ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

ನಗರದ ಶಿಕ್ಷಣ ಸಂಸ್ಥೆಗಳ ಆಸುಪಾಸು ಮತ್ತು ದರ್ಗಾ ಆವರಣದ ಸಣ್ಣಪುಟ್ಟ ಅಂಗಡಿಗಳ ಮರೆಯಲ್ಲಿ ಈ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೊಂದು ಇ-ಸಿಗರೇಟ್ ಸಾಧನಕ್ಕೆ ಸರಿಸುಮಾರು 3000 ದಿಂದ 3500 ರುಪಾಯಿ ವರೆಗೆ ಬೆಲೆ ನಿಗದಿ ಪಡಿಸ ಲಾಗುತ್ತಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳೇ ಈ ಜಾಲದ ಪ್ರಮುಖ ಗುರಿಯಾಗಿದ್ದಾರೆ.

ದೇವೇಂದ್ರ ಜಾಡಿ ಕಲಬುರಗಿ

ದರ್ಗಾ ಸುತ್ತಮುತ್ತ ರಹಸ್ಯವಾಗಿ ಮಾರಾಟದ ಶಂಕೆ

ವಿದ್ಯಾರ್ಥಿಗಳು, ಯುವಕರೇ ದಂಧೆಕೋರರ ಟಾರ್ಗೆಟ್

ದೇಶಾದ್ಯಂತ ಸಂಚಲನ ಮೂಡಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ಅವರ ಇ-ಸಿಗರೇಟ್ (ವೇಪಿಂಗ್) ವಿಡಿಯೊ ವೈರಲ್ ಬೆನ್ನಲ್ಲೇ, ಈಗ ಅಂತಹದ್ದೇ ಒಂದು ಕರಾಳ ಜಾಲದ ನೆರಳು ಕಲಬುರಗಿಯ ಮೇಲೂ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ.

ನಗರದ ಪ್ರಮುಖ ಐತಿಹಾಸಿಕ ಕೇಂದ್ರವಾದ ಹಜ್ರತ್ ಖ್ವಾಜಾ ಬಂದಾನವಾಜ್ ದರ್ಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಿತ ಇ-ಸಿಗರೇಟ್ಗಳು ಅಕ್ರಮವಾಗಿ ಮಾರಾಟವಾಗು ತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ವಿದ್ಯಾರ್ಥಿಗಳೇ ಟಾರ್ಗೆಟ್?

ನಗರದ ಶಿಕ್ಷಣ ಸಂಸ್ಥೆಗಳ ಆಸುಪಾಸು ಮತ್ತು ದರ್ಗಾ ಆವರಣದ ಸಣ್ಣಪುಟ್ಟ ಅಂಗಡಿಗಳ ಮರೆಯಲ್ಲಿ ಈ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೊಂದು ಇ-ಸಿಗರೇಟ್ ಸಾಧನಕ್ಕೆ ಸರಿಸುಮಾರು 3000 ದಿಂದ 3500 ರುಪಾಯಿ ವರೆಗೆ ಬೆಲೆ ನಿಗದಿ ಪಡಿಸಲಾಗುತ್ತಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳೇ ಈ ಜಾಲದ ಪ್ರಮುಖ ಗುರಿಯಾಗಿದ್ದಾರೆ. ಕಣ್ಣಿಗೆ ಕಾಣದಂತೆ, ಕದ್ದುಮುಚ್ಚಿ ನಡೆಯುವ ಈ ವ್ಯಾಪಾರ ಸದ್ದಿಲ್ಲದೆ ನಗರದ ಯುವ ಪೀಳಿಗೆಯನ್ನು ವ್ಯಸನದ ಕೂಪಕ್ಕೆ ತಳ್ಳುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಇದನ್ನೂ ಓದಿ:

