ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮಮುಖಿಯಾಗಿ ಅರಬ್ಬಿ ಸಮುದ್ರ ಸೇರುವ ಬೇಡ್ತಿ, ಪೂರ್ವಕ್ಕೆ ಹರಿವಳೇ..?

ಪಶ್ಚಿಮಾಮುಖಿಯಾಗಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರಿನ ಒಂದು ಭಾಗವನ್ನು ತಿರುಗಿಸಿ, ಮಳೆಯಿಲ್ಲದೆ ಒಣಗುವ ಹಾವೇರಿ, ಗದಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಕುಡಿಯುವ ನೀರಿನ ದಾಹ ನೀಡುವುದು ಇದರ ಆದ್ಯತೆ.

ವಿನುತಾ ಹೆಗಡೆ, ಶಿರಸಿ

ವರದಾ ಮತ್ತು ಬೇಡ್ತಿ ನದಿಯ ಜೋಡಣೆ ಯೋಜನೆ ಕರ್ನಾಟಕದ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಗಳಲ್ಲಿ ಒಂದಾಗಿದ್ದು, ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರಕ್ಕೆ ಸೇರುವ ಬೇಡ್ತಿ ನದಿಯ ಹೆಚ್ಚುವರಿ ನೀರನ್ನು, ಪೂರ್ವಕ್ಕೆ ಹರಿದು ತುಂಗಭದ್ರಾ ನದಿಯನ್ನು ಸೇರುವ ವರದಾ ನದಿಗೆ ಹರಿಸುವ ಮೂಲಕ ಉತ್ತರ ಕರ್ನಾಟಕದ ಬಯಲು ಸೀಮೆಗೆ ನೀರಾವರಿ ಒದಗಿಸುವುದು ಇದರ ಉದ್ದೇಶ.

ಪಶ್ಚಿಮಾಮುಖಿಯಾಗಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರಿನ ಒಂದು ಭಾಗವನ್ನು ತಿರುಗಿಸಿ, ಮಳೆಯಿಲ್ಲದೆ ಒಣಗುವ ಹಾವೇರಿ, ಗದಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಕುಡಿಯುವ ನೀರಿನ ದಾಹ ನೀಡುವುದು ಇದರ ಆದ್ಯತೆ.

10 ಟಿಎಂಸಿ ನೀರು ವರದಾಗೆ: ಈ ಯೋಜನೆ ಯಡಿ ಅಂದಾಜು 7.5 ಟಿಎಂಸಿಯಿಂದ 10 ಟಿಎಂಸಿ ಅಡಿಯಷ್ಟು ನೀರನ್ನು ಬೇಡ್ತಿ ನದಿಯಿಂದ ವರದಾ ನದಿಗೆ ಹರಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಬೇಡ್ತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ಸುರಂಗ ಮಾರ್ಗಗಳು ಮತ್ತು ಕಾಲುವೆಗಳ ಮೂಲಕ ಗುರುತ್ವಾಕರ್ಷಣೆ ಅಥವಾ ಪಂಪಿಂಗ್ ವಿಧಾನದ ಮೂಲಕ ನೀರನ್ನು ವರದಾ ನದಿಯಾನಕ್ಕೆ ಅಥವಾ ಅದರ ಉಪನದಿ ಗಳಿಗೆ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ತಾಂತ್ರಿಕ ವಿನ್ಯಾಸವಾಗಿದೆ. ಹಾವೇರಿ ಮತ್ತು ಗದಗ ಜಿಲ್ಲೆಯ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗ ಲಿದೆ. ಜೊತೆಗೆ ಈ ಭಾಗದ ನೂರಾರು ಗ್ರಾಮ ಗಳಿಗೆ ಹಾಗೂ ನಗರ ಪ್ರದೇಶಗಳಿಗೆ ಶಾಶ್ವತ ಕುಡಿ ಯುವ ನೀರಿನ ಭದ್ರತೆ ಒದಗಲಿದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿ ಚಟುವಟಿಕೆ ಗಳು ಗರಿಗೆದರಲಿವೆ.

