ದೇವೇಂದ್ರ ಜಾಡಿ
ಕಲಬುರಗಿ: ಇಲ್ಲಿನ ಕಪ್ಪು ಮಣ್ಣಿನಲ್ಲಿ ಅರಳುವ ಕಲಬುರಗಿ ತೊಗರಿಯ ಹಿರಿಮೆ ಇದೀಗ ದೇಶದ ಗಡಿ ದಾಟಿದೆ. ರೈತನ ಬೆವರಿನಿಂದ ಬೆಳೆದ, ತನ್ನದೇ ಆದ ರುಚಿ–ಪರಿಮಳದಿಂದ ಗುರುತಿಸಿಕೊಂಡಿ ರುವ GI ಟ್ಯಾಗ್‌ನ ‘ಗುಲಬರ್ಗಾ ತೊಗರಿ ಬೇಳೆ’ ಸಮುದ್ರದಾಚೆ ಮಾಲ್ಡೀವ್ಸ್ ಮಾರುಕಟ್ಟೆ ಪ್ರವೇಶಿಸಿದೆ. ಒಂದು ಮೆಟ್ರಿಕ್ ಟನ್ ತೊಗರಿ ಬೇಳೆ ರಫ್ತಾಗಿರುವುದು, ಕಲಬುರಗಿ ನೆಲದ ಈ ಸಾಂಪ್ರದಾಯಿಕ ಬೆಳೆಗೆ ದೊರೆತಿರುವ ಅಂತಾರಾಷ್ಟ್ರೀಯ ಮನ್ನಣೆಯ ಹೊಸ ಮೈಲಿಗಲ್ಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೊಯಲ್ ಅವರು ತಮ್ಮ ‘ಎಕ್ಸ್’ ಖಾತೆ ಯಲ್ಲಿ ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಉತ್ಪನ್ನಕ್ಕೆ ರೈತರಿಗೆ ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.
ಮಣ್ಣಿನ ಗುಣ, ಬೆಳೆಯ ಹಿರಿಮೆ
ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಕೇವಲ ಕೃಷಿ ಉತ್ಪನ್ನವಲ್ಲ; ಸಾವಿರಾರು ಕುಟುಂಬಗಳ ಕೃಷಿ ಆರ್ಥಿಕತೆಯ ಪ್ರಮುಖ ಆಧಾರ. ಕಡಿಮೆ ಮಳೆಯ ಪರಿಸ್ಥಿತಿಯಲ್ಲೂ ಬೆಳೆಯುವ ಸಾಮರ್ಥ್ಯ, ಇಲ್ಲಿನ ಕಪ್ಪು ಮಣ್ಣು ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣದಿಂದ ಈ ಭಾಗದಲ್ಲಿ ತೊಗರಿಗೆ ವಿಶಿಷ್ಟ ಸ್ಥಾನವಿದೆ.
ಇಲ್ಲಿನ ತೊಗರಿಯಿಂದ ಸಿದ್ಧವಾಗುವ ಬೇಳೆ ರುಚಿ, ಪರಿಮಳ ಹಾಗೂ ಬೇಯುವ ಗುಣದಿಂದ ಗ್ರಾಹಕರ ಗಮನ ಸೆಳೆದಿದೆ. ಇದೇ ವೈಶಿಷ್ಟ್ಯಕ್ಕೆ ಅಧಿಕೃತ ಭೌಗೋಳಿಕ ಗುರುತಿನ ಮುದ್ರೆ ಸಿಕ್ಕಿದ್ದು, 2019ರಲ್ಲಿ ‘Gulbarga Tur Dal’ಗೆ GI ಮಾನ್ಯತೆ ದೊರೆತಿದೆ.
ಹೊಲದಿಂದ ವಿದೇಶಿ ಮಾರುಕಟ್ಟೆಗೆ
ಪ್ರತಿವರ್ಷ ಕನಿಷ್ಠ 5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆಯುವ ಕಲಬುರಗಿ ತೊಗರಿ ಮಾಲ್ಡೀವ್ಸ್‌ಗೆ ತಲುಪಿರುವ ಒಂದು ಟನ್ ಬೇಳೆ ಪ್ರಮಾಣದಲ್ಲಿ ಸೀಮಿತವಾಗಿದ್ದರೂ, ಅದರ ಹಿಂದೆ ಇರುವ ಮಾರುಕಟ್ಟೆ ಸಾಧ್ಯತೆ ದೊಡ್ಡದು. GI ಮಾನ್ಯತೆ ಹೊಂದಿರುವ ಸ್ಥಳೀಯ ಉತ್ಪನ್ನವನ್ನು ವಿದೇಶಿ ಗ್ರಾಹಕರಿಗೆ ಪರಿಚಯಿಸುವುದರಿಂದ ಮುಂದಿನ ದಿನಗಳಲ್ಲಿ ರಫ್ತು ವಿಸ್ತರಣೆಗೆ ಅವಕಾಶ ಸೃಷ್ಟಿ ಯಾಗಲಿದೆ.
ವಿದೇಶಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಉತ್ಪನ್ನಕ್ಕೆ ಹೆಚ್ಚಿನ ದರ ದೊರೆತರೆ ಅದರ ನೇರ ಪ್ರಯೋಜನ ಬೆಳೆಗಾರರಿಗೂ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ರಫ್ತು ಕಲಬುರಗಿ ತೊಗರಿಯ ವಾಣಿಜ್ಯ ಮೌಲ್ಯ ಹೆಚ್ಚಿಸುವ ಬೆಳವಣಿಗೆಯಾಗಿದೆ.
ಕಲಬುರಗಿಯ ಹೆಸರಿನ ಜತೆ ಬೆಳೆದ ಬ್ರ್ಯಾಂಡ್
ತೊಗರಿ ಬೆಳೆಯ ಸುತ್ತಲೂ ದಾಲ್ ಮಿಲ್‌ಗಳು, ಸಂಸ್ಕರಣೆ, ವ್ಯಾಪಾರ, ಸಾಗಣೆ ಸೇರಿದಂತೆ ದೊಡ್ಡ ಉದ್ಯಮ ಸರಪಳಿ ರೂಪುಗೊಂಡಿದೆ. ಹೀಗಾಗಿ, ತೊಗರಿಗೆ ದೊರೆಯುತ್ತಿರುವ ಜಾಗತಿಕ ಗುರುತು ಜಿಲ್ಲೆಯ ಕೃಷಿ ಆರ್ಥಿಕತೆಗೂ ಹೊಸ ಅವಕಾಶಗಳನ್ನು ತೆರೆದಿದೆ.
ಕಲಬುರಗಿ ತೊಗರಿಯ ಮುಂದಿನ ಪಯಣ ಕೇವಲ ಹೆಚ್ಚು ಪ್ರಮಾಣದ ರಫ್ತಿಗೆ ಸೀಮಿತವಾಗದೆ, GI ಗುರುತಿನ ಮೌಲ್ಯವನ್ನು ರೈತನ ಉತ್ಪನ್ನದ ಬೆಲೆಯಾಗಿ ಪರಿವರ್ತಿಸುವುದಾಗಿದೆ. ಇದಕ್ಕಾಗಿ ಗುಣಮಟ್ಟದ ಸಂಸ್ಕರಣೆ, ಆಕರ್ಷಕ ಪ್ಯಾಕೇಜಿಂಗ್, ಬಲಿಷ್ಠ ಬ್ರ್ಯಾಂಡಿಂಗ್ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸಂಪರ್ಕ ಅಗತ್ಯ.
ಕಲಬುರಗಿಯ ಕಪ್ಪು ಮಣ್ಣಿನಿಂದ ಹೊರಟ ತೊಗರಿ ಇದೀಗ ಸಮುದ್ರ ದಾಟಿದೆ. ಕಲ್ಯಾಣ ಕರ್ನಾಟಕದ ರೈತನ ಪರಿಶ್ರಮಕ್ಕೆ ಜಾಗತಿಕ ಮಾರುಕಟ್ಟೆ ಬಾಗಿಲು ತೆರೆದಿರುವುದು, ಈ ಭಾಗದ ಕೃಷಿ ಉತ್ಪನ್ನಗಳ ಸಾಮರ್ಥ್ಯಕ್ಕೆ ಸಿಕ್ಕಿರುವ ಮಹತ್ವದ ಮಾನ್ಯತೆ.
