ಅಭಿಷೇಕ ಪಾಟೀಲ ಬಾಗಲಕೋಟೆ
ಜಿಲ್ಲಾಡಳಿತ ಭವನದಲ್ಲಿದ್ದ ಶ್ರೀಗಂಧ ಕಳ್ಳತನ
ಕೃಷಿಕರಲ್ಲಿ ಹೆಚ್ಚಿದ ಆತಂಕ
ಕಟಾವಿಗೆ ಬೇಕಿದೆ ತ್ವರಿತಗತಿಯಲ್ಲಿ ಅನುಮತಿ
ಹತ್ತಾರು ವರ್ಷಗಳ ಕಾಲ ಜೋಪಾನ ಮಾಡಿ ಬೆಳೆಸಿರುವ ಶ್ರೀಗಂಧ ಮರಗಳನ್ನು ಕದಿಯುವ ಕಳ್ಳರು ಮುಂದಾಗಿದ್ದಾರೆ. ಇದರಿಂದ ಬೆಳೆದು ನಿಂತ ಮರಗಳ ರಕ್ಷಣೆಯ ಜಿಲ್ಲೆಯ ಶ್ರೀಗಂಧ ಬೆಳೆಗಾರರಿಗೆ ತಲೆ ನೋವಾಗಿದೆ. ಶ್ರೀಗಂಧದಿಂದ ಲಾಭಗಳಿಸಬಹುದಾ ಎಂಬ ಆತಂಕದಲ್ಲೇ ಜಿಲ್ಲೆಯ ನೂರಾರು ರೈತರು ದಶಕದ ಹಿಂದೆಯೇ ಸಾಲ ಮಾಡಿ, ಶ್ರೀಗಂಧ ಮರಗಳನ್ನು ನಾಟಿ ಮಾಡಿದ್ದಾರೆ. ೮ ರಿಂದ ೧೦ ವರ್ಷಗಳ ಕಾಲ ಅವುಗಳನ್ನು ಮಗುವಿನಂತೆ ಜೋಪಾನ ಮಾಡಿದ್ದಾರೆ.
ಸದ್ಯ ಅವುಗಳು ಕಟಾವಿಗೆ ಬಂದಿದ್ದು, ಅಂತಹ ಮರಗಳನ್ನೇ ಕಳ್ಳರು ಕಳ್ಳತನ ಮಾಡಿರುವುದು ಶ್ರೀಗಂಧ ಬೆಳೆಗಾರರ ನಿದ್ದೆಗೆಡಿಸಿದೆ. ಶ್ರೀಗಂಧ ನಾಟಿ ಮಾಡಿದ ಕನಿಷ್ಠ ೮ ವರ್ಷಗಳ ನಂತರ ಅದರಲ್ಲಿ ಶ್ರೀಗಂಧ ದೊರೆಯುತ್ತದೆ. ಇಷ್ಟು ವರ್ಷಗಳ ರೈತರು ಮರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದ ಕಾರಣದಿಂದ ಇಂದು ಶ್ರೀಗಂಧ ಮರಗಳು ದೊಡ್ಡದಾಗಿ ಬೆಳೆದು ನಿಂತಿವೆ.
ಸದ್ಯ ಜಿಲ್ಲೆಯ ಅನೇಕ ಕಡೆಗಳಲ್ಲಿ ಅವುಗಳ ಕಟಾವಿಗೆ ಬಂದಿವೆ. ಅಂತಹ ಮರ್ನಾಲ್ಕು ಕಡೆಗಳಲ್ಲಿ ಕಳ್ಳತನವಾಗಿದೆ. ಈ ಕಾರಣದಿಂದ ರೈತರು ಬೇರೆಯವರ ಮುಂದೆ ತಾವು ಶ್ರೀಗಂಧ ಕೃಷಿ ಮಾಡಿರುವು ದಾಗಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ.
