ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Seema Latkar: ಸಚಿವರ ತಳ್ಳಿದ ವಿಚಾರ: ಲಾಟ್ಕರ್ ಎತ್ತಂಗಡಿ?

ಕಳೆದ ಐದು ವರ್ಷಗಳಿಂದ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮೈಸೂರಿನಲ್ಲಿ ವರಿಷ್ಠಾಧಿಕಾರಿಯಾಗಿ ಮತ್ತು ಆಯುಕ್ತರಾಗಿ ಐದು ವರ್ಷಗಳನ್ನು ಪೂರೈಸುತ್ತಿರುವ ಕಾರಣ ಈ ಪ್ರಕರಣದ ನೆಪದಲ್ಲಿ ಎತ್ತಂಗಡಿ ಮಾಡಲು ಸರಕಾರ ನಿಶ್ಚಯ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತಳಮಟ್ಟದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುವ ಸಾಧ್ಯತೆ ಬಗ್ಗೆ ಇಲಾಖೆಯಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪ್ರತಿವರ್ಷವೂ ಒಂದಲ್ಲ ಒಂದು ಎಡವಟ್ಟುಗಳು ಮಾಮೂಲು. ಜಂಬೂ ಸವಾರಿಯ ದಿನ ಜನರನ್ನು ನಿಯಂತ್ರಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲು. ಆದರೆ ಈ ಬಾರಿ ಪೊಲೀಸರು ಸಚಿವರನ್ನೇ ಹೊರಗೆ ತಳ್ಳಿ ಸಿಎಂ ಕೆಂಗಣ್ಣಿಗೆ ಗುರಿಯಾಗಿ ದ್ದಾರೆ. ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ವೇಳೆ ಸಚಿವರನ್ನೇ ಹೊರಗೆ ತಳ್ಳಲು ಪ್ರಯತ್ನಿಸಿದ ಘಟನೆ ಸಂಬಂಧ ರಾಜ್ಯ ಸರಕಾರವು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ 6 ಮಂದಿ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ಈ ಪೈಕಿ ಮೂವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ.

ಕಳೆದ ಐದು ವರ್ಷಗಳಿಂದ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮೈಸೂರಿನಲ್ಲಿ ವರಿಷ್ಠಾಧಿಕಾರಿಯಾಗಿ ಮತ್ತು ಆಯುಕ್ತರಾಗಿ ಐದು ವರ್ಷಗಳನ್ನು ಪೂರೈಸುತ್ತಿರುವ ಕಾರಣ ಈ ಪ್ರಕರಣದ ನೆಪದಲ್ಲಿ ಎತ್ತಂಗಡಿ ಮಾಡಲು ಸರಕಾರ ನಿಶ್ಚಯ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತಳಮಟ್ಟದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುವ ಸಾಧ್ಯತೆ ಬಗ್ಗೆ ಇಲಾಖೆಯಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ

ಕಾಕತಾಳಿಯ ಎನ್ನುವಂತೆ ಪೊಲೀಸ್ ಅಧಿಕಾರಿಗಳು ತಡೆದು ನಿರ್ಬಂಧಿಸಿದ್ದ ಮೂವರು ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ ತಂಗಡಗಿ ಹಾಗೂ ಬಸವಂತಪ್ಪ ಅವರು ದಲಿತ ಸಮುದಾಯಕ್ಕೆ ಸೇರಿದವರು. ದಲಿತ ಸಮಾಜದ ಬಾಹುಳ್ಯವಿರುವ ಮೈಸೂರು ಭಾಗದಲ್ಲಿ ವಿಶ್ವವಿಖ್ಯಾತ ದಸರಾದ ವೇಳೆ ಲಕ್ಷಾಂತರ ಮಂದಿಗೆ ಗೋಚರವಾಗುವಂತೆ ಅಪಮಾನಿಸಿದ್ದು ಈ ಸಮಾಜಕ್ಕೆ ಭಾರೀ ಆಕ್ರೋಶಕ್ಕೆ ಉಂಟಾಗಿದೆ.

ಘಟನೆಯಿಂದ ಸಿಟ್ಟಿಗೆದ್ದ ಕೃಷಿ ಸಚಿವ ನರೇಂದ್ರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಮುಜರಾಯಿ ಸಚಿವ ಬಸವಂತಪ್ಪ ಅವರು ಪೊಲೀಸ್ ಅಧಿಕಾರಿಗಳ ಬಗ್ಗೆ ಅದರಲ್ಲೂ ಆಯುಕ್ತರ ಎಡವಟ್ಟುಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು ಕೂಡಲೇ ಆಯುಕ್ತರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಲಾಖೆ ತನಿಖೆಗೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಅವರು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಐಪಿಎಸ್ ಅಧಿಕಾರಿ ರಿಷ್ಯಂತ್ ಹಾಗೂ ಡಿಸಿಪಿ ಹರಿಪ್ರಿಯ ಇನ್‌ಸ್ಪೆಕ್ಟರ್‌ʼಗಳಾದ ರಘು ಹಾಗೂ ನಾರಾಯಣಸ್ವಾಮಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.

ಈ ಮಧ್ಯೆ ಮೈಸೂರು ಪೊಲೀಸ್ ಆಯುಕ್ತರಾಗಲು ಐಪಿಎಸ್ ಅಧಿಕಾರಿಗಳಾದ ರವಿ ಚನ್ನಣ್ಣನವರ್, ವಿಷ್ಣುವರ್ಧನ್ ಹಾಗೂ ಬೋರಲಿಂಗಯ್ಯ ಅವರು ಪ್ರಯತ್ನಿಸುತ್ತಿದ್ದು ಇವರಲ್ಲಿ ರವಿಚನ್ನಣ್ಣ ನವರ್ ಅಥವಾ ವಿಷ್ಣುವರ್ಧನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಸುದೀರ್ಘ ಸೇವೆ ಹಿಂದೆ ಯಾರಿದ್ದಾರೆ?

ಮೈಸೂರು ಜಿಲ್ಲಾ ಎಸ್‌ಪಿ ಆಗಿದ್ದ ಸೀಮಾ ಲಾಟ್ಕರ್ ಅವರು ಬಡ್ತಿ ಪಡೆದ ನಂತರ ಇಲ್ಲೇ ಆಯುಕ್ತರಾದರು. ಇದರೊಂದಿಗೆ ಇವರ ಸೇವೆ ಮೈಸೂರಿನಲ್ಲಿ 5 ವರ್ಷಗಳಾಗುತ್ತಿದೆ. ಈ ಮಧ್ಯೆ ದಸರಾದ ವರದಿಗಾರಿಕೆಗೆ ಬಂದಿದ್ದ ಮೈಸೂರು ಪತ್ರಕರ್ತರನ್ನು ‘ನಕಲಿ ಪತ್ರಕರ್ತರು’ ಎಂದು ದೂರ ಇರಿಸಿ ಅವರ ಪ್ರತಿಭಟನೆಗೆ ಕಾರಣರಾದರು. ಈ ಸಂದರ್ಭದಲ್ಲಿ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರು ಆಯುಕ್ತರ ಪರ ವಾಗಿ ವಿಷಾದ ವ್ಯಕ್ತಪಡಿಸಬೇಕಾಯಿತು. ಇದಕ್ಕೂ ಮುನ್ನ ಐತಿಹಾಸಿಕ ‘ಜಟ್ಟಿ ಕಾಳಗ’ ರದ್ದಾಗಲು ಭದ್ರತೆ ಹೆಸರಿನಲ್ಲಿ ಪೊಲೀಸರು ನಡೆಸಿದ ಅತಿರೇಕವೇ ಕಾರಣ ಎಂಬ ದೂರುಗಳು ಕೇಳಿ ಬಂದಿವೆ. ಇಂಥ ಅನೇಕ ಎಡವಟ್ಟುಗಳು ಮೈಸೂರು ಪೊಲೀಸರಿಂದ ನಡೆಯುತ್ತಿದ್ದರೂ, ಇವರ ಹಿಂದೆ ಸಚಿವ ಯತೀಂದ್ರ ಅವರ ಬೆಂಬಲಿಗರು ಇzರೆ ಎಂದು ನೊಂದ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಸೀಮಾ ಲಾಟ್ಕರ್ ಅವರನ್ನು ಮುಂದುವರಿಸುವಂತೆ ಈ ಹಿಂದೆ ಶಿಫಾರಸು ಮಾಡಿದ್ದ ಯತೀಂದ್ರ ಅವರು ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ ಎನ್ನುತ್ತಾರೆ ಮೈಸೂರು ಭಾಗದ ಶಾಸಕರು.

