ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾದಯಾತ್ರೆ: ಪಕ್ಷದಲ್ಲಿ ಪುನಶ್ಚೇತನ, ಕೊಂಚ ಸಮಾಧಾನ

ಪಾದಯಾತ್ರೆಯ ಪ್ರಖರತೆ ಹೆಚ್ಚಿಸಬೇಕಿದ್ದ ಕೇಂದ್ರ ಸಚಿವರು, ಸಂಸದರೂ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರ ಹಾಜರಿಯೇ ಕಾಣುತ್ತಿಲ್ಲ, ಅಷ್ಟೇ ಏಕೆ, ಪಾದಯಾತ್ರೆಯುದ್ಧಕ್ಕೂ ಸರಕಾರದ ವಿರುದ್ಧ ಪರಾಕ್ರಮ ಮೆರೆಯಬೇಕಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಆಶೋಕ್ ಅವರ ಗೈರು ಹಾಜರಿಯೇ ಎದ್ದು ಕಾಣುತ್ತಿದ್ದು, ಇದಕ್ಕೆ ಅನಾರೋಗ್ಯದ ಕಾರಣ ನೀಡಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ, ಬೆಂಗಳೂರು

ಕೈ ಜೋಡಿಸದ ಕೇಂದ್ರ ಸಚಿವರು, ಸಂಸದರು, ದೋಸ್ತಿ ಅಸಹಕಾರ: ಬಿಜೆಪಿ ಕಾರ್ಯಕರ್ತರಲ್ಲಿ ಸ್ವಲ್ಪ ಬೇಸರ

ಕಳೆದ 6 ದಿನಗಳಿಂದ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಸರಕಾರದ ವಿರುದ್ಧ ಅಕ್ರೋಶ ಗಳು ವ್ಯಕ್ತವಾಗುತ್ತಿದ್ದು ಇದರಿಂದ ಪಕ್ಷಕ್ಕೆ ಒಂದು ರೀತಿ ಪುನಶ್ಚೇಚೇತನ ಬಂದಂತಾಗಿದೆ. ಇದರ ಜತೆಗೆ ಈ ತನಕ ಸುಪ್ತವಾಗಿದ್ದ ಪಕ್ಷದ ಆಂತರಿಕ ಅಸಮಾಧಾನಗಳು ಅಲ್ಲಲ್ಲಿ ಇಣುಕಿದಂತಾಗಿದೆ. ಪಕ್ಷದ ನಾಯಕರಾಗಿದ್ದ ಬಸವಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್.ಈಶ್ವರಪ್ಪ ಉಚ್ಛಾಟನೆ ಕಾಲದಿಂದಲೇ ತೀವ್ರಗೊಂಡಿದ್ದ ಬಿಜೆಪಿಯ ಆಂತರಿಕ ಅಸಮಾಧಾನ ನಂತರದ ದಿನಗಳಲ್ಲಿ ತಣ್ಣಗಾದಂತೆ ಇತ್ತು. ಆದರೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಕೆಲ ಕಾರ್ಯಕರ್ತರಲ್ಲಿ ಕೊಂಚ ಬೇಸರವೂ ಇದೆ.

ಪಾದಯಾತ್ರೆಯ ಪ್ರಖರತೆ ಹೆಚ್ಚಿಸಬೇಕಿದ್ದ ಕೇಂದ್ರ ಸಚಿವರು, ಸಂಸದರೂ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರ ಹಾಜರಿಯೇ ಕಾಣುತ್ತಿಲ್ಲ, ಅಷ್ಟೇ ಏಕೆ, ಪಾದಯಾತ್ರೆಯುದ್ಧಕ್ಕೂ ಸರಕಾರದ ವಿರುದ್ಧ ಪರಾಕ್ರಮ ಮೆರೆಯಬೇಕಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಆಶೋಕ್ ಅವರ ಗೈರು ಹಾಜರಿಯೇ ಎದ್ದು ಕಾಣುತ್ತಿದ್ದು, ಇದಕ್ಕೆ ಅನಾರೋಗ್ಯದ ಕಾರಣ ನೀಡಲಾಗಿದೆ. ಹಾಗೆ ನೋಡಿದರೆ,ಇಂಥದೊಂದು ಪಾದಯಾತ್ರೆ ಬೇಕಿತ್ತು ಎನ್ನುವ ಅಭಿಪ್ರಾಯ ಪಕ್ಷದ ಬಹುತೇಕ ಮುಖಂಡರ ಅಭಿಪ್ರಾಯವಾಗಿದೆ, ಏಕೆಂದರೆ ಈ ಪಾತ್ರಯಾತ್ರೆ ವಾಸ್ತವದಲ್ಲಿ ಪಕ್ಷಕ್ಕೆ ಒಂದು ರೀತಿಯಲ್ಲಿ ಪುನಶ್ಚೇತನ ನೀಡಿರುವುದಂತೂ ಸತ್ಯ ಎನ್ನುತ್ತಾರೆ ಕಾರ್ಯಕರ್ತರು, ಆದರೆ ಪಾದ ಯಾತ್ರೆಯಲ್ಲಿ ದೊಡ್ಡ ನಾಯಕರೆನಿಸಿದ್ದವರೇ ಕಾಣ ದಿರುವುದರ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bangalore News: ಕಾನೂನು ಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ. ಅನುದಾನ ವಾಪಸ್ ಪಡೆಯುವಂತೆ ಎರಡನೇ ಬಾರಿಗೆ ಹೈ ಕೋರ್ಟ್ ಆದೇಶ

ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ರೂಪಿಸಿದ್ದ ಪಾದಯಾತ್ರೆ ಇನ್ನೇನೋ ಆರಂಭಕ್ಕೂ ಮುನ್ನಸರಕಾರ ನಾಗೇಂದ್ರ ಅವರಿಂದ ಸಚಿವ ಸ್ಥಾನದ ರಾಜೀನಾಮೆ ಪಡೆದಿತ್ತು. ಇದಾದ ನಂತರ ಬಿಜೆಪಿ ರೂಪಿಸಿದ್ದ ಪಾದಯಾತ್ರೆ ಗುರಿ ಮತ್ತು ದಿಕ್ಕು ಹಾಗೂ ತಂತ್ರವಿಧಾನ ಬದಲಾಗಬೇಕಿತ್ತು. ಇದಕ್ಕಾಗಿ ಪಕ್ಷದ ಕೇಂದ್ರ ಸಚಿವರು, ಸಂಸದರು ಹಾಗೂ ಹಿರಿಯ ನಾಯಕರು ಒಟ್ಟಾಗಿ ಕಲಿತು ಚರ್ಚಿ ಸಬೇಕಿತ್ತು. ಆದರೆ ಹಿರಿಯ ನಾಯಕರ ಅಸಹಕಾರದಿಂದ ಹೋರಾಟಕ್ಕೆ ಹಿರಿಯರ ಬೆಂಬಲ ಅಷ್ಟಾಗಿ ಸಿಗುತ್ತಿಲ್ಲ ಎನ್ನಲಾಗಿದೆ.

ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ನಂತರವೂ ಪಾದಯಾತ್ರೆಗೆ ವಾಲ್ಮೀಕಿ ಹಗರಣದ ಫಲಕ ಹಾಕಿದ್ದರಿಂದ ಹೋರಾಟದ ವಿಷಯ ಹಳೆಯದೆನಿಸಿ ಕಾಂಗ್ರೆಸ್ ಪರೋಕ್ಷವಾಗಿ ಲಾಭವಾಗುತ್ತಾ ಬಂದಿತು. ಇದರ ಮಧ್ಯೆ ಪಾದಯಾತ್ರೆಯ ರೂವಾರಿಗಳು, ಈ ಬಳ್ಳಾರಿ ಪಾದಯಾತ್ರೆ ಬರೀ ನಾಗೇಂದ್ರ ಮತ್ತು ಜನಾರ್ದನ ರೆಡ್ಡಿ ನಡುವಿನ ಹೋರಾಟದ ಯಾತ್ರೆಯಲ್ಲ ಎಂದು ಪದೇಪದೇ ಸ್ಪಷ್ಟನೆ ನೀಡಿದ್ದಾರೆ.

Screenshot_1 ಒಕ

ಆದರೂ ಇದು ರಾಜ್ಯದ ಸಮಗ್ರ ವಿಚಾರಗಳನ್ನು ಬಿಂಬಿಸದ ಕಾರಣ ನಾಗೇಂದ್ರ ಮತ್ತು ಜನಾರ್ದನ ರೆಡ್ಡಿ ನಡುವಿನ ಹೋರಾಟದ ಯಾತ್ರೆಯಲ್ಲದೆ ಮತ್ತೇನೂ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹೀಗಾಗಿ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನಾಗಲಿ, ಬಿಡದಿ ಟೌನ್‌ಶಿಪ್ ಆಗಲಿ ಅಥವಾ ಹೊತ್ತಿ ಉರಿಯುತ್ತಿರುವ ಕೆಪಿಎಸ್‌ಸಿ ಕರ್ಮಕಾಂಡಗಳನ್ನು ಮುಂದಿಟ್ಟು ಈ ಪಾದಯಾತ್ರೆ ಮಾಡಿ ದ್ದರೆ ಇದರ ಪರಿಣಾಮ ಮತ್ತು ಪ್ರಭಾವ ಬೇರೆಯದೇ ಆಗಿರುತ್ತಿತ್ತು ಎಂದು ಕೆಲವು ಬಿಜೆಪಿ ಶಾಸಕರು ಹೇಳಿದ್ದಾರೆ.

ಇನ್ನು ಈ ಪಾದಯಾತ್ರೆ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿಯನ್ನು ಬಲಗೊಳಿಸಬೇಕಿದ್ದ ಬದಲಿಗೆ ದುರ್ಬಲಗೊಳಿಸುವ ಸೂಚನೆಯನ್ನೂ ನೀಡುತ್ತಿದೆ ಎನ್ನಲಾಗಿದೆ. ಅಂದರೆ ಸರಕಾರದ ಬಿಡದಿ ಟೌನ್ ಶಿಫ್ ಯೋಜನೆ ವಿರುದ್ಧ ದೋಸ್ತಿ ಜೆಡಿಎಸ್ ನಡೆಸಿದ್ದ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿಲ್ಲ. ಪರಿಣಾಮ ಬಿಜೆಪಿಯ ಪಾದಯಾತ್ರೆಗೆ ಜೆಡಿಎಸ್ ಬಹಿರಂಗವಾಗಿಯೇ ಅಪಸ್ವರ ಎತ್ತಿತ್ತು. ಹೀಗಾಗಿ ಈ ಪಾದಯಾತ್ರೆ ಬಿಜೆಪಿಗೆ ಕೊಂಚ ಶಕ್ತಿ ನೀಡುವ ಟಾನಿಕ್ ಸಿಕ್ಕಂತೆ ಕಂಡರೂ ಪಕ್ಷದ ಆಂತರಿಕ ಬೇಗುದಿ ಜತೆಗೆ ದೋಸ್ತಿ ನಡುವಿನ ಬಿರುಕು ಕಾಣಿಸುವಂತೆಯೂ ಮಾಡಿದೆ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ.