ಇದನ್ನೂ ಓದಿ: Cauvery River Tragedy: ಫೋಟೊ ತೆಗೆಸಿಕೊಳ್ಳಲು ಹೋಗಿ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಜಲಸಮಾಧಿ

ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ: ಈ ಯೋ ಜನೆಯು ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಪ್ರದೇಶ ದಲ್ಲಿ ಬರುವುದರಿಂದ, ಕಾಡು ನಾಶ, ಜೀವವೈವಿಧ್ಯಕ್ಕೆ ಹಾನಿ ಮತ್ತು ಜಲಮೂಲಗಳ ವ್ಯತ್ಯಯದ ಕುರಿತು ತೀವ್ರ ಚರ್ಚೆಗಳಿವೆ. ಪಶ್ಚಿಮ ಘಟ್ಟದ ಪರಿಸರವಾದಿಗಳು ಮತ್ತು ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ನದಿ ಪಾತ್ರ ಬದಲಾವಣೆಯಿಂದಾಗಿ ಮೀನುಗಾರಿಕೆ ಮತ್ತು ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕವಿದೆ.

ವಿವಿಧ ಹಂತಗಳ ಸಮೀಕ್ಷೆಗಳು, ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನಗಳು ನಡೆದಿವೆಯಾದರೂ, ಪರಿಸರ ಅನುಮತಿ ಮತ್ತು ಅಂತಾರಾಜ್ಯ ಹಾಗೂ ಅಂತರ-ಬೇಸಿನ್ ನೀರಿನ ಹಂಚಿಕೆಯ ವಿವಾದಗಳಿಂದಾಗಿ ಯೋಜನೆ ಇನ್ನೂ ಅಂತಿಮ ರೂಪ ಪಡೆದು ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಯೋಜನೆಯು ಉತ್ತರ ಕರ್ನಾಟಕದ ನೀರಿನ ಬಾಯಾರಿಕೆ ನೀಗಿಸುವ ಆಶಾಕಿರಣ ವಾಗಿದ್ದರೂ, ಪರಿಸರದ ಮೇಲಿನ ಪರಿಣಾಮ ಕನಿಷ್ಠಗೊಳಿಸಿ, ವೈಜ್ಞಾನಿಕವಾಗಿ ಅನುಷ್ಠಾನ ಗೊಳಿಸುವ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಬೇಕಿದೆ.

ಬೇಸಿಗೆಗೆ ಬತ್ತುವ ನದಿಗಳು: ಬೇಡ್ತಿ ಮತ್ತು ವರದಾ ನದಿಗಳು ಬೇಸಿಗೆಯಲ್ಲಿ ಬತ್ತುವುದು ಈ ಯೋಜನೆಯ ಕುರಿತು ಇರುವ ಅತ್ಯಂತ ಪ್ರಮುಖ ಹಾಗೂ ಗಂಭೀರ ತಾಂತ್ರಿಕ ಪ್ರಶ್ನೆ ಯಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸಾಧ್ಯತೆ ಗಮನಿಸಬೇಕಾಗುತ್ತದೆ. ಇದು ಕೇವಲ ಮಳೆಗಾಲದ ಹೆಚ್ಚುವರಿ ನೀರಿನ ಲಭ್ಯತೆ ಮೇಲೆ ಆಧಾರಿತ ಯೋಜನೆ. ಬೇಡ್ತಿ ನದಿ ಪಶ್ಚಿಮ ಘಟ್ಟದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಉಗಮ ವಾಗುತ್ತದೆ.