ಸಚಿವರನ್ನು ದೂರ ತಳ್ಳಿದ್ದು ಏಕೆ ?

ಮೈಸೂರು ಅರಮನೆ ಮುಂಭಾಗದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮಹತ್ವದ ಗಳಿಗೆಯಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರು ಭಾಗವಹಿಸಬೇಕಿತ್ತು. ಅದರಂತೆ ಮುಖ್ಯಮಂತ್ರಿ ಜತೆ ಸಚಿವರಾದ ಶಿವರಾಜ ತಂಗಡಗಿ, ನರೇಂದ್ರಸ್ವಾಮಿ ಹಾಗೂ ಬಸವಂತಪ್ಪ ಆಗಮಿಸಿದ್ದರು. ಈ ಪೈಕಿ ಮುಖ್ಯಮಂತ್ರಿಯನ್ನು ಬಿಟ್ಟು ಉಳಿದವರನ್ನು ಐಪಿಎಸ್ ಅಧಿಕಾರಿ ರಿಷ್ಯಂತ್ ಹಾಗೂ ಇತರ ಪೊಲೀಸ್ ಅಽಕಾರಿಗಳು ಅಡ್ಡಗಟ್ಟಿ ಹಿಂದಕ್ಕೆ ತಳ್ಳಿದ್ದರು. ಈ ಸಂದರ್ಭದಲ್ಲಿ ರಿಷ್ಯಂತ್ ಮತ್ತು ಸಚಿವರ ಮಧ್ಯೆ ಸಣ್ಣ ಮಾತಿನ ಚಕಮಕಿ ನಡೆದಿತ್ತು.

ಕೆಲವೇ ಗಂಟೆಗಳಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸ್ ಅಧಿಕಾರಿಗಳಿಗೆ ಇವರು ಮಂತ್ರಿಗಳು ಎನ್ನುವುದು ಗೊತ್ತಾಗಲಿಲ್ಲವೆ ? ಎನ್ನುವುದು ಸಾರ್ವಜನಿಕರ ಪ್ರಶ್ನೆ. ಆದರೆ ವಾಸ್ತವದಲ್ಲಿ ಇದರ ಹಿಂದೆ ಮೈಸೂರು ಪೊಲೀಸ್ ಆಯುಕ್ತರ ಸೂಚನೆ ಇರುವುದನ್ನು ಸಚಿವರನ್ನು ತಡೆದ ಐಪಿಎಸ್ ಅಧಿಕಾರಿ ರಿಷ್ಯಂತ್ ಅವರೇ ಮಾಧ್ಯಮದವರಿಗೆ ತಿಳಿಸಿದ್ದಾರೆ. ಸಿಎಂ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಮಂತ್ರಿಯನ್ನಾಗಲಿ, ಶಾಸಕರನ್ನಾಗಲಿ ಒಳಗೆ ಬಿಡಬಾರದು ಎಂದು ಎಲ್ಲಾ ಅಧಿಕಾರಿಗಳಿಗೂ ಆಯುಕ್ತರು ಮೌಖಿಕ ಆದೇಶ ನೀಡಿದ್ದರು ಎನ್ನಲಾಗಿದೆ. ಆಯುಕ್ತರು ಸಿಎಂ ಮೆಚ್ಚಿಸಲು ನಡೆಸಿದ ಪ್ರಯತ್ನ ಇದಾಗಿತ್ತು. ಮಾಹಿತಿ ಕೊರತೆಯಿಂದ ಮಂತ್ರಿಗಳನ್ನೇ ತಡೆದು ದೊಡ್ಡ ಎಡವಟ್ಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.