ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುನಾರಚನೆ ಭೀತಿ: ಸಚಿವರಲ್ಲಿ ಹೆಚ್ಚಿದ ಕುರ್ಚಿ ಪ್ರೀತಿ

ಎಐಸಿಸಿ ಮೂಲಗಳ ಪ್ರಕಾರ ಸಚಿವ ಸಂಪುಟ ಪುನಾರಚನೆ ನಡೆದರೆ ಅದು ಜುಲೈ ಅಂತದ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ರಾಜ್ಯ ಸಂಪುಟದಲ್ಲಿರುವ ಸುಮಾರು 25ಕ್ಕೂ ಹೆಚ್ಚು ಸಚಿವರನ್ನು ಬದಲಿಸುವ ಆಲೋಚನೆ ಪಕ್ಷದ ಹಿರಿಯ ನಾಯಕರದ್ದಾಗಿದೆ, ಅಷ್ಟೇ ಅಲ್ಲ ಸಚಿವ ಸ್ಥಾನದ ಅಧಿಕಾರವನ್ನು ಹೆಚ್ಚಿನ ಅವಧಿ ಅನುಭವಿಸಿದವರಿಗೆ ಪಕ್ಷ ಸಂಘಟನೆಯ ಬೇರೆ ಬೇರೆ ಹೊಣೆಗಾರಿಕೆ ಗಳನ್ನು ವಹಿಸಿಕೊಡಬೇಕೆನ್ನುವ ಚಿಂತನೆಯೂ ಪಕ್ಷದ ವರಿಷ್ಠರದ್ದಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಮಂತ್ರಿಗಳಿಂದ ವರಿಷ್ಠರ ಮೊರೆ

ಸ್ಥಾನ ರಕ್ಷಣೆಗೆ ಕಸರತ್ತು

ಸಿಎಂ ಆಪ್ತರಲ್ಲೂ ಆತಂಕ

ದೆಹಲಿ ದಂಡಯಾತ್ರೆಯಲ್ಲಿ ಸಿದ್ದು ಆಪ್ತರೇ ಹೆಚ್ಚು

ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಅಸ್ಪಷ್ಟತೆಗಳಿಂದ ಸಚಿವರಲ್ಲಿ ಆತಂಕ ಶುರುವಾಗಿದೆ. ಒಂದು ಕಡೆ ನಾಯಕತ್ವದ ಬಗ್ಗೆ ಪಕ್ಷದ ವರಿಷ್ಠರು ಸ್ಪಷ್ಟವಾಗಿ ಏನನ್ನು ಹೇಳುತ್ತಿಲ್ಲ. ಇದರಿಂದ ಗೊಂದಲಕ್ಕೀಡಾಗಿರುವ ಅನೇಕ ಸಚಿವರು ವರಿಷ್ಠರ ಭೇಟಿಗಾಗಿ ದಿಢೀರ್ ದೆಹಲಿ ದಂಡಯಾತ್ರೆ ಆರಂಭಿಸಿದ್ದಾರೆ.

ತಮ್ಮ ಸಚಿವ ಸ್ಥಾನದ ಭದ್ರತೆ ಬಗ್ಗೆ ವಿಶ್ವಾಸವಿಲ್ಲದ ಸಚಿವರು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ಪೋಷಕ ವರಿಷ್ಠ ನಾಯಕರನ್ನು ಭೇಟಿಯಾಗುತ್ತಿದ್ದಾರೆ, ಅಷ್ಟೇ ಅಲ್ಲದೆ ಸಂಪುಟ ಪುನಾರಚನೆ ವೇಳೆ ತಮ್ಮನ್ನು ಮುಂದುವರಿಸಿ ಎಂದು ವಿನಂತಿಸುತ್ತಿದ್ದಾರೆ.