ಮಳೆಗಾಲದ ಅವಧಿಯಲ್ಲಿ (ಜೂನ್ ನಿಂದ ಅಕ್ಟೋಬರ್ ವರೆಗೆ) ಇಲ್ಲಿ ಅಪಾರ ಪ್ರಮಾಣದ ನೀರು ವ್ಯರ್ಥ ಹರಿದು ಸಮುದ್ರ ಸೇರುತ್ತದೆ. ಹಾಗಾಗಿ ಮಳೆಗಾಲದ ನಾಲ್ಕೈದು ತಿಂಗಳು ಗಳಲ್ಲಿ ಮಾತ್ರ ಬೇಡ್ತಿ ನದಿಯಲ್ಲಿ ಸುಮಾರು 20 ರಿಂದ 30 ಟಿಎಂಸಿಗೂ ಅಧಿಕ ನೀರು ಸಿಗುತ್ತದೆ ಎಂದು ಅಂದಾಜಿಸಲಾಗಿದೆ.

ನದಿ ತಿರುವು ಯೋಜನೆ: ಈ ಪ್ರಚಂಡ ನೀರಿನ ಹರಿವಿನಲ್ಲಿ ಕೇವಲ ಶೇ. 30ರಷ್ಟು ಭಾಗವನ್ನು ಅಂದರೆ ಅಂದಾಜು 7.5 ರಿಂದ 10 ಟಿಎಂಸಿ ನೀರನ್ನು ಮಾತ್ರ ಮಳೆಗಾಲದ ದಿನಗಳಲ್ಲಿ ಬೇಡ್ತಿ ನದಿಯಿಂದ ವರದಾ ನದಿಗೆ ತಿರುಗಿಸುವುದು ಈ ಯೋಜನೆಯ ಮುಖ್ಯ ತಂತ್ರಜ್ಞಾನವಾಗಿದೆ. ಬೇಸಿಗೆಯಲ್ಲಿ ಎರಡೂ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬತ್ತುವುದರಿಂದ, ಆ ಅವಧಿ ಯಲ್ಲಿ ಯಾವುದೇ ನೀರನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲ.

ಬದಲಾಗಿ, ಮಳೆಗಾಲದ ಹೆಚ್ಚುವರಿ ನೀರನ್ನು ಸುರಂಗ ಹಾಗೂ ಕಾಲುವೆಗಳ ಮೂಲಕ ಪೂರ್ವದ ಬಯಲು ಪ್ರದೇಶಗಳಿಗೆ ಹರಿಸಿ, ಅಲ್ಲಿನ ಕೆರೆ ಕಟ್ಟೆಗಳಲ್ಲಿ ಸಂಗ್ರಹಿಸಿ ಬೇಸಿಗೆಗೆ ಬಳಸುವುದು ಇದರ ಮೂಲ ಉದ್ದೇಶ ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಹವಾ ಮಾನ ವೈಪರೀತ್ಯದಿಂದ ಮಳೆಯ ಪ್ರಮಾಣದಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದಾಗಿ ಮಳೆ ಗಾಲದಲ್ಲೂ ನಿರೀಕ್ಷಿತ ನೀರು ಲಭ್ಯವಿದೆಯೇ ಎಂಬ ಬಗ್ಗೆ ಪರಿಸರ ತಜ್ಞರು ಹಾಗೂ ಜಲತಜ್ಞರು ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಮಳೆ ಕಡಿಮೆಯಾಗಿ ಬೇಡ್ತಿಯಲ್ಲೇ ನೀರು ಕುಸಿದರೆ, ಈ ಯೋಜನೆಗೆ ನೀರು ಎಲ್ಲಿಂದ ಸಿಗುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ. ಆದ್ದರಿಂದ, ಕೇವಲ ಕಾಗದದ ಮೇಲಿನ ಅಂದಾಜುಗಳಲ್ಲದೆ, ವೈಜ್ಞಾನಿಕ ಅಧ್ಯಯನ ನಡೆಸಿದ ಬಳಿಕವೇ ಈ ಯೋಜನೆ ಸಾಧ್ಯಾಸಾಧ್ಯತೆ ನಿರ್ಧರಿಸಬಹುದು.