ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kerala Election Campaign: ದೇಶದಲ್ಲಿ ‘ಇಂಡಿ’ ದೋಸ್ತಿ: ಕೇರಳಂನಲ್ಲಿ ಜಂಗೀಕುಸ್ತಿ

ಒಂದು ಕಡೆ ಕಳೆದ ಹತ್ತು ವರ್ಷಗಳಿಂದ ಕೇರನಲ್ಲಿ ಆಡಳಿತ ನಡೆಸುತ್ತಿರುವ ಎಡರಂಗ ಒಕ್ಕೂಟದ ಸರಕಾರವು ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಹ್ಯಾಟ್ರಿಕ್ ಪ್ರಯತ್ನದಲ್ಲಿದೆ. ಹಿಂದೊಮ್ಮೆ ಕೇರಳಂ ವನ್ನು ಹೊರತುಪಡಿಸಿ ಪಶ್ಚಿಮ ಬಂಗಾಳ, ತ್ರಿಪುರಾ ಸೇರಿದಂತೆ ಮೂರ‍್ನಾಲ್ಕು ರಾಜ್ಯಗಳಲ್ಲಿ ಎಡರಂಗ ಸರಕಾರದ್ದೇ ಪಾರಮ್ಯ ಇತ್ತು.

-ನರೇಂದ್ರ ಪಾರೆಕಟ್

(ಕೇರಳ ಎಲೆಕ್ಷನ್ ಸ್ಟೋರಿ)

ನಮ್ಮ ನೆರೆರಾಜ್ಯವಾಗಿರುವ ಕೇರಳಂ ಹಲವಾರು ವಿಚಾರಗಳಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿ ದ್ದು, ರಾಜಕೀಯದಲ್ಲೂ ಅದು ತನ್ನದೇ ಆದ ಛಾಪು ಮೂಡಿಸಿದೆ. ರಾಷ್ಟ್ರಮಟ್ಟದಲ್ಲಿ ಎಡಪಕ್ಷಗಳು ಕಾಂಗ್ರೆಸ್ ನಾಯಕತ್ವದ 'ಇಂಡಿ' ಒಕ್ಕೂಟದ ಭಾಗವಾಗಿದ್ದರೂ, ಕೇರಳಂನಲ್ಲಿ ಅವೆರಡೂ ಪರಸ್ಪರ ವಿರೋಧಿ ಪಕ್ಷಗಳು ಎಂಬುದು ನಿಜಕ್ಕೂ ವಿಶೇಷವಾಗಿದೆ.

ನಾಳೆ ಕೇರಳಂನಲ್ಲಿ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಅಬ್ಬರದ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ಈ ಹಿಂದೆಯೆಲ್ಲಾ ನಡೆದ ಚುನಾವಣಾ ಕಣಕ್ಕೆ ಹೋಲಿಸಿದರೆ ಈ ಸಲ ಅಲ್ಲಿ ಕಂಡುಬಂದಿರುವುದು ಭಾರೀ ಪೈಪೋಟಿ.

ಒಂದು ಕಡೆ ಕಳೆದ ಹತ್ತು ವರ್ಷಗಳಿಂದ ಕೇರನಲ್ಲಿ ಆಡಳಿತ ನಡೆಸುತ್ತಿರುವ ಎಡರಂಗ ಒಕ್ಕೂಟದ ಸರಕಾರವು ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಹ್ಯಾಟ್ರಿಕ್ ಪ್ರಯತ್ನದಲ್ಲಿದೆ. ಹಿಂದೊಮ್ಮೆ ಕೇರಳಂವನ್ನು ಹೊರತುಪಡಿಸಿ ಪಶ್ಚಿಮ ಬಂಗಾಳ, ತ್ರಿಪುರಾ ಸೇರಿದಂತೆ ಮೂರ‍್ನಾಲ್ಕು ರಾಜ್ಯಗಳಲ್ಲಿ ಎಡರಂಗ ಸರಕಾರದ್ದೇ ಪಾರಮ್ಯ ಇತ್ತು. ಆದರೆ ಇದೀಗ ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ದೇಶದ ರಾಜಕೀಯದಲ್ಲಿ ಬದಲಾವಣೆಯ ಪರ್ವ ಆರಂಭವಾದಂದಿನಿಂದ ದೇಶದಲ್ಲಿ ಕೇರಳಂ ರಾಜ್ಯವೊಂದನ್ನು ಬಿಟ್ಟರೆ ಎಡಪಕ್ಷಗಳಿಗೆ ಇದೀಗ ಬೇರೆ ರಾಜ್ಯಗಳಲ್ಲಿ ಹೇಳಿಕೊಳ್ಳುವಂತಹ ನೆಲೆ ಇಲ್ಲ, ಆಡಳಿತದ ಚುಕ್ಕಾಣಿಯೂ ಇಲ್ಲ. ಹಾಗಾಗಿ ಎಲ್‌ಡಿಎಫ್‌ಗೆ ಈ ಸಲ ಕೇರಳಂ ಚುನಾವಣೆ ಪ್ರತಿಷ್ಠೆಯ ಕಣ. ಹೇಗಾದರೂ ಏಕೈಕ ರಾಜ್ಯದಲ್ಲಾದರೂ ತನ್ನ ಅಧಿಕಾರ ಉಳಿಸುವ ತವಕ.

ಎಲ್ಲಾ ಕ್ಷೇತ್ರದಲ್ಲೂ ಎಲ್‌ಡಿಎಫ್ ಸ್ಪರ್ಧೆ: ಈ ಸಲ ಎಡರಂಗವು ತನ್ನ ಒಕ್ಕೂಟದ ಹತ್ತು ಪಕ್ಷ ಗಳೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣಾ ಕಣದಲ್ಲಿದೆ. ಒಕ್ಕೂಟದ ಪ್ರಮುಖ ಪಕ್ಷವಾಗಿರುವ ಸಿಪಿಐಎಂ ಎಂಭತ್ತು ಸ್ಥಾನದಲ್ಲಿ ಸ್ಪರ್ಧಿಸಿದ್ದು, ಸಿಪಿಐ ಇಪ್ಪತ್ತಮೂರು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಕ್ಕೂಟದ ಮೂರನೇ ದೊಡ್ಡ ಪಕ್ಷವಾದ ಕೇರಳ ಕಾಂಗ್ರೆಸ್ (ಮಾಣಿ ವಿಭಾಗ) ಹನ್ನೆರಡು ಸ್ಥಾನಗಳಲ್ಲಿ ಕಣಕ್ಕಿಳಿದಿದೆ. ಎನ್‌ಸಿಪಿ ಮತ್ತು ಆರ್‌ಜೆಡಿ ತಲಾ ಮೂರು ಸ್ಥಾನಗಳಲ್ಲಿ ಸ್ಪರ್ಧೆ ಯಲ್ಲಿದ್ದರೆ, ಉಳಿದ ಐದು ಪಕ್ಷಗಳು ತಲಾ ಒಂದು ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಪರ ಕಣಕ್ಕಿಳಿದಿವೆ. ಹದಿನಾರು ಕಡೆ ಎಲ್‌ಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಇದನ್ನೂ ಓದಿ: Kerala Election: ತಿರುವನಂತಪುರಂನಲ್ಲಿ ತ್ರಿಕೋನ ಸ್ಪರ್ಧೆ

92 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕೆ: ಮತ್ತೊಂದು ಕಡೆ ಯುಡಿಎಫ್ ತನ್ನ ಒಕ್ಕೂಟದ 7 ಪಕ್ಷ ಗಳೊಂದಿಗೆ ಈ ಸಲ ಚುನಾವಣಾ ಕಣದಲ್ಲಿದೆ. ಕಾಂಗ್ರೆಸ್ 92 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 29 ಸ್ಥಾನಗಳಲ್ಲಿ ಸ್ಪರ್ಧಿಯಲ್ಲಿದೆ. ಕೇರಳ ಕಾಂಗ್ರೆಸ್ 8, ಆರ್‌ಎಸ್‌ಪಿ 4 ಮತ್ತು ಉಳಿದ 3 ಪಕ್ಷಗಳು ತಲಾ ಒಂದು ಸ್ಥಾನದಲ್ಲಿ ಚುನಾವಣಾ ಕಣದಲ್ಲಿವೆ. 7 ಕಡೆ ಯುಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

98 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ: ಎನ್‌ಡಿಎಯ ಪ್ರಮುಖ ಪಕ್ಷವಾದ ಬಿಜೆಪಿ ಕೇರಳಂನಲ್ಲಿ ಈ ಬಾರಿ 98 ಕ್ಷೇತ್ರಗಳಲ್ಲಿ ಸ್ಪರ್ಧಾ ಕಣದಲ್ಲಿದೆ. 22 ಸ್ಥಾನಗಳನ್ನು ಅದು ತನ್ನ ಪ್ರಮುಖ ಅಂಗಪಕ್ಷವಾದ ಬಿಡಿಜೆಎಸ್‌ಗೆ ನೀಡಿದ್ದು, ಮತ್ತೊಂದು ಅಂಗಪಕ್ಷವಾದ ಟ್ವೆಂಟಿ-ಟ್ವೆಂಟಿ ಈ ಬಾರಿ ಎನ್‌ಡಿಎ ಒಕ್ಕೂಟದಲ್ಲಿ ಹದಿನಾರು ಸ್ಥಾನಗಳನ್ನು ಪಡೆದಿದ್ದು, ಒಂದು ಕ್ಷೇತ್ರದಲ್ಲಿ ಮಾತ್ರ ಎನ್‌ಡಿಎ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ.

ದೋಸ್ತಿ-ಕುಸ್ತಿ: ಯುಡಿಎಫ್ ಒಕ್ಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್, ಕೇರಳಂ ಹೊರತು ಪಡಿಸಿ ರಾಷ್ಟ್ರಮಟ್ಟದಲ್ಲಿ ಉಳಿದ ಎಲ್ಲಾ ರಾಜ್ಯಗಳಲ್ಲೂ ಇಂಡಿ ಒಕ್ಕೂಟದ ಪ್ರಮುಖ ಪಕ್ಷ. ಆ ಎಲ್ಲಾ ರಾಜ್ಯಗಳಲ್ಲೂ ಎಡಪಕ್ಷಗಳು ಇಂಡಿ ಒಕ್ಕೂಟದಲ್ಲಿದ್ದು ಕಾಂಗ್ರೆಸ್ ಜತೆ ಸೀಟು ಹೊಂದಾ ಣಿಕೆಯಲ್ಲಿಯೇ ಸ್ಪರ್ಧಿಸುತ್ತಿವೆ. ಆದರೆ ಕೇರಳಂನಲ್ಲಿ ಮಾತ್ರ ಅವೆರಡೂ ಪರಸ್ಪರ ಬದ್ಧ ವಿರೋಧಿ ಪಕ್ಷಗಳು ಎಂಬುದು ನಿಜಕ್ಕೂ ಚುನಾವಣಾ ವೈಶಿಷ್ಟ್ಯ.

ಕೇರಳಂನ 140 ಸ್ಥಾನಗಳ ಪೈಕಿ 125 ಸ್ಥಾನಗಳಲ್ಲಿ ಯುಡಿಎಫ್-ಎಲ್‌ಡಿಎಫ್ ಮಧ್ಯೆಯೇ ನೇರ ಸ್ಪರ್ಧೆ. ಹಿಂದಿನ ಚುನಾವಣೆಗಳ ಫಲಿತಾಂಶ ಗಮನಿಸಿದಾಗ ಒಂದು ವೇಳೆ ಈ ಸಲ ಬಿಜೆಪಿ ಎರಡರಿಂದ ಐದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದರೂ, ಉಳಿದ ಆರೆಂಟು ಕ್ಷೇತ್ರಗಳಲ್ಲಿ ಬಿಜೆಪಿ 2ನೇ ಸ್ಥಾನಕ್ಕಷ್ಟೇ ತೃಪ್ತಿಪಡಬೇಕಾದ ಫಲಿತಾಂಶ ಈ ಸಲ ಬಂದರೂ ಬರಬಹುದು. ಈ ಚುನಾವಣೆ ಯಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬಾರದಿದ್ದರೆ, 2031ರ ಚುನಾವಣಾ ವೇಳೆ ತಮ್ಮ ಪಕ್ಷ ನಿರ್ಣಾಯಕ ಶಕ್ತಿಯಾಗಿ ಕೇರಳಂ ರಾಜಕೀಯದಲ್ಲಿ ಭರ್ಜರಿಯಾಗಿ ನೆಲೆ ಕಾಣಬಹುದೆನ್ನುವ ನಿರೀಕ್ಷೆ ಬಿಜೆಪಿ ಯದ್ದಾಗಿದೆ. ಹಾಗಾಗಿ ಗುರುವಾರ ಕೇರಳಂ ವಿಧಾನಸಭೆಯ 140 ಸ್ಥಾನಗಳಿಗೆ ನಡೆಯುವ ಚುನಾ ವಣೆ ಪ್ರಮುಖ 3 ಒಕ್ಕೂಟಗಳಿಗೂ ನಿರ್ಣಾಯಕ ಎನಿಸಿದೆ.

19ನೇ ವಿಧಾನಸಭಾ ಚುನಾವಣೆ

ಗುರುವಾರ ಕೇರಳಂನಲ್ಲಿ ನಡೆಯುತ್ತಿರುವುದು 19ನೇ ವಿಧಾನಸಭಾ ಚುನಾವಣೆ. ಒಟ್ಟು 140 ಸ್ಥಾನ ಗಳಿಗೆ ನಡೆಯುವ ಚುನಾವಣೆಯಲ್ಲಿ 3 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸ ಲಿದ್ದಾರೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ. ಎರಡೂ ಒಕ್ಕೂಟಗಳ ನಡುವೆ ಭರ್ಜರಿ ಪೈಪೋಟಿ ಇರಬಹುದೆಂಬುದು ಚುನಾವಣಾಪೂರ್ವ ಸಮೀಕ್ಷೆಗಳ ಲೆಕ್ಕಾಚಾರ.