ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ 157ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಅವರು ಮೂಡಿಸಿರುವ ಹೆಜ್ಜೆಗುರುತುಗಳನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ವಿಶ್ವವಾಣಿ ದಿನಪತ್ರಿಕೆ ಮಾಡುತ್ತಿದೆ.
ನಂದಿ ಗಿರಿಧಾಮವು ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಸ್ವಾತಂತ್ರ‍್ಯ ಚಳವಳಿಯ ಕಾಲಘಟ್ಟದ ಕೆಲವು ಪ್ರಮುಖ ನೆನಪುಗಳಿಗೂ ಪ್ರಸಿದ್ಧವಾಗಿದೆ. ಲಭ್ಯವಿರುವ ಸ್ಥಳೀಯ ಹಾಗೂ ಸರ್ಕಾರಿ ದಾಖಲೆಗಳ ಪ್ರಕಾರ, ಮಹಾತ್ಮ ಗಾಂಧೀಜಿ ತಮ್ಮ ಸಾರ್ವಜನಿಕ ಜೀವನದ ಅವಧಿಯಲ್ಲಿ ನಂದಿ ಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಈ ಎರಡೂ ಅವಧಿಯಲ್ಲಿ 65 ರಿಂದ 66 ದಿನಗಳ ಕಾಲ ಇಲ್ಲಿ ತಂಗಿ ವಿಶ್ರಾಂತಿ ಪಡೆದ ಬಗ್ಗೆ ದಾಖಲೆಗಳಿವೆ.
ಮೊದಲ ಬಾರಿಗೆ 1927ರಲ್ಲಿ ಗಾಂಧೀಜಿ ನಂದಿ ಗಿರಿಧಾಮಕ್ಕೆ ಬಂದಿದ್ದು ಆ ಸಂದರ್ಭದಲ್ಲಿ ಮೈಸೂರಿನ ಸಂಸ್ಕೃತ ವಿದ್ವಾಂಸ ರುದ್ರಪಟ್ಣಂ ಶಾಮಶಾಸ್ತ್ರಿ ಅವರು ಗಾಂಧೀಜಿಯನ್ನು ಭೇಟಿ ಮಾಡಿ, ತಾವು ಪತ್ತೆಹಚ್ಚಿ ಪ್ರಕಟಿಸಿದ್ದ ‘ಅರ್ಥಶಾಸ್ತ್ರ’ ಗ್ರಂಥದ ಪ್ರತಿಯನ್ನು ನೀಡಿದ್ದರೆಂದು ಹೇಳಲಾಗುತ್ತದೆ.
ಇದನ್ನೂ ಓದಿ: Nandi hills: ನಂದಿ ಬೆಟ್ಟ, ಸ್ಕಂದಗಿರಿಗೆ ಮೂರು ದಿನ ಪ್ರವಾಸಿಗರು, ಚಾರಣಿಗರಿಗೆ ನಿರ್ಬಂಧ
1936ರಲ್ಲಿ ಆರೋಗ್ಯದ ಕಾರಣದಿಂದ ಗಾಂಧೀಜಿ ಮತ್ತೆ ನಂದಿಗೆ ಆಗಮಿಸಿ ಕೆಲಕಾಲ ವಿಶ್ರಾಂತಿ ಪಡೆದಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಬಿಡುವಿರದ ರೀತಿಯಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆ ಯಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ನಂದಿಯ ತಂಪಾದ ವಾತಾವರಣ ಅನುಕೂಲವಾಗಿತ್ತು ಎಂಬ ಅಭಿಪ್ರಾಯವೂ ಇದೆ. ಅವರ ವಾಸ್ತವ್ಯದ ಅವಧಿಗೆ ಸಂಬಂಧಿಸಿದಂತೆ, ಕಾರ್ಯದರ್ಶಿ ಮಹಾದೇವ ದೇಸಾಯಿ ಸಂದರ್ಶಕರ ಪುಸ್ತಕದಲ್ಲಿ ಕೃತಜ್ಞತೆ ದಾಖಲಿಸಿದ್ದರೆಂದು ಸ್ಥಳೀಯ ಇತಿಹಾಸ ಉಲ್ಲೇಖಿಸುತ್ತದೆ.
ನಂದಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಗಾಂಧೀಜಿ ಸುತ್ತಮುತ್ತಲಿನ ಗ್ರಾಮಗಳ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿಯೂ ಇದ್ದು, ಬೆಟ್ಟದ ತಪ್ಪಲಿನ ಮಡಕು ಹೊಸಹಳ್ಳಿ ಗ್ರಾಮಕ್ಕೆ ಆ ವೇಳೆ ಭೇಟಿ ನೀಡಿ ಭಜನೆಗಳಲ್ಲಿ ಪಾಲ್ಗೊಂಡಿದ್ದರು ಎಂಬ ಬಗ್ಗೆ ಸ್ಥಳೀಯ ಪರಂಪರೆ ಹೇಳುತ್ತದೆ. ಈ ಭೇಟಿಯ ನೆನಪಿಗಾಗಿ ಗ್ರಾಮಕ್ಕೆ ನಂತರ ‘ಗಾಂಧಿಪುರ’ ಎಂಬ ಹೆಸರು ಬಂದಿತೆAದು ಇಂದಿಗೂ ಸ್ಮರಿಸುತ್ತಾರೆ.