ಕೆಪಿಎಸ್‌ಸಿ ಹಗರಣದ ಪ್ರಸ್ತಾಪ ಆಗಲ್ಲ

ಬಿಜೆಪಿಯಲ್ಲಿ ಪಾದಯಾತ್ರೆಯಲ್ಲಿ ಬಹುಕೋಟಿ ರು.ಗಳ ಕೆಪಿಎಸ್‌ಸಿ ಹಗರಣದ ಬಗ್ಗೆ ಬಿಜೆಪಿ ಹೆಚ್ಚು ಚರ್ಚೆ ಮಾಡದಿರುವುದು ಕಾಂಗ್ರೆಸ್‌ನಲ್ಲಿ ಆಂತರ್ಯದಲ್ಲಿ ಚರ್ಚೆಯಾಗುತ್ತಿದೆ. ಇದರ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತನಾಗಿದ್ದು ಇದರಲ್ಲಿ ಬಿಜೆಪಿಯ ಕೆಲವರ ಹೆಸರು ತಳುಕು ಹಾಕಿ ಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಂತ ಕಾಂಗ್ರೆಸ್ ಕೂಡ ಈ ವಿಷಯದಲ್ಲಿ ಬಿಜೆಪಿ ಕಡೆ ಹೆಚ್ಚು ಬೊಟ್ಟು ಮಾತನಾಡುತ್ತಿಲ್ಲ, ಏಕೆಂದರೆ ಅನೇಕ ಇಲಾಖೆಗಳ ನೇಮಕಾತಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳೂ ಹಗರಣದಲ್ಲಿ ಕೇಳಿ ಬಂದಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಪಾದಯಾತ್ರೆಯಲ್ಲಿ ಕೆಪಿಎಸ್‌ಸಿ ಪ್ರಸ್ತಾಪ ಅಷ್ಟಕಟ್ಟೆ.

ಪಾದಯಾತ್ರೆಗೆ ಯಾರು ಗೈರು? ಏಕೆ?

ಬಿಜೆಪಿ ಪಾದಯಾತ್ರೆ ಆರಂಭ ಕಾಲದಲ್ಲಿ ಕಾಣಿಸಿಕೊಂಡಿದ್ದ ಕೆಲವು ಸಂಸದರು ನಂತರದ ದಿನ ಗಳಲ್ಲಿ ಬಳ್ಳಾರಿ ಪಾದಯಾತ್ರೆಯಾಗುತ್ತಿದ್ದಂತೆ ಕಾಣೆಯಾದರು. ಅದರಲ್ಲೂ ದಲಿತ ನಾಯಕರಾದ ಅರವಿಂದ ಲಿಂಬಾವಳಿ ಅವರು ಆರಂಭದಿಂದಲೇ ಅತ್ತ ಬರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿ.ಟಿ. ರವಿ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್ ಸೇರಿದಂತೆ ಕೆಲವರು ಉದ್ಘಾಟನೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ನಂತರ ಅತ್ತ ಬರಲೇ ಇಲ್ಲ.

ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪಾದಯಾತ್ರೆ ಕಡೆ ಸುಳಿಯಲೇ ಇಲ್ಲ. ಹಾಗೆಯೇ ಪಿ.ಸಿ. ಮೋಹನ್, ಸುಧಾಕರ್, ಸಿ.ಎನ್. ಮಂಜುನಾಥ್ ಹಾಗೂ ಯದುವೀರ್ ಸೇರಿ ಅನೇಕ ಸಂಸದರು ಪಾದಯಾತ್ರೆ ಕಡೆ ತಲೆ ಹಾಕಿದಂತೆ ಕಾಣಲಿಲ್ಲ ಎನ್ನುವುದು ಪಾದಯಾತ್ರೆಯಲ್ಲಿ ಭಾಗವಹಿಸಿ ಬಂದಿರುವ ಕಾರ್ಯಕರ್ತರ ಬೇಸರದ ನುಡಿ. ಇದರ ಮಧ್ಯೆ ಬಿಜೆಪಿಯ ಭದ್ರಕೋಟೆ ಎನಿಸಿರುವ ಕರಾವಳಿ ಭಾಗವಾಗಲಿ, ಬೆಳಗಾವಿ ವಿಭಾಗದಿಂದಾಗಲಿ ಹೆಚ್ಚಿನ ನಾಯಕರು ಪಾದಯಾತ್ರೆ ಕಡೆ ಪಾದ ಬೆಳೆಸಿಲ್ಲ, ಅಷ್ಟೇ ಏಕೆ ಬೆಂಗಳೂರು ವಿಭಾಗದಿಂದಲೇ ಬಹುತೇಕ ಶಾಸಕರು ಆತ್ತ ಮುಖ ಮಾಡಿಲ್ಲ ಎನ್ನುವ ಮಾತುಗಳು ಪಕ್ಷದ ನಾಯಕರಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.