ಹೂವಪ್ಪ ಐ ಹೆಚ್ ಬೆಂಗಳೂರು
ನಿಂಬೆಹಣ್ಣು ಇಳುವರಿ ಕುಸಿತ
ಒಂದು ಎಳನೀರಿನ ಬೆಲೆ ರು.65ಕ್ಕೆ ಏರಿಕೆ
ಕಲ್ಲಂಗಡಿ ಹಣ್ಣಿಗೂ ಬೇಡಿಕೆ
ಬಿಸಿಲ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಣಿವಾರಿಸಿಕೊಳ್ಳಲು ನಾಗರಿಕರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಇದರಿಂದ ಎಳನೀರು, ಕಲ್ಲಂಗಡಿ, ನಿಂಬೆ ಹಣ್ಣು ಸೌತೆಕಾಯಿ ಗಳಿಗೆ ಭಾರಿ ಬೇಡಿಕೆ ಬಂದಿದೆ. ಒಂದು ಎಳನೀರಿಗೆ ಗ್ರಾಹಕರು 60 ರಿಂದ 65 ರು. ನೀಡಬೇಕಿದ್ದು, ಒಂದು ನಿಂಬೆಹಣ್ಣು ಚಿಲ್ಲರೆ ದರ ಸಣ್ಣ ಗಾತ್ರ 7-8 ರು. ಆಗಿದ್ದರೆ, ದಪ್ಪ 10 ರು.ರಿಂದ 12 ರು. ಆಗಿದೆ.
ಈ ಬೆಲೆ ಗ್ರಾಹಕರಿಗೆ ಕೇಳಿ ಗ್ರಾಹಕರಲ್ಲಿ ಆತಂಕ ತುಂಬಿದೆ, ಇದರ ಜತೆಗೆ ರಸಭರಿತ ಹಣ್ಣುಗಳಾದ ಕಲ್ಲಂಗಡಿ, ಕರಬುಜ, ಸೌತೆ ಕಾಯಿ ಬೆಲೆ ಕೂಡಾ ಹಿಂದಿಗಿಂತ ಕೆ.ಜಿಗೆ 10-15 ರು. ಏರಿಕೆಯಾಗಿವೆ. ಕಲ್ಲಂಗಡಿ ಹಣ್ಣು ಫೆಬ್ರವರಿಯಲ್ಲಿ 20 ರು.ರಿಂದ 25 ಇದ್ದು, ಈಗ ಬೆಲೆ 30-40 ರು., ಕರುಬುಜ 30 ರು. ಇದ್ದ ಬೆಲೆ 40 ರು., ಸೌತೆಕಾಯಿ 20 ರು. ಇದ್ದ ಬೆಲೆ 30 ರು.ಗೆ ಏರಿಕೆಯಾಗಿದೆ.
ಒಂದು ದೊಡ್ಡ ಗಾತ್ರದ ಎಳನೀರಿಗೆ 45 ರಿಂದ 50 ರು. ಇದ್ದ ಬೆಲೆ ಇದೀಗ 60ರಿಂದ 65 ರು.ಬಂದು ತಲುಪಿದ್ದು, ದಾಹ ತೀರಿಸುತ್ತಿದ್ದ ನೈಸರ್ಗಿಕ ಪಾನೀಯದ ಬೆಲೆ ಏಕಾಏಕಿ ಏರಿರುವುದು ಜನರಿಗೆ ಹೊರೆಯಾಗುತ್ತಿದೆ. ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಕೂಡ ಹೆಚ್ಚಿದೆ.
ಸಣ್ಣ ಗಾತ್ರದ ಎಳೆನೀರು 30ರಿಂದ 35 ರು.ಇತ್ತು. ಈಗ ಅದರ ಬೆಲೆ 40-45 ರು.ಆಗಿದೆ. ಅಗ್ಗದ ದರದ ಎಳನೀರನ್ನು ಆಯ್ಕೆ ಮಾಡುವ ಗ್ರಾಹಕರು, ‘ಒಂದು ಬಾಯಿಗೆ ಸಿಗುವಷ್ಟು ನೀರು ಇಲ್ಲ, ಕಾಯಿ ಕೂಡ ಸಿಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಎಳನೀರಿನ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಮಜ್ಜಿಗೆ, ಹಣ್ಣಿನ ಜ್ಯೂಸ್ ಹಾಗೂ ಕತ್ತರಿಸಿದ ಹಣ್ಣಗಳ ಸೇವನೆಯತ್ತ ಮುಖ ಮಾಡುತ್ತಿರುವುದು ಕಂಡುಬಂದಿದೆ. ಬೇಸಿಗೆಯಲ್ಲಿ ಹಣ್ಣಿನ ಬೆಲೆಗಳು ಏರುವುದು, ಮಳೆಗಾಲದಲ್ಲಿ ಇಳಿಕೆಯಾಗುವುದು ಸಾಮಾನ್ಯ. ಆದರೆ ಈ ವರ್ಷ ಏಳ ನೀರಿನ ಬೇಡಿಕೆ ಬಹಳ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಸಿಗುವ ಹೆಚ್ಚಿನ ಎಳನೀರು ಮದ್ದೂರು, ಮಳವಳ್ಳಿ, ರಾಮನಗರ, ಮಂಡ್ಯ, ಹಾಸನ ಮತ್ತು ತುಮಕೂರಿನಿಂದ ಬರುತ್ತವೆ. ತಮಿಳುನಾಡಿನ ಕೆಲವು ಭಾಗಗಳಿಂದಲೂ ಬರುತ್ತವೆ, ಆದರೆ ಬೆಂಗಳೂರಿನಲ್ಲಿ ಅವುಗಳ ಪೂರೈಕೆ ಕಡಿಮೆಯಾಗಿದೆ.
ಇಳುವರಿ ಕಡಿಮೆಯಾಗಿರುವುದು ಕೂಡಾ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ. ಬೆಂಗಳೂರಿನ ಮಾರುಕಟ್ಟೆಯ ಕೊರತೆಗೆ ಉತ್ತರ ಭಾರತದ ಕೆಲವು ಭಾಗಗಳಿಗೆ ಸರಬರಾಜು ಮಾಡುತ್ತಿರುವುದು ಕೂಡಾ ಕಾರಣವಾಗಿದೆ ಎಂದು ಎಳನೀರು ಮಾರಾಟಗಾರ ಮರಿಸ್ವಾಮಿ ಹೇಳುತ್ತಾರೆ.
ನಿಂಬೆಹಣ್ಣು ದುಬಾರಿ: ಆಂಧ್ರ, ವಿಜಯಪುರ ಪ್ರಮುಖ ಲಿಂಬೆ ಬೆಳೆಯುವ ಪ್ರದೇಶಗಳಾಗಿದ್ದು, ತೀವ್ರ ಶಾಖದ ಅಲೆಗಳು ಮತ್ತು ಅತಿವೃಷ್ಟಿ ಮಳೆಯಿಂದಾಗಿ ಶೇ.50ರಷ್ಟು ಇಳುವರಿ ಕುಸಿತ ವಾಗಿರುವ ಕಾರಣ ಪೂರೈಕೆ ಕಡಿಮೆಯಾಗಿದೆ. ಜತೆಗೆ ಹೆಚ್ಚಿನ ಸಾರಿಗೆ ಶುಲ್ಕ ಹೆಚ್ಚಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಲಿಂಬೆ ಜ್ಯೂಸ್ ದರ ಏರಿಕೆ: ದೊಡ್ಡ ಗಾತ್ರದ, ಹೆಚ್ಚು ರಸವಿರುವ ನಿಂಬೆಹಣ್ಣು ಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆಯಾಗಿದೆ ನಿಂಬೆ ಹಣ್ಣಿಗೂ ದರ ಹೆಚ್ಚಳವಾಗಿದೆ. ನಿಂಬೆಹಣ್ಣಿನ ತಂಪು ಪಾನೀಯಕ್ಕೆ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. 15 ರು. ಇದ್ದ ಒಂದು ನಿಂಬೆಜ್ಯೂಸ್ 25 ರು. ಆಗಿದೆ ಎಂದು ನಿಂಬು ಸೋಡಾ ವ್ಯಾಪಾರಿ ನಾರಾಯಣ ಗೌಡ ಹೇಳಿದರು.
![]()
ಕಳೆದೆರಡು ವರ್ಷದಿಂದ ಹವಾಮಾನ ವ್ಯತ್ಯಾಸ ಆಗಿದ್ದು, ಈ ವರ್ಷ ನಿಂಬೆ ಹಣ್ಣಿನ ಇಳುವರಿ ಬಂದಿಲ್ಲ. ಬೇಸಿಗೆಗೆ ನಿಂಬೆಹಣ್ಣು ಪಾನಕ ಜ್ಯೂಸ್ ಬೇಡಿಕೆ ಹೆಚ್ಚಾಗಿದೆ, ಜತೆಗೆ ಧಾರ್ಮಿಕ ಪೂಜೆ ಗಳಿಗೂ ಬೇಕು. ಹೀಗಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ.
-ರಮೇಶ ಕುಮಾರ, ನಿಂಬೆಹಣ್ಣು ವ್ಯಾಪಾರಿ, ಎಪಿಎಂಸಿ, ಬೆಂಗಳೂರು
![]()
ಕಳೆದ 3 ವರ್ಷದ ಅವಧಿಯಲ್ಲಿ ತೆಂಗಿನ ಮರಗಳು ಒಣಗಿ ಹೋಗಿವೆ. ಇಳುವರಿ ಶೇ.60ರಷ್ಟು ಕಡಿಮೆಯಾಗಿದೆ. ಇದರಲ್ಲಿ ಒಣ ಕೊಬ್ಬರಿಗೆ, ಅಡುಗೆಗೆ ಹೋಗುತ್ತದೆ. ಎಳನೀರು ಸಿಗುತ್ತಿಲ್ಲ. ಎಳನೀರಿಗೆ ಬೇಡಿಕೆ ಇದೆ, ಅಲ್ಲದೇ ಇಲ್ಲಿನ ಎಳನೀರು ನೆರೆಯ ರಾಜ್ಯಕ್ಕೆ ಪೂರೈಕೆಯಾಗುತ್ತವೆ, ಹೀಗಾಗಿ ಎಳನೀರಿನ ಬೆಲೆ ದುಬಾರಿಯಾಗಿದೆ.
-ಮಹದೇವ ಗೌಡ, ಎಳನೀರು ವ್ಯಾಪಾರಿ, ಬೆಂಗಳೂರು