ಬೀಳಗಿ ತಾಲೂಕಿನ ಯಡಹಳ್ಳಿಯ ಗ್ರಾಮದಲ್ಲಿ ಹಾಗೂ ತುಳಸಿಗೇರಿ ಭಾಗದಲ್ಲಿ ಅನೇಕ ಶ್ರೀಗಂಧದ ಮರಗಳು ಕಳ್ಳತನವಾಗಿವೆ. ಶ್ರೀಗಂಧ ಮರಗಳ ಕಟಾವಿಗೆ ಅರಣ್ಯ ಇಲಾಖೆಯಲ್ಲಿ ಅರ್ಜಿ ಕೊಟ್ಟ ಬಳಿಕವೇ ಶ್ರೀಗಂಧ ಮರಗಳ ಕಳ್ಳತನವಾಗುತ್ತಿವೆ. ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀ ಲಾಗಿದ್ದಾರೆ ಎಂಬ ಅನುಮಾನವನ್ನು ಶ್ರೀಗಂಧ ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Bagalkot News: ಪಿಕೆಪಿಎಸ್ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ
ಜಿಲ್ಲಾಡಳಿತ ಭವನದಲ್ಲೇ ಶ್ರೀಗಂಧ ಕಳ್ಳತನ: ಜಿಲ್ಲಾಡಳಿತ ಭವನದ ಆವರಣದಲ್ಲಿ ತಾವಾಗಿ ಯೇ ಬೆಳೆದಿದ್ದ ಹತ್ತಾರು ಶ್ರೀಗಂಧ ಮರಗಳ ಪೈಕಿ ಬಲಿತಿದ್ದ ಶ್ರೀಗಂಧ ಮರಗಳ ಕಳ್ಳತನವಾಗಿವೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳೆದಿದ್ದ ಮರಗಳ ಪಟ್ಟಿ ಮಾಡಿ, ಬಲಿತ ಮರಗಳನ್ನು ಕಡಿದು ಜಿಲ್ಲಾಡಳಿತಕ್ಕೆ ಆದಾಯ ನೀಡುವ ಕೆಲಸ ನಡೆಯಲಿಲ್ಲ. ಕನಿಷ್ಠ ಸದ್ಯ ಉಳಿದಿರುವ ಮರಗಳನ್ನಾದರೂ ಅರಣ್ಯ ಇಲಾಖೆ ಸಂರಕ್ಷಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಜಿಲ್ಲಾಡಳಿತ ಭವನದಲ್ಲೇ ಬೆಳೆದು ನಿಂತಿದ್ದ ಶ್ರೀಗಂಧ ಮರಗಳು ಕಳ್ಳತನವಾದರೇ ರೈತರ ಬೆಳೆದಿದ್ದ ಶ್ರೀಗಂಧ ಪರಿಸ್ಥಿತಿ ಏನು ಎನ್ನುತ್ತಾರೆ ಶ್ರೀಗಂಧ ಬೆಳೆಗಾರರು.
ಶ್ರೀಗಂಧ ಮರಗಳ ಮಾಹಿತಿ ಅರಣ್ಯ ಇಲಾಖೆ ಬಳಿಯಿಲ್ಲ: ಅರಣ್ಯ ಇಲಾಖೆಯೂ ಶ್ರೀಗಂಧ ಮರಗಳ ವಿಷಯದಲ್ಲಿ ಸರಕಾರಿ ಕಚೇರಿ-ಉದ್ಯಾನಗಳಲ್ಲಿನ ಶ್ರೀಗಂಧ ಮರಗಳು, ಅರಣ್ಯ ಪ್ರದೇಶ ದಲ್ಲಿ ಹಾಗೂ ರೈತರು ಬೆಳೆದ ಶ್ರೀಗಂಧದ ಮರಗಳು ಮೂರು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಈ ಮೂರು ಸೇರಿ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಶ್ರೀಗಂಧ ಮರಗಳಿವೆ ಎಂಬ ಮಾಹಿತಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿಯಿಲ್ಲ ಎನ್ನುವುದೇ ವಿಪರ್ಯಾಸ. ಈ ರೀತಿಯಲ್ಲಿ ಶ್ರೀಗಂಧ ಮರಗಳ ಕಟಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಗೆ ಅನುಮತಿ ನೀಡುತ್ತಾರೆ ಎಂಬ ಪ್ರಶ್ನೆ ಬೆಳೆಗಾರ ರನ್ನು ಕಾಡುತ್ತಿದೆ.
ಅನುಮತಿಗೆ ಪರದಾಡಬೇಕು: ಕಟಾವಿಗೆ ಬಂದ ಶ್ರೀಗಂಧ ಕಟಾವು ಮಾಡಿ, ಮಾರಾಟ ಮಾಡಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಆದರೆ, ಅನುಮತಿಗೆ ಅರ್ಜಿ ಸಲ್ಲಿಸಿ ತಿಂಗಳಾ ದರೂ ಇಲಾಖೆಯಿಂದ ಅನುಮತಿ ಸಿಗುತ್ತಿಲ್ಲ. ಅಂತಹದರಲ್ಲಿ ಕಳ್ಳರ ಕಾಟ ಬೇರೆ. ಇಂತಹ ಸಂದರ್ಭದಲ್ಲಿ ಶ್ರೀಗಂಧ ಮಾರಾಟ ಮಾಡುವುದಕ್ಕಿಂತ ಅವುಗಳ ರಕ್ಷಣೆಯ ಚಿಂತೆ ಹೆಚ್ಚಾಗಿದೆ ಎನ್ನುತ್ತಾರೆ ಜಿಲ್ಲೆಯ ಶ್ರೀಗಂಧ ಬೆಳೆಗಾರರು.
*
ಶ್ರೀಗಂಧ ಬೆಳೆಗಾರರು ತಮ್ಮ ಆರ್ಟಿಸಿ ಉತಾರದಲ್ಲಿ ಶ್ರೀಗಂಧ ಎಂದು ನಮೂದಾಗಿದ್ದಾರೆ. ಕೂಡಲೇ ಕಟಾವಿಗೆ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಅದು ಆರ್ಟಿಸಿಯಲ್ಲಿ ನಮೂದಾಗದಿದ್ದರೆ ಕಂದಾಯ ಇಲಾಖೆಯಿಂದ ಖಾತ್ರಿ ಪಡಿಸಿಕೊಂಡ ಬಳಿಕ ಅನುಮತಿ ದೊರೆಯುವಾಗ ವಿಳಂಬ ವಾಗಲಿದೆ.
-ರುಥ್ರೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