ಮುಂದಿನ ಗುರಿ: ವಿಶ್ವ ಮಾರುಕಟ್ಟೆಯಲ್ಲಿ ‘ಗುಲಬರ್ಗಾ ತೊಗರಿ’ ಬ್ರ್ಯಾಂಡ್
GI ಪ್ರಮಾಣೀಕೃತ ಕಲಬುರಗಿ ತೊಗರಿಯನ್ನು ‘ಭೀಮಾ ಪಲ್ಸಸ್’ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ಗಿಳಿಸುವ ಪ್ರಯತ್ನಗಳು ನಡೆದಿವೆ. ಇದೀಗ ಮಾಲ್ಡೀವ್ಸ್‌ಗೆ ರಫ್ತಾಗಿರುವುದರಿಂದ ವಿದೇಶಿ ಮಾರುಕಟ್ಟೆ ವಿಸ್ತರಣೆಗೆ ಹೊಸ ಅವಕಾಶ ಸಿಕ್ಕಿದೆ. ಮುಂದಿನ ಹಂತದಲ್ಲಿ ಸಂಸ್ಕರಣೆ, ಪ್ಯಾಕೇಜಿಂಗ್, ಗುಣಮಟ್ಟದ ಪ್ರಮಾಣೀಕರಣ ಹಾಗೂ ನೇರ ರಫ್ತು ವ್ಯವಸ್ಥೆ ಬಲಪಡಿಸಿದರೆ GI ಗುರುತಿನ ಸಂಪೂರ್ಣ ವಾಣಿಜ್ಯ ಲಾಭವನ್ನು ರೈತರಿಗೆ ತಲುಪಿಸಬಹುದು.
‘ಗುಲಬರ್ಗಾ ತೊಗರಿ’ಗೆ GI ಗುರುತು
* GI Application: 593
* GI Certificate: 353
* GI ನೋಂದಣಿ: 14 ಆಗಸ್ಟ್ 2019
* ಮಾನ್ಯತೆ: 25 ಸೆಪ್ಟೆಂಬರ್ 2027ರವರೆಗೆ
* ಉತ್ಪನ್ನ: ಗುಲಬರ್ಗಾ ತೊಗರಿ ಬೇಳೆ
* ವೈಶಿಷ್ಟ್ಯ: ರುಚಿ, ಪರಿಮಳ, ಬೇಯುವ ಗುಣ
* ಹೊಸ ರಫ್ತು ಮಾರುಕಟ್ಟೆ: ಮಾಲ್ಡೀವ್ಸ್
* ರಫ್ತು ಪ್ರಮಾಣ: 1 ಮೆಟ್ರಿಕ್ ಟನ್
* ಹೆಚ್ಚುವರಿ ಬೆಲೆ: ಶೇ.30ಕ್ಕೂ ಹೆಚ್ಚು ಎಂದು ಕೇಂದ್ರ ಸಚಿವರ ಹೇಳಿಕೆ
![]()
GI ಟ್ಯಾಗ್ ಪಡೆದ ಗುಲಬರ್ಗಾ ತೊಗರಿ ಬೇಳೆಯ ಒಂದು ಮೆಟ್ರಿಕ್ ಟನ್ ಮಾಲ್ಡೀವ್ಸ್‌ಗೆ ರಫ್ತಾಗಿದೆ. ಈ ಉತ್ಪನ್ನಕ್ಕಾಗಿ ಶ್ರಮಿಸಿರುವ ರೈತರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.30ಕ್ಕೂ ಹೆಚ್ಚು ಹೆಚ್ಚಿನ ಬೆಲೆ ದೊರೆಯುತ್ತಿದೆ.
- ಪಿಯೂಷ್ ಗೊಯಲ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
![]()
ಕಲಬುರಗಿ ತೊಗರಿಗೆ ಭೌಗೋಳಿಕ ಮಾನ್ಯತೆ ಜತೆಗೆ ಉತ್ತಮ ಪೌಷ್ಠಿಕ ಅಂಶಗಳಿವೆ. ರಾಜ್ಯ ಸರ್ಕಾರ ‘ಭೀಮಾ ಪಲ್ಸ್’ ಬ್ರ್ಯಾಂಡಿಂಗ್ ಮೂಲಕ ತೊಗರಿಗೆ ಉತ್ತೇಜನ ನೀಡುತ್ತಿದೆ. ಎಪಿಇಡಿಎ ಸಂಸ್ಥೆ ಸ್ಥಳೀಯ ತೊಗರಿಯನ್ನು ದೂರದ ಮಾಲ್ಡೀವ್ಸ್‌ಗೂ ಕೊಂಡೊಯ್ದು ರಫ್ತಿಗೆ ಸಣ್ಣ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ರಫ್ತು ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು.
- ಇಕ್ರಂ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