ವೈಭವ್ ಸಿ. ಕೊಳ್ಳಿ ಬೆಂಗಳೂರು
ವರ್ಷದಿಂದ ವರ್ಷದಿಂದ ಹಸಿರು ಪ್ರದೇಶ ಕುಗ್ಗಿ ಕಾಂಕ್ರಿಟ್ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ತಾಪಮಾನ ಏರಿಕೆ, ಅಂತರ್ಜಲ ಕುಸಿತ ಹಾಗೂ ಜೀವವೈವಿಧ್ಯದ ನಾಶ ತಡೆಯುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ನಗರದ ಸುತ್ತಮುತ್ತ 10 ಸ್ಥಳಗಳಲ್ಲಿ ಮಿನಿ ಅರಣ್ಯಗಳ ಜಾಲ ನಿರ್ಮಿಸಲು ಮುಂದಾಗಿದೆ. ಒಟ್ಟು 3271 ಎಕರೆ (1,323.90 ಹೆಕ್ಟೇರ್) ಅರಣ್ಯ ಪ್ರದೇಶದಲ್ಲಿ ಆರ್ಬೊರೇಟಂ, ನೈಸರ್ಗಿಕ ವನಪ್ರದೇಶ ಹಾಗೂ ವೃಕ್ಷೋದ್ಯಾನಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಈ ಯೋಜನೆಯಡಿ 1303 ಎಕರೆ ಪ್ರದೇಶ ನಿಯಂತ್ರಿತ ಪ್ರವೇಶದೊಂದಿಗೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುತ್ತದೆ. ಉಳಿದ 1968 ಎಕರೆ ಪ್ರದೇಶ ಸಸ್ಯಸಂಪತ್ತು, ಪಕ್ಷಿಗಳು, ಪ್ರಾಣಿಗಳು ಹಾಗೂ ಇತರ ಜೀವಿಗಳ ನೈಸರ್ಗಿಕ ಆವಾಸಸ್ಥಾನವಾಗಿ ಉಳಿಸಿಕೊಳ್ಳಲು ಉದ್ದೇಶಿಸ ಲಾಗಿದೆ. ಯೋಜನೆಗೆ ಅಂದಾಜು 222.99 ಕೋಟಿ ರು. ವೆಚ್ಚವಾಗಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ತುರಹಳ್ಳಿ ಮೀಸಲು ಅರಣ್ಯ ವುಡ್ ಲ್ಯಾಂಡ್, ತುರಹಳ್ಳಿ ಮಿನಿ ಅರಣ್ಯ ಆರ್ಬೊ ರೇಟಂ, ಕಲ್ಕೆರೆ ಫಾರೆಸ್ಟ್ ಇಕೋಸಿಸ್ಟಮ್ಸ್ ಸೆಂಟರ್, ದೊರೆಸಾನಿಪಾಳ್ಯ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪಣತ್ತೂರು ನಾಗರ ವನ ಜೈವಿಕ ವೈವಿಧ್ಯ ಉದ್ಯಾನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: International Day of Forests 2026: ದೇಶದ ದೊಡ್ಡ ಅರಣ್ಯಗಳಿವು; ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ
ಜಿಬಿಎ ವ್ಯಾಪ್ತಿಯ ಹೊರಗೆ ಮಾರಸಂದ್ರ ಜೈವಿಕ ವೈವಿಧ್ಯ ಉದ್ಯಾನ, ಮದ್ದೂರು ಬಿದಿರು ಉದ್ಯಾನ (ಬ್ಯಾಂಬುಸೆಟಂ), ಜಾರಕಬಂಡೆ ನಾಗರವನ (ಬಿ ಬ್ಲಾಕ್), ಜಾರಕಬಂಡೆ ವೃಕ್ಷಸಂವರ್ಧನಾ ಕೇಂದ್ರ (ಎ ಬ್ಲಾಕ್) ಹಾಗೂ ಯಲಹಂಕ ಸಮೀಪದ ಮಾದಪ್ಪನಹಳ್ಳಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ವೈವಿಧ್ಯ ಉದ್ಯಾನ ನಿರ್ಮಾಣಕ್ಕೆ ಯೋಜಿಸಲಾಗಿದೆ. ಈ ಪೈಕಿ ತುರಹಳ್ಳಿ ಕಿರು ಅರಣ್ಯ, ಪಣತ್ತೂರು ಮತ್ತು ಜಾರಕಬಂಡೆ ಬಿ ಬ್ಲಾಕ್ ಈಗಾಗಲೇ ಇರುವ ವೃಕ್ಷೋದ್ಯಾನಗಳಾಗಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಇದರಲ್ಲಿ ಕೆಲವೊಂದು ಯೋಜನೆಗಳಿಗೆ ರಾಜ್ಯ ಸಂಪುಟ ಈಗಾಗಲೇ ಅನುಮತಿ ನೀಡಿದೆ.