ಅದರಲ್ಲೂ ಕೆಲವು ಸಚಿವರು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ ಹಿರಿಯ ನಾಯಕರನ್ನು ಭೇಟಿಯಾಗಿ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ನಾನಾ ರೀತಿಯ ಮನವರಿಕೆ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bangalore News: 2026-27 ನೇ ಸಾಲಿಗೆ ಒಂದನೇ ತರಗತಿ ದಾಖಲಾತಿಗಾಗಿ ವಯೋಮಿತಿ ಸಡಿಲಿಕೆ ಕುರಿತು ವಾರದಲ್ಲಿ ಸೂಕ್ತ ತೀರ್ಮಾನಕ್ಕೆ ಹೈಕೋರ್ಟ್ ಆದೇಶ

ಹಾಗೆ ನೋಡಿದರೆ ಸಚಿವ ಸಂಪುಟ ಪುನಾರಚನೆಯಾಗಲಿ, ನಾಯಕತ್ವ ಬದಲಾವಣೆಯಾಗಲಿ ಯಾವುದೇ ವಿಷಯದ ಬಗ್ಗೆಯೂ ಪಕ್ಷದ ವರಿಷ್ಠರು ಅಧಿಕೃತ ಮಾಹಿತಿಯನ್ನೇ ಪ್ರಕಟಿಸಿಲ್ಲ. ಹಾಗಿದ್ದರೂ ಸಚಿವರಲ್ಲಿ ತಮ್ಮ ಸ್ಥಾನದ ಅಳಿವು ಉಳಿವಿನ ಬಗ್ಗೆ ಆತಂಕ ಶುರುವಾಗಿದ್ದು, ಇದು ಮುಂದೆ ಪಕ್ಷ ಹಾಗೂ ಸರಕಾರದಲ್ಲಿ ನಡೆಯಬಹುದಾದ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟಕ್ಕೂ ಸದ್ಯ ಸಂಪುಟದಲ್ಲಿ ಇರುವ ಸಚಿವರ ಪೈಕಿ ಈಗಾಗಲೇ ಸಾಕಷ್ಟು (ಕಳೆದ ಬಾರಿಯೂ) ಬಾರಿ ಮಂತ್ರಿ ಸ್ಥಾನದ ಅಧಿಕಾರ ಅನುಭವಿಸಿ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ಈಗ ಏನಾದರೂ ಸಂಪುಟ ಪುನಾರಚನ ನಡೆದರೆ, ತಮ್ಮನ್ನು ಬದಲಾವಣೆ ಮಾಡು ವುದು ಖಚಿತ ಎನ್ನುವುದು ಅನೇಕ ಸಚಿವರಿಗೆ ಮನವರಿಕೆಯಾಗಿದೆ ಎನ್ನಲಾಗಿದೆ.

ಹೀಗಾಗಿ ಅನೇಕ ಸಚಿವರು ತಮ್ಮದೇ ‘ಗಾಡ್ ಫಾದರ್ ನಾಯಕ’ರ ಭೇಟಿಗಾಗಿ ಪದೇ ಪದೇ ದೆಹಲಿಗೆ ಹೋಗಿ ಬರುತ್ತಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಒಂದು ಕಡೆ ಸಚಿವ ಆಕಾಂಕ್ಷಿಗಳು ಗುಂಪು ಗುಂಪಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿ, ನಂತರ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಲು ಯತ್ನಿಸುತ್ತಿದ್ದರೆ, ಅತ್ತ ಮಂತ್ರಿಗಳು ಪಕ್ಷದ ದೆಹಲಿ ನಾಯಕರನ್ನು ನಾಯಕರನ್ನು ಅಽಕೃತವಲ್ಲದ ಭೇಟಿಯಲ್ಲಿ ಮಾತನಾಡಿಸಿ ಬರುತ್ತಿದ್ದಾರೆ ಎನ್ನಲಾಗಿದೆ.