ಗಾಂಧೀಜಿ ನಂದಿಯಿಂದ ತೆರಳುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ ಸೇರಿದಂತೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದರೆಂದು ವಿವಿಧ ಉಲ್ಲೇಖಗಳಲ್ಲಿ ಕಾಣಬಹುದು. ಕರ್ನಾಟಕ ಸರ್ಕಾರದ ಚಿಕ್ಕಬಳ್ಳಾಪುರ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಲ್ಲಿಯೂ ೧೯೩೬ರಲ್ಲಿ ಗಾಂಧೀಜಿ ಜಿಲ್ಲೆಗೆ ಭೇಟಿ ನೀಡಿ ನಂದಿ ಬೆಟ್ಟದಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದರೆಂದು ದಾಖಲಿಸಲಾಗಿದೆ.
ನಂದಿ ಗಿರಿಧಾಮದಲ್ಲಿರುವ ಗಾಂಧಿ ಭವನ ಮತ್ತು ಗಾಂಧಿ ಸ್ಮಾರಕಗಳು ಈ ಭೇಟಿಗಳ ನೆನಪನ್ನು ಉಳಿಸಿಕೊಳ್ಳುವ ಪ್ರಮುಖ ಸ್ಥಳಗಳಾಗಿವೆ. ಸ್ವಾತಂತ್ರ‍್ಯ ಚಳವಳಿಯ ಇತಿಹಾಸ, ಸ್ಥಳೀಯ ಜನಜೀವನ ಮತ್ತು ಗಾಂಧೀಜಿಯ ಸರಳ ಜೀವನದ ಕುರಿತು ತಿಳಿಯಲು ಈ ಸ್ಥಳಗಳು ಇಂದಿಗೂ ಆಸಕ್ತಿದಾಯಕ ವಾಗಿವೆ. ನಂದಿಗಿರಿಗೆ ಭೇಟಿ ನೀಡುವವರು ತಪ್ಪದೆ ಗಾಂಧಿ ಭವನಕ್ಕೆ ಭೇಟಿ ನೀಡಿ ತಾತನ ಜತೆಗೆ ಪೋಟೋ ತೆಗೆಸಿಕೊಳ್ಳುವುದನ್ನು ಮರೆಯುವುದಿಲ್ಲ.
ನಂದಿಯ ಪ್ರಕೃತಿ, ಅಲ್ಲಿನ ಶಾಂತ ವಾತಾವರಣ ಮತ್ತು ಗಾಂಧೀಜಿಯವರೊAದಿಗೆ ಸಂಬAಧಿಸಿದ ಸ್ಥಳೀಯ ನೆನಪುಗಳು ಚಿಕ್ಕಬಳ್ಳಾಪುರದ ಇತಿಹಾಸಕ್ಕೆ ವಿಶಿಷ್ಟ ಆಯಾಮವನ್ನು ನೀಡುತ್ತವೆ.ಗಾಂಧಿ ಜಯಂತಿಯಂದು ಈ ನೆನಪುಗಳು ಮತ್ತೆ ಮತ್ತೆ ಮರುಕಳಿಸಿ ಅಕ್ಷರದ ಸಾಂಗತ್ಯವನ್ನು ಬಯಸುವು ದರಿಂದ ಗಾಂಧೀಜಿಯ ಇತಿಹಾಸ ಓದುಗರಿಗೆ ತಲುಪಿಸುವುದು ಸಾರ್ಥಕ ಕಾರ್ಯಗಳಲ್ಲಿ ಒಂದಾ ಗಿದೆ.
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿಯೂ ಕೂಡ 3 ಕೋಟಿ ವೆಚ್ಚದ ಸುಸಜ್ಜಿತ ಗಾಂಧೀಭವನ ನಿರ್ಮಾಣವಾಗಿದ್ದು ಗಾಂಧೀಜಿ ಅವರ ಬದುಕು ಬರಹವನ್ನು ಸಮಗ್ರವಾಗಿ ಕಟ್ಟಿಕೊಡುವ ಕೆಲಸ ವನ್ನು ಜಿಲ್ಲಾಡಳಿತ ಮಾಡಿದೆ. ಇದರ ಸದುಪಯೋಗವನ್ನು ಜನತೆ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಪಡೆಯಲಿ ಎನ್ನುವುದೇ ಪತ್ರಿಕೆಯ ಕಳಕಳಿಯಾಗಿದೆ.