ಸರಕಾರದ ನಿಷೇಧಕ್ಕೂ ಡೋಂಟ್ ಕೇರ್!: ಭಾರತ ಸರಕರವು 2019ರಲ್ಲೇ ಇ-ಸಿಗರೇಟ್‌ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಷ್ಟಿದ್ದರೂ ಕಲಬುರಗಿಯಂತಹ ನಗರದಲ್ಲಿ ಇಷ್ಟು ದುಬಾರಿ ಬೆಲೆಯ ಸಾಧನೆಗಳು ಹೇಗೆ ಲಭ್ಯ ವಾಗುತ್ತಿವೆ? ಇದರ ಹಿಂದೆ ಯಾವುದಾದರೂ ದೊಡ್ಡ ಅಂತರರಾಜ್ಯ ಜಾಲ ಕೆಲಸ ಮಾಡುತ್ತಿದೆಯೇ? ಎಂಬ ಪ್ರಶ್ನೆಗಳು ಈಗ ಎದ್ದಿವೆ. ರಿಯಾನ್ ಪರಾಗ್ ಅವರ ವಿಡಿಯೊ ಚರ್ಚೆಯಾದ ಬೆನ್ನಲ್ಲೇ ಸ್ಥಳೀಯವಾಗಿಯೂ ಇದರ ಬಗ್ಗೆ ಆತಂಕ ಹೆಚ್ಚಾಗಿದೆ.

ಪೊಲೀಸ್ ಇಲಾಖೆಯ ಗಮನಕ್ಕೆ ಇದೆಯೇ?: ದರ್ಗಾ ಸುತ್ತಮುತ್ತಲಿನ ಸಂಕೀರ್ಣ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆಯೇ ಅಥವಾ ಅಧಿಕಾರಿಗಳ ಕಣ್ಣು ತಪ್ಪಿಸಿ ಈ ದಂಧೆ ನಡೆಯುತ್ತಿದೆಯೇ ಎಂಬುದು ನಿಗೂಢವಾಗಿದೆ. 622ನೇ ಉರ್ಸ್ ಶರೀಫ್ ಹಿನ್ನೆಲೆಯಲ್ಲಿ ಈಗಾಗಲೇ ಭದ್ರತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ, ಇಂತಹ ಅಕ್ರಮ ವ್ಯಸನಕಾರಿ ವಸ್ತುಗಳ ಮಾರಾಟದ ಮೇಲೆ ನಿಗಾ ಇಡುವುದು ಅತ್ಯಗತ್ಯವಾಗಿದೆ.‌

ಶ್ವಾಸಕೋಶ ಸಂಬಂಧಿ ಖಾಯಿಲೆ: ಇ-ಸಿಗರೇಟ್ ಅಥವಾ ವೇಪಿಂಗ್ ಕೇವಲ ಫ್ಯಾಷನ್ ಅಲ್ಲ, ಅದು ಆರೋಗ್ಯಕ್ಕೆ ಮಾರಕ. ಇದರಲ್ಲಿರುವ ನಿಕೋಟಿನ್ ಮೆದುಳಿನ ಬೆಳವಣಿಗೆ ಕುಂಠಿತಗೊಳಿಸುವುದಲ್ಲದೆ, ಏಕಾಗ್ರತೆಯನ್ನು ನಾಶಪಡಿಸುತ್ತದೆ. ಸುಗಂಧಿತ ಹಬೆಯ ಹೆಸರಿನಲ್ಲಿ ಶ್ವಾಸಕೋಶಕ್ಕೆ ಸೇರುವ ವಿಷಕಾರಿ ರಾಸಾಯನಿಕಗಳು ಪಾಪ್‌ಕಾರ್ನ್ ಲಂಗ್ಸ್ ಎಂಬ ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ.

ಸಾಮಾನ್ಯ ಸಿಗರೇಟ್‌ಗಿಂತ ಸುರಕ್ಷಿತ ಎಂಬ ತಪ್ಪು ಕಲ್ಪನೆಯಿಂದ ಯುವಕರು ಈ ವ್ಯಸನಕ್ಕೆ ಬಲಿಯಾಗುತ್ತಿದ್ದು, ಅಲ್ಪವಯಸ್ಸಿನಲ್ಲೇ ಹೃದಯಾಘಾತ ಹಾಗೂ ಖಿನ್ನತೆಯ ಅಪಾಯ ವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದರ ಮಾರಾಟ ಮತ್ತು ಸಂಗ್ರಹಣೆ ದೇಶದಲ್ಲಿ ಕಾನೂನುಬಾಹಿರ ಕೃತ್ಯವಾಗಿದೆ.

