ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ವಿಶ್ವಕಪ್ ಹಾಕಿ ಪ್ರಶಸ್ತಿ"ಯತ್ತ ಭಾರತದ ಚಿತ್ತ

ಈ ಬಾರಿ ನಡೆಯುತ್ತಿರುವುದು 16ನೇ ಪುರುಷರ ಹಾಕಿ ವಿಶ್ವಕಪ್. 1971ರಲ್ಲಿ ಆರಂಭವಾಗಿದ್ದ ಚೊಚ್ಚಲ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಪಾಕಿಸ್ತಾನ ಆ ಸಲ ಚಾಂಪಿಯನ್ ಪಟ್ಟಕ್ಕೇರಿದರೆ, ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿತು. 1973ರಲ್ಲಿ ನಡೆದ ವಿಶ್ವಕಪ್ ಹಾಕಿ ಯಲ್ಲಿ ಭಾರತ 2ನೇ ಸ್ಥಾನಕ್ಕೇರಿ ರನ್ನರ್ ಅಪ್ ಆಯಿತು.

-ನರೇಂದ್ರ ಪಾರೆಕಟ್

ವಿಶ್ವಕಪ್ ಹಾಕಿಗೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಇದೇ 30ನೇ ತಾರೀಕಿನ ವರೆಗೆ ಈ ಸಲದ ಪ್ರತಿಷ್ಠಿತ ಪಂದ್ಯಾವಳಿ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಈ ಮಹತ್ತರ ಟೂರ್ನಿಯ ಆತಿಥ್ಯವನ್ನು ಈ ಬಾರಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ವಹಿಸಿವೆ.

ಹಾಕಿ ಕ್ರೀಡೆಯಲ್ಲಿ ಭಾರತದ ಸಾಧನೆ ಕೂಡ ಸಾಮಾನ್ಯವೇನಲ್ಲ. ಒಲಿಂಪಿಕ್ ಕ್ರೀಡೋತ್ಸವದಲ್ಲಿ 8 ಸಲ ಚಿನ್ನದ ಪದಕ ಗೆದ್ದ ಹಿರಿಮೆ ಭಾರತದ್ದಾಗಿದೆ. ಅಧಿಕೃತ ಅಲ್ಲದಿದ್ದರೂ ಹಾಕಿಯು ಭಾರತದ ರಾಷ್ಟ್ರೀಯ ಕ್ರೀಡೆ ಎಂದೇ ಜನಜನಿತವೂ ಆಗಿದೆ. ವಿಶ್ವಕಪ್ ಪುರುಷರ ಹಾಕಿಯಲ್ಲಿ ಭಾರತ ಒಂದೇ ಒಂದು ಬಾರಿ ಚಾಂಪಿಯನ್ ಆಗಿದ್ದರೂ, ಹಲವಾರು ಆವೃತ್ತಿಗಳಲ್ಲಿ ಗಮನಾರ್ಹ ಸಾಧನೆ ಮೆರೆಯಲು ಸಾಧ್ಯವಾಗಿದೆ.

ಈ ಬಾರಿ ನಡೆಯುತ್ತಿರುವುದು 16ನೇ ಪುರುಷರ ಹಾಕಿ ವಿಶ್ವಕಪ್. 1971ರಲ್ಲಿ ಆರಂಭವಾಗಿದ್ದ ಚೊಚ್ಚಲ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಪಾಕಿಸ್ತಾನ ಆ ಸಲ ಚಾಂಪಿಯನ್ ಪಟ್ಟಕ್ಕೇರಿದರೆ, ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿತು. 1973ರಲ್ಲಿ ನಡೆದ ವಿಶ್ವಕಪ್ ಹಾಕಿ ಯಲ್ಲಿ ಭಾರತ 2ನೇ ಸ್ಥಾನಕ್ಕೇರಿ ರನ್ನರ್ ಅಪ್ ಆಯಿತು.

ಆದರೆ 1975ರಲ್ಲಿ ಕೌಲಾಲಂಪುರದಲ್ಲಿ ನಡೆದ 3ನೇ ವಿಶ್ವಕಪ್ ಹಾಕಿ ಭಾರತದ ಪಾಲಿಗೆ ಮರೆಯಲ ಸಾಧ್ಯ. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತ ತಂಡ ಮೊತ್ತಮೊದಲ ಬಾರಿ ವಿಶ್ವಕಪ್ ಹಾಕಿ ಚಾಂಪಿಯನ್ ಪಟ್ಟಕ್ಕೇರಿ ಸಂಭ್ರಮಿಸಿತು.

ಇದನ್ನೂ ಓದಿ: Hockey India League: ಚೆನ್ನೈಗೆ ಆಗಮಿಸಿದ ಎಸ್‌ಜಿ ಪೈಪರ್ಸ್ ಪುರುಷರ ತಂಡ!

1978ರಲ್ಲಿ ಭಾರತ ತಂಡ 6ನೇ ಸ್ಥಾನ ಪಡೆದರೆ, 1982ರಲ್ಲಿ 5ನೇ ಸ್ಥಾನ, 1986ರಲ್ಲಿ 12, 1990ರಲ್ಲಿ 10, 1994ರಲ್ಲಿ 5, 1996ರಲ್ಲಿ 6ನೇ ಸ್ಥಾನ ಪಡೆಯಿತು. 2002ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ 10ನೇ ಸ್ಥಾನ ಪಡೆದರೆ, 2006ರಲ್ಲಿ 11ನೇ ಸ್ಥಾನ, 2010ರಲ್ಲಿ 8, 2014ರಲ್ಲಿ 9, 2018ರಲ್ಲಿ 6 ಮತ್ತು 2023ರಲ್ಲಿ ನಡೆದ ಪಂದ್ಯಾವಳಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಕ್ವಾ. ಫೈನಲ್ ತೆರವು: ಈ ಬಾರಿಯ ವಿಶ್ವಕಪ್‌ನಲ್ಲಿ ಬಲಿಷ್ಠ 16 ತಂಡಗಳು ಭಾಗವಹಿಸುತ್ತಿವೆ. ಒಟ್ಟು 4 ಗುಂಪುಗಳಾಗಿ ತಂಡಗಳನ್ನು ವರ್ಗೀಕರಿಸಲಾಗಿದ್ದು ಭಾರತವು ‘ಪೂಲ್-ಡಿ’ಯಲ್ಲಿ ಸ್ಥಾನ ಪಡೆದಿದೆ.

ಇದೇ ಮೊದಲ ಬಾರಿಗೆ ವಿಶ್ವಕಪ್ ಹಾಕಿಯಲ್ಲಿ ಕ್ವಾ. ಫೈನಲ್ ಹಂತವನ್ನು ತೆರವು ಮಾಡಲಾಗಿದ್ದು, ಪ್ರಶಸ್ತಿಯತ್ತ ಸಾಗುವ ತಂಡಗಳಿಗೆ ಹೊಸ ಸ್ವರೂಪದ ಸ್ಪರ್ಧಾ ಹಾದಿಯನ್ನು ಪರಿಚಯಿಸಲಾಗಿದೆ. ತಮ್ಮ ಪೂಲ್‌ನಲ್ಲಿ ಇರುವ ಇತರ 3 ತಂಡಗಳ ಜತೆ ಪ್ರತಿಯೊಂದು ತಂಡ ಮೊದಲ ಹಂತದಲ್ಲಿ ಆಡಬೇಕಾಗುತ್ತದೆ. ಮೊದಲ ಹಂತದ ಫಲಿತಾಂಶಗಳ ಆಧಾರದ ಮೇಲೆ ಇ-ಎಚ್ ವರೆಗೆ ಗುಂಪನ್ನು ಮರುಹೊಂದಾಣಿಕೆ ಮಾಡಲಾಗುತ್ತದೆ. ಆ ಹಂತದಲ್ಲಿ ಪ್ರತೀ ತಂಡವೂ ಇನ್ನೂ 3 ಪಂದ್ಯಗಳನ್ನು ಆಡಬೇಕಾಗುತ್ತದೆ. ಬಳಿಕ ಇ ಮತ್ತು ಎಫ್ ಗುಂಪಿನ ತಲಾ 2 ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಪುರುಷರ ಭಾರತ ತಂಡ: ಹರ್ಮನ್ ಪ್ರೀತ್ ಸಿಂಗ್ ನಾಯಕತ್ವದ ಭಾರತ ಪುರುಷರ ತಂಡ ಈ ಬಾರಿ ವಿಶ್ವಕಪ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. 20 ಮಂದಿ ಆಟಗಾರರು ಈ ಸಲದ ತಂಡದಲ್ಲಿ ಅವಕಾಶ ಪಡೆದಿದ್ದು ಗೋಲ್ ಕೀಪರ್‌ಗಳಾಗಿ ಸೂರಜ್ ಕರ್ಕೇರ, ಮೋಹಿತ್ ಎಚ್.ಎಸ್, ಡಿಫೆಂಡರ್‌ ಗಳಾಗಿ ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್ ದೀಪ್ ಸಿವಾಕ್ ಮತ್ತು ಮಿಡ್ ಫೀಲ್ಡರ್ ಆಟಗಾರರಾಗಿ ರಾಜಿಂದರ್ ಸಿಂಗ್, ಆದಿತ್ಯ ಅರ್ಜುನ್ ಲಲಾಗೆ, ಹಾರ್ದಿಕ್ ಸಿಂಗ್, ಮನ್ ಪ್ರೀತ್ ಸಿಂಗ್. ನೀಲಕಂಠ ಶರ್ಮ, ವಿವೇಕ್ ನಾಗರ್ ಪ್ರಸಾದ್ ಇದ್ದರೆ, ಫಾರ್ವರ್ಡ್ ಆಟಗಾರರಾಗಿ ದಿಲ್‌ಪ್ರೀತ್ ಸಿಂಗ್, ಶಿಲಾನಂದ ಲಾಕ್ರಾ, ಸುಖಜೀತ್ ಸಿಂಗ್, ಮನ್‌ದೀಪ್ ಸಿಂಗ್, ಅಭಿಷೇಕ್ ಇದ್ದಾರೆ.

ತಂಡದಲ್ಲಿ ಕೊಡಗಿನ ಕುವರ: ವಿಶ್ವಕಪ್‌ನ ಪುರುಷರ ತಂಡದಲ್ಲಿ ಈ ಸಲ ಕೊಡಗಿನ ಕೂಡಿಗೆ ಕ್ರೀಡಾಶಾಲೆಯ ಮೋಹಿತ್ ಹೆಚ್.ಎಸ್ ಅವರು ಭಾರತ ತಂಡದ ಗೋಲ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಈ ಬಾರಿಯ ವಿಶ್ವಕಪ್ ತಂಡದಲ್ಲಿರುವ ರಾಜ್ಯದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಯೂ ಅವರಿಗೆ ಸಲ್ಲುತ್ತದೆ. 24 ವರ್ಷದ ಮೋಹಿತ್ 2015ರಲ್ಲಿ ಕೂಡಿಗೆ ಕ್ರೀಡಾಶಾಲೆಗೆ ಸೇರ್ಪಡೆ ಯಾಗಿದ್ದರು. 2018ರವರೆಗೆ ಅಲ್ಲಿನ ಹಾಕಿ ತರಬೇತುದಾರ ಸಂಜಯ್ ಬಾಣದ ಅವರಿಂದ ತರಬೇತಿ ಪಡೆದವರು.

ಆರೆಂಜ್ ಜರ್ಸಿಯಲ್ಲಿ ಭಾರತ: ‘ಮೆನ್ ಇನ್ ಬ್ಲೂ' ಎಂದೇ ಕರೆಯಲ್ಪಡುವ ಭಾರತೀಯ ಹಾಕಿ ತಂಡ, ಮೈದಾನಕ್ಕಿಳಿದರೆ ನೀಲಿ ಜರ್ಸಿಯಲ್ಲಿ ಮಿಂಚುವುದನ್ನು ನೋಡಿ ಅಭಿಮಾನಿಗಳಿಗೆ ಅಭ್ಯಾಸ ವಾಗಿ ಹೋಗಿದೆ. ಆದರೆ ಈ ಸಲದ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಆಟಗಾರರು 'ಕಿತ್ತಳೆ' (ಆರೆಂಜ್) ಬಣ್ಣದ ಜರ್ಸಿಯಲ್ಲಿ ಮಿಂಚಲಿದ್ದಾರೆ.

ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ಲೂ ಟರ್ಫ್ (ನೀಲಿ ಬಣ್ಣದ ಮೈದಾನ) ಬಳಸ ಲಾಗುತ್ತದೆ. ಆಟಗಾರರು ಧರಿಸುವ ಸಾಕ್ಸ್ ಹಾಗೂ ಜರ್ಸಿ ಎರಡೂ ನೀಲಿ ಬಣ್ಣದ್ದಾಗಿದ್ದಾಗ, ಮೈದಾನದ ಬಣ್ಣದೊಂದಿಗೆ ಜರ್ಸಿ ಬಣ್ಣ ಒಂದಕ್ಕೊಂದು ಮಿಶ್ರಣವಾಗುತ್ತಿತ್ತು, ಇದರಿಂದ ಆಟಗಾರರಿಗೆ ಸಹ-ಆಟಗಾರರನ್ನು ಗುರುತಿಸಲು ಮತ್ತು ಚೆಂಡನ್ನು ಪಾಸ್ ಮಾಡಲು ಮೈದಾನ ದಲ್ಲಿ ತೊಂದರೆಯಾಗಿ ಪ್ರದರ್ಶನದ ಮೇಲೆಯೂ ಪರಿಣಾಮ ಬೀರುತ್ತಿತ್ತು. ಹಾಗಾಗಿಯೇ ಬಣ್ಣ ಬದಲಾಯಿಸಬೇಕಾಯಿತು’ ಎಂದು ಹಾಕಿ ಫೆಡರೇಶನ್ ಈ ಕುರಿತಾಗಿ ಸ್ಪಷ್ಟಪಡಿಸಿದೆ.

ಮಹಿಳಾ ವಿಶ್ವಕಪ್ ಹಾಕಿ ಹಿನ್ನೋಟ: ಈ ಬಾರಿ ನಡೆಯುತ್ತಿರುವುದು 16ನೇ ಮಹಿಳಾ ಹಾಕಿ ವಿಶ್ವಕಪ್. 1974ರಲ್ಲಿ ಮೊದಲ ಬಾರಿ ಮಹಿಳಾ ಟೂರ್ನಿ ಆರಂಭವಾಯಿತು. ಭಾರತ ಮಹಿಳಾ ತಂಡವು ಈ ವರೆಗೆ ಒಟ್ಟು6 ಬಾರಿ ಸ್ಪರ್ಧಾ ಕಣಕ್ಕಿಳಿದಿದೆ. ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ 4ನೇ ಸ್ಥಾನ, 1978ರಲ್ಲಿ 7ನೇ ಸ್ಥಾನ, 1983ರಲ್ಲಿ 11ನೇ ಸ್ಥಾನ, 1998ರಲ್ಲಿ 12ನೇ ಸ್ಥಾನ, 2006ರಲ್ಲಿ 11ನೇ ಸ್ಥಾನ, 2010ರಲ್ಲಿ 6ನೇ ಸ್ಥಾನ, 2018ರಲ್ಲಿ 8ನೇ ಮತ್ತು 2022ರಲ್ಲಿ 9ನೇ ಸ್ಥಾನ ಪಡೆಯಲು ಸಾಧ್ಯ ವಾಗಿದೆ.

ವಿಶ್ವಕಪ್‌ಗೆ ಭಾರತ ಮಹಿಳಾ ತಂಡ: ಸಲಿಮಾ ಟೆಟೆ ನಾಯಕತ್ವದ ಭಾರತ ಮಹಿಳಾ ತಂಡವು ಈ ಬಾರಿ ಹಾಕಿ ವಿಶ್ವಕಪ್‌ನಲ್ಲಿ ಸೆಣಸಾಡಲು ಸಿದ್ಧವಾಗಿದೆ. ತಂಡದಲ್ಲಿ ಗೋಲ್‌ಕೀಪರ್‌ಗಳಾಗಿ ಸವಿತಾ, ಬಿಚು ದೇವಿ ಖರಿಬಮ್, ಡಿಫೆಂಡರ್‌ಗಳಾಗಿ ಇಶಿಕಾ ಚೌಧರಿ, ಸುಶೀಲಾ ಚಾನು ಪುಖ್ರಂಬಮ್, ಲಾಲ್ತಾಂತ್ಲುವಾಗಿ, ಜ್ಯೋತಿ, ಶಿಲ್ಪಿ ದಾಬಾಸ್, ಮಿಡ್‌ಫೀಲ್ಡರ್‌ಗಳಾಗಿ ನಿಕ್ಕಿ ಪ್ರಧಾನ್, ಸಾಕ್ಷಿ ರಾಣಾ, ಸುನೆಲಿತಾ ಟೊಪ್ಪೊ, ನೇಹಾ, ದೀಪಿಕಾ ಸೊರೆಂಗ್ ಮತ್ತು ಫಾರ್ವರ್ಡ್ಗಳಾಗಿ ಲಾಲ್ರೆಮ್ಸಿಯಾಮಿ, ರುತುಜಾ ದಾದಾಸೊ ಪಿಸಲ್, ನವನೀತ್ ಕೌರ್, ದೀಪಿಕಾ, ಇಶಿಕಾ, ಬಲ್ಜೀತ್ ಕೌರ್, ಬ್ಯೂಟಿ ಡಂಗ್‌ಡಂಗ್ ಸ್ಥಾನ ಪಡೆದಿದ್ದಾರೆ.-

2026-ಪುರುಷರ ವಿಶ್ವಕಪ್ ತಂಡಗಳು

ಪೂಲ್ ಎ: ನೆದರ್ಲೆಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್

ಪೂಲ್ ಬಿ: ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಮಲೇಷ್ಯಾ

ಪೂಲ್ ಸಿ: ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್, ದ. ಆಫ್ರಿಕಾ

ಪೂಲ್ ಡಿ: ಇಂಗ್ಲೆಂಡ್, ಭಾರತ, ಪಾಕಿಸ್ತಾನ, ವೇಲ್ಸ್

ಭಾರತದ ಪೂಲ್ ಹಂತದ ಪಂದ್ಯಗಳು

ಪುರುಷರ ತಂಡ:

ಆ.15: ಭಾರತ-ವೇಲ್ಸ್

ಆ.17: ಭಾರತ-ಇಂಗ್ಲೆAಡ್

ಆ 19: ಭಾರತ-ಪಾಕಿಸ್ತಾನ

ಮಹಿಳಾ ತಂಡ:

ಆ.16: ಭಾರತ-ಚೀನಾ

ಆ 18: ಭಾರತ-ದ.ಆಫ್ರಿಕಾ

ಆ.20: ಭಾರತ-ಇಂಗ್ಲೆಂಡ್

ಪುರುಷರ ವಿಶ್ವಕಪ್ ಗೆದ್ದ ತಂಡಗಳು

1971-ಪಾಕಿಸ್ತಾನ

1973-ನೆದರ್ಲೆಂಡ್ಸ್

1975-ಭಾರತ

1978-ಪಾಕಿಸ್ತಾನ

1982-ಪಾಕಿಸ್ತಾನ

1986-ಆಸ್ಟ್ರೇಲಿಯಾ

1990-ನೆದರ್ಲೆಂಡ್ಸ್

1994-ಪಾಕಿಸ್ತಾನ

1998-ನೆದರ್ಲೆಂಡ್ಸ್

2002-ಜರ್ಮನಿ

2006-ಜರ್ಮನಿ

2010-ಆಸ್ಟ್ರೇಲಿಯಾ

2014-ಆಸ್ಟ್ರೇಲೊಯಾ

2018-ಬೆಲ್ಜಿಯಂ

2023-ಜರ್ಮನಿ

ಭಾರತ-ಪಾಕ್ ಮುಖಾಮುಖಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಪುರುಷರ ಹಾಕಿ ತಂಡದ ಮುಖಾಮುಖಿ ಆ.18ರಂದು ನಡೆಯ ಲಿದೆ. ಈ ವರೆಗೆ ಭಾರತವು ಕೇವಲ ಒಂದು ಸಲ ಹಾಕಿ ವಿಶ್ವಕಪ್ ಗೆದ್ದಿದ್ದರೆ, ಪಾಕಿಸ್ತಾನವು 4 ಬಾರಿ ವಿಶ್ವಕಪ್ ಗೆದ್ದಿದೆ.

ಎರಡೂ ತಂಡಗಳ ನಡುವೆ ಒಟ್ಟು 183 ಹಾಕಿ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 69 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 32 ಪಂದ್ಯಗಳು ಡ್ರಾ ಆಗಿವೆ. ಪಾಕಿಸ್ತಾನ 407 ಗೋಲುಗಳನ್ನು ಗಳಿಸಿದ್ದರೆ, ಭಾರತ 390 ಗೋಲುಗಳನ್ನು ಗಳಿಸಿದೆ. ಆದರೆ ಇದೀಗ ಭಾರತೀಯ ಹಾಕಿ ತಂಡವು ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿದ್ದು ಈ ವರ್ಷ ಭಾರತವು ಪ್ರೊ.ಲೀಗ್‌ನಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು. ಮೊದಲ ಪಂದ್ಯವನ್ನು 4-3 ಅಂತರದಿಂದ ಗೆದ್ದಿದ್ದ ಭಾರತ, ಎರಡನೇ ಪಂದ್ಯದಲ್ಲಿ 7-1 ಅಂತರದಿಂದ ಮಣಿಸಿತ್ತು.

image

ಹಾಕಿ ತಂಡದ ಯಶಸ್ಸಿಗೆ ಅನುಭವಿಗಳ ಜೊತೆಗೆ ಯುವ ಆಟಗಾರರ ಅಗತ್ಯವೂ ಇದೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್ ದೃಷ್ಟಿಯಿಂದ ಯಶ್‌ದೀಪ್ ಸಿವಾಚ್ ಹಾಗೂ ಆದಿತ್ಯ ಲಾಲ ಅವರಂತಹ ಯುವ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಪ್ರೊ. ಲೀಗ್‌ನಲ್ಲಿ ಸತತವಾಗಿ ಆಡಿರುವ ಈ ಆಟಗಾರರು ಅತ್ಯುತ್ತಮ ದೈಹಿಕ ಸಾಮರ್ಥ್ಯ ಹೊಂದಿದ್ದು, ತಂಡದ ಕಾರ್ಯತಂತ್ರಕ್ಕೆ ಹೊಸ ಆಯಾಮ ನೀಡಿದಂತಾಗಿದೆ.

-ಕ್ರೇಗ್ ಫುಲ್ಟನ್, ಭಾರತೀಯ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರ