ಬಿಹಾರ ಗೆಲ್ಲಬೇಕೆಂದರೆ ಎನ್‌ಡಿಎ ಮೈತ್ರಿಕೂಟಕ್ಕಿಂತ ಮಹಾಘಟಬಂಧನ ಗಟ್ಟಿಯಾಗಿದೆ ಎಂಬುದನ್ನು ಮತದಾರರಿಗೆ ಮನದಟ್ಟು ಮಾಡುವ ಅಗತ್ಯವಿದೆ. ಅದಕ್ಕಾಗಿ ರಾಹುಲ್-ತೇಜಸ್ವಿ ಯಾದವ್ ಹಲವು ಜಂಟಿಸಭೆ, ರ‍್ಯಾಲಿಗಳನ್ನು ನಡೆಸಬೇಕಿತ್ತು. ಬಹುಶಃ ತಾಳ ಮೇಳದ ಕೊರತೆಯಿಂದ ಈ ಇಬ್ಬರು ನಾಯಕರೂ ಒಟ್ಟಾಗಿ ಕಾಣಿಸಿಕೊಂಡಿಲ್ಲ ಎಂಬ ಭಾವನೆ ಅನೇಕರದ್ದಾಗಿದೆ.
ಬಿಹಾರದಾದ್ಯಂತ ಪ್ರವಾಸ ಮಾಡುತ್ತಿರುವಾಗ ಅಲ್ಲಿನ ಸಿ.ಎಂ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಆರ್.ಜೆ.ಡಿ.ಯ ತೇಜಸ್ವಿ ಯಾದವ್ ಮತ್ತು ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಬಗ್ಗೆ ಜನ ಮಾತನಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಆದರೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಪ್ರಸ್ತಾಪಿಸುತ್ತಿರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳು, ಬಂಡವಾಳಶಾಹಿ, ಮತಗಳವು ಮತ್ತಿತರ ವಿಚಾರಗಳನ್ನು ಬಿಹಾರ ಜನರು ಹೆಚ್ಚು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ ಮತ್ತು ಅವರ ನಾಯಕತ್ವದ ಪ್ರಭಾ ವಲಯವೂ ಆ ಭಾಗದಲ್ಲಿ ಕಾಣುತ್ತಿಲ್ಲ.
ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಬಗ್ಗೆ ಜನ ಚರ್ಚಿಸುತ್ತಾರೆ ಮತ್ತು ಅವರು ಸಿಎಂ ಆಗಬೇಕು ಎಂದು ವಾದಿಸುವ ದೊಡ್ಡ ವರ್ಗವಿದೆ. ಆದರೆ ಇಂಥದ್ದೇ ಮಾತುಗಳು ಕಾಂಗ್ರೆಸ್ ವಿಷಯದಲ್ಲಿ ಕೇಳುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸೀಟು ಬಂದಿದ್ದರಿಂದಲೇ ಮಹಾಮೈತ್ರಿಗೆ ಅಧಿಕಾರ ಕೈತಪ್ಪಿತ್ತು.
೭೦ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ೧೯ನ್ನು ಮಾತ್ರ ಗೆದ್ದಿತ್ತು. ಈ ಬಾರಿ 61ರಲ್ಲಿ ಕೈ ಅಭ್ಯರ್ಥಿಗಳಿದ್ದು, ಬಿರುಗಾಳಿ ಎಬ್ಬಿಸುವ ಲಕ್ಷಣವಂತೂ ಇಲ್ಲ. ಆಗಸ್ಟ್ ತಿಂಗಳಲ್ಲಿ ರಾಹುಲ್ ಗಾಂಧಿ ನೇತೃತ್ವದ 16 ದಿನಗಳ ‘ಬಿಹಾರ ವೋಟ್ ಅಧಿಕಾರ ಯಾತ್ರೆ’ಗೆ ಜನ ಸೇರಿದ್ದರಲ್ಲದೆ ತಕ್ಕ ಮಟ್ಟಿಗೆ ಅದು ಹವಾ ಎಬ್ಬಿಸಿತ್ತು, ಆದರೆ ಚುನಾವಣಾ ಅಖಾಡದಲ್ಲಿ ಆ ಬಗ್ಗೆ ಚರ್ಚೆಗಳೇ ಆಗದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Bihar Election ground report by Raghav Sharma Nidle: ಬದಲಾಗದ ನತದೃಷ್ಟ ಮಾಂಜಿಗಳ ಬದುಕು
ತೇಜಸ್ವಿ ಯಾದವ್ ಯುವಕರಿಗೆ ಉದ್ಯೋಗ ಕೊಡಿಸುವ, ವಿಧವಾ ಪಿಂಚಣಿ ಏರಿಕೆಯಂತಹ ಸ್ಥಳೀಯ ವಿಷಯಗಳನ್ನು ಪ್ರಸ್ತಾಪಿಸುತ್ತಾ ಮತಸೆಳೆಯಲು ಯತ್ನಿಸುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟದಲ್ಲಿ ಒಗ್ಗಟ್ಟಿನ ಧ್ವನಿ ಇದ್ದರೆ, ಜೆಡಿಯು-ಕಾಂಗ್ರೆಸ್ ನಡುವಿನ ಅಪನಂಬಿಕೆಗಳೇ ಫಲಿತಾಂಶದ ಮೇಲೆ ಹಾನಿ ಮಾಡುತ್ತದೆಯೇನೋ ಎಂದು ಭಾಸವಾಗುತ್ತಿದೆ.