ಇದರಿಂದ ಎಐಸಿಸಿ ಅಧ್ಯಕ್ಷರು ಬೇಸರ ಗೊಂಡಿದ್ದು, ಸಚಿವರು ಪದೇ ಪದೇ ದೆಹಲಿಗೆ ಬಂದು ತಮ್ಮ ರಕ್ಷಣೆಗೆ ಒತ್ತಡ ಹಾಕುವುದು ಬೇಡ ಎನ್ನುವ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವಿಶೇಷವೆಂದರೆ ದೆಹಲಿ ದಂಡಯಾತ್ರೆ ನಡೆಸುತ್ತಿರುವ ಸಚಿವರ ಪೈಕಿ ಮುಖ್ಯಮಂತ್ರಿ ಅವರ ಆಪ್ತ ಸಚಿವರೇ ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಬೇಸರ ತಂದಿದ್ದು, ಈ ಬಗ್ಗೆ ಪರೋಕ್ಷ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ವರಿಷ್ಠರ ಮೇಲೆ ಒತ್ತಡ ಹೇರಲು ಗುಂಪು ಗುಂಪಾಗಿ ದೆಹಲಿಗೆ ತಿರಳುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಪಕ್ಷದ ಬಗ್ಗೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ಕೆಲವು ಶಾಸಕರು ಹೇಳಿದ್ದಾರೆ.

ಹೀಗಾಗಿ ಶುಕ್ರವಾರ ರಿಜ್ವಾನ್ ಹರ್ಷದ್, ಕನೀಜ್ ಫಾತಿಮಾ, ಯಾಸಿರ್ ಖಾನ್ ಸೇರಿದಂತೆ ಕೆಲವು ಅಲ್ಪಸಂಖ್ಯಾತ ಶಾಸಕರು ದೆಹಲಿಗೆ ತೆರಳಿ ಪಕ್ಷದ ಹಿರಿಯರನ್ನು ಭೇಟಿ ಮಾಡಿದ್ದಾರೆ. ಒಟ್ಟಾರೆ ರಾಜ್ಯ ಸರಕಾರದಲ್ಲಿ ಸದ್ಯ ಯಾವುದೇ ಬೆಳವಣಿಗೆ ನಡೆಯದಿದ್ದರೂ ಸಚಿವರಲ್ಲಿ ತಮ್ಮ ಕುರ್ಚಿಗೆ ಬಗ್ಗೆ ಆತಂಕ ಹೆಚ್ಚಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

25 ಸಚಿವರ ಕುರ್ಚಿಗೆ ಕುತ್ತು?

ಎಐಸಿಸಿ ಮೂಲಗಳ ಪ್ರಕಾರ ಸಚಿವ ಸಂಪುಟ ಪುನಾರಚನೆ ನಡೆದರೆ ಅದು ಜುಲೈ ಅಂತದ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ರಾಜ್ಯ ಸಂಪುಟದಲ್ಲಿರುವ ಸುಮಾರು 25ಕ್ಕೂ ಹೆಚ್ಚು ಸಚಿವರನ್ನು ಬದಲಿಸುವ ಆಲೋಚನೆ ಪಕ್ಷದ ಹಿರಿಯ ನಾಯಕರದ್ದಾಗಿದೆ, ಅಷ್ಟೇ ಅಲ್ಲ ಸಚಿವ ಸ್ಥಾನದ ಅಧಿಕಾರವನ್ನು ಹೆಚ್ಚಿನ ಅವಧಿ ಅನುಭವಿಸಿದವರಿಗೆ ಪಕ್ಷ ಸಂಘಟನೆಯ ಬೇರೆ ಬೇರೆ ಹೊಣೆಗಾರಿಕೆಗಳನ್ನು ವಹಿಸಿಕೊಡಬೇಕೆನ್ನುವ ಚಿಂತನೆಯೂ ಪಕ್ಷದ ವರಿಷ್ಠರದ್ದಾಗಿದೆ.

ಈ ಮೂಲಕ ಯುವಕರು, ನೂತನ ಶಾಸಕರು ಸೇರಿದಂತೆ ಹೊಸ ತಲೆಮಾರಿನ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಕೆನ್ನುವುದು ಪಕ್ಷದ ಹಿರಿಯ ನಾಯಕರ ಲೆಕ್ಕಾಚಾರ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 10 ರಿಂದ 12 ಸಚಿವರನ್ನು ಮಾತ್ರ ಬದಲಾವಣೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, ಈ ವಿಷಯದಲ್ಲಿ ಮುಖ್ಯಮಂತ್ರಿಯವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.