ಕಾನೂನು ಹೇಗಿದೆ?

2019ರ ಕಾಯ್ದೆಯಡಿ ಇ-ಸಿಗರೇಟ್‌ಗಳ ಉತ್ಪಾದನೆ, ಆಮದು, ಮಾರಾಟ, ವಿತರಣೆ ದೇಶದಲ್ಲಿ ಸಂಪೂರ್ಣ ನಿಷೇಧ

ನಿಯಮ ಉಲ್ಲಂಘಿಸಿ ಮಾರಾಟ ಮಾಡಿದರೆ ಮೊದಲ ಬಾರಿಗೆ 1 ವರ್ಷ ಜೈಲು

ಶಿಕ್ಷೆ ಅಥವಾ 1 ಲಕ್ಷ ರು. ದಂಡ ಶಿಕ್ಷೆ

2ನೇ ಬಾರಿ ಅಪರಾಧ ಎಸಗಿದಲ್ಲಿ ಶಿಕ್ಷೆಯ ಪ್ರಮಾಣ 3 ವರ್ಷ ಜೈಲು ಮತ್ತು 5 ಲಕ್ಷ ರು. ವರೆಗೆ ದಂಡ

ಇ-ಸಿಗರೇಟ್‌ಗಳನ್ನು ಸಂಗ್ರಹಿಸಿಡುವುದು ಅಪರಾಧವಾಗಿದ್ದು, ಇದಕ್ಕೆ 6 ತಿಂಗಳ ಜೈಲು ಅಥವಾ 50000 ರು. ದಂಡ

ಇ-ಸಿಗರೇಟ್‌ಗಳ ಪ್ರಚಾರ ಅಥವಾ ಆನ್‌ಲೈನ್ ಜಾಹೀರಾತು ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ

ಸಬ್‌ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಗೆ ವಾರೆಂಟ್ ಇಲ್ಲದೆಯೇ ಅಕ್ರಮ ಇ-ಸಿಗರೇಟ್ ದಾಸ್ತಾನುಗಳನ್ನು ತಪಾಸಣೆ ಮಾಡುವ ಮತ್ತು ವಶಪಡಿಸಿಕೊಳ್ಳುವ ಅಧಿಕಾರವಿದೆ.

image

ದರ್ಗಾ ಸುತ್ತಮುತ್ತಲಿನ ಗಲ್ಲಿಗಳ ಸಣ್ಣ ಅಂಗಡಿಗಳಲ್ಲಿ, ಕಣ್ಣು ಸನ್ನೆ ಮಾಡಿದರೆ ಸಾಕು ಈ ‘ಇ-ಸಿಗರೇಟ್’ ಕೈ ಸೇರುತ್ತೆ. ಎಲ್ಲಿ ಸಿಗುತ್ತೆ ಅಂತ ಯಾರಿಗೂ ಸುಳಿವು ಸಿಗದಂತೆ ನಡೆಯುವ ಈ ಗುಪ್ತ ವ್ಯಾಪಾರಕ್ಕೆ ನಾವು ವಿದ್ಯಾರ್ಥಿಗಳೇ ಟಾರ್ಗೆಟ್. ಪರಿಚಯಸ್ಥರಿಗೆ ಮಾತ್ರ ನೀಡುತ್ತಾರೆ. ಮೂರೂವರೆ ಸಾವಿರ ಕೊಟ್ಟರೆ ಸಾಕು, ನಿಷೇಧಿತ ವಿಷ ನಮ್ಮ ಜೇಬು ಸೇರುತ್ತೆ.

-ಹೆಸರು ಹೇಳಲು ಇಚ್ಛಿಸಿದ ಯುವಕ