12 ಕ್ಷೇತ್ರಗಳಲ್ಲಿ ಆರ್.ಜೆ.ಡಿ-ಕಾಂಗ್ರೆಸ್ ಅಭ್ಯರ್ಥಿಗಳು ಪರಸ್ಪರ ವಿರುದ್ಧ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರಗಳಲ್ಲಿ ಮತಗಳ ವಿಭಜನೆಯಾಗುವುದು ಇಂಡಿ ಒಕ್ಕೂಟಕ್ಕೆ ಒಳ್ಳೆಯ ಲಕ್ಷಣವೇನಲ್ಲ. ಇದನ್ನು ಫ್ರೆಂಡ್ಲಿ ಫೈಟ್ ಎಂದು ವ್ಯಾಖ್ಯಾನಿಸುವುದು ವಾಸ್ತವ ಮರೆಮಾಚುವ ಯತ್ನವಷ್ಟೇ.
ಬಿಹಾರದ ವೈಶಾಲಿ ಜಿಲ್ಲೆಯ ವೈಶಾಲಿ ವಿಧಾನಸಭೆಯನ್ನೇ ತೆಗೆದುಕೊಳ್ಳಿ. ಆರ್.ಜೆ.ಡಿ. ಅಲ್ಲಿಂದ ಕುಶ್ವಾಹ ಸಮುದಾಯದ ಅಜಯ್ ಕುಶ್ವಾಹಗೆ ಟಿಕೆಟ್ ನೀಡಬೇಕೆಂದು ಉದ್ದೇಶಿಸಿತ್ತು. ಅಜಯ್ ಕುಶ್ವಾಹ ಎಲ್‌ಜೆಪಿ ತೊರೆದು ಬಂದರೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರಿಂದ ಮಾತು ಉಳಿಸಿಕೊಳ್ಳುವುದು ತೇಜಸ್ವಿಯ ಕರ್ತವ್ಯವಾಗಿತ್ತು. ಆದರೆ ಈ ವಿಷಯ ಗೊತ್ತಾಗಿ ಕಾಂಗ್ರೆಸ್ ಆಕಾಂಕ್ಷಿ, ಭೂಮಿಹಾರ್ ಸಮುದಾಯದ ಸಂಜೀವ್ ಕುಮಾರ್, ಮಹಾಘಟನಬಂಧನದ ಅಭ್ಯರ್ಥಿ ಘೋಷಣೆಗೆ ಮುನ್ನವೇ ತಾವೇ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದರು.
ತೇಜಸ್ವಿಗೆ ಪ್ರತಿಷ್ಠೆ ಪ್ರಶ್ನೆಯಾದ್ದರಿಂದ ಅಜಯ್ ಕುಶ್ವಾಹಗೆ ಸ್ಪರ್ಧೆ ಮಾಡುವಂತೆ ಸೂಚಿಸಿ, ಟಿಕೆಟ್ ಘೋಷಿಸಿದರು. ಈ ಇಬ್ಬರ ಜಗಳ ಕೊನೆಗೆ ಎನ್‌ಡಿಎಗೆ ಲಾಭ ಮಾಡಿದರೂ ಅಚ್ಚರಿ ಇಲ್ಲ. ಇಂಥದ್ದೇ ಪರಿಸ್ಥಿತಿ ಡಜನ್‌ಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿದೆ.
ಅ.28ರಂದು ಇಂಡಿ ಒಕ್ಕೂಟ ತನ್ನ ಚುನಾವಣಾ ಪ್ರಣಾಳಿಕೆಯನ್ನು ಪಟನಾದಲ್ಲಿ ಬಿಡುಗಡೆ ಗೊಳಿಸಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರ ಚುನಾವಣಾ ಉಸ್ತುವಾರಿ ಕೃಷ್ಣ ಅಲ್ಲವರು ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಕಾಣಿಸಿಕೊಳ್ಳ ಲಿಲ್ಲ.
ಇದು ಮಹಾಮೈತ್ರಿಯ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸಿತು. ಇಂಡಿ ಒಕ್ಕೂಟದ ಒಗ್ಗಟ್ಟಿಗೆ ಮತ್ತು ಜನರ ಮುಂದೆ ತಾವು ಪ್ರಸ್ತಾಪಿಸುವ ವಿಚಾರಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಅವರ ಹಾಜರಾತಿ ಅಗತ್ಯವಿತ್ತು, ಆದರೆ ಹಾಗಾಗಲಿಲ್ಲ.
ಇಂಡಿ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್.ಜೆ.ಡಿ.ಯ ತೇಜಸ್ವಿ ಯಾದವ್‌ರನ್ನು ಅಧಿಕೃತವಾಗಿ ಘೋಷಿಸಿದರೂ, ರಾಹುಲ್ ಗಾಂಧಿ ಮಾತ್ರ ‘ತೇಜಸ್ವಿ ಬಿಹಾರದ ನಾಯಕ ಆಗಲಿ ದ್ದಾರೆ. ಅವರನ್ನು ಗೆಲ್ಲಿಸಲು ಮತ್ತು ವರ್ಚಸ್ವೀ ನಾಯಕತ್ವ ರಾಜ್ಯಕ್ಕೆ ಸಿಗಲು ನೀವು ಮಹಾಘಟ ಬಂಧನಕ್ಕೆ ಮತ ನೀಡಬೇಕು ಎಂದು ತಮ್ಮ ಜನಸಭೆಗಳಲ್ಲಿ ಏಕೆ ಹೇಳುತ್ತಿಲ್ಲ?’ ಎಂಬ ಚರ್ಚೆಗಳು ಸಹಜವಾಗಿಯೇ ಆರ್.ಜೆ.ಡಿ. ಕ್ಯಾಂಪ್ ಗಳಲ್ಲಿ ನಡೆಯುತ್ತಿವೆ.
ವೋಟ್ ಚೋರಿ ಯಾತ್ರೆ ನಡೆಸಿದ್ದಾಗ ತೇಜಸ್ವಿ ಯಾದವರು ರಾಹುಲ್ ಗಾಂಧಿ ತಮ್ಮ ಭಡೇ ಭಾಯ್ ಎಂದು ಹೇಳಿದ್ದರು. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಪೋಸ್ಟರ್‌ಗಳೇ ಕಾಣಿಸಿ ಕೊಂಡಿದ್ದವು. ಯಾತ್ರೆಗೆ ಸಹಕಾರ ನೀಡುತ್ತಿರುವ ಆರ್.ಜೆ.ಡಿ ಅಥವಾ ತೇಜಸ್ವಿಯವರ ಒಂದೇ ಒಂದು ಪೋಸ್ಟರ್ ಇರಲಿಲ್ಲ, ಅಂದರೆ ಇದು ಕೇವಲ ರಾಹುಲ್ ನಾಯಕತ್ವ ಪ್ರೊಜೆಕ್ಟ್ ಮಾಡುವ ಯಾತ್ರೆಯೆ? ನಮ್ಮ ಅಸ್ತಿತ್ವಕ್ಕೆ ಯಾವುದೇ ಬೆಲೆ ಇಲ್ಲವೇ ಎಂದು ತೇಜಸ್ವಿಗೆ ಅನಿಸಿತ್ತು.
ಇಂಥಾ ಚರ್ಚೆಗಳು ಆರ್.ಜೆ.ಡಿ ವಲಯದಲ್ಲೇ ಕೇಳಿಸುತ್ತಿವೆ. ಬಿಹಾರ ಗೆಲ್ಲಬೇಕೆಂದರೆ ಎನ್‌ಡಿಎ ಮೈತ್ರಿಕೂಟಕ್ಕಿಂತ ಮಹಾಘಟಬಂಧನ ಮಜಬೂತಾಗಿದೆ ಎಂಬುದನ್ನು ಮತದಾರರಿಗೆ ಮನದಟ್ಟು ಮಾಡುವ ಅಗತ್ಯವಿದೆ. ಇದಕ್ಕಾಗಿ ರಾಹುಲ್-ತೇಜಸ್ವಿ ಯಾದವ್ ಹಲವು ಜಂಟಿ ಜನಸಭೆ, ರ್ಯಾಲಿ ಗಳನ್ನು ನಡೆಸಬೇಕಿತ್ತು.
ಬಹುಶಃ ತಾಳಮೇಳದ ಕೊರತೆಯಿಂದ ಈ ಇಬ್ಬರು ನಾಯಕರು ಒಟ್ಟಾಗಿ ಕಾಣಿಸಿಕೊಂಡಿಲ್ಲ ಎಂಬ ಭಾವನೆ ಅನೇಕರದ್ದಾಗಿದೆ. ಬಿಹಾರದಲ್ಲಿ ತನ್ನ ಪ್ರಭಾವಲಯ ವಿಸ್ತರಣೆಯಾಗಬೇಕೇ ವಿನಃ ರಾಹುಲ್ ಗಾಂಧಿಯದ್ದಲ್ಲ, ಹೀಗಾಗಿ ಚುನಾವಣೆ ಪ್ರಚಾರದಲ್ಲಿ ತಾನು ಹೆಚ್ಚು ಕಾಣಿಸಿಕೊಳ್ಳಬೇಕು ಮತ್ತು ತನ್ನ ನಾಯಕತ್ವಕ್ಕೆ ಜನ ಮತ ಹಾಕಿದ್ದಾರೆ ಎಂಬ ಸಂದೇಶ ರವಾನಿಸುವುದೂ ತೇಜಸ್ವಿ ಮನಸ್ಸಿನೊಳಗಿದ್ದಂತಿದೆ. ಅದಕ್ಕಾಗಿ ರಾಹುಲ್‌ರನ್ನು ಕಡೆಗಣಿಸಿರುವ ಸಾಧ್ಯತೆಗಳಿವೆ.
ಅದೇ ರೀತಿ ರಾಹುಲ್ ಗಾಂಧಿ ಕೂಡ ‘ತೇಜಸ್ವಿ ಯಾದವ್‌ರ ಬಗ್ಗೆ ಹೆಚ್ಚು ಗಮನ ಕೊಡದೆ, ಕಾಂಗ್ರೆಸ್ ಮತ್ತು ಪಕ್ಷದ ವಿಚಾರಗಳನ್ನು ಮುಂದೆ ಮಾಡಿ ಮತ ಕೇಳಿ.. ಆರ್.ಜೆ.ಡಿ.ಯನ್ನೇ ಅವಲಂಬಿಸಿ, ಅವರಿಂದ ನಾವು ಎಂಬಂತೆ ತೋರಿಸಿಕೊಳ್ಳಬೇಡಿ’ ಎಂದು ಸ್ಪಷ್ಟವಾಗಿ ಪಕ್ಷದ ಕೇಡರ್‌ಗೆ ತಿಳಿಸಿ ದ್ದಾರೆನ್ನಲಾಗಿದೆ.
೬ ತಿಂಗಳ ಹಿಂದೆ ಬಿಹಾರ ಕಾಂಗ್ರೆಸ್ ಅಖಿಲೇಶ್ ಪ್ರತಾಪ್ ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ರಾಜೇಶ್ ಕುಮಾರ್‌ರನ್ನು ಪ್ರದೇಶ ಅಧ್ಯಕ್ಷ ಮಾಡಿದ್ದೂ ಇದೇ ಕಾರಣಕ್ಕೆ. ಅಖಿಲೇಶ್, ಪ್ರತಾಪ್ ಆರ್.ಜೆ.ಡಿ.ಗೆ ಹತ್ತಿರವಾಗುತ್ತಿದ್ದಾರೆ ಮತ್ತು ಲಾಲೂ ಪ್ರಸಾದ್ ಯಾದವ್‌ರನ್ನು ನೆಚ್ಚಿಕೊಂಡು ಪಕ್ಷ ನಡೆಸುತ್ತಿದ್ದಾರೆ ಎಂಬ ದೂರುಗಳು ದಿಲ್ಲಿಗೆ ತಲುಪಿದ್ದವು.
ಸೀಟು ಹಂಚಿಕೆ ವಿಷಯದಲ್ಲಿ ಸ್ಥಳೀಯ ಕಾರ್ಯಕರ್ತರು ದಿಲ್ಲಿಯಿಂದ ಬಂದವರೊಂದಿಗೆ ಗಲಾಟೆ ಎಬ್ಬಿಸಿದ್ದಕ್ಕೆ ಈ ಆಂತರಿಕ ಬಿಕ್ಕಟ್ಟುಗಳೇ ಕಾರಣ ಎಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಾರೆ. ಈ ನಡುವೆ ಆಗಸ್ಟ್ ತಿಂಗಳ ವೋಟ್ ಚೋರಿ ಯಾತ್ರೆ ಮುಗಿದು, ಚುನಾವಣೆ ಹೊಸ್ತಿಲಲ್ಲಿದ್ದರೂ ಸುಮಾರು 55 ದಿನ ರಾಹುಲ್ ಗಾಂಧಿ ಬಿಹಾರ ಕಡೆ ಮುಖ ಮಾಡಲಿಲ್ಲ.
ಪ್ರಚಾರ ಆರಂಭಗೊಂಡ ಹಲವು ದಿನಗಳ ಬಳಿಕ ಬಿಹಾರಕ್ಕೆ ಬಂದರು. ಈ 55 ದಿನಗಳ ಗೈರು ಯಾಕೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಕಲ್ಪನೆಗೆ ಮೀರಿದ್ದು ಎಂದು ಪಕ್ಷದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್-ಆರ್.ಜೆ.ಡಿ. ನಡುವಿನ ಆಂತರಿಕ ಬಿಕ್ಕಟ್ಟು, ಟಿಕೆಟ್ ಹಂಚಿಕೆ ಗಲಾಟೆಗಳಿಂದಾಗಿ ಆಗಸ್ಟ್‌ನಲ್ಲಿ ಹವಾ ಎಬ್ಬಿಸಿದ್ದ ವೋಟ್ ಚೋರಿ ಯಾತ್ರೆಯ ಪ್ರಭಾವಳಿ ಅಕ್ಟೋಬರ್ ವೇಳೆ ಮರೆಯಾಗಿ ಹೋಗಿತ್ತು..!
ಕನ್ಹಯ್ಯಗೆ ಭಯವಿತ್ತೇ?
ಬಿಹಾರದ ಬೇಗುಸರಾಯ್ ಮೂಲದ ಭೂಮಿ ಹಾರ್ ಸಮುದಾಯದ ಕನ್ಹಯ್ಯ ಕುಮಾರ್ ವಿಧಾನಸಭೆ ಚುನಾವಣೆ ಸ್ಪರ್ಧೆಯಿಂದ ದೂರ ಉಳಿಯಲು ಅವರಿಗೆ ಭವಿಷ್ಯದ ಬಗೆಗಿನ ಭಯವೇ ಕಾರಣ ಎಂಬ ಮಾತುಗಳಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕನ್ಹಯ್ಯ ಕುಮಾರ್, 2024ರ ದಿಲ್ಲಿ ವಿಧಾನಸಭೆ ಚುನಾವಣೆ ಯಲ್ಲಿ ಕೂಡ ಸೋಲನುಭವಿಸಿದರು.
ಬಿಹಾರ ರಾಜ್ಯ ಕಾಂಗ್ರೆಸ್‌ನಲ್ಲಿ ಅಡ್ಡಗಾಲು ಹಾಕುವ ಮಂದಿ ಅನೇಕರು ಇರುವಾಗ ಮತ್ತೆ ಚುನಾವಣೆ ಸ್ಪರ್ಧಿಸಿದರೆ, ನಮ್ಮವರೇ ಸೋಲಿಸುವ ಕೆಲಸ ಮಾಡುತ್ತಾರೆ. ಮೂರು ಬಾರಿ ಚುನಾವಣೆ ಸೋತರೆ ಅದನ್ನೇ ನರೇಟಿವ್ ಮಾಡಿ, ರಾಜಕೀಯ ಭವಿಷ್ಯ ಹಾಳು ಮಾಡುತ್ತಾರೆ ಎಂಬ ಆತಂಕ ಅವರದ್ದಾಗಿತ್ತು ಎಂಬ ಮಾತುಗಳಿವೆ.
ತೇಜಸ್ವಿ ಯಾದವ್ ಕೂಡ ಕನ್ಹಯ್ಯ ಸೋಲನ್ನೇ ಬಯಸುತ್ತಾರೆ ಎನ್ನುವುದು ಕಾಂಗ್ರೆಸ್ ಒಳಗಿನ ಚರ್ಚೆ. ಕೆಲ ದಿನಗಳ ಹಿಂದೆ ಬಿಹಾರ ಚುನಾವಣೆಯಲ್ಲೇಕೆ ಸ್ಪರ್ಧಿಸುತ್ತಿಲ್ಲ ಎಂಬ ಪ್ರಶ್ನೆಗೆ ಕನ್ಹಯ್ಯ ಅವರು, ‘ಪಾರ್ಟಿ ಹೇಳಿದರೆ ಅಂಡಮಾನ್‌ನಲ್ಲೂ ಸ್ಪರ್ಧೆ ಮಾಡುವೆ’ ಎಂದಿದ್ದರು.
ಸಹಾನಿ ಪಲ್ಟಿ ಹೊಡೆದರೆ..?!
ಮಹಾಘಟಬಂಧನ ಮಿತ್ರಪಕ್ಷ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿಯ ನಾಯಕ ಮಲ್ಹಾ (ಬೆಸ್ತ) ಸಮುದಾಯದ ಮುಖೇಶ್ ಸಹಾನಿ ಹಿಂದೆ ಎನ್ ಡಿಎ ಮೈತ್ರಿಕೂಟದಲ್ಲಿದ್ದವರು, ಈ ಬಾರಿ ಇಂಡಿ ಒಕ್ಕೂಟದಲ್ಲಿದ್ದಾರೆ. ಇವರು ಯಾವಾಗ ಯಾವ ಬಣಕ್ಕೂ ಹಾರಬಲ್ಲರು. ಹೀಗಾಗಿ ಚುನಾವ ಣೋತ್ತರ ಸನ್ನಿವೇಶದಲ್ಲಿ ಮುಖೇಶ್ ಸಹಾನಿ ಎಲ್ಲಿರುತ್ತಾರೆ ಎಂದು ಈಗ ಊಹಿಸಲು ಸಾಧ್ಯವೇ ಇಲ್ಲ.
ಮುಖೇಶ್ ಸಹಾನಿ ಮೈತ್ರಿಕೂಟದ ಡಿಸಿಎಂ ಅಭ್ಯರ್ಥಿ ಎಂದು ಘೋಷಿಸಿ, ನಂತರ ನಾಮಪತ್ರ ಸಲ್ಲಿಕೆಯ ಒಂದು ದಿನಕ್ಕೆ ಮುನ್ನ ಸಹಾನಿಗೆ ಬಿಜೆಪಿ ನಾಯಕರೊಬ್ಬರಿಂದ ಕರೆ ಬಂದು ಅವರ ಮಾತು, ಭರವಸೆಗಳಿಂದ ಸಂತುಷ್ಟರಾಗಿ, ಪಕ್ಷೇತರ ಸ್ಪರ್ಧೆಗೂ ಒಪ್ಪಿಗೆ ಸೂಚಿಸಿದ್ದರಂತೆ.
ಇದಕ್ಕಾಗಿ ಮಾರನೇ ದಿನವೇ ಪಟ್ನಾದ ಮೌರ್ಯ ಹೊಟೇಲ್‌ನಲ್ಲಿ ೧೨ ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದ ಮುಖೇಶ್ ಸಹಾನಿಗೆ, ತಕ್ಷಣವೇ ತೇಜಸ್ವಿ ಯಾದವ್ ಕರೆ ಮಾಡಿ, ಮೈತ್ರಿಕೂಟ ಬಿಡದಂತೆ ಮನದಟ್ಟು ಮಾಡಿದ್ದರು. ಹಾಗಾಗಿ ಪತ್ರಿಕಾಗೋಷ್ಠಿ ಸಂಜೆ ೪ ಗಂಟೆಗೆ ಮುಂದೂಡಲಾಯಿತು.
ಸಹಾನಿ ನಿರಂತರ ದೂರವಾಣಿಯಲ್ಲಿ ಕರೆಯಲ್ಲಿದ್ದರು. ಕೊನೆಗೆ ಲಾಲೂ ಪ್ರಸಾದ್ ಯಾದವ್ ಕಡೆಯಿಂದ ಫೋನ್ ಬಂತು ಮತ್ತು ಅವರ ಎಚ್ಚರಿಕೆಗೆ ಸಹಾನಿ ತಣ್ಣಗಾದರು ಎನ್ನುವುದು ಆರ್.ಜೆ.ಡಿ. ಮೂಲಗಳಿಂದ ಬಂದ ಮಾಹಿತಿ.