತಾಲೂಕು ಘೋಷಿಸಿ
ಜಿಲ್ಲೆಯ ಅತಿದೊಡ್ಡ ಗ್ರಾಪಂ ಆಗಿದ್ದ ಹುಳಿಯಾರನ್ನು ಪುರಸಭೆಯನ್ನಾಗಿ ಪರಿವರ್ತಿಸಲಾಗಿದೆ. ಹಲವು ವರ್ಷಗಳಿಂದ ಹುಳಿಯಾರನ್ನು ತಾಲೂಕನ್ನಾಗಿ ಮಾಡುವಂತೆ ಆಗ್ರಹ ಮಾಡಲಾಗಿದೆ. ಜನಪ್ರತಿನಿಧಿಗಳು ಆಶ್ವಾಸನೆ ಕೊಟ್ಟು ಮೌನ ವಹಿಸುತ್ತಿದ್ದಾರೆ. ಹುಳಿಯಾರು ತಾಲೂಕಾಗಿ ಮೇಲ್ದರ್ಜೆಗೇರಿದರೆ ತಿಪಟೂರು ಜಿಲ್ಲಾ ಕೇಂದ್ರಕ್ಕೆ ಸೇರಿಕೊಳ್ಳುತ್ತದೆ ಎಂಬ ಮಹಾದಾಸೆ ಜನತೆಯ ದಾಗಿದೆ.
*
೧೦ ತಾಲೂಕುಗಳನ್ನು ಹೊಂದಿರುವ ತುಮಕೂರನ್ನು ವಿಭಾಗಿಸಿ ತಿಪಟೂರು ಕೇಂದ್ರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಅಭಿವೃದ್ದಿಗೆ ಸಹಕರಿಸಬೇಕು. ತಿಪಟೂರು ಜಿಲ್ಲೆಯಾಗುವ ಎಲ್ಲಾ ಲಕ್ಷಣ ಹೊಂದಿದೆ.
- ಷಡಕ್ಷರಿ, ಶಾಸಕ, ತಿಪಟೂರು
ನನ್ನ ಆಡಳಿತದ ಅವಧಿಯಲ್ಲಿ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಲು ಬೇಕಾದ ಎಲ್ಲಾ ರೀತಿಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಐತಿಹಾಸಿಕ ಹಿನ್ನೆಲೆ ಇರುವ ಮಧುಗಿರಿ ಯನ್ನು ಜಿಲ್ಲೆಯನ್ನಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
-ಕೆ.ಎನ್.ರಾಜಣ್ಣ, ಮಾಜಿ ಸಚಿವ
*
ತಿಪಟೂರು ಜಿಲ್ಲೆಗೆ ೩ ತಾಲೂಕು
ತಿಪಟೂರು-೨೬ ಗ್ರಾಪಂ
ಚಿಕ್ಕನಾಯಕನ ಹಳ್ಳಿ-೨೭ ಗ್ರಾಪಂ
ತುರುವೇಕೆರೆ-೨೭ ಗ್ರಾಪಂ
ಮಧುಗಿರಿ ಜಿಲ್ಲೆಗೆ ೪ ತಾಲೂಕು
ಮಧುಗಿರಿ-೩೯ ಗ್ರಾಪಂ
ಪಾವಗಡ-೩೪ ಗ್ರಾಪಂ
ಶಿರಾ-೪೨ ಗ್ರಾಪಂ
ಕೊರಟಗೆರೆ-೨೪ ಗ್ರಾಪಂ