ಸ್ಥಳೀಯ ಮರಗಳ ಬೆಳವಣಿಗೆಗೆ ಆದ್ಯತೆ: ನಗರದ ಸುತ್ತಮುತ್ತಲಿನ ಹಲವು ಅರಣ್ಯ ಪ್ರದೇಶ ಗಳಲ್ಲಿ 1960 ಮತ್ತು 70ರ ದಶಕದಲ್ಲಿ ಬೆಳೆಸಲಾದ ನೀಲಗಿರಿ ಹಾಗೂ ಅಕೇಶಿಯಾ ಮರಗಳಿದ್ದು, ಅವುಗಳ ನಡುವೆ ಲಂಟಾನಾದಂತಹ ಆಕ್ರಮಣಕಾರಿ ಕಳೆ ಸಸ್ಯಗಳು ವ್ಯಾಪಕವಾಗಿ ಹರಡಿವೆ. ಇವು ಸ್ಥಳೀಯ ಸಸ್ಯಗಳ ನೈಸರ್ಗಿಕ ಬೆಳವಣಿಗೆಗೆ ಅಡ್ಡಿಯಾಗುವುದರ ಜತೆಗೆ ವನ್ಯಜೀವಿಗಳಿಗೆ ಸೂಕ್ತ ಆವಾಸಸ್ಥಾನ ಒದಗಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಹಂತ ಹಂತವಾಗಿ ವಿದೇಶಿ ಸಸ್ಯ ಪ್ರಭೇದಗಳು ಹಾಗೂ ಕಳೆ ತೆರವುಗೊಳಿಸಿ ಸ್ಥಳೀಯ ಮರ, ಪೊದೆ, ಔಷಧಿಯ ಸಸ್ಯ, ಹೂ ಬಿಡುವ ಸಸ್ಯ ಮತ್ತು ಹುಲ್ಲು ಗಾವಲುಗಳನ್ನು ಅಭಿವೃದ್ಧಿಪ ಡಿಸಲು ಉದ್ದೇಶಿಸಲಾಗಿದೆ. ಈಗಿರುವ ದೊಡ್ಡ ಮರಗಳನ್ನು ಸಂರಕ್ಷಿಸುವುದು, ಮಣ್ಣಿನ ಗುಣಮಟ್ಟ ಸುಧಾರಿಸುವುದು ಹಾಗೂ ಸ್ಥಳೀಯ ಜೀವ ವೈವಿಧ್ಯಕ್ಕೆ ಪೂರಕ ವಾದ ಪರಿಸರ ನಿರ್ಮಿಸುವುದಕ್ಕೂ ಆದ್ಯತೆ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ವಾಯುವಿಹಾರ, ಸೈಕ್ಲಿಂಗ್, ಯೋಗಕ್ಕೂ ಅವಕಾಶ: ಬೆಂಗಳೂರಿನ ನೀರಿನ ಸಮಸ್ಯೆ ಹಾಗೂ ಮಳೆಗಾಲದ ಪ್ರವಾಹದ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಹತ್ತು ಉದ್ಯಾನಗಳಲ್ಲಿ ಸುಮಾರು 1000 ಅಂತರ್ಜಲ ಮರುಪೂರಣ ಗುಂಡಿಗಳು, ನೀರು ಇಂಗಿಸುವ ರಚನೆಗಳು ಹಾಗೂ ಮಳೆನೀರು ಸಂಗ್ರಹ ವ್ಯವಸ್ಥೆ ರೂಪಿಸುವ ಪ್ರಸ್ತಾವನೆ ಇದೆ. ಜತೆಗೆ ಪ್ರತಿಯೊಂದು ಸ್ಥಳದ ಪರಿಸರಕ್ಕೆ ಅನುಗುಣ ವಾಗಿ ವಾಯುವಿಹಾರ ಮತ್ತು ಸೈಕ್ಲಿಂಗ್ ಪಥ, ಯೋಗ ಹಾಗೂ ಧ್ಯಾನ ವೇದಿಕೆಗಳು, ಮಕ್ಕಳ ಆಟದ ಪ್ರದೇಶ, ಹೊರಾಂಗಣ ವ್ಯಾಯಾಮ ಸೌಲಭ್ಯ, ತೆರೆದ ರಂಗಮಂದಿರ, ಗಜೀಬೊ, ಕುಡಿಯುವ ನೀರು, ಶೌಚಗೃಹ ಹಾಗೂ ವಿಶ್ರಾಂತಿ ಸ್ಥಳ ನಿರ್ಮಿಸಲು ಉದ್ದೇಶಿಸಲಾಗಿದೆ.
ಕಿರು ಅರಣ್ಯಗಳ ವೈಶಿಷ್ಟ್ಯ
ಕಲ್ಕೆರೆಯಲ್ಲಿ ಅರಣ್ಯ ಪರಿಸರ ವ್ಯವಸ್ಥೆಗಳ ಅಧ್ಯಯನ ಮತ್ತು ಪರಿಸರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದೊರೆಸಾನಿಪಾಳ್ಯದಲ್ಲಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ಇದೆ. ಜಾರಕಬಂಡೆಯ ವೃಕ್ಷಸಂವರ್ಧನಾ ಕೇಂದ್ರದಲ್ಲಿ ಮರಗಳ ಬೆಳವಣಿಗೆ ಮತ್ತು ವೃಕ್ಷಸಂವರ್ಧನೆ ಕುರಿತು ಸಂಶೋಧನೆ ನಡೆಸಲು ಉದ್ದೇಶಿಸಲಾಗಿದೆ. ಮದ್ದೂರಿನಲ್ಲಿ ವಿವಿಧ ಬಿದಿರು ಪ್ರಭೇದಗಳ ಸಂಗ್ರಹ ಮತ್ತು ಪ್ರದರ್ಶನಕ್ಕಾಗಿ ವಿಶೇಷ ಬಿದಿರು ಉದ್ಯಾನ ರೂಪಿಸಲಾಗುತ್ತದೆ. ಮಾದಪ್ಪನ ಹಳ್ಳಿಯಲ್ಲಿರುವ ಹಿಂದಿನ ನೀಲಗಿರಿ ತೋಪನ್ನು ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ವೈವಿಧ್ಯ ಉದ್ಯಾನವಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಇಲ್ಲಿ ಕರ್ನಾಟಕದ ವಿವಿಧ ಅರಣ್ಯ ಪ್ರಕಾರಗಳ ಆರ್ಬೊರೇಟಂ, ಔಷಧಿಯ, ಆಹಾರ, ಪವಿತ್ರ ಹಾಗೂ ಕಾಡು ಹಣ್ಣಿನ ಸಸ್ಯಗಳ ವನ ಬೆಳೆಸುವ ಉದ್ದೇಶವಿದೆ.