ಹನಮಂತ ಆರ್. ಭೂಷಣ್ಣವರ
ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಆತಂಕ
ಪಂಪ್‌ಸೆಟ್ ಸ್ಥಳಾಂತರಕ್ಕೆ ರೈತರ ಧಾವಂತ
ಜಮಖಂಡಿ: ಮಹಾರಾಷ್ಟ್ರದ ಕೋಯ್ನಾ, ರಾಧಾ ನಗರಿ ಹಾಗೂ ವಾರಣಾ ಜಲಾಶಯಗಳ ಜಲಾ ನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪನದಿಗಳಾದ ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯ ಒಳಹರಿವು ತೀವ್ರಗೊಂಡಿದ್ದು, ನದಿಪಾತ್ರದ ತಗ್ಗು ಪ್ರದೇಶದ ಕೃಷಿ ಭೂಮಿಗಳಿಗೆ ನೀರು ನುಗ್ಗಲು ಆರಂಭಿಸಿದೆ.
ಪ್ರತಿ ವರ್ಷ ಪ್ರವಾಹದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿ ಹಾಳಾಗುತ್ತಿದ್ದ ಕಹಿ ಅನುಭವ ದಿಂದ ಎಚ್ಚೆತ್ತುಕೊಂಡಿರುವ ಕೃಷ್ಣಾ ತೀರದ ರೈತರು, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ತಮ್ಮ ನೀರಾವರಿ ಪಂಪ್‌ಸೆಟ್‌ಗಳು ಹಾಗೂ ವಿದ್ಯುತ್ ಮೋಟಾರ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು, ಗಡಿ ಭಾಗದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾ ನದಿಯ ಅಂಚಿನಲ್ಲಿ ರುವ ನೂರಾರು ಪಂಪ್‌ಸೆಟ್ ಗಳನ್ನು ತರಾತುರಿಯಲ್ಲಿ ತೆರವುಗೊಳಿಸುತ್ತಿರುವ ದೃಶ್ಯಗಳು ನದಿ ತೀರದುದ್ದಕ್ಕೂ ಕಂಡುಬರುತ್ತಿವೆ.
ಇದನ್ನೂ ಓದಿ: Bagalkot Byelection: ಬಾಗಲಕೋಟೆಯಲ್ಲಿ ಕಾಂಗ್ರೆಸ್ʼಗೆ ಒಳೇಟಿನ ಭೀತಿ
ಮಳೆಯ ಆರ್ಭಟ ಇದೇ ರೀತಿ ಮುಂದುವರಿದರೆ ಕೃಷ್ಣಾ ತೀರದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೆಳಹಂತದ ಸೇತುವೆಗಳು ಜಲಾವೃತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೂರು ದಿನಗಳ ಮಳೆಗೆ ನದಿಗೆ ಮರುಜೀವ: ಕೇವಲ ಎರಡು-ಮೂರು ದಿನಗಳ ಅವಧಿಯಲ್ಲಿ ಜಲಾನಯನ ಪ್ರದೇಶ ದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ ನದಿಯು ಮರುಜೀವ ಪಡೆದಿದೆ. ಒಣಗಿದ್ದ ನದಿಪಾತ್ರ ಈಗ ನೀರಿನಿಂದ ತುಂಬಿ ಹರಿಯುತ್ತಿದ್ದು, ಈ ದೃಶ್ಯ ರೈತರಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ ಎಂದು ರೈತ ಮುತ್ತಪ್ಪ ಕುಂಬಾರ ಹರ್ಷ ವ್ಯಕ್ತಪಡಿಸಿದರು.
ಮೂರು ತಿಂಗಳು ಬತ್ತಿದ್ದ ಕೃಷ್ಣೆ
ಕಳೆದ ಮೂರು ತಿಂಗಳಿಂದ ಕೃಷ್ಣಾ ನದಿಯು ಸಂಪೂರ್ಣವಾಗಿ ಬತ್ತಿ ಹೋಗಿತ್ತು. ನದಿಪಾತ್ರದಲ್ಲಿ ನೀರಿಗಿಂತ ಮರಳು ಮತ್ತು ಕಲ್ಲುಗಳೇ ಹೆಚ್ಚಾಗಿ ಕಾಣಿಸುತ್ತಿದ್ದವು. ಮಳೆ ಕೊರತೆಯಿಂದ ಬಿತ್ತನೆ ಕಾರ್ಯವೂ ನಡೆಯದೆ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಜಮೀನುಗಳು ಬಿರುಕು ಬಿಟ್ಟಿದ್ದರೆ, ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿನ ಕೊರತೆಯ ಭೀತಿಯೂ ಎದುರಾಗಿತ್ತು.
ರೈತರ ಬದುಕಿಗೆ ಹೊಸ ಚೈತನ್ಯ
ಪ್ರಕೃತಿಯ ಈ ಬದಲಾವಣೆ ರೈತರಿಗೆ ಕೇವಲ ನೀರನ್ನು ಮಾತ್ರವಲ್ಲ, ಬದುಕಿಗೆ ಹೊಸ ಚೈತನ್ಯ ವನ್ನೂ ನೀಡಿದೆ. ಕೃಷ್ಣಾ ನದಿ ಹೀಗೆ ತುಂಬಿ ಹರಿಯುತ್ತಿದ್ದು, ಈ ವರ್ಷ ಕೃಷಿಕರಿಗೆ ಸಮೃದ್ಧಿ ತರಲಿ ಎಂದು ತುಬಚಿ ಶಿವಲಿಂಗೇಶ್ವರ ಮಠ ಹಾಗೂ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿಗಳು ಆಶಿಸಿದರು.