ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalaburagi Airport: ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಆರಂಭದಲ್ಲಿ ಸಂಜೆ ವೇಳೆಯಲ್ಲಿ ರೌಂಡ್ ಟ್ರಿಪ್ ಸೇವೆ ಆರಂಭಿಸುವ ಕುರಿತು ಮಾಹಿತಿ ನೀಡ ಲಾಗಿದ್ದರೂ ಬಳಿಕ ಸಾರ್ವಜನಿಕರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಲ್ಲಿಸಿದ ಮನವಿಯನ್ನು ಪರಿಗಣಿಸಿ ವೇಳಾ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ದೇವೇಂದ್ರ ಜಾಡಿ ಕಲಬುರಗಿ

ತಿಂಗಳ ವಿರಾಮದ ಬಳಿಕ ಜೂ.10ರಿಂದ ಸ್ಟಾರ್ ಏರ್ ಸೇವೆ ಪುನರಾರಂಭ |

ಸಾರ್ವಜನಿಕರ ಬೇಡಿಕೆಗೆ ಮಣಿದು ಬೆಳಗಿನ ವೇಳೆಯಲ್ಲೇ ಸಂಚಾರ

ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ವಿಮಾನ ಸೇವೆ ಜೂ.10 ರಿಂದ ಪುನರಾರಂಭವಾಗುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಮಹತ್ವದ ಸೌಲಭ್ಯವಾಗಿ ಪರಿಣಮಿಸಿದೆ. ವ್ಯಾಪಾರ, ಉದ್ಯಮ, ಶಿಕ್ಷಣ, ವೈದ್ಯಕೀಯ ಹಾಗೂ ಆಡಳಿತಾತ್ಮಕ ಕಾರಣಗಳಿಂದ ರಾಜ್ಯ ರಾಜಧಾನಿಯೊಂದಿಗೆ ನೇರ ಸಂಪರ್ಕದ ಅಗತ್ಯ ವನ್ನು ನಿರಂತರವಾಗಿ ಒತ್ತಿ ಹೇಳುತ್ತಿದ್ದ ಸಾರ್ವಜನಿಕರು, ಉದ್ಯಮಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ.

ಕಳೆದ ವರ್ಷದ ಅಕ್ಟೋಬರ್ 15ರಂದು ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನರಾರಂಭ ಗೊಳ್ಳಲು ರಾಜ್ಯ ಸರಕಾರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನೀಡಿದ ವೆಚ್ಚ ಸರಿದೂಗಿಸುವ ನಿಽ (ವಿಜಿಎ-) ನೆರವಾಗಿದೆ. ಈ ಪ್ರಕ್ರಿಯೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗಿದೆ.

ಆರಂಭದಲ್ಲಿ ಸಂಜೆ ವೇಳೆಯಲ್ಲಿ ರೌಂಡ್ ಟ್ರಿಪ್ ಸೇವೆ ಆರಂಭಿಸುವ ಕುರಿತು ಮಾಹಿತಿ ನೀಡಲಾಗಿದ್ದರೂ ಬಳಿಕ ಸಾರ್ವಜನಿಕರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಲ್ಲಿಸಿದ ಮನವಿಯನ್ನು ಪರಿಗಣಿಸಿ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಂತೆ ಜೂ.10ರಿಂದಲೇ ಕಲಬುರಗಿ-ಬೆಂಗಳೂರು ನಡುವೆ ಬೆಳಗಿನ ವೇಳೆಯ ವಿಮಾನ ಸೇವೆ ಲಭ್ಯ ವಾಗಲಿದೆ.

ಇದನ್ನೂ ಓದಿ: Shimoga Airport: ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಬೆಳಗಿನ ವಿಮಾನ ಸೇವೆ ಆರಂಭಿಸುವುದು ಹಲವು ವರ್ಷಗಳಿಂದ ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿತ್ತು. ಬೆಳಗ್ಗೆ ಬೆಂಗಳೂರಿಗೆ ತೆರಳಿ ಅದೇ ದಿನ ವಿವಿಧ ಕೆಲಸಗಳನ್ನು ಮುಗಿಸಿ ಮರಳುವ ಅವಕಾಶ ದೊರೆಯುವುದರಿಂದ ಉದ್ಯಮಿಗಳು, ವಿದ್ಯಾರ್ಥಿಗಳು, ವೈದ್ಯಕೀಯ ಸೇವೆ ಪಡೆಯುವ ರೋಗಿಗಳು ಹಾಗೂ ಸರಕಾರಿ ಅಧಿಕಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ವಿಮಾನ ಸೇವೆಗಳ ವಿಸ್ತರಣೆಗೆ ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಸೇವೆಯ ಜತೆಗೆ ಸಂಜೆ ವೇಳೆಯಲ್ಲಿಯೂ ಹೆಚ್ಚುವರಿ ವಿಮಾನ ಸಂಚಾರ ಆರಂಭಿ ಸುವಂತೆ ಕೆಕೆಸಿಸಿಐ ಸ್ಟಾರ್ ಏರ್ ಸಂಸ್ಥೆಗೆ ಮತ್ತೊಮ್ಮೆ ಮನವಿ ಮಾಡಿದೆ.

ಒಟ್ಟಾರೆ, ಎಂಟು ತಿಂಗಳ ಬಳಿಕ ಪುನರಾರಂಭವಾಗುತ್ತಿರುವ ಈ ವಿಮಾನ ಸೇವೆ ಕೇವಲ ಸಾರಿಗೆ ಸೌಲಭ್ಯವಷ್ಟೇ ಅಲ್ಲ, ಕಲ್ಯಾಣ ಕರ್ನಾಟಕದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಹೊಸ ಚೈತನ್ಯ ನೀಡುವ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಸಾರ್ವಜನಿಕರ ಹೋರಾಟಕೆ ಸಿಕ್ಕ ಫಲ

ಸುಮಾರು ಎಂಟು ತಿಂಗಳ ಬಳಿಕ ಕೆಕೆಆರ್‌ಡಿಬಿ ಹಾಗೂ ರಾಜ್ಯ ಸರಕಾರದ ವಿಜಿಎಫ್ ನೆರವು ಪ್ರಮುಖ ಕಾರಣವಾಗಿದೆ. ಕಲಬುರಗಿ ಬೆಂಗಳೂರು ವಿಮಾನ ಸೇವೆ ಸ್ಥಗಿತಗೊಂಡ ಬಳಿಕ ಉದ್ಯಮಿಗಳು, ವಾಣಿಜ್ಯ ಸಂಸ್ಥೆಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವ ಜನಿಕರು ನಿರಂತರವಾಗಿ ಸರಕಾರದ ಮೇಲೆ ಒತ್ತಡ ಹೇರಿದ್ದರು. ಕೆಕೆಸಿಸಿಐ ನೇತೃತ್ವದಲ್ಲಿ ನಡೆದ ಮನವಿ, ಸಭೆಗಳು ಹಾಗೂ ಪ್ರತಿನಿಧಿ ಮಂಡಳಿಗಳ ಪ್ರಯತ್ನ ಫಲವಾಗಿ ಸ್ಟಾರ್ ಏರ್ ಸಂಸ್ಥೆ ಜೂ.10ರಿಂದ ಸೇವೆ ಮರು ಆರಂಭಿಸಲು ತೀರ್ಮಾನಿಸಿದೆ.

ಮುಂದಿನ ಗುರಿ ದೆಹಲಿ-ತಿರುಪತಿ ಸಂಪರ್ಕ

ವಿಮಾನ ಸೇವೆ ಪುನರಾರಂಭದೊಂದಿಗೆ ಕಲಬುರಗಿಯಿಂದ ದೆಹಲಿ, ತಿರುಪತಿ ಹಾಗೂ ಇತರ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಬೇಡಿಕೆ ಮತ್ತೆ ಬಲ ಪಡೆದಿದೆ. ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಹೆಚ್ಚಿನ ಮಾರ್ಗಗಳು ಮತ್ತು ಹೆಚ್ಚುವರಿ ವಿಮಾನ ಸೇವೆಗಳನ್ನು ಒದಗಿಸಿದರೆ ಕಲ್ಯಾಣ ಕರ್ನಾಟಕದ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಹೂಡಿಕೆ ಅವಕಾಶಗಳಿಗೆ ಉತ್ತೇಜನ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ

image

ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭವಾಗುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂತಸದ ವಿಚಾರ. ಈ ಸಂಪರ್ಕ ದಿಂದ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜನ ಸಿಗಲಿದ್ದು, ಇನ್ನಷ್ಟು ನಗರಗಳಿಗೆ ವಿಮಾನ ಸಂಪರ್ಕ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

-ಉಮೇಶ್ ಜಾಧವ್, ಮಾಜಿ ಸಂಸದ
image

ಜೂ.10ರಿಂದ ಬೆಂಳೂರು-ಕಲಬುರಗಿ ವಿಮಾನ ಸೇವೆ ಪುನರಾರಂಭಗೊಳ್ಳುತ್ತಿರುವುದು ಕಲ್ಯಾಣ ಕರ್ನಾಟಕದ ಹೆಮ್ಮೆಯ ಕ್ಷಣ. ಈ ವಾಯು ಸಂಪರ್ಕವು ನಮ್ಮ ಭಾಗ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳ ಬೆಳವಣಿಗೆಗೆ ಹೊಸ ದಾರಿಯಾಗಲಿದ್ದು, ಸಮಗ್ರ ಅಭಿವೃದ್ಧಿಗೆ ಕೈಗನ್ನಡಿಯಾಗಲಿದೆ.

-ಶರಣು ಪಪ್ಪಾ, ಕೆಕೆಸಿಸಿಐ ಅಧ್ಯಕ್